ಸರ್ವೆ ನಡೆಸಿ ಒತ್ತುವರಿ ತೆರವಿಗೆ ಕ್ರಮ: ಸಿದ್ದರಾಮಯ್ಯ ಹನ್ನೆರಡು ಸಾವಿರ ಕೆರೆಗಳಿಗೆ ಕಾಯಕಲ್ಪ



ರಾಜ್ಯದಲ್ಲಿನ ಕೆರೆಗಳ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಲು ಹಾಗೂ 12 ಸಾವಿರ ಕೆರೆಗಳನ್ನು ಪುನಶ್ಚೇತನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ `ಗ್ರಾಮೀಣ ಕೆರೆಗಳ ಪುನಶ್ಚೇತನ' ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೆರೆಗಳ ಪುನಶ್ಚೇತನಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ನೀಡಲಿದೆ ಎಂದರು.
ರಾಜ್ಯದಲ್ಲಿ ಒಟ್ಟು 37,200 ಕೆರೆಗಳಿವೆ. ಈ ಪೈಕಿ 12 ಸಾವಿರ ಕೆರೆಗಳು ಬತ್ತಿ ಹೋಗಿವೆ. 5 ಸಾವಿರ ಕೆರೆಗಳಲ್ಲಿ 3 ರಿಂದ 6 ತಿಂಗಳ ಕಾಲ ಹಾಗೂ 1,200 ಕೆರೆಗಳಲ್ಲಿ ವರ್ಷ ಪೂರ್ತಿ ನೀರಿನ ಸಂಗ್ರಹ ಇರುತ್ತದೆ. ಬತ್ತಿ ಹೋಗಿರುವ ಕೆರೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಕೆರೆ ತುಂಬಿಸಲು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಕೆರೆಗಳ ಪುನಶ್ಚೇತನ ಹಾಗೂ ಜಲಸಂವರ್ಧನಾ ಕಾರ್ಯಗಳಿಗೆ ಮತ್ತಷ್ಟು ಒತ್ತು ನೀಡಲಾಗುವುದು. ಅಂದಾಜಿನ ಪ್ರಕಾರ 4,500 ಕೆರೆಗಳು ಒತ್ತುವರಿಯಾಗಿವೆ. ಇದಕ್ಕಿಂತ ಹೆಚ್ಚೂ ಇರಬಹುದು. ಯಾವುದೇ ಮುಲಾಜಿಲ್ಲದೆ ಅವುಗಳನ್ನು ತೆರವುಗೊಳಿಸಿ, ಪುನಶ್ಚೇತನಗೊಳಿಸುವ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
`ಜಲತಜ್ಞ ಡಾ.ರಾಜೇಂದ್ರ ಸಿಂಗ್ ಅವರ ಕಾಳಜಿಯಿಂದಾಗಿ ರಾಜಸ್ತಾನದಲ್ಲಿ 10 ಸಾವಿರ ಕೆರೆಗಳು, ಏಳು ನದಿಗಳು ಪುನಶ್ಚೇತನಗೊಂಡಿವೆ. ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ನಮ್ಮಲ್ಲೂ 12 ಸಾವಿರ ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಯಶಸ್ವಿಯಾಗಲಿದೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಎರಡು ಅಥವಾ ಎರಡೂವರೆ ವರ್ಷದಲ್ಲಿ ಪುನಶ್ಚೇತನ ಕಾರ್ಯ ಪೂರ್ಣಗೊಳ್ಳಲಿದೆ. ಕೆರೆಗಳಿಗೆ ನೀರು ಹರಿದು ಬರುವ ಪ್ರದೇಶವನ್ನು ಗುರುತಿಸಿ, ಅದನ್ನು ಸಾರ್ವಜನಿಕ ಆಸ್ತಿ ಎಂದು ಘೋಷಿಸಬೇಕು. ಕಟ್ಟಡಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯ ಕಾನೂನನ್ನು ಅಧಿಕಾರಿಗಳು ರೂಪಿಸಲಿದ್ದಾರೆ ಎಂದರು.

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಗುಬ್ಬಿ ತೋಟದಪ್ಪರವರು ಯಾರು? ಅವರ ಸಾಧನೆಗಳೇನು?

From Priya Village Roadshow to PVR: How Ajay Bijli built India’s largest multiplex chain