ಮಲಬದ್ಧತೆ
ವ್ಯಕ್ತಿಯಿಂದ ಹೊರಹಾಕಲು ತ್ರಾಸದಾಯಕವಾದ ಗಟ್ಟಿ ಮಲ ಸೃಷ್ಟಿಸುವ ಸಂಕಟವೇ ಮಲಬದ್ಧತೆ (constipation). ದೊಡ್ಡ ಕರುಳು ಆಹಾರದಿಂದ ಹೆಚ್ಚು ನೀರನ್ನು ಹೀರಿಕೊಳ್ಳುವ ಕಾರಣ ಈ ಸ್ಥಿತಿ ಉಂಟಾಗುತ್ತದೆ. ಆಹಾರವು ಜಠರ ಮತ್ತು ಕರುಳಿನ ಪ್ರದೇಶದ ಮೂಲಕ ಅತಿ ನಿಧಾನವಾಗಿ ಚಲಿಸಿದರೆ, ದೊಡ್ಡ ಕರುಳು ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ. ಪರಿಣಾಮ, ಮಲವು ಶುಷ್ಕ ಮತ್ತು ಗಟ್ಟಿಯಾಗುತ್ತದೆ. ದೇಹ ಮತ್ತು ಮನಸ್ಸು ಹೇಳಿಕೊಳ್ಳಲಾಗದ ವೇದನೆಯನ್ನು ಈ ಮಲಬದ್ಧತೆ ಸೃಷ್ಟಿಸುತ್ತದೆ. ಇದೀಗ ನವ್ಯ ನಾಗರಿಕತೆಯ ವ್ಯಾಧಿಯೇ ಆಗಿದೆ. ರೊಟ್ಟಿ ಪಲ್ಯ, ನುಚ್ಚು, ಬೀಸಿದ ಆಹಾರ ಧಾನ್ಯಗಳನ್ನು ತಿಂದು, ದುಡಿದು ಸುಖವಾಗಿ ನಿದ್ರಿಸುವ ಬಡವರಿಗೆ ಇದು ಬರುವುದಿಲ್ಲ. ಸದಾ ಪಿಜ್ಜಾ, ಬರ್ಗರ್, ಚಾಕೊಲೆಟ್, ಕರಿದ ತಿಂಡಿಗಳನ್ನು ತಿಂದು ಕುಳಿತು ಕೆಲಸ ಮಾಡುವ ವರ್ಗಕ್ಕೆ ಇದು ಅಂಟಿಕೊಳ್ಳುತ್ತದೆ. ಇದು ಅಪಥ್ಯ, ಆಹಾರ, ವಿಹಾರ, ವಿಚಾರಗಳಿಂದ ಉದ್ಭವಿಸುವ ವಿಕಾರ. ಮಲಬದ್ಧತೆ ಸ್ವತಂತ್ರ ಕಾಯಿಲೆ ಅಲ್ಲ. ಚಿಂತೆ, ದುಃಖ, ದುಮ್ಮಾನಗಳಿಂದ ಮಜ್ಜಾ ತಂತುಗಳು ಪ್ರಕ್ಷೋಭಗೊಂಡು ಕರುಳಿನ ಸ್ನಾಯುಗಳು ಅಂಕುಚನವಾಗುವುದೇ ಇದಕ್ಕೆ ಕಾರಣವೆಂಬುದು ವೈದ್ಯರ ವಿವರಣೆ. ಇದಕ್ಕೆ ಸರಿಯಾದ ಚಿಕಿತ್ಸೆ ಲಭಿಸದಿದ್ದರೆ ಮೂಲವ್ಯಾಧಿ ಹಾಗೂ ಕ್ಯಾನ್ಸರ್ ಕೂಡಾ ಆಗಬಹುದು. ಏನು ಕಾರಣ? ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನ ಅಂಶವಿಲ್ಲದಿರುವುದು. ...