ಕೆರೆ ಕರೆ, ಸುತ್ತಿ ಕುರುವತ್ತಿ, ಗುಡ್ಡಟ್ಟು ಗಣೇಶ




ಆಂಧ್ರಪ್ರದೇಶದ ಕಂಭಂಕೆರೆ ಹೊರತುಪಡಿಸಿದರೆ ದಕ್ಷಿಣ ಭಾರತದ ಎರಡನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ ಇರುವುದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೂಳೆಕೆರೆಗೆ. ಇದು ಕರ್ನಾಟಕದ ಪ್ರಾಚೀನ ತಂತ್ರಜ್ಞಾನದ ಹೆಮ್ಮೆ. ಹಿರೇಹಳ್ಳಕ್ಕೆ ಎರಡು ಗುಡ್ಡಗಳ ಮಧ್ಯೆ ಒಂದು ಬೃಹತ್ ಒಡ್ಡು ಕಟ್ಟಿ ಹಾಕಿ ನೀರು ನಿಲ್ಲಿಸಿರುವ ಆ ಕೆರೆಯ ಸುತ್ತಳತೆ 65 ಕಿಲೋಮೀಟರ್. ಅದರ ಅಚ್ಚುಕಟ್ಟು ಪ್ರದೇಶ ಎರಡು ಸಾವಿರ ಹೆಕ್ಟೇರ್.

ಇಷ್ಟೊಂದು ವಿಸ್ತಾರದ ಕೆರೆ ನೋಡುಗರ ಕಣ್ಣಿಗೆ ಸಾಗರದಂತೆ ಕಾಣುತ್ತದೆ. ಎರಡು ಬೆಟ್ಟಗಳ ನಡುವೆ ಸುಮಾರು 950 ಅಡಿ ಉದ್ದದ ಏರಿ. ಏರಿಯ ಅಗಲ ಒಂದೆಡೆ 60 ಅಡಿಗಳಾದರೆ, ಇನ್ನೊಂದೆಡೆ 80 ಅಡಿಗಳಷ್ಟಿದೆ.

ಐತಿಹಾಸಿಕ ಹಿನ್ನೆಲೆ

ಕೆರೆಯ ನಿರ್ಮಾಣದ ಹಿಂದೆ ಅಚ್ಚರಿಯ ಸಂಗತಿಗಳಿವೆ. ಇವು ಇತಿಹಾಸಕ್ತರಿಗೆ ಹೆಚ್ಚಿನ ಸಂಶೋಧನೆಗೆ ಆಕರಗಳನ್ನು ಒದಗಿಸುತ್ತವೆ. ಈ ಪ್ರದೇಶದಲ್ಲಿ ಹಿಂದೆ ಸ್ವರ್ಗವತಿ ಎಂಬ ಪಟ್ಟಣ ಇತ್ತೆಂಬ ಐತಿಹ್ಯ. ವಿಕ್ರಮರಾಯನೆಂಬ ರಾಜ ಆಳುತ್ತಿದ್ದ, ನೂತನಾದೇವಿ ಆತನ ಪತ್ನಿ. ಈ ದಂಪತಿಗೆ ಶಾಂತಲಾದೇವಿ (ಶಾಂತಮ್ಮ) ಎಂಬ ಒಬ್ಬಳೇ ಮಗಳು. ಅವಳು ಯವ್ವನಾವಸ್ಥೆಗೆ ಬಂದಾಗ ಒಮ್ಮೆ ತಂದೆಯ ಅನುಮತಿ ಪಡೆಯದೆ ಕಾರ್ಯನಿಮಿತ್ತ ನೆರೆಯ ಊರಿಗೆ ಹೋಗಿ ಅರಮನೆಗೆ ಹಿಂತಿರುಗುತ್ತಾಳೆ. ಆಕೆಯ ನಡವಳಿಕೆಯನ್ನು ತಂದೆ ವಿಕ್ರಮರಾಯ ಆಕ್ಷೇಪಿಸಿ ನಿಂದಿಸುತ್ತಾನೆ. ನಡತೆಗೆಟ್ಟವಳು (ಸೂಳೆ) ಎಂದು ಜರಿಯುತ್ತಾನೆ. ತಂದೆಯ ಬೈಗುಳ ಕೇಳಿ ನೊಂದ ಶಾಂತಲಾದೇವಿ ಆರೋಪ ಮುಕ್ತಳಾಗಲು ಒಂದು ಕೆರೆ ನಿರ್ಮಿಸಲು ಸಂಕಲ್ಪ ಮಾಡುತ್ತಾಳೆ. ಸ್ವರ್ಗವತಿ ಪಟ್ಟಣದ ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶ ಕೆರೆ ನಿರ್ಮಾಣಕ್ಕೆ ಸೂಕ್ತ ಎಂದು ನಾಮಕರಣ ಮಾಡುವುದಾದರೆ ಆ ಪ್ರದೇಶವನ್ನು ಬಿಟ್ಟುಕೊಡುವುದಾಗಿ ಅವರು ಹೇಳುತ್ತಾರೆ. ಅವರ ಬೇಡಿಕೆಯಂತೆ ಒಪ್ಪಿದ ರಾಜಪುತ್ರಿ ಅಲ್ಲಿ ಕೆರೆ ನಿರ್ಮಾಣ ಮಾಡಿದಳು ಎಂಬುದು ಇತಿಹಾಸ.

ನೀರಿನ ಮೂಲ

ಅದೇನೆ ಇರಲಿ, ಇಲ್ಲಿನ ಐತಿಹ್ಯದಂತೆ ಸೂಳೆ ಶುಭ್ರ ಮನಸ್ಸಿನ ಶ್ರೇಷ್ಠಳು. ತ್ಯಾಗ ಸಂಕೇತದ ದೈವೀಸಮಾನಳೆಂಬ ಪೂಜ್ಯಭಾವನೆ ಇದೆ. ಸೂಳೆಕೆರೆಯ ಬಗ್ಗೆ ಚಿಕ್ಕ ಚಿಕ್ಕ ಸಮೃದ್ಧ ಜಾನಪದ ಗೀತೆಗಳಲ್ಲದೆ, ಕನಿಷ್ಠ ಮೂರು ಗ್ರಂಥಸ್ಥ ಕಾವ್ಯಗಳು ಹುಟ್ಟಿಕೊಂಡಿವೆ. ಕೆರೆ ವಿಸ್ತಾರವಾದ ಬೆಟ್ಟ ಸಾಲುಗಳ ಪ್ರದೇಶದಲ್ಲಿದೆ. ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಕೆರೆಗೆ ಹರಿದುಬರುತ್ತದೆ. ಹಳೇ ಮೈಸೂರು ರಾಜ್ಯದ ಬ್ರಿಟಿಷ್ ಎಂಜಿನಿಯರ್ ಸ್ಯಾಂಕಿ ಅವರು ಈ ಪ್ರದೇಶ ಕೆರೆ ನಿರ್ಮಾಣಕ್ಕೆ ಸೂಕ್ತವಲ್ಲ. ಹಿಂದಿನ ಕಾಲದ ನೀರಾವರಿ ತಂತ್ರಜ್ಞರ ಚಾಣಾಕ್ಷತೆಯಿಂದ ಈ ಕೆರೆ ನಿರ್ಮಾಣವಾಗಿದೆ. ಅದು ಅಚ್ಚರಿಯ ಸಂಗತಿ ಎಂದು ಹೇಳಿರುವುದು ಗಮನಾರ್ಹ. ಕೆರೆಯ ಉತ್ತರದಲ್ಲಿ ಸಿದ್ದನ ತೂಬು ಹಾಗೂ ಬಸವ ತೂಬು ಎಂಬ ಎರಡು ನಾಲೆಗಳಿವೆ. ಈ ಕೆರೆ ಸುಮಾರು 15ರಿಂದ 20 ಹಳ್ಳಿಗಳ ಕೃಷಿ ಭೂಮಿಗೆ (2000 ಎಕರೆ) ನೀರಾವರಿ ಸೌಲಭ್ಯ ಒದಗಿಸಿದೆ. ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದೆ.

ತುಂಬಿದ ಕೆರೆಯ ಅಲೆಗಳು ಕಡಲ ಅಲೆಗಳಂತೆ ದಡಕ್ಕೆ ಅಪ್ಪಳಿಸುವುದು ನೋಡಲು ಪರಮಾದ್ಭುತ. ದಾವಣಗೆರೆ- ಚನ್ನಗಿರಿ ಮಾರ್ಗದಲ್ಲಿರುವ ಈ ಕೆರೆಯ ಸೌಂದರ್ಯವನ್ನೊಮ್ಮೆ ಆಸ್ವಾದಿಸಿ ನೋಡಿ.
ಇನ್ನೇನಿದೆ?

ಕೆರೆಯ ಪೂರ್ವ ದಿಕ್ಕಿಗೆ ಹೊಯ್ಸಳ ಮತ್ತು ಕೆಳದಿ ವಾಸ್ತುಶೈಲಿಯ ಸಿದ್ದೇಶ್ವರ ದೇಗುಲವಿದೆ. ಇದರ ಆವರಣದಲ್ಲಿ ಶಾಂತವ್ವನ ದೇಗುಲವೂ ಇದೆ. ಕೆರೆಯ ಅಂಚಿನಲ್ಲೊಂದು ಆಕರ್ಷಕ ಕಲ್ಲು ಮಂಟಪ. ಇಲ್ಲಿಂದ ಕೆರೆ ವೀಕ್ಷಣೆ ಮನಮೋಹಕ. ಮೀನುಗಾರಿಕೆಗೂ ಈ ಕೆರೆಯ ಕೊಡುಗೆ ಅಪಾರ. ವಿಶೇಷವೆಂದರೆ, ಬೆಳದಿಂಗಳಲ್ಲಿ ಹಾಲಿನಂತೆ ನೀರ ಮೇಲೆಲ್ಲ ಚೆನ್ನಾಡುವ ಚಂದ್ರನ ಬೆಳಕು ಹೆಚ್ಚು ಮುದ ನೀಡುತ್ತದೆ. ಸೂರ್ಯೋದಯ, ಸೂರ್ಯಾಸ್ತಗಳ ವೇಳೆಗಳೂ ಅಷ್ಟೇ ರಂಗಾಗಿರುತ್ತದೆ.

-ಚಿತ್ರ-ಲೇಖನ: ಟಿ. ಶಿವಕುಮಾರ್


ಕುರುವತ್ತಿಯಲ್ಲಿ ಮಾ.6ರಿಂದ ಜಾತ್ರೆ ಶುರುವಾಗಿದ್ದು, 12ರ ವರೆಗೆ ನಡೆಯಲಿದೆ. 11ರಂದು ಸಂಜೆ 4.30ಕ್ಕೆ ವೈಭವದ ರಥೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಒಂದು ಕ್ಷೇತ್ರ ದರ್ಶನ...

ಹಿರೇಕುರುವತ್ತಿ. ಇದು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಿಂದ ನೈರುತ್ಯ ದಿಕ್ಕಿನಲ್ಲಿ 36 ಕಿ.ಮೀ.  ದೂರವಿದೆ. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಪಟ್ಟಣದಿಂದ ಪಶ್ಚಿಮ ದಿಕ್ಕಿಗೆ 35 ಕಿ.ಮೀ. ದೂರದಲ್ಲಿ ತುಂಗ -ಭದ್ರೆಯ ತಟದಲ್ಲಿ ಬೇರೂರಿದೆ. ಬಸವೇಶ್ವರ, ಮಲ್ಲಿಕಾರ್ಜುನ ದೇವರ ದೇಗುಲಗಳು ಇಲ್ಲಿನ ವಿಶೇಷ. ಅಲ್ಲದೆ, ಇದು ದಕ್ಷಿಣದ ವಾರಾಣಸಿ ಅಂತಲೇ ಪ್ರಸಿದ್ಧಿ.

ಮಲ್ಲಿಕಾರ್ಜುನ ದೇಗುಲ

ಇಲ್ಲಿನ ಮಲ್ಲಿಕಾರ್ಜುನ ದೇಗುಲವನ್ನು ಚಾಲುಕ್ಯರ ಅಹವಮಲ್ಲದೇವನು ನಿರ್ಮಿಸಿದ್ದಾನೆ. ದೇಗುಲ ಸಂಪೂರ್ಣ ಕಪ್ಪು ಶಿಲೆಯಿಂದ ಕೂಡಿದೆ. ಗುಡಿಯ ತಳದಲ್ಲಿ ಸುತ್ತಲು ಸಿಂಹ ಪ್ರತಿಮೆಗಳನ್ನು ಚಿತ್ರಿಸಲಾಗಿದೆ. ಪೂರ್ವ ದಿಕ್ಕಿನ ಪ್ರಥಮ ದ್ವಾರದ ಕಂಬಗಳ ಮೇಲೆ ಮದನಿಕೆಯರ ವಿಗ್ರಹಗಳಿವೆ. ಗರ್ಭಗೃಹದಲ್ಲಿ ಈಶ್ವರ ಲಿಂಗವಿದೆ.

ಬಾಗಿಲ ಮೇಲೆ ಎರಡು ಆನೆಗಳ ಮಧ್ಯೆ ಗಜಲಕ್ಷ್ಮಿ ಕಂಗೊಳಿಸಿದರೆ, ಪಾರ್ಶ್ವದಲ್ಲಿ ಮಕರ ತೋರಣಗಳು ಶೋಭಿಸುತ್ತಿವೆ. ನವರಂಗ ಮಂಟಪ, ಈ ಗುಡಿಯು ವೇಸರ ಶೈಲಿಯ ಮಾದರಿ ಎಂಬುದು ಇತಿಹಾಸಕಾರ  ಅ. ಸುಂದರ ಅವರ ಅಭಿಪ್ರಾಯ. ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದರೂ ಹೊಯ್ಸಳರ ಅರಸರ ಬೇರೆ ಬೇರೆ ಅವಧಿಯಲ್ಲಿ ಹೊಸ ಹೊಸ ಭಾಗ ಸೇರಿಸಿಕೊಂಡು ವಿಸ್ತರಿಸಿ ಚಾಲುಕ್ಯರಿಂದ ಹೊಯ್ಸಳರಿಗೆ ಕೊಂಡಿಯಾಗಿದೆ.

ನಂದಿ ಮೂರ್ತಿ

ಮಲ್ಲಿಕಾರ್ಜುನ ದೇವರ ಎದುರಿಗೆ ಸುಂದರ ನಂದಿಯ ದೊಡ್ಡ ವಿಗ್ರಹ ವಿರಾಜಮಾನವಾಗಿದೆ. ಇಲ್ಲಿ ಮಲ್ಲಿಕಾರ್ಜುನ ದೇವರಿಗಿಂತ ಬಸವಣ್ಣನೇ ಬಹಳ ಪ್ರಸಿದ್ಧ. ಮಲ್ಲಿಕಾರ್ಜುನಸ್ವಾಮಿ, ಬಸವೇಶ್ವರಸ್ವಾಮಿ  ಜಾತ್ರಾ ಮಹೋತ್ಸವ ಎಂದು ಕರಪತ್ರ ಹಾಕಿಸಿದ್ದರೂ, ಕುರುವತ್ತಿ ಬಸವಣ್ಣನ ಜಾತ್ರೆಗೆ ಹೋಗುತ್ತೇವೆ ಎಂದು ಭಕ್ತರು ಸಾಮಾನ್ಯಾಗಿ ಹೇಳುತ್ತಾರೆ. ದೇವಸ್ಥಾನದ ಹತ್ತಿರದಲ್ಲಿಯೇ ಭವ್ಯವಾದ ಸಿಂಹಾಸನದ ಕಟ್ಟೆ ಇದೆ. ಈ ಕಟ್ಟೆ ಮಲ್ಲಿಕಾರ್ಜುನ ದೇವರ ಗುಡಿ ನಿರ್ಮಿಸಿದ ಕಾಲದಲ್ಲಿಯೇ ನಿರ್ಮಿಸಿರಬೇಕು ಎಂಬುದು ಸಂಶೋಧಕ  ಕುಂ.ಬಾ. ಸದಾಶಿವಪ್ಪ ಹೇಳುತ್ತಾರೆ.

'ಕುಂಟಾ ಕುಂಟಾ ಕುರುವತ್ತಿ, ರಂಟಿ ಹೊಡಿಯೋ ಮಹದೇವ...' ಹೀಗೆ ಈ ಭಾಗದಲ್ಲಿ ರೈತರ ಚಿಕ್ಕಮಕ್ಕಳು ಹಳ್ಳಿಗಳಲ್ಲಿ ಆಟ ಆಡುವಾಗ ಹಾಡುವರು. ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಇಲ್ಲಿ ಒಂದು ವಾರಗಳ ಕಾಲ ಜಾತ್ರೆ ನಡೆಯುತ್ತದೆ. ಅದರಲ್ಲಿ ರಥೋತ್ಸವ ಕೇಂದ್ರ ಬಿಂದು. ಈ ಜಾತ್ರೆಯ ವಿಶೇಷ ವೆಂದರೆ ದೊಡ್ಡ ಮಟ್ಟದ ದನಗಳ ಜಾತ್ರೆ ನಡೆಯುತ್ತದೆ. ಇಲ್ಲಿ ದನಗಳನ್ನು ಮಾರಾಟ ಮಾಡಲು, ರೀದಿ ಮಾಡಲು ದೂರ ದೂರದಿಂದ ಜನರು ಆಗಮಿಸುತ್ತಾರೆ. ಈ ಭಾಗದ ರೈತರು ತಮ್ಮ ಎತ್ತುಗಳಿಗೆ ಕುರುವತ್ತಿ ಮತ್ತು ಮಹದೇವರೆಂದು ಹೆಸರಿಟ್ಟುಕೊಳ್ಳುವರು. ಎತ್ತು ಮುಂದಕ್ಕೆ ಹೋಗದಿದ್ದರೆ, 'ಏ ಕುರುವತ್ತಿ, ಏ ಮಹದೇವ' ಎಂದು ಬೆದರಿಸುತ್ತಾರೆ.
- ಬಿ.ರಾಮಪ್ರಸಾದ್ ಗಾಂಧಿ

ಚಿತ್ರ: ಕರಿಬಸಪ್ಪ ಪರಶೆ
ಟ್ಟಿ



ಮಧುಗಣಪತಿ



ಕುಂದಾಪುರದಿಂದ ಶಿವಮೊಗ್ಗ ಮಾರ್ಗದ ಯಡಾಡಿ- ಮತ್ಯಾಡಿ ಗ್ರಾಮದಲ್ಲಿ ಹಸಿರು ಕಾನನ ಮಧ್ಯೆಯ ಬಯಲಿನಲ್ಲಿ ವಿರಾಜಮಾನವಾಗಿರುವ ಈ ದೇಗುಲಕ್ಕೆ ನಿತ್ಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಗುಡ್ಡಟ್ಟು ಗಣೇಶ ವೀಕ್ಷಣೆಗೆ ಮಳೆಗಾಲವೇ ಸೂಕ್ತ ಕಾಲವಾದರೂ, ಧಾರ್ಮಿಕ ದೃಷ್ಟಿಯಿಂದ ಪ್ರವಾಸ ಕೈಗೊಳ್ಳುವರೇ ಹೆಚ್ಚು. ಬಂಡೆಯ ಗುಹೆಯ ಮಧ್ಯೆ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ ದಕ್ಷಿಣಕ್ಕೆ ಮುಖ ಮಾಡಿ ಸೊಂಡಿಲನ್ನು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಸ್ವಯಂಭು ವಿಗ್ರಹವೇ ಇಲ್ಲಿಯ ಆರಾಧ್ಯ ದೈವ. ಶ್ರೀದೇವರ ಮೂಲ ಬಿಂಬವು ವರ್ಷದ ಎಲ್ಲ ವೇಳೆ ಕಂಠದವರೆಗೂ ನೀರಿನಲ್ಲೇ ಮುಳುಗಿರುವುದು ಇಲ್ಲಿನ ವಿಶೇಷ. ನಿಸರ್ಗ ಪ್ರಿಯರಿಗಂತೂ ಈ ಕ್ಷೇತ್ರ ರಮಣೀಯ. ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಐತಿಹ್ಯ ಏನು ಹೇಳುತ್ತದೆ?

ತ್ರಿಪುರಾಸುರನ ಸಂಹಾರ ಕಾಲದಲ್ಲಿ ಈಶ್ವರನು ಯುದ್ಧಕ್ಕೆ ಹೋಗುವಾಗ ಪ್ರಮಾದವಶಾತ್ ಗಣಪತಿಯನ್ನು ಸ್ಮರಿಸದೇ ತೆರಳುತ್ತಾನೆ. ಯುದ್ಧದಲ್ಲಿ ಜಯ ಸಿಗದೆ ಪರದಾಡುತ್ತಿರುವಾಗ ತನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತು ಪರಶಿವ ಕೋಪಗೊಂಡು ಗಣಪತಿಯ ಮೇಲೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ. ಆದರೆ, ಯಾವ ಅಸ್ತ್ರವು ಗಣಪತಿಯನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಶಿವನು ಪ್ರಯೋಗಿಸಿದ ಅಸ್ತ್ರ ಹುಸಿಯಾಗಲೂ ಸಾಧ್ಯವಿಲ್ಲ. ಈ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಅಸ್ತ್ರವು ಗಣಪತಿಯನ್ನು ಹೊತ್ತೊಯ್ದು ಮಧುಸಾಗರದಲ್ಲಿ ಕೆಡಹುತ್ತದೆ. ಮಧು ಅರ್ಥಾತ್ ಜೇನು. ಇದು ಗಣಪತಿಗೆ ಅತಿ ಪ್ರಿಯವಾದ ವಸ್ತುವಾದ ಕಾರಣ ಯಥೇಚ್ಛ ಮಧುಪಾನ ಮಾಡಿದ ಗಣಪತಿ ಸಂತೃಪ್ತಗೊಂಡು ತನ್ನನ್ನು ಇಲ್ಲಿಗೆ ತಂದು ಹಾಕಿದವರ ಕಾರ್ಯ ಜಯವಾಗಲೆಂದು ವರಪ್ರಸಾದ ಮಾಡುತ್ತಾನೆ. ತತ್ಪರಿಣಾಮ ತ್ರಿಪುರಾಸುರನ ಸಂಹಾರವಾಗಿ ಶಿವನಿಗೆ ಜಯ ಲಭಿಸುತ್ತದೆ. ಆದರೆ, ಅತಿಯಾದ ಮಧು ಸೇವನೆಯಿಂದ ದೇಹದಲ್ಲಿ ಉಷ್ಣ ಹೆಚ್ಚಾಗಿ ಉರಿ ಪ್ರಾರಂಭಿಸುವುದು ಸ್ವಾಭಾವಿಕ. ಇದೇ ಪರಿಸ್ಥಿತಿ ಗಣಪತಿಗೂ ಬಂದು ಆತ ಉಷ್ಣದಿಂದ ಒದ್ದಾಡುತ್ತಾನೆ. ಇದೇ ವೇಳೆಗೆ ಅಲ್ಲಿಗೆ ಬಂದ ಶಿವ ಗಣಪತಿಯ ಉರಿ ಶಮನಕ್ಕಾಗಿ ನರಸಿಂಹ ತೀರ್ಥದಲ್ಲಿ ಜಲಾಧಿವಾಸಿಯಾಗಿ ನೆಲೆಸು ಎಂದು ಗಣಪತಿಗೆ ಅನುಗ್ರಹಿಸುತ್ತಾನೆ. ಅಂತೆಯೇ ಇಲ್ಲಿ ಹರಿಯುವ ವಾರಾಹಿ ಉಪನದಿ ನರಸಿಂಹ ತೀರ್ಥ ಪಕ್ಕದಲ್ಲಿಯ ಬಂಡೆಯ ಮಡುವಿನಲ್ಲಿ ಜಲಾಧಿವಾಸವಾಗಿ ನೆಲೆಸಿ ಗಣಪತಿಯು ಭಕ್ತರನ್ನು ಉದ್ಧರಿಸುತ್ತಾನೆ ಎಂಬ ನಂಬಿಕೆ ಇದೆ. ಅಂದಹಾಗೆ, ಈ ದೇಗುಲದ ಗರ್ಭಗುಡಿಯು ಸುಮಾರು 800 ವರ್ಷಗಳಷ್ಟು ಪುರಾತನವಾಗಿದೆ. 1997 ರಲ್ಲಿ ನೂತನ ಗರ್ಭಗುಡಿ, ತೀರ್ಥಮಂಟಪ, ಹೆಬ್ಬಾಗಿಲು ನಿರ್ಮಿಸಲಾಗಿದೆ.

ಆಯರ್ ಕೊಡ: ಇದು ಇಲ್ಲಿನ ವಿಶೇಷ ಸೇವೆ. ಗುಹೆಯೊಳಗಿನ ನೀರನ್ನು ತಾಮ್ರದ ಕೈಬಟ್ಟಲು ಉಪಯೋಗಿಸಿ ಪೂರ್ತಿ ಖಾಲಿ ಮಾಡಲಾಗುತ್ತದೆ. ನಂತರ ದೇವರಿಗೆ ತೈಲಾಭ್ಯಂಜನ ಮಾಡಿಸಿ ರುದ್ರಾಭಿಷೇಕ ಮಾಡಲಾಗುತ್ತದೆ. ಅಭಿಷೇಕದ ನೀರು ಹೊರತೆಗೆದು ಭಕ್ತರಿಗೆ ಶ್ರೀದೇವರ ಮೂಲಬಿಂಬ ಪ್ರಸಾದ ನೀಡಲಾಗುತ್ತದೆ. ಪುನಃ ಮೂಲಬಿಂಬಕ್ಕೆ ಅಲಂಕಾರ ಪೂಜೆ ನೈವೇಧ್ಯ ನೆರವೇರಿಸಿ ಪವಮಾನ ಮಂತ್ರ ಪಠಿಸುತ್ತಾ ಗುಹೆಯೊಳಗೆ ತುಂಬಿ ಹರಿಯುವಷ್ಟು ಶುದ್ಧಜಲಾಭಿಷೇಕ ಮಾಡಿ ಪೂಜಿಸಲಾಗುತ್ತದೆ. ಹೀಗೆ ಹಳೆ ನೀರು ತೆಗೆದು, ಹೊಸ ನೀರಿನ ಅಭಿಷೇಕ, 2 ಬಾರಿ ರುದ್ರಾಭಿಷೇಕ, ಒಮ್ಮೆ ಪವನಾಭಿಷೇಕ ನಂತರ 1000 ಕೊಡ ಜಲ ಅಭಿಷೇಕವಾಗುವುದರಿಂದ ಈ ಸೇವೆಗೆ ಆಯರ್ ಕೊಡ ಎಂದು ಕರೆಯಲಾಗಿರುವುದು ವಿಶೇಷ. <


ಹೀಗೆ ಬನ್ನಿ

ಉಡುಪಿಯಿಂದ ಬ್ರಹ್ಮಾವರ- ಬಾರ್ಕೂರು- ಶಿರಾಯಿರ-ಗುಡ್ಡಟ್ಟು ಮಾರ್ಗದಲ್ಲಿ ಬರುವುದಾದರೆ 28 ಕಿ.ಮೀ. ಕುಂದಾಪುರದಿಂದ ಶಿವಮೊಗ್ಗ- ಮಾರ್ಗವಾಗಿ ಕೋಟೇಶ್ವರ-ಗುಡ್ಡಟ್ಟು ತಲುಪಲು 18 ಕಿ.ಮೀ. ಇನ್ನೂ ಒಂದು ಮಾರ್ಗವಿದ್ದು, ಶಿವಮೊಗ್ಗದಿಂದ ಹೊಸಂಗಡಿ-ಸಿದ್ಧಾಪುರ- ಶಂಕರನಾರಾಯಣ- ಗುಡ್ಡಟ್ಟು ಮಾರ್ಗವಾಗಿ ಚಲಿಸಿದರೆ 147 ಕಿ.ಮೀ.ನಷ್ಟು ದೂರದ ಪ್ರಯಾಣವಾಗಬಲ್ಲದು.

-ಲೇಖನ: ಸುಧಾಕರ ವಕ್ವಾ
ಡಿ


Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

ಗುಬ್ಬಿ ತೋಟದಪ್ಪರವರು ಯಾರು? ಅವರ ಸಾಧನೆಗಳೇನು?