ಬೇಸಿಗೆಗೆ ಬತ್ತಿರುವವು ಬಾವಿಗಳಷ್ಟೇ ಅಲ್ಲ, ಭಾವಗಳೂ...
ತೆರೆದ ಕಿಟಕಿ - ಚೈತನ್ಯ ವರ್ಷದಿಂದ ವರ್ಷಕ್ಕೆ ಹಳ್ಳಿಗಳಲ್ಲಿ ಬೇಸಿಗೆ ಅಸಹನೀಯವಾಗುತ್ತಿದೆ. ನೀರಿನ ಕೊರತೆ, ಮೇವಿಗೆ ಬರ ಎಂಬೆಲ್ಲ ಸಮಸ್ಯೆಗಳು ಊರುಗಳ ಭೌತಿಕ ಅಸ್ತಿತ್ವದ ಮೇಲೆ ಹಲ್ಲೆ ನಡೆಸುವುದು ಹಳೆಯ ಸುದ್ದಿ. ಇವೆಲ್ಲದರ ಜತೆಯಲ್ಲೇ ಹಳ್ಳಿಗಳನ್ನು ಒಣಗಿಸುತ್ತಿದೆ ಹೊಸದೊಂದು ಭಾವದ ಬರ. ಪ್ರತಿ ಬೇಸಿಗೆಯಲ್ಲಿ ಆ ಭಾವದ ಬರದ ಇರುವಿಕೆ ಗಾಢವಾಗಿ ಕಾಡುತ್ತ ಕರುಳು ಚುರುಗುಡಿಸುತ್ತಿದೆ. ನಗರ-ಹಳ್ಳಿ ಎಂಬ ತಾರತಮ್ಯಗಳೇನೂ ಇಲ್ಲದೇ ಎಲ್ಲರನ್ನೂ ಬೆವರಿಸತೊಡಗುತ್ತದೆ ಏಪ್ರಿಲ್-ಮೇನ ಕಡು ಬಿಸಿಲು. ಇಂಥ ಬಿರು ಬಿಸಿಲಿನ ಬಾಯಾರಿಕೆಯ ನಡುವೆಯೇ ದಶಕಗಳ ಹಿಂದೆ ಊರುಗಳ ಎದೆಯಲ್ಲೊಂದು ಸಂಭ್ರಮದ ಜುಳುಜುಳು ಶುರುವಾಗುತ್ತಿತ್ತು. ಕಲರವ, ಕೇಕೆ, ಗುಡುಗು, ಸಿಡಿಲು, ಹರ್ಷದ ಹೊನಲು ಎಲ್ಲವೂ ಒಂದೆಡೆ ಕಳೆಗಟ್ಟುತ್ತಿದ್ದ ಆ ಒಂದೂವರೆ- ಎರಡು ತಿಂಗಳುಗಳ ವ್ಯಾಲಿಡಿಟಿಯನ್ನು ಪದಗಳಲ್ಲಿ ಹಿಡಿದಿಡುವುದಾದರೆ ಅದರ ಹೆಸರು 'ಬೇಸಿಗೆ ರಜೆ'. ಊರಿನ ಬೇರುಗಳಿದ್ದವರು ಬೆಂಗಳೂರಿನಂಥ ಪಟ್ಟಣಗಳಿಂದ ಮಕ್ಕಳು- ಮರಿ ಕಟ್ಟಿಕೊಂಡು ಊರಿಗೆ, ಊರಿನಲ್ಲೇ ಇರುವ ಪೋರರೂ ಬೇಸಿಗೆ ರಜೆ ಎಂದೊಡನೆ ಅಜ್ಜನ ಮನೆ, ನೆಂಟರ ಮನೆಗಳಿಗೆ ದಾಂಗುಡಿ ಇಡುವ ದೃಶ್ಯ. ಬೇಸಿಗೆ ಎಂದರೆ ಚಲನಶೀಲತೆ! ಬೇಸಿಗೆ ಎಂದರೆ ಸಮಾಗಮ, ಭಾವಗಳ ರೀಚಾರ್ಜ್, ಭಿನ್ನ ಸಂಸ್ಕೃತಿಗಳ ಕೊಡು-ಕೊಳ್ಳುವಿಕೆ, ಕಲಿಯುವಿಕೆ, ಕುಣಿಯುವಿಕೆ, ಬೆರೆತು ಅರಳುವಿಕೆ, ಹರಟಿ ಹಗುರಾಗುವಿಕೆ. ಇಗೋ... ಈಗ ಮತ...