ಅಭಿವೃದ್ಧಿ ಹೆಸರಿನಲ್ಲಿ ನೂರಾರು ವರ್ಷ ಹಳೆ ಮರಗಳನ್ನು ಆಪೋಶನ ತೆಗೆದುಕೊಂಡು ಮುಗಿಲೆತ್ತರಕ್ಕೆ ಎದ್ದುನಿಲ್ಲುವ ಮನಮೋಹಕ ಕಟ್ಟಡಗಳು. ಗಲ್ಲಿಗಲ್ಲಿಗಳಿಗೂ ಡಾಂಬರು. ವಸುಂಧರೆಯ ಹೊಟ್ಟೆ ತಂಪಾಗಿಸಲು ಅವಕಾಶವಾದರೂ ಎಲ್ಲಿದೆ? ಮಳೆ ನೀರು ಕಾಂಕ್ರೀಟ್ ಚರಂಡಿಗಳಲ್ಲಿ ಸಾಗಿ, ದೊಡ್ಡ ಮೋರಿಯಲ್ಲಿ ಹರಿದು ಹೋಗುತ್ತದೆಯೇ ವಿನಾ ಭೂಮಿಯ ಒಳಕ್ಕೆ ಇಳಿಯುವುದೇ ಇಲ್ಲ. ಅದೇ ನಾವು ಅವಳ ಒಡಲು ಬಗೆದು, ಸಾವಿರ ಅಡಿ ಆಳಕ್ಕೆ ಇಳಿದು ಅಲ್ಲಿರುವ ನೀರನ್ನೆಲ್ಲ ಬಳಸುತ್ತಿದ್ದೇವೆ.
ದಿನಕ್ಕೊಂದು ಬಗೆಯ ಜ್ವರ. ಪ್ರತಿದಿನವೂ ವೈದ್ಯಲೋಕವನ್ನು ಅಚ್ಚರಿಗೆ ಕೆಡಗುವ, ಅವರು ಕಂಡುಕೇಳರಿಯದ ಹೊಸಹೊಸ ಕಾಯಿಲೆಗಳು. ಈ ಕ್ಷಣ ನಗುನಗುತ್ತ ಇದ್ದವ ಮರುಕ್ಷಣ ಅನಾರೋಗ್ಯ ಪೀಡಿತ. 'ಮಾಯಾನಗರಿ' ಎನ್ನುವ ಬಿರುದು ಬೆಂಗಳೂರಿಗೆ ಈ ಕಾರಣದಿಂದಲೂ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಎಷ್ಟೋ ಕಾಯಿಲೆಗಳು ಕುಡಿಯುವ ನೀರಿನಿಂದ ಹುಟ್ಟಿಕೊಳ್ಳುತ್ತಿವೆ ಎನ್ನುತ್ತಾರೆ ಡಾಕ್ಟರ್‌ಗಳು. ಜೀವಜಲ ಎಂದಾದರೂ ಮೃತ್ಯುಜಲವಾಗಲು ಸಾಧ್ಯವೇ? ಇದು ನಾವೇ ಮಾಡಿಕೊಂಡಿರುವ ಕರ್ಮ.
ಬೆಂಗಳೂರಿನಲ್ಲಿ ನೀರು ಎನ್ನುವುದು ಅಧ್ಯಯನದ ಪ್ರಮುಖ ವಸ್ತು. ಸರ್ಕಾರ ಅದೆಷ್ಟು ಸಮಿತಿಗಳನ್ನು ರಚಿಸಿದೆಯೊ ಲೆಕ್ಕವಿಲ್ಲ. ಸರ್ಕಾರೇತರ ಸಂಸ್ಥೆಗಳಂತೂ ನೀರಿನ ಹೆಸರಿನಲ್ಲಿ ನಡೆಸುತ್ತಿರುವ ಅಧ್ಯಯನಗಳಿಗೆ ಕೊನೆ ಎನ್ನುವುದೇ ಇಲ್ಲದಂತಾಗಿದೆ. ಖುದ್ದು ಹೈಕೋರ್ಟ್ ಕೂಡ ನೀರಿನ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಸನ್ನಿವೇಶ ನಿರ್ಮಾಣವಾಗಿದೆ. ಅಂದು ಕೆಂಪೇಗೌಡರ ಕಾಲದಲ್ಲಿ ನಾಲ್ಕು ಗೋಪುರಗಳ ನಡುವೆ ಇದ್ದ 29 ಚದರ ಕಿ.ಮೀ ವಿಸ್ತೀರ್ಣ ಇವತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೆಸರಿನಲ್ಲಿ 1,275 ಚದರ ಕಿ.ಮೀ.ವರೆಗೆ ಹಿಗ್ಗಿದೆ. 1973ರಲ್ಲಿ 379 ಬೃಹತ್ ಕೆರೆಗಳನ್ನು ಹೊಂದಿದ್ದ ನಗರದಲ್ಲಿ ಈಗ ಕೆರೆಗಳ ಸಂಖ್ಯೆ ನೂರರ ಆಜುಬಾಜಿಗೆ ಕುಸಿದಿದೆ. ನೀರಿನ ಅಗತ್ಯ, ಪೂರೈಕೆಗಳ ನಡುವಿನ ಅಂತರ ನೋಡಿದರಂತೂ ಗಾಬರಿಯಾಗುತ್ತದೆ.
ಕಾವೇರಿ ನಮ್ಮ ಕುಡಿಯುವ ನೀರಿನ ಮುಖ್ಯ ಮೂಲ. ನದಿ ಮಟ್ಟದಿಂದ 300 ಮೀಟರ್ ಎತ್ತರಕ್ಕೆ, 100 ಕಿ.ಮೀ ದೂರ ಕೊಳವೆಮಾರ್ಗದಲ್ಲಿ ತಂದು ಪೂರೈಸುತ್ತಿರುವುದು ಜಗತ್ತಿನಲ್ಲಿ ಮತ್ತೆಲ್ಲಿಯೂ ಇಲ್ಲ. ಕಾವೇರಿ 4ನೇ ಹಂತದ ಯೋಜನೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡರೆ ನ್ಯಾಯಮಂಡಳಿ ನಿಗದಿಪಡಿಸಿರುವ ಎಲ್ಲ 19 ಟಿಎಂಸಿ ನೀರನ್ನು ಸಂಪೂರ್ಣವಾಗಿ ಬಳಸಿಕೊಂಡಂತಾಗುತ್ತದೆ. ಈಗಾಗಲೇ ಕೋಟಿ ದಾಟಿರುವ, 2050ರ ಹೊತ್ತಿಗೆ ಎರಡೂವರೆ ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿರುವ ಬೆಂಗಳೂರಿನ ಜನಸಂಖ್ಯೆಗೆ ಇಷ್ಟು ನೀರು ಏತಕ್ಕೂ ಸಾಲದು. ಸರ್ಕಾರವೇ ಹೇಳುವ ಪ್ರಕಾರ, ಈಗಾಗಲೇ ಶೇ 40ರಷ್ಟು ಜನ ನೀರಿಗಾಗಿ ಅವಲಂಬಿಸಿರುವುದನ್ನು ಅಂತರ್ಜಲವನ್ನು. ಅದು ಕೊಳವೆಬಾವಿ ಮೂಲಕ ಎನ್ನುವುದನ್ನು ಹೇಳಬೇಕಾಗಿಯೇ ಇಲ್ಲ. ನೀವು ನಂಬಲಾರಿರಿ. 1980ರಲ್ಲಿ ಈ ನಗರದಲ್ಲಿದ್ದ ಬೋರ್‌ವೆಲ್‌ಗಳ ಸಂಖ್ಯೆ ಕೇವಲ ಐದು ಸಾವಿರ. ಈಗ ಆ ಸಂಖ್ಯೆ ಎಷ್ಟಾಗಿರಬಹುದು ಊಹಿಸಬಲ್ಲಿರಾ? 4.08 ಲಕ್ಷ! ಅದರಲ್ಲಿ ಬೆಂಗಳೂರು ಜಲಮಂಡಳಿಯೇ ಕೊರೆಸಿರುವ ಕೊಳವೆಬಾವಿಗಳು ಸುಮಾರು 7,000. ನೆನಪಿಡಿ. ಇದು ಸರ್ಕಾರವೇ ಒಪ್ಪಿಕೊಂಡಿರುವ ಅಧಿಕೃತ ಅಂಕಿ-ಅಂಶ. ಮೂರು ದಶಕಕ್ಕೆ ಮೊದಲು ನೂರಿನ್ನೂರು ಅಡಿಗಳಿಗೆಲ್ಲ ಸಿಗುತ್ತಿದ್ದ ನೀರನ್ನು ಪಡೆಯಲು ಈಗ ಸಾವಿರಾರು ಅಡಿ ಆಳ ಕೊರೆಯಬೇಕು. ಅಷ್ಟು ಆಳದಲ್ಲಿ ಸಂಗ್ರಹವಾಗಿರುವ ನೀರನ್ನು ಬಳಸುವುದು ಎಂದರೆ ಮುಂದಿನ 10-12 ಸಾವಿರ ವರ್ಷಗಳಿಗೆ ಸಾಕಾಗುವಷ್ಟಿದ್ದ ನೀರನ್ನು ಈಗಲೇ ಖರ್ಚು ಮಾಡಿದಂತೆ. ಇನ್ನು ಮುಂದಿನ ಪೀಳಿಗೆಯವರ ಕತೆ? ಸರಳವಾಗಿ ಬೇಳಬೇಕೆಂದರೆ ನಗರದ ದೈನಂದಿನ ನೀರಿನ ಅವಶ್ಯಕತೆ 1342 ದಶಲಕ್ಷ ಲೀಟರ್. ಈಗ ಕಾವೇರಿ, ಕೊಳವೆಬಾವಿಗಳಿಂದ ಪೂರೈಕೆಯಾಗುತ್ತಿರುವುದು 1023 ದಶಲಕ್ಷ ಲೀಟರ್. ಕೊರತೆ 319 ದಶಲಕ್ಷ ಲೀಟರ್. ಮತ್ತಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ 26 ಲಕ್ಷ ಜನರಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ! 2036ರ ಹೊತ್ತಿಗೆ ಕೊರತೆ 1000 ದಶಲಕ್ಷ ಲೀಟರ್‌ಗೆ ಏರಬಹುದು ಎನ್ನುವ ಅಂದಾಜು ಇದೆ.
ಅದಕ್ಕಿಂತಲೂ ದಿಗಿಲು ಹುಟ್ಟಿಸುವ ಸಂಗತಿ ಇದೆ. ಇಷ್ಟೆಲ್ಲ ಆಳಕ್ಕಿಳಿದು ಪಡೆಯುವ ನೀರು ಕುಡಿಯಲು ಯೋಗ್ಯವಲ್ಲ ಎನ್ನುವುದು. ಅದೂ ನಾವೇ ಮಾಡಿಕೊಂಡಿದ್ದು. ತ್ಯಾಜ್ಯಗಳು ಮತ್ತು ತ್ಯಾಜ್ಯ ಖನಿಜಗಳಿಂದಾಗಿ ಅಂತರ್ಜಲವೂ ಕಲುಷಿತಗೊಳ್ಳುತ್ತಿದೆ. ಒಂದು ಲೀಟರ್ ನೀರಿನಲ್ಲಿ 500 ಮಿಲಿಗ್ರಾಂವರೆಗೆ ಟಿಡಿಎಸ್ (ಟೋಟಲ್ ಡಿಸಾಲ್ವ್‌ಡ್ ಸಾಲಿಡ್) ಇದ್ದರೆ ಬಳಸಬಹುದು. ಬಿಬಿಎಂಪಿ, ಜಲಮಂಡಳಿಗಳು ಕಳೆದ ಎರಡು ವರ್ಷಗಳಲ್ಲಿ ನಗರದ ವಿವಿಧೆಡೆ ಅಂತರ್ಜಲದ ಮಾದರಿ ಸಂಗ್ರಹಿಸಿ ಪರೀಕ್ಷಿಸಿದಾಗ ಈ ಮಟ್ಟ 1,600 ಮಿಲಿಗ್ರಾಂ ಇರುವುದು ಕಂಡುಬಂದಿದೆ. ಅಂದರೆ ಮೂರುಪಟ್ಟಿಗಿಂತಲೂ ಅಧಿಕ! ಕುಡಿಯುವುದಕ್ಕೆ ಇರಲಿ, ಸ್ನಾನಕ್ಕೂ ಯೋಗ್ಯವಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ನೈಟ್ರೇಟ್, ಫ್ಲೋರೈಡ್, ಆರ್ಸೆನಿಕ್ ಕೂಡ ಹೆಚ್ಚೇ ಇದೆ. ನಾವು ಇದೇ ನೀರನ್ನು ಟ್ಯಾಂಕರ್‌ಗೆ ಸಾವಿರಾರು ರುಪಾಯಿ ತೆತ್ತು ಬಳಸುತ್ತಿದ್ದೇವೆ. ಇನ್ನು ನಮ್ಮ ಕೊಳವೆಯಲ್ಲಿ ಹರಿದು ಬರುವ ನೀರಿನಲ್ಲಿಯೂ ಇ-ಕೋಲಿಯಂತಹ ಬ್ಯಾಕ್ಟೀರಿಯಾಗಳಿಂದ ಮುಕ್ತವಾದ ನೀರು ಬಳಸುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ. ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಸೇರಿಕೊಂಡರೆ ಈ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ.ಇ-ಕೋಲಿಯಿಂದ ಗ್ಯಾಸ್ಟ್ರಿಕ್, ಜ್ವರ ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಬೆಂಗಳೂರು ನಗರ ಮಾತ್ರವಲ್ಲ, ಗ್ರಾಮೀಣ ಪ್ರದೇಶಕ್ಕೆ ಪೂರೈಸಲಾಗುತ್ತಿರುವ ನೀರಿನಲ್ಲೂ ರಾಸಾಯನಿಕ ಅಂಶಗಳು ಅತ್ಯಧಿಕವಾಗಿದೆ ಎಂಬುದು ಆತಂಕಕಾರಿಯಲ್ಲವೇ? ಗ್ರಾಮೀಣ ನೀರು ಪೂರೈಕೆ ಯೋಜನೆಯಡಿ ಪೂರೈಸಲಾಗಿರುವ ನೀರುಗಳಲ್ಲಿ ನೈಟ್ರೇಟ್, ಫ್ಲೋರೈಡ್ ಮತ್ತು ಕ್ಲೋರಿನ್ ಅತ್ಯಧಿಕ ಪ್ರಮಾಣದಲ್ಲಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಸ್ವತಃ ಕರ್ನಾಟಕ ಗ್ರಾಮೀಣ ಜಲ ಪೂರೈಕೆ ಮತ್ತು ಸ್ವಚ್ಛತಾ ಮಂಡಳಿ (ಕೆಆರ್ ಡಬ್ಲ್ಯುಎಸ್‌ಎಸ್‌ಎ) ಎಂಜಿನಿಯರಿಂಗ್ ವಿಭಾಗ ಅಧ್ಯಯನ ನಡೆಸಿದೆ. ವಿವಿಧ ಯೋಜನೆಯಡಿ ಗ್ರಾಮೀಣ ಪ್ರದೇಶಕ್ಕೆ ಸುಮಾರು 1,64,971 ನೀರಿನ ಮೂಲಗಳಿಂದ ನೀರು ಪೂರೈಸಲಾಗುತ್ತಿದೆ.
ಮಂಡಳಿಯು 1,56,564 ನೀರಿನ ಮೂಲಗಳನ್ನು ಪರೀಕ್ಷಿಸಿದೆ. ಅದರಲ್ಲಿ 29,426 ಕಡೆಯಿಂದ ಪರೀಕ್ಷಿಸಿದ ನೀರುಗಳಲ್ಲಿ ನೈಟ್ರೇಟ್, ಫ್ಲೋರೈಡ್ ಮತ್ತು ಕ್ಲೋರೈಡ್ ಅಂಶಗಳು ಪತ್ತೆಯಾಗಿವೆ. ಇದರಲ್ಲಿ ಸುಮಾರು 7,450 ಸ್ಥಳದ ನೀರುಗಳಲ್ಲಿ ಅತ್ಯಧಿಕ ಪ್ರಮಾಣದ ನೈಟ್ರೇಟ್ ಅಂಶಗಳು ಇರುವುದಾಗಿ ಅಧ್ಯಯನ ಹೇಳಿದೆ. 1,549 ಕಡೆಯ ನೀರಿನಲ್ಲಿ ಪಿಎಚ್, 776 ಭಾಗದ ನೀರಿನಲ್ಲಿ ಕ್ಲೋರೈಡ್, 2,239 ನೀರುಗಳಲ್ಲಿ ಫ್ಲೋರೈಡ್, 3,106 ಕಡೆಯ ನೀರುಗಳಲ್ಲಿ ಅತ್ಯಧಿಕ ಪ್ರಮಾಣದ ಕಬ್ಬಿಣಾಂಶಗಳು ಕಂಡು ಬಂದಿವೆ.
ಹಾಗಾದರೆ, ತನ್ನಲ್ಲಿ ಆಶ್ರಯ ಕೋರಿ ಬರುವ ಎಲ್ಲರನ್ನೂ ಬರಸೆಳೆದು ಅಪ್ಪಿಕೊಳ್ಳುವ ಬೆಂಗಳೂರಿನ ವಿಶಿಷ್ಟ ಗುಣವೇ ಈ ಅನಾಹುತಕ್ಕೆ ಕಾರಣವಾ? ಖಂಡಿತಾ ಅಲ್ಲ. ಬೆಳವಣಿಗೆಯ ವೇಗ ಎಷ್ಟೇ ಇದ್ದರೂ, ಎಷ್ಟೇ ಜನ ಬಂದು ಸೇರಿಕೊಂಡರೂ ಅವರ ದಾಹ ಇಂಗಿಸುವ ತಾಕತ್ತು ಬೆಂಗಳೂರಿಗೆ ಇದೆ. ನಾವು ಸೋಲುತ್ತಿರುವುದು ನೀರಿನ ನಿರ್ವಹಣೆಯಲ್ಲಿ. ನೀರಿನ ಸಮರ್ಪಕ ಬಳಕೆಯಲ್ಲಿ ಎನ್ನುತ್ತಾರೆ ಭೂಗರ್ಭ ಶಾಸ್ತ್ರಜ್ಞ ಆರ್. ಎಚ್. ಸಾವಕಾರ್.
ಈಗ ನಿತ್ಯ ಕೊಳವೆ ಮೂಲಕ ಪೂರೈಕೆಯಾಗುತ್ತಿರುವ ಕಾವೇರಿ ನೀರಿನಲ್ಲಿ ಹೆಚ್ಚುಕಡಿಮೆ 500 ದಶಲಕ್ಷ ಲೀಟರ್ ಸೋರಿಕೆಯಾಗಿ ಬಳಕೆಗೆ ಸಿಗದೇ ವ್ಯರ್ಥವಾಗುತ್ತಿದೆ. ಈ ಪ್ರಮಾಣ ಕಾವೇರಿ ನಾಲ್ಕನೇ ಹಂತದ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ 1200 ದಶಲಕ್ಷ ಲೀಟರ್ ಆಗಬಹುದು ಎನ್ನುವ ಅಂದಾಜಿದೆ. ದಿನಾಲೂ ನಾವು ಬಳಸುವ ನೀರಿನಲ್ಲಿ ಶೇ 80ರಷ್ಟು ಕೊಳಚೆ ನೀರಾಗಿ ಪರಿವರ್ತನೆ ಹೊಂದುತ್ತದೆ. ಜಲಮಂಡಳಿ ನೀರು ಸಂಸ್ಕರಣೆಗೆ ಗಮನ ನೀಡಿದ್ದರೂ ನೀರಿನ ಮರುಬಳಕೆ ಕುರಿತು ನಮ್ಮಲ್ಲಿ ಅಷ್ಟಾಗಿ ಅರಿವು ಮೂಡಿಲ್ಲ. ಕೈಗಾರಿಕೆ ಉದ್ದೇಶಗಳಿಗೆ, ಗ್ಯಾರೇಜ್‌ಗಳಲ್ಲಿ ವಾಹನ ತೊಳೆಯಲು, ಎ.ಸಿಗೆ ಬಳಸಲು ಸಂಸ್ಕರಿತ ನೀರು ಉಪಯೋಗಿಸಬಹುದು. ಇಲ್ಲಿ ಜಲಮಂಡಳಿ ಪಾತ್ರವೂ ಇದೆ. ಇದಕ್ಕಾಗಿ ಪ್ರತ್ಯೇಕ ಕೊಳವೆ ಮಾರ್ಗ, ಸಂಸ್ಕರಿತ ನೀರು ಬಳಸುವವರಿಗೆ ಉತ್ತೇಜನದಂತಹ ಕ್ರಮಗಳನ್ನು ಕೈಗೊಳ್ಳಬೇಕಿದೆ. ನೀರಿನ ಮರುಬಳಕೆ ಹೆಚ್ಚಿದರೆ ಕುಡಿಯಲು ಮತ್ತು ಮನೆ ಬಳಕೆಗೆ ಹೆಚ್ಚು ನೀರು ಸಿಗುತ್ತದೆ.
ಜೀವ ವೈವಿಧ್ಯ, ನೀರ ಸಮೃದ್ಧಿ, ನೆಲದ ವೈಶಿಷ್ಟ್ಯ, ಹಸಿರ ಔನ್ನತ್ಯಗಳೆಲ್ಲವನ್ನೂ ಕಳಕೊಂಡು ಕರ್ನಾಟಕವೆಂಬುದು ದೇಶದ ಎರಡನೆ ಅತಿದೊಡ್ಡ ಮರುಭೂಮಿಯಾಗಿ ಪರಿವರ್ತನೆಯಾಗುತ್ತಿರುವ ವಾಸ್ತವ ನಮ್ಮೆದುರು ತೆರೆದುಕೊಂಡು ಹದಿನೈದು ವರ್ಷಗಳೇ ಕಳೆದುಹೋಗಿವೆ. ಹೀಗಿದ್ದೂ ಸನ್ನಿವೇಶದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಮನೋಭಾವದಲ್ಲಿ ಯಾವ ವ್ಯತ್ಯಾಸವೂ ಇಣುಕಿಲ್ಲ. ಸ್ವಾರ್ಥದಲ್ಲಿ ಕೊಂಚವೂ ಕುಸಿತ ಕಂಡು ಬಂದಿಲ್ಲ. ಪರಿಸರದ ದುರ್ಬಳಕೆಯಲ್ಲಿ ಇನಿತೂ ಇತಿಮಿತಿಗಳು ನಿಲುಕಿಲ್ಲ. ಪರಿಣಾಮ ಕರ್ನಾಟಕ ಇಷ್ಟರಲ್ಲೇ ಮರುಭೂಮಿಯಲ್ಲಿ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡರೂ ಅಚ್ಚರಿಯಿಲ್ಲ.
ಬೆಂಗಳೂರಿನಲ್ಲಿ ಸುರಿಯುವ ಮಳೆ ಪ್ರಮಾಣ ಸುಮಾರು 38 ಟಿಎಂಸಿ. ಅದರಲ್ಲಿ ಅರ್ಧದಷ್ಟು ಅಂದರೆ 19 ಟಿಎಂಸಿ ಮಳೆಕೊಯ್ಲಿನ ಮೂಲಕ ಹಿಡಿದಿಟ್ಟುಕೊಳ್ಳಬಹುದು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಳೆಕೊಯ್ಲು ಕಡ್ಡಾಯಗೊಳಿಸಿದೆಯಾದರೂ ಅದರ ಮಹತ್ವ ಮನೆ ಮಾಲೀಕರ ಮನಸ್ಸಿಗೆ ನಾಟಿಲ್ಲ. ಹೀಗಾಗಿ ಮಳೆಕೊಯ್ಲಿನತ್ತಲೂ ನಮ್ಮ ಆಸಕ್ತಿ ಇಲ್ಲ. ಹೋಗಲಿ, ಕಡೇಪಕ್ಷ ಅಲ್ಪಸ್ವಲ್ಪ ನೀರನ್ನು ಮನೆಯಂಗಳದಲ್ಲೇ ಹಿಂಗಿಸಿಕೊಳ್ಳೋಣ ಎನ್ನುವ ಪ್ರಜ್ಞೆಯೂ ಇಲ್ಲ. ನೀರಿನ ಮಿತ ಬಳಕೆ ಬಗ್ಗೆ ಕೇಳಲೇಬೇಡಿ. ಬಹುಶಃ ಭೀಕರತೆ ಎದುರಾಗುವವರೆಗೂ ಬೆಂಗಳೂರಿಗರಲ್ಲಿ ನೀರೆಚ್ಚರ ಆಗದೇನೋ?!
- ರಾಧಾಕೃಷ್ಣ ಎಸ್. ಭಡ್ತಿ
Comments
Post a Comment