ಬೆರಳ ತುದಿಯಲ್ಲಿ ಪಾಸ್‌ಪೋರ್ಟ್
ದೇಶದಲ್ಲಿ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವದಲ್ಲಿ (ಟಿಸಿಎಸ್) ಪಾಸ್‌ಪೋರ್ಟ್ ವಿತರಣೆಯ ಪೈಲಟ್ ಯೋಜನೆ ಜಾರಿಗೊಂಡ ರಾಜ್ಯ ಕರ್ನಾಟಕ. ಬೆಂಗಳೂರಿನ ಲಾಲ್ಬಾಗ್ನಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ (ಪಿಎಸ್‌ಕೆ) 2007ರಲ್ಲಿ ಈ ಯೋಜನೆ ಆರಂಭಗೊಂಡಿತು.
ಇಲ್ಲಿನ ಯಶಸ್ವಿನ ಫಲವಾಗಿ ನಂತರ ದೇಶದ 77 ಕಡೆ ಇದೇ ಮಾದರಿಯ ‘ಪಿಎಸ್‌ಕೆ’ಗಳು ಆರಂಭವಾದವು. ವಿದೇಶಾಂಗ ವ್ಯವಹಾರಗಳ ಸಚಿವಾಲಯ 2010ರಲ್ಲಿ ‘ಪಾಸ್‌ಪೋರ್ಟ್ ಸೇವಾ ಯೋಜನೆ’ ಯಡಿ ಪಾಸ್‌ಪೋರ್ಟ್ ನೀಡಲು ಹಳೆಯ ವ್ಯವಸ್ಥೆ ಬದಲಿಗೆ ಹೊಸ ಆಧುನಿಕ, ತ್ವರಿತ ಗತಿಯ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿತು.
ಪೊಲೀಸರ ಪರಿಶೀಲನಾಪತ್ರ
ಈಗ ತುಂಬಾ ಸುಲಭ
ಇದೊಂದು ಪ್ರಶಸ್ತಿ ವಿಜೇತ ಇ–ಆಡಳಿತ ಯೋಜನೆಯಾಗಿದ್ದು, ಇದರಡಿ ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿದೆ ಎನ್ನುತ್ತಾರೆ ‘ಆರ್‌ಪಿಒ’ ಪಿ.ಎಸ್. ಕಾರ್ತಿಕೇಯನ್.
ಕಾಯಬೇಕಿಲ್ಲ ‘ಈಗ ಮೊದಲಿನಂತೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಾಯುವ ಅಗತ್ಯವಿಲ್ಲ. ಪೊಲೀಸ್ ಪರಿಶೀಲನೆ ಹೊರತುಪಡಿಸಿ ಅರ್ಜಿ ಸಲ್ಲಿಸಿದ ಎರಡು ವಾರದೊಳಗಾಗಿ ಪಾಸ್‌ಪೋರ್ಟ್ ಪಡೆಯಬಹುದು. ರಾಜ್ಯದಲ್ಲಿರುವ ನಾಲ್ಕು ಸೇವಾ ಕೇಂದ್ರಗಳಲ್ಲಿ (ಬೆಂಗಳೂರಿನಲ್ಲಿ ಎರಡು ಮತ್ತು ಹುಬ್ಬಳ್ಳಿ ಮಂಗಳೂರಿನಲ್ಲಿ ತಲಾ ಒಂದು) ಕಳೆದ ವರ್ಷ 4 ಲಕ್ಷಕ್ಕೂ ಹೆಚ್ಚು ಪಾಸ್‌ಪೋರ್ಟ್ ವಿತರಿಸಲಾಗಿದೆ. ಈಗ ನಾಲ್ಕೂ ‘ಪಿಎಸ್‌ಕೆ’ಗಳಲ್ಲಿ ಪ್ರತಿದಿನ 1875 ಅಪಾಯಿಂಟ್‌ಮೆಂಟ್‌ಗಳನ್ನು ನೀಡಲಾಗುತ್ತಿದೆ.
ತತ್ಕಾಲ್ ವಿಭಾಗದಲ್ಲಿ ಪ್ರತಿ ದಿನ 230 ಜನರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ತಿಂಗಳಿಗೆ ಸರಾಸರಿ 30 ಸಾವಿರ ಪಾಸ್ಪೋರ್ಟ್ಗಳು ವಿತರಣೆಯಾಗುತ್ತಿವೆ ಎನ್ನುತ್ತಾರೆ ಅವರು. ‘ಈಗಿರುವ ಸೌಲಭ್ಯಗಳ ಮಿತಿಯಲ್ಲೇ ಗರಿಷ್ಠ ಜನರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತಿದ್ದೇವೆ.
ಸದ್ಯ ಪ್ರತಿ ತಿಂಗಳು ಸರಾಸರಿ 35 ರಿಂದ 40 ಸಾವಿರ ಪಾಸ್‌ಪೋರ್ಟ್ ಅರ್ಜಿಗಳನ್ನು ಸ್ವೀಕರಿಲಾಗುತ್ತಿದೆ. ಗಮನಿಸಬೇಕಾದ ಅಂಶವೆಂದರೆ ಈಗ ಖುದ್ದು ಸಂದರ್ಶನಕ್ಕೆ ಕಾಯುವ ಅವಧಿ ಗಣನೀಯವಾಗಿ ತಗ್ಗಿದೆ. ಬೆಂಗಳೂರಿನಲ್ಲಿ ಪಾಸ್‌ಪೋರ್ಟ್ ಸಂದರ್ಶನಕ್ಕೆ ಅಪಾಯಿಂಟ್‌ಮೆಂಟ್ ಸಿಗಬೇಕಾದರೇ 40 ದಿನಗಳಷ್ಟು ದೀರ್ಘ ಕಾಲ ಕಾಯಬೇಕಿತ್ತು ಈಗ ಇದು 20 ದಿನಕ್ಕೆ ತಗ್ಗಿದೆ.
ಹುಬ್ಬಳ್ಳಿಯಲ್ಲಿ 10 ರಿಂದ 12 ದಿನಗಳಲ್ಲಿ ಮತ್ತು ಮಂಗಳೂರಿನಲ್ಲಿ 3–4 ದಿನಗಳಲ್ಲಿ ಅಪಾಯಿಂಟ್‌ಮೆಂಟ್ ಸಿಗುತ್ತಿದೆ. ಒಟ್ಟಿನಲ್ಲಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಒಂದು ತಿಂಗಳ ಒಳಗಾಗಿ ಸಂದರ್ಶನಕ್ಕೆ ಅಪಾಯಿಂಟ್‌ಮೆಂಟ್ ಸಿಗುವ ವ್ಯವಸ್ಥೆ ಜಾರಿಗೆ ಬಂದಿದೆ. ಇದು ಒಟ್ಟಾರೆ ವ್ಯವಸ್ಥೆಯಲ್ಲಿ ಆಗಿರುವ ಭಾರಿ ಬದಲಾವಣೆ’ ಎನ್ನುತ್ತಾರೆ ಅವರು.
|
ಖುದ್ದು ಸಂದರ್ಶನಕ್ಕೆ ಹಾಜರಾದ ತಕ್ಷಣ ಪಾಸ್‌ಪೋರ್ಟ್ ಸಿಕ್ಕಿ ಬಿಡುತ್ತದೆ ಎಂದರ್ಥವಲ್ಲ. ಶೇ 25ರಷ್ಟು ಅರ್ಜಿಗಳು ಅಗತ್ಯ ದಾಖಲೆಗಳು ಮತ್ತಿತರ ಕಾರಣಗಳಿಂದ ತಿರಸ್ಕೃತಗೊಳ್ಳುತ್ತವೆ. ಸ್ವೀಕೃತಗೊಂಡ ಅರ್ಜಿಗಳಿಗೂ ಪೊಲೀಸರ ಪರಿಶೀಲನಾಪತ್ರ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ.
ಸದ್ಯ 30 ಸಾವಿರ ಅರ್ಜಿಗಳು ಪೊಲೀಸರ ಪರಿಶೀಲನೆಯಲ್ಲಿವೆ. ಪೊಲೀಸ್ ಪರಿಶೀಲನೆ ಸಮಯ ಕುಗ್ಗಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ಇದರಿಂದ ಪಾಸ್‌ಪೋರ್ಟ್ ವಿತರಣೆಗೆ ಆಗುತ್ತಿರುವ ಹೆಚ್ಚುವರಿ ವಿಳಂಬ ತಪ್ಪಲಿದೆ ಎನ್ನುವುದು ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಆರ್‌ಪಿಒ) ಪಿ.ಎಸ್. ಕಾರ್ತಿಕೇಯನ್.ಅವರ ವಿವರಣೆ.
ಕೇರಳದಲ್ಲಿ ಸುಮಾರು 11 ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿವೆ. ರಾಜ್ಯದಲ್ಲಿರುವುದು ಕೇವಲ ನಾಲ್ಕು. ಜತೆಗೆ ಸಿಬ್ಬಂದಿಗಳ ಕೊರತೆ ಕೂಡ ಇದೆ. ಗುಲ್ಬರ್ಗಾದಲ್ಲಿ ಪಾಸ್‌ಪೋರ್ಟ್ ಅರ್ಜಿಗಳನ್ನು (ಹಾರ್ಡ್ ಕಾಪಿ) ಸ್ವೀಕರಿಸುವ ಕೇಂದ್ರ ಇದೆ. ಜತೆಗೆ ಮೈಸೂರಿನಲ್ಲಿ ಹೊಸ ಸೇವಾ ಕೇಂದ್ರ ಸ್ಥಾಪನೆಗೊಳ್ಳುವ ನಿರೀಕ್ಷೆ ಇದೆ. ಇದಕ್ಕೆ ವಿದೇಶಾಂಗ ವ್ಯವಹಾರಗಳ ಇಲಾಖೆ ಅನುಮತಿ ನೀಡಿದೆ.
ಆನ್‌ಲೈನ್ ಪಾವತಿ
ಹೊಸ ವ್ಯವಸ್ಥೆಯಡಿ ಪಾಸ್‌ಪೋರ್ಟ್ ಅರ್ಜಿದಾರರು ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬೇಕಾಗಿದೆ www.passportindia.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಚಲನ್ ತುಂಬಿ ಶುಲ್ಕ ಪಾವತಿಸಬೇಕು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಬಳಸಿ ಶುಲ್ಕ ಪಾವತಿಸಬಹುದಾಗಿದೆ.
ರಾಜ್ಯದ 4 ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿನ ಪ್ರತಿನಿತ್ಯದ ‘ಖುದ್ದು ಸಂದರ್ಶನ’ ಅಂಕಿ ಅಂಶಗಳು.
(2013ರ ಸೆಪ್ಟೆಂಬರ್ 20 ರಿಂದ ಜಾರಿಯಲ್ಲಿರುವಂತೆ)
ಪಿಎಸ್‌ಕೆ ಸಾಮಾನ್ಯ ತತ್ಕಾಲ್ ಒಟ್ಟು
ಸಂದರ್ಶನ
* ಲಾಲ್‌ಬಾಗ್ ರಸ್ತೆ–ಬೆಂಗಳೂರು 800 115 915
* ಮಾರತ್‌ಹಳ್ಳಿ–ಬೆಂಗಳೂರು 525 60 585
* ಹುಬ್ಬಳ್ಳಿ 280 25 305
* ಮಂಗಳೂರು 270 30 300
ಒಟ್ಟಾರೆ ಆರ್‌ಪಿಒ–ಬೆಂಗಳೂರು 1875 230 2105
ಮಾಹಿತಿ: ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ.
ಶುಲ್ಕ ಪಾವತಿಸಿದ್ದು ಖಚಿತವಾದ ಬಳಿಕ ಮಾತ್ರ, ದಿನಾಂಕ ನಿಗದಿಯಾಗುತ್ತದೆ. ಅರ್ಜಿದಾರ ದಿನಾಂಕ ಆಯ್ಕೆ ಮಾಡುವಂತಿಲ್ಲ ಬದಲಾಗಿ ಲಭ್ಯ ಇರುವ ದಿನಾಂಕ ಮತ್ತು ಸಮಯವನ್ನು ವೆಬ್‌ಸೈಟ್‌ನಲ್ಲೇ ನೀಡಲಾಗುತ್ತದೆ.
ವಾಕ್–ಇನ್ ಶ್ರೇಣಿ
60 ವರ್ಷ ಮೀರಿದ ಹಿರಿಯ ನಾಗರಿಕರು, ಅಂಗವೈಕಲ್ಯಕ್ಕೆ ಒಳಗಾದ ವರು, ಮೂರು ವರ್ಷಕ್ಕಿಂತ ಕಡಿಮೆ ಪ್ರಾಯದ ಹಸುಗೂಸುಗಳ (ಮಗುವಿನ ಪೋಷಕರು ಪಾಸ್‌ಪೋರ್ಟ್ ಹೊಂದಿರಬೇಕು) ಅರ್ಜಿಗಳನ್ನು ‘ವಾಕ್–ಇನ್’ ಶ್ರೇಣಿಯಡಿ ಪರಿಶೀಲಿಸಲಾಗುತ್ತದೆ.
ಸೇವಾ ಕೇಂದ್ರಗಳು
* ಬೆಂಗಳೂರು
ಪ್ರೆಸ್ಟೀಜ್ ಲಿಬ್ರಾ, 45, ಉರ್ವಶಿ ಚಿತ್ರಮಂದಿರದ ಸಮೀಪ, ಲಾಲ್ ಬಾಗ್ ರಸ್ತೆ, ಬೆಂಗಳೂರು.
ಸಾಯಿ ಅರ್ಕೆಡ್, ಸರ್ವೆ ನಂಬರ್ 56/P, ದೇವರಬಿಸನಹಳ್ಳಿ, ಮಾರತ್ ಹಳ್ಳಿ, ಔಟರ್ ರಿಂಗ್ ರಸ್ತೆ, ಬೆಂಗಳೂರು.
* ಮಂಗಳೂರು
ನಂಬರ್. 25/A, ಪ್ರಕಾಶ ಬೀದಿ ಕಂಪೌಂಡ್, ನವಭಾರತ ವೃತ್ತ, ಕೋಡಿಯಾಲಬೈಲ್, ಮಂಗಳೂರು.
* ಹುಬ್ಬಳ್ಳಿ
ಇ ಬ್ಲಾಕ್, ಕೆಳಮಹಡಿ, ಐಟಿ ಪಾರ್ಕ್ ಇಂದಿರಾ ಗ್ಲಾಸ್ ಹೌಸ್ ಎದುರು, ಹುಬ್ಬಳ್ಳಿ.
* ಸಂದರ್ಶನದ ಸಮಯ ಬೆಳಿಗ್ಗೆ 9:30ರಿಂದ ಸಂಜೆ 4:15. (ಮಾಹಿತಿಗೆ: 18002581800)
ಪಾಸ್‌ಪೋರ್ಟ್ ವಿಧಗಳು
ಪಾಸ್‌ಪೋರ್ಟ್‌ಗಳಲ್ಲಿ ಹಲವು ಬಗೆ.
* ಸಾಮಾನ್ಯ ಪಾಸ್‌ಪೋರ್ಟ್
ಇದನ್ನು ಪ್ರವಾಸಿ ಉದ್ದೇಶದ ಪಾಸ್‌ಪೋರ್ಟ್ ಎಂದೂ ಕರೆಯಲಾಗುತ್ತದೆ. ಹೆಚ್ಚು ಬಾರಿ -ನೀಡಲಾಗುವ ಪ್ರಕಾರದ ಪಾಸ್‌ಪೋರ್ಟ್ ಇದು. ಮಕ್ಕಳೂ ಸಹ ತಮ್ಮ ಪಾಲಕರ ಸಾಮಾನ್ಯ ಪಾಸ್‌ಪೋರ್ಟ್ ಜೊತೆ ತಮ್ಮ ಹೆಸರನ್ನೂ ನಮೂದಿಸಿಕೊಳ್ಳಲು ಸಾಧ್ಯವಿದೆ.
* ವಿಶೇಷ ಪಾಸ್‌ಪೋರ್ಟ್
ಸರ್ಕಾರದ ಅಧಿಕಾರಿಗಳಿಗೆ ಇಲಾಖೆಯ ಕೆಲಸ ಕಾರ್ಯಗಳಿಗೆ -ಸಂಬಂಧಿಸಿದಂತೆ ಪ್ರಯಾಣಕ್ಕೆ ಮತ್ತು ಅಧೀನ ಸಿಬ್ಬಂದಿಗಳನ್ನು ಕರೆದೊಯ್ಯುವುದಕ್ಕೆ ಇದನ್ನು ನೀಡಲಾಗುತ್ತದೆ.
* ರಾಜತಾಂತ್ರಿಕ ಪಾಸ್‌ಪೋರ್ಟ್
ರಾಜತಾಂತ್ರಿಕರಿಗೆ ಕಾರ್ಯ-ಸಂಬಂಧಿ ಪ್ರಯಾಣಕ್ಕೆ ಮತ್ತು ಅಧೀನ ವ್ಯಕ್ತಿಗಳನ್ನು ಕರೆದೊಯ್ಯುವುದಕ್ಕೆ ಈ ಪಾಸ್‌ಪೋರ್ಟ್ ನೀಡಲಾಗುತ್ತದೆ.
* ತುರ್ತು ಪಾಸ್‌ಪೋರ್ಟ್
ಪಾಸ್‌ಪೋರ್ಟ್ ಕಳೆದುಕೊಂಡ ವ್ಯಕ್ತಿಗೆ ಮತ್ತೊಂದು ಪಾಸ್‌ಪೋರ್ಟ್ ಪಡೆಯುವ ಸಮಯವಿಲ್ಲದಿದ್ದಾಗ ಇದನ್ನು ನೀಡಲಾಗುತ್ತದೆ.
* ಗುಂಪು ಪಾಸ್‌ಪೋರ್ಟ್
ಇದನ್ನು ಒಂದು ನಿರ್ದಿಷ್ಟ ಗುಂಪಿನ ಜನರಿಗೆ ಒಂದು ನಿರ್ದಿಷ್ಟ ಕಾರ್ಯದ ಮೇಲೆ ಒಂದು ನಿರ್ದಿಷ್ಟ ಪ್ರದೇಶಕ್ಕೆ ಪ್ರವಾಸ ಹೋಗಬೇಕಾದ ಸಂದರ್ಭದಲ್ಲಿ ನೀಡಲಾಗುತ್ತದೆ. ಉದಾಹರಣೆಗೆ ಶಾಲೆಯ ವಿದ್ಯಾರ್ಥಿಗಳ ಪ್ರವಾಸಕ್ಕೆ.
* ಕುಟುಂಬದ ಪಾಸ್‌ಪೋರ್ಟ್
ಇದನ್ನು ಒಟ್ಟು ಕುಟುಂಬದ ಸದಸ್ಯರಿಗೆ ನೀಡಲಾಗುತ್ತದೆ. ತಂದೆ, ತಾಯಿ, ಮಗ, ಮಗಳು. ಆದರೆ, ಪಾಸ್‌ಪೋರ್ಟ್ ಹೊಂದಿರುವ ಸದಸ್ಯ ಜೊತೆಗಿಲ್ಲದೇ ಇದ್ದಾಗ ಆ ಪಾಸ್‌ಪೋರ್ಟ್ ಬಳಸಿ ಇತರೆ ಸದಸ್ಯರು ಪ್ರವಾಸ ಮಾಡಲು ಅನುಮತಿ ಇರುವುದಿಲ್ಲ.
ನಿಯಂತ್ರಣ
‘ಪಾಸ್‌ಪೋರ್ಟ್’ ಎಂಬ ವ್ಯಕ್ತಿಗತವಾದ ಈ ದಾಖಲೆ ಒಂದು ಸರ್ಕಾರಿ ಆಸ್ತಿ ಎಂದೇ ಪರಿಗಣಿತವಾಗಿದೆ. ಇದನ್ನು ಯಾವುದೇ ಸಮಯದಲ್ಲಿ, ನಿರ್ದಿಷ್ಟ ಕಾರಣಕ್ಕಾಗಿ ಸರ್ಕಾರ ಸೀಮಿತಗೊಳಿಸಬಹುದು ಅಥವಾ ಹಿಂಪಡೆಯಬಹುದು. ಪಾಸ್‌ಪೋರ್ಟ್ ನೀಡುವ ಸಂದರ್ಭದಲ್ಲಿ ತನ್ನ ಪ್ರಜೆಗಳಿಗೆ ದೇಶವು ನಿರ್ದಿಷ್ಟ ದೇಶಗಳಿಗೆ ಹೋಗದಂತೆ ನಿಯಂತ್ರಣವನ್ನು ಹೇರುವ ಸಾಧ್ಯತೆಯೂ ಇರುತ್ತದೆ. ಇದಕ್ಕೆ ದುರ್ಬಲ ಅಂತರರಾಷ್ಟ್ರೀಯ ಸಂಬಂಧ ಅಥವಾ ಸುರಕ್ಷತೆ ಮತ್ತು ಆರೋಗ್ಯ ಸಮಸ್ಯೆಗಳು ಕಾರಣವಾಗಿರಬಹುದು.
ಪಾಸ್‌ಪೋರ್ಟ್ ಬೇಕಿದ್ದರೆ ಹೀಗೆ ಮಾಡಿ
1. http://passportindia.gov.in/AppOnlineProject/welcomeLink ಇಲ್ಲಿಗೆ ಹೋಗಿ ಮೊದಲು ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.
2. ನಿಮ್ಮ ಇ–ಮೇಲ್ ಅಕೌಂಟ್ ಮೂಲಕ ಆನ್‌ಲೈನ್ ಅರ್ಜಿ ಭರ್ತಿ ಮಾಡಿ, ಅಪ್‌ಲೋಡ್ ಮಾಡಿರಿ. ಖುದ್ದು ಸಂದರ್ಶನಕ್ಕೆ ‘ಸಮಯ’ವನ್ನೂ ನಿಗದಿಪಡಿಸಿಕೊಳ್ಳಿರಿ.
3. ಹೇಳಿದ ದಿನಾಂಕ ಮತ್ತು ಸಮಯಕ್ಕೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ. ಎಲ್ಲವೂ ಸರಿಯಾಗಿದ್ದರೆ ತಿಂಗಳೊಳಗೆ ಪಾಸ್‌ಪೋರ್ಟ್ ನಿಮ್ಮ ಕೈಲಿರುತ್ತದೆ.
ಸಮೀಪದ ಪಾಸ್‌ಪೋರ್ಟ್ ಕಚೇರಿ/ಡಿಪಿಸಿ/ ಸ್ಪೀಡ್‌ಪೋಸ್ಟ್ ಕೇಂದ್ರಗಳಿಗೆ ಹೋಗಿ ಸೂಕ್ತವಾದ ಅರ್ಜಿಯನ್ನು ತರಬೇಕು. ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಸಬಹುದು.
ಎಷ್ಟು ಖರ್ಚಾಗುತ್ತೆ?
ಹೊಸ ಪಾಸ್‌ಪೋರ್ಟ್‌ಗೆ (ಸಾಮಾನ್ಯ) ಅಥವಾ ನವೀಕರಣಕ್ಕೆ: ₨1500 (36 ಪುಟ) ತತ್ಕಾಲ್ ಆದರೆ ₨3,500
60 ಪುಟಕ್ಕೆ ಸಾಮಾನ್ಯ ₨2000. ತತ್ಕಾಲ್ ಆದರೆ, ₨4000. ಎರಡಕ್ಕೂ ಹತ್ತು ವರ್ಷಗಳ ವಾಯಿದೆ ಇರುತ್ತದೆ.
ಮಕ್ಕಳಿಗೆ : ₨1000 (18 ವರ್ಷತುಂಬುವವರೆಗೆ)
ಪಾಸ್‌ಪೋರ್ಟ್ ಕಚೇರಿ ಅಂತರ್ಜಾಲ ತಾಣದಲ್ಲಿ ಶುಲ್ಕಕ್ಕೆ ಸಂಬಂಧಿಸಿದಂತೆ ಪ್ರಕಟಿಸುವ ಪರಿಷ್ಕೃತ ದರ ಪಟ್ಟಿ ನೋಡಬಹುದು.
ಅಗತ್ಯ ದಾಖಲೆಗಳು
ಪಾನ್ ಕಾರ್ಡ್/ಮತದಾರರ ಗುರುತಿನ ಚೀಟಿ/ಚಾಲನಾ ಪರವಾನಗಿ/ಪಡಿತರ ಚೀಟಿ(ದೇಶೀಯತೆ ಖಾತ್ರಿಗೆ)
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ (ಹೆಸರು ಮತ್ತು ಜನ್ಮದಿನಾಂಕ ಖಾತ್ರಿಗೆ) ವಿಳಾಸ ದಾಖಲೆ (ಕಳೆದ 6 ತಿಂಗಳಲ್ಲಿ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಅಥವಾ ಅರ್ಜಿದಾರನ ಹೆಸರಿನಲ್ಲಿರುವ ವಿದ್ಯುತ್ ಬಿಲ್) ಕಲಿಕೆ ಪ್ರಮಾಣ ಪತ್ರ (ಅರ್ಜಿದಾರ ವಿದ್ಯಾರ್ಥಿಯಾಗಿದ್ದರೆ) ಪಾಸ್‌ಪೋರ್ಟ್ ಅರ್ಜಿ ಸಲ್ಲಿಸುವಾಗ ಕಚೇರಿಯಲ್ಲಿ ಎಲ್ಲ ಅಸಲಿ ದಾಖಲೆಗಳನ್ನು ತೋರಿಸಬೇಕಾಗುತ್ತದೆ.
ಅಸಲಿ ಪಾಸ್‌ಪೋರ್ಟ್ ಅರ್ಜಿಯ ಜತೆಗೆ, ಅಗತ್ಯ ದಾಖಲೆಗಳ ಸೆಲ್ಫ್ ಅಟೆಸ್ಟೆಡ್(ನಮ್ಮದೇ ಸಹಿ ಹಾಕಿ ದೃಢೀಕರಿಸಿದ) ಜೆರಾಕ್ಸ್ ಪ್ರತಿಗಳು ಇರಬೇಕು. ಅಶಿಕ್ಷಿತ ಅರ್ಜಿದಾರರಾದರೆ ಅರ್ಜಿಯಲ್ಲಿ ನೀಡಲಾದ ಬಾಕ್ಸ್‌ನಲ್ಲಿ ಎಡಗೈ ಹೆಬ್ಬೆರಳ ಮುದ್ರೆ ಒತ್ತಬೇಕು.
ಪಾಸ್‌ಪೋರ್ಟ್ ಎಂದರೇನು?
ಪಾಸ್‌ಪೋರ್ಟ್ ಎಂದರೆ ಒಂದು ದೇಶದ ಸರ್ಕಾರವು ತನ್ನ ದೇಶದ ನಾಗರಿಕನಿಗೆ ಇನ್ನೊಂದು ದೇಶಕ್ಕೆ ಹೋಗುವಾಗ (ಪ್ರವಾಸ ಮತ್ತಿತರ ಉದ್ದೇಶಗಳಿಗೆ) ಆತನ ಗುರುತು ಮತ್ತು ರಾಷ್ಟ್ರೀಯತೆಯನ್ನು ಗುರುತಿಸಲು ನೀಡುವ ದಾಖಲೆಯಾಗಿದೆ. ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಹುಟ್ಟಿದ ಸ್ಥಳದ ವಿವರಗಳು ಈ ಗುರುತು ಪತ್ರದಲ್ಲಿರುತ್ತವೆ. ಭದ್ರತೆ ದೃಷ್ಟಿಯಿಂದ ‘ಸ್ಕ್ರೀನ್ ಇಮೇಜ್’ನಲ್ಲಿ ಅಭ್ಯರ್ಥಿಯ ಛಾಯಾಚಿತ್ರ, ವೈಯಕ್ತಿಕ ದತ್ತಾಂಶಗಳನ್ನು ನಮೂದಿಸಲಾಗಿರುತ್ತದೆ.
ಪಾಸ್‌ಪೋರ್ಟ್ ಪಡೆದ ತಕ್ಷಣ ಆ ವ್ಯಕ್ತಿಗೆ ಇನ್ನೊಂದು ದೇಶಕ್ಕೆ ಹೋಗಲು ಹಕ್ಕನ್ನು ನೀಡಿದಂತೆ ಅಲ್ಲ, ಅಥವಾ ವಿದೇಶದಲ್ಲಿರುವಾಗ ರಕ್ಷಣೆ ಅಥವಾ ಇನ್ಯಾವುದೇ ಸೌಲಭ್ಯಗಳಿಗೆ ಅವಕಾಶ ನೀಡಿದಂತೆಯೂ ಅಲ್ಲ. ಸಾಮಾನ್ಯವಾಗಿ ಪಾಸ್‌ಪೋರ್ಟ್‌ದಾರರಿಗೆ ಯಾವ ದೇಶ ಪಾಸ್‌ಪೋರ್ಟ್ ನೀಡಿದೆಯೋ ಆ ದೇಶಕ್ಕೆ ಮರಳಿ ಬರಲು ಅವಕಾಶ ನೀಡುತ್ತದೆ. ‘ಪಾಸ್‌ಪೋರ್ಟ್’ ಎಂಬ ಶಬ್ದವು ಸೀಪೋರ್ಟ್ (ಬಂದರು) ಎಂಬ ಶಬ್ದದಿಂದ ಬಂದಿಲ್ಲ.
ಒಂದು ಗೇಟ್ ಅಥವಾ ತಪಾಸಣಾ ತಡೆಯನ್ನು ದಾಟಿ ಹೋಗಲು ಇರಬೇಕಾದ ಒಂದು ಪರವಾನಗಿ ಎನ್ನುವುದು ಇದರ ಅರ್ಥ. ಮಧ್ಯಕಾಲೀನ ದಾಖಲೆಯೊಂದರ ಪ್ರಕಾರ ಒಂದು ಪ್ರದೇಶದಿಂದ ದಾಟಿ ಹೋಗುವಾಗ ಒಂದು ನಗರದ ಗೋಡೆಯ ದ್ವಾರವನ್ನು (porte) ದಾಟುವವರರು ಹೊಂದಿರಬೇಕಾದ ದಾಖಲೆ ಇದಾಗಿತ್ತು.
ಛಾಯಾಚಿತ್ರವನ್ನು ಪಾಸ್‌ಪೋರ್ಟ್‌ಗೆ ಅಂಟಿಸುವುದು 20ನೇ ಶತಮಾನದ ಆರಂಭದ ದಶಕಗಳಲ್ಲಿ ಫೋಟೋಗ್ರಫಿ ಪ್ರಸಿದ್ಧಿಗೊಂಡ ನಂತರದಲ್ಲಿ ಚಾಲ್ತಿಗೆ ಬಂದಿತು. ಮೊದಲ ವಿಶ್ವಯುದ್ಧದ ಸಮಯದಲ್ಲಿ ಯೂರೋಪ್ನಲ್ಲಿ ಸುರಕ್ಷತೆ ದೃಷ್ಟಿಯಿಂದ (ಪತ್ತೆದಾರರನ್ನು ದೂರವಿಡಲು) ಮತ್ತು ಕುಶಲ ಕರ್ಮಿಗಳಾದ ನಾಗರಿಕರು ಬೇರೆ ದೇಶಗಳಿಗೆ ವಲಸೆ ಹೋಗದಂತೆ ತಡೆಯಲು ಪಾಸ್‌ಪೋರ್ಟ್ ವಿತರಣೆ ಕ್ರಮವನ್ನೂ ಬಳಸಲಾಯಿತು.
ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ‘ಕಾಲೊನಿ’ಗಳ ನಡುವೆ ಸಂಚರಿಸಲು ಗುರುತಿನ ಪತ್ರ ನೀಡುವ ಮೂಲಕ ಭಾರತದಲ್ಲಿ ಮೊದಲು ಪಾಸ್‌ಪೋರ್ಟ್ ಚಲಾವಣೆಗೆ ಬಂತು. ‘ಭಾರತೀಯ ರಕ್ಷಣಾ ಕಾಯಿದೆ-1914ರ ಅಡಿಯಲ್ಲಿ ಪಾಸ್‌ಪೋರ್ಟ್ ವಿತರಣೆಗೆ ಮಾನ್ಯತೆ ದೊರೆಯಿತು. 1920ರ ‘ಭಾರತೀಯ ಪಾಸ್‌ಪೋರ್ಟ್ ಕಾಯಿದೆ ಇದನ್ನು ಇನ್ನಷ್ಟು ಬಲಪಡಿಸಿತು.
ಪಾಸ್‌ಪೋರ್ಟ್ ಅದಾಲತ್
ತಡೆ ಹಿಡಿಯಲಾದ ಹಳೆಯ ಅರ್ಜಿಗಳನ್ನು ಪಾಸ್‌ಪೋರ್ಟ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗುತ್ತದೆ. ಕಳೆದ ಐದು ತಿಂಗಳಲ್ಲಿ ಮೂರು ಅದಾಲತ್‌ಗಳು ನಡೆದಿವೆ. ಮುಂದಿನ ಎರಡು ಅದಾಲತ್‌ಗಳು ನವೆಂಬರ್ 13 ಮತ್ತು 27ರಂದು ನಡೆಯಲಿವೆ.
ಕೃಪೆ:ಪ್ರಜಾವಾಣಿ
Comments
Post a Comment