ಪಂಚತೀರ್ಥ, ದೇವರಮನೆ


                               ಐದು ತೀರ್ಥದಲ್ಲಿಮುಳುಗು ಹಾಕಿ
ಚಿಕ್ಕಮಗಳೂರು ಜಿಲ್ಲೆ ಕಳಸದಿಂದ 3 ಕಿ.ಮೀ. ಅಂತರದಲ್ಲಿರುವ ಭದ್ರಾ ತೀರದ ಅಂಬುತೀರ್ಥ ಮನಮೋಹಕ, ರಮಣೀಯ ತಾಣ. ಹೊರನಾಡು, ಶೃಂಗೇರಿಗಳಿಗೆ ಭೇಟಿ ನೀಡಿ ಕಳಸೇಶ್ವರಸ್ವಾಮಿ ದರ್ಶನ ಮಾಡುವ ಭಕ್ತರು ಸಮೀಪವೇ ಇರುವ ಈ ಪಂಚತೀರ್ಥಕ್ಕೆ ಭೇಟಿ ನೀಡದಿದ್ದರೆ ಪವಿತ್ರ ಕ್ಷೇತ್ರ ದರ್ಶನದಿಂದ ವಂಚಿತರಾಗುವುದಂತೂ ದಿಟ.

ಸುಮಾರು 5 ಸಾವಿರ ವರ್ಷಗಳ ಹಿನ್ನೆಲೆಯಿರುವ ಕಳಸ ಕ್ಷೇತ್ರ ಮಹಾಮುನಿ ಅಗಸ್ತ್ಯ ಕ್ಷೇತ್ರವೆನಿಸಿದೆ. ಸ್ವಯಂಭು ಕಳಸೇಶ್ವರಸ್ವಾಮಿ ದೇಗುಲ ಹೊಂದಿದ ಖ್ಯಾತಿ. ಕುದುರೆಮುಖ ಬಳಿಯ ಗಂಗಾಮೂಲವೆಂಬ ಪವಿತ್ರ ತಾಣದಲ್ಲಿ ತುಂಗಾ, ಭದ್ರಾ ಹಾಗೂ ನೇತ್ರಾವತಿ ನದಿಗಳು ಉಗಮವಾಗುತ್ತವೆ. ತುಂಗೆಯು ಮುಂದೆ ಸಾಗಿ ಹನುಮನಗುಂಡಿ, ಸುತನಬ್ಬಿ ಜಲಪಾತಗಳನ್ನು ಸೃಷ್ಟಿಸಿ ಶೃಂಗೇರಿಯತ್ತ ಸಾಗಿದರೆ, ನೇತ್ರಾವತಿ ನದಿಯು ಕಾರ್ಕಳದತ್ತ ಮುಖತೋರಿ ಧರ್ಮಸ್ಥಳದತ್ತ ಸಾಗುತ್ತಾಳೆ. ಭದ್ರಾ ನದಿಯು ಕುದುರೆಮುಖ, ಕಳಸ ಹಾದಿಯ ಸಹ್ಯಾದ್ರಿ ಪರ್ವತ ಪ್ರದೇಶಗಳ ಕಣಿವೆಗಳಲ್ಲಿ ಸಾಗುತ್ತಾಳೆ.

ಹೀಗೆ ಕಳಸದ ಬಳಿ ಸಾಗುವಾಗ ಅಂಬುತೀರ್ಥ (ಅಂಬಾತೀರ್ಥ ಹಾಗೂ ಮಾತೃಕಾತೀರ್ಥವೆಂದೂ ಹೇಳುತ್ತಾರೆ), ರುದ್ರತೀರ್ಥ, ಕೋಟಿತೀರ್ಥ, ನಾಗತೀರ್ಥ ಹಾಗೂ ವಸಿಷ್ಠ ತೀರ್ಥಗಳಾಗಿ ಹರಿಯುತ್ತಾಳೆ. ಈ ಪಂಚತೀರ್ಥಗಳಲ್ಲಿ ಅಂಬುತೀರ್ಥವು ಪರಶುರಾಮ ಕ್ಷೇತ್ರವಾಗಿರುವುದರಿಂದ ಐತಿಹಾಸಿಕ ವಿಶಿಷ್ಟ ಸ್ಥಾನ ಹೊಂದಿದೆ. ಇನ್ನು ಭದ್ರೆ ಹರಿಯುವೆಡೆಯಲ್ಲೂ ನಿಸರ್ಗ ಸೌಂದರ್ಯ ಮನ ಸೆಳೆಯುತ್ತದೆ. ಬೃಹತ್ ಬಂಡೆಗಳಲ್ಲಿನ ರಂಧ್ರಗಳು ವಿಸ್ಮಯ ಮೂಡಿಸುವಂಥವು. ರಾಮಾಯಣ ಮತ್ತು ಮಹಾಭಾರತದ ಕಥೆಗಳಿಂದಲೂ ಈ ತಾಣ ಕುತೂಹಲವೆನಿಸುತ್ತದೆ.

ಇನ್ನು ಮಧ್ವಾಚಾರ್ಯರು ಇಲ್ಲಿನ ಗೋಳಾಕೃತಿಯ ಬಂಡೆಯಲ್ಲಿ ಶಾಸನವೊಂದನ್ನು ರಚಿಸಿದ್ದಾರೆ. ಅಲ್ಲದೆ, ಇಲ್ಲಿಯ ಹಾಸು ಬಂಡೆಗಳಲ್ಲಿ ಭಕ್ತರು ಶಿರಸಾಷ್ಟಾಂಗ ಮಾಡುತ್ತಿರುವ ಕೆತ್ತನೆಯೂ ಕಾಣಬಹುದು. ಹೊರನಾಡು, ಶೃಂಗೇರಿಗೆ ಭೇಟಿ ನೀಡುವ ಭಕ್ತರು ಕಳಸೇಶ್ವರ ಸನ್ನಿಧಿ, ಭದ್ರಾತೀರದ ಅಂಬುತೀರ್ಥಕ್ಕೆ ಭೇಟಿ ನೀಡದಿದ್ದರೆ ಪ್ರವಾಸ ಅಪೂರ್ಣವೆನಿಸದೆ ಇರದು. ಅಂಥ ಮಹತ್ವ ಹಾಗೂ ರಮಣೀಯ ತಾಣ ಅಂಬಾತೀರ್ಥ. ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೂ ಇಲ್ಲಿ ಪ್ರಾಕೃತಿಕ ಸೊಬಗು ಸವಿಯಲು ಸಕಾಲ.


ಹೀಗೆ ಬನ್ನಿ

ಮೂಡಿಗೆರೆ ತಾಲೂಕಿನ ಕುದುರೆಮುಖದಿಂದ 20 ಕಿ.ಮೀ. ಕಳಸದಿಂದ ಹೊರನಾಡಿಗೆ 8 ಕಿ.ಮೀ. ಕಳಸದಿಂದ ಹೊರನಾಡಿಗೆ ಹೋಗುವ ಹಾದಿಯಲ್ಲಿ 2 ಕಿ.ಮೀ. ಕ್ರಮಿಸಿದರೆ ಎಡಕ್ಕೆ ಅಂಬಾತೀರ್ಥಕ್ಕೆ ದಾರಿ ಎಂಬ ನಾಮಫಲಕ ಕಾಣುತ್ತದೆ. ಪುನಃ ಇಲ್ಲಿನ ಕಚ್ಚಾ ರಸ್ತೆಯಲ್ಲಿ 1 ಕಿ.ಮೀ. ಕ್ರಮಿಸಿದರೆ ಭದ್ರಾತೀರದ ಮಾತೃಕಾತೀರ್ಥವನ್ನು ಸಮೀಪಿಸಬಹುದು.


ಚಿತ್ರ-ಲೇಖನ: ವಿ.ಎಸ್. ಕುಮಾರ್

ಇದು ದೇವರ ಮನೆ ಕಾಣೋ!



ನಿತ್ಯಹರಿದ್ವರ್ಣ ಕಾಡುಗಳಿಂದ ಕಂಗೊಳಿಸುವ ಚಿಕ್ಕಮಗಳೂರು ಜಿಲ್ಲೆ ವಾಣಿಜ್ಯ ಬೆಳೆ ಕಾಫಿ, ಮಲೆನಾಡು ಹಾಗೂ ಬಯಲುಸೀಮೆಯನ್ನು ಮಡಿಲಲ್ಲಿರಿಸಿಕೊಂಡಿದೆ. ಹೇಮಾವತಿ, ತುಂಗಾ, ಭದ್ರಾ ನದಿಗಳು ನಿರಂತರ ಹರಿದು ಇಲ್ಲಿನ ಪರಿಸರವನ್ನು ತಂಪಾಗಿರಿಸಿವೆ. ಪ್ರಾಕೃತಿಕ ಕಲಾ ಶ್ರೀಮಂತಿಕೆಯ ಪಶ್ಚಿಮಘಟ್ಟದ ಈ ಪುಣ್ಯಭೂಮಿಯಲ್ಲಿರುವ 'ದೇವರಮನೆ' ಹೆಸರಿನ ಪರಿಸರ ಪ್ರವಾಸಿಗರ ಮನಸ್ಸಿಗೆ ಆಹ್ಲಾದ ನೀಡಬಲ್ಲದು.

ಮೂಡಿಗೆರೆಯಿಂದ 23 ಕಿ.ಮೀ. ದೂರವಿರುವ ದೇವರಮನೆ ತಾಣ ಕೆಲವು ಕುತೂಹಲಗಳಿಂದ ಕೂಡಿದೆ. ಇಲ್ಲಿನ ಗುಡ್ಡದ ಮಧ್ಯದಲ್ಲಿ ಕಲ್ಲಿನಲ್ಲಿ ಕೊರೆದಿರುವ ಬಟ್ಟಲು ಬಾವಿ ಮನಸೆಳೆಯುತ್ತದೆ. ಬೇಸಿಗೆ, ಮಳೆಗಾಲದಲ್ಲಿ ಒಂದೇ ಸಮನಾಗಿ ಅಲ್ಲಿ ನೀರಿರುತ್ತದೆ. ಗುಡ್ಡದಲ್ಲಿದ್ದರೂ ಜಲ ಬತ್ತುವುದಿಲ್ಲ ಎನ್ನುವ ಸ್ಥಳೀಯರು ಇದನ್ನು ಭೈರವೇಶ್ವರ ತೀರ್ಥ ಎಂದು ನಂಬಿದ್ದಾರೆ. ಈ ದೇವರಮನೆ ಭೈರವೇಶ್ವರ ಸನ್ನಿಧಿ ಎದುರಿನ ಬೃಹತ್ ಕೆರೆ ಆಕರ್ಷಕವಾಗಿದೆ. ಕೆರೆಯ ಬದಿಯಲ್ಲೇ ಜಲದೇವತೆ, ಆಂಜನೇಯ, ಬಾಗಿಲು ಮಾರಮ್ಮ ಗುಡಿಗಳಿವೆ. ಇಲ್ಲಿನ ತಂಪು ವಾತಾವರಣದಲ್ಲಿ ಭಕ್ತಿಭಾವದಿಂದ ಮನಸ್ಸು ಇನ್ನಷ್ಟು ಪ್ರಫುಲ್ಲತೆ ಹೊಂದಬಲ್ಲದು.

ಎತ್ತರವಾದ ನಕ್ಷತ್ರಾಕಾರದ ಜಗುಲಿಯ ಮೇಲೆ ನಿರ್ಮಿಸಿರುವ ಈ ದೇವಾಲಯದಲ್ಲಿ ಮುಖಮಂಟಪ, ಹಜಾರ, ಸುಖನಾಸಿ ಮತ್ತು ಭೈರೇಶ್ವರ ದೇವರು ಸ್ಥಾಪಿತವಾಗಿರುವ ಗರ್ಭಗುಡಿ ಇದೆ. ಶಿವನು ಭೈರವೇಶ್ವರ ರೂಪ ಧರಿಸಿ ದೇವರಮನೆ ಗುಡ್ಡದಲ್ಲಿ ನೆಲೆಸಿದ್ದಾನೆಂಬ ಭಾವದಿಂದ ಇಲ್ಲಿ ಪೂಜಾಕಾರ್ಯಗಳು ಜರುಗುತ್ತವೆ. ಇಲ್ಲಿನ ಬಟ್ಟಲಬಾವಿ ನಿರ್ಮಾಣದ ಹಿಂದೆ ಬಾಲಕನೊಬ್ಬನ ಪ್ರಾಣವನ್ನು ಭೈರವೇಶ್ವರ ಉಳಿಸಿದ ಕತೆಯಿದೆ. ಇದು ಜೋಗಿ ವಂಶಸ್ಥರ ಶ್ರದ್ಧಾಭಕ್ತಿಯ ಕೇಂದ್ರವೂ ಹೌದು.

ಹೊಯ್ಸಳರ ಪ್ರಮುಖ ಅರಸ ಬಲ್ಲಾಳರಾಯ ಶತ್ರುಗಳಿಂದ ರಕ್ಷಣೆ ಪಡೆದುಕೊಳ್ಳುವ ಸಲುವಾಗಿ ದೇವರಮನೆಗೆ ಬಂದು ಇಲ್ಲಿನ ಪ್ರಜೆಗಳ ಮನೆಯಲ್ಲಿ ಅಡಗಿದ್ದನೆಂಬ ಮಾತಿದೆ. ಇದಕ್ಕೆ ನಿದರ್ಶನವೆಂಬಂತೆ ದೇವರಮನೆ ಗುಡ್ಡದಲ್ಲೊಂದು ಸುರಂಗ ಮಾರ್ಗವಿದೆ. ಅದು ಈಗಲೂ ಬಲ್ಲಾಳರಾಯ ಗವಿ ಎಂದು ಪ್ರಸಿದ್ಧಿಗೊಂಡಿದೆ. ಇಲ್ಲಿನ ಸುಗ್ಗಿದೇವತೆ ಬಾಸಮ್ಮದೇವಿಯ ಉತ್ಸವ ಮೂರ್ತಿಯಲ್ಲಿ ಬಲ್ಲಾಳರಾಯ ಎಂಬ ಹೆಸರಿದೆ. ದೇವಿಗೆ ಜಾತ್ರೆಯಲ್ಲಿ ಛತ್ರಿ ಹಿಡಿಯುವ ಯಜಮಾನನಿಗೆ ಬಲ್ಲಾಳ ಎಂದು ಕರೆಯಲಾಗುತ್ತದೆ.

ಬಲ್ಲಾಳರಾಯನು ಆದಿವಾಸಿ ಜನಾಂಗದವರಾದ ಮಲೆಯ ಕುಡಿಯರಿಗೆ ಏಲಕ್ಕಿ ಬೀಜ ನೀಡಿ 'ಸಾಂಬಾರ ರಾಣಿ' ಏಲಕ್ಕಿ ಬೆಳೆಸಲು ಪ್ರೇರಕಶಕ್ತಿಯಾದನೆಂಬ ಮಾತಿದೆ. ದೇವರಮನೆ ಗುಡ್ಡ ಹಲವಾರು ಕವಲು ದಾರಿಗಳನ್ನು ಒಳಗೊಂಡಿದೆ. ಜನ್ನಮ್ಮನಕಾಡು, ಕಲ್ಲುಮೆಟ್ಟಿಗೆ ದಾರಿಯಲ್ಲಿ ನೇರವಾಗಿ ಚಾರಣ ಹೋದರೆ ಉಜಿರೆ-ಚಾಮರ್‌ಕಾಡಿಗೆ ಪ್ರವೇಶಿಸಬಹುದು.

ದೇವರಮನೆ ಗುಡ್ಡದಲ್ಲಿ ಎಡಭಾಗಕ್ಕೆ ಸಾಗಿದರೆ ಕಾಟಿಮೆಟ್ಟಿದ ಕಲ್ಲು ಕಾಣಸಿಗುವುದು. ಇದು ಪುರಾತನ ಕಾಲದಲ್ಲಿ ಕಲ್ಲು-ನೀರು ಕರಗುವ ಸಮಯದಲ್ಲಿ ಕಾಡುದನದ ಹಾಲನ್ನು ಕರು ಮಂಡಿಕೊಟ್ಟು ಕುಡಿದದ್ದು ಎಂಬ ನಂಬಿಕೆ. ಈ ನಿಸರ್ಗ ನಿರ್ಮಿತ ಚಿತ್ರ ಮನಸೂರೆಗೊಳ್ಳುತ್ತದೆ. ಇಲ್ಲಿಂದ ಮುಂದೆ ಪ್ರಯಾಣಿಸಿದರೆ ಕಲ್ವಡಗ್ರಿ, ಕುಂಬರಡಿ, ಬೈರಾಪುರ, ಶಿಶಿಲಗುಡ್ಡಕ್ಕೆ ಪ್ರವೇಶ.

ದೇವರಮನೆ ದೇವಾಲಯ ನಿರ್ಮಿಸಿದ್ದು ಹೊಯ್ಸಳರ ಪೂರ್ವರಾಜ, ಜೈನಮತೀಯನಾದ ವೇಣೂರಿನ ಭೈರವ ಅರಸನಂತೆ. ದಕ್ಷಿಣ ಕನ್ನಡ ಜಿಲ್ಲೆಯ ವೇಣೂರಿನ ಭೈರವ ಅರಸ ಸಮೀಪದ ಬೆಟ್ಟಗೆರೆಯಲ್ಲಿ ಭೈರವನಕೋಟೆ ನಿರ್ಮಿಸಿದ್ದ. ದಕ್ಷಿಣ ಕನ್ನಡದ ಜನರು ದೇವರಮನೆಗೆ ಬಂದು ಹೋಗುತ್ತಿದ್ದರು ಎಂಬುದಕ್ಕೆ ನಿದರ್ಶನಗಳಿವೆ.

- ಚಿತ್ರ-ಲೇಖನ: ಸಂಪತ್ ಬೆಟ್ಟಗೆರೆ

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

ಗುಬ್ಬಿ ತೋಟದಪ್ಪರವರು ಯಾರು? ಅವರ ಸಾಧನೆಗಳೇನು?