ಕಂಕಾರಿಯಾ ಮಾದರಿಯನ್ನು ನಾವೂ ಅನು'ಮೋದಿ'ಸೋಣ


ಸರ್ದಾರ್ ಸರೋವರದಿಂದ ನೀರು ಸರಿಸುಮಾರು 280 ಕಿ. ಮೀ. ನಷ್ಟು ದೂರದ ಪ್ರಯಾಣ ಬೆಳೆಸುತ್ತದೆ. ಉದ್ದಕ್ಕೂ ಇರುವ ಸಣ್ಣಪುಟ್ಟ ಕೆರೆಗಳನ್ನು ತುಂಬಿಯೇ ನೀರು ಮುಂದಕ್ಕೆ ಹೋಗುವಂತೆ ಯೋಜಿಸಲಾಗಿದೆ. ಜತೆಗೆ ಕನೇವಲ್ ಹಾಗೂ ಪರೇಜ್ ಕೆರೆಗಳೂ ತುಂಬುವುದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಅನಾಯಾಸವಾಗಿ ಏರಿಕೆ ಕಂಡು ಬಂದಿದೆ.


ಹಿಂದೊಮ್ಮೆ ಗುಜರಾತ್‌ನ ನೀರಾವರಿ ಮತ್ತು ಕೃಷಿ ರಂಗದಲ್ಲಾದ ಅಭಿವೃದ್ಧಿಯ ಬಗ್ಗೆ ನನ್ನ ಅಂಕಣದಲ್ಲಿ ಬರೆದಿದ್ದಾಗ ನಮ್ಮ ಬುದ್ಧಿ(?)ಜೀವಿಗಳೆನಿಸಿದ ಕೆಲವರು ಚೇಳು ಕಡಿಸಿಕೊಂಡಂತೆ ಎಗರಿ ಬಿದ್ದಿದ್ದರು. ಅದೇನೋ ಕೆಲವರಿಗೆ ಗುಜರಾತ್ ಅಂದರೆ ಅದು ಗೋಧ್ರಾ ಸುತ್ತಮುತ್ತಲಿನ ಘಟನೆಗಳು, ಮೋದಿ ಎಂದರೆ ಹಿಂದುತ್ವ ಎಂದಷ್ಟೇ ಆಗಿಬಿಟ್ಟಿದೆ. ಅದರ ಹೊರತಾಗಿ ಗುಜರಾತ್ ಅನ್ನು ಒಂದು ರಾಜ್ಯವಾಗಿ, ಮೋದಿಯನ್ನು ಒಬ್ಬ ಆಡಳಿತಗಾರ, ಮುಖ್ಯಮಂತ್ರಿಯಾಗಿ ನೋಡಿಯೇ ಇಲ್ಲ. ಹೀಗಾಗಿ ಅಲ್ಲಿನ ಅಭಿವೃದ್ಧಿ ಯಾವಾಗಲೂ ಕೆಲವರಿಗೆ ಮಾನದಂಡವಾಗುವುದೇ ಇಲ್ಲ. ಹೋಗಲಿ ಬಿಡಿ, ರಾಜಕೀಯದ ಮಾತುಗಳು. ಆದರೆ ಅದರ ಹೊರತಾಗಿ ನಿಜಕ್ಕೂ ಗುಜರಾತ್ ಏಕೆ ಮಾದರಿಯಾಗಿ ನಿಲ್ಲುತ್ತದೆ ಎಂಬುದಕ್ಕೆ ಕಾರಣಗಳನ್ನು ನಿರಾಕರಿಸುವಂತೆಯೇ ಇಲ್ಲ.

ಗುಜರಾತ್ ಅತ್ಯಂತ ಕಡಿಮೆ ಮಳೆ ಬೀಳುವ ರಾಜ್ಯ. ಅಲ್ಲಿ ಅಭಿವೃದ್ಧಿ ಎಂದರೆ ಅದೊಂದು ಸಾಹಸ. ಅದರಲ್ಲೂ ಕೃಷಿ ಮತ್ತು ನೀರಾವರಿಯಲ್ಲಿನ ಒಂದೊಂದು ಹೆಜ್ಜೆಯೂ ಒಂದೊಂದು ಮೈಲುಗಲ್ಲೆನಿಸುತ್ತದೆ. ಅಭಿವೃದ್ಧಿ ಕಾರ್ಯಕ್ರಮ, ಅದರಲ್ಲೂ ನೀರಾವರಿಯ ನಿಟ್ಟಿನಲ್ಲಿ ಆ ರಾಜ್ಯ ಸಾಧಿಸಿದ ಪ್ರಗತಿ ನಿಜಕ್ಕೂ ಗಮನಾರ್ಹ. ಗುಜರಾತ್ ಮೂಲದ ಯಾವುದೇ ನಾಯಕರಿರಬಹುದು. ನೀರಿನ ವಿಷಯದಲ್ಲಿ ಅವರ ಕಳಕಳಿ ಉಳಿದೆಲ್ಲ ರಾಜ್ಯದವರಿಗಿಂತ ಯಾವತ್ತೂ ಒಂದು ಹಿಡಿ ಹೆಚ್ಚೇ ಇರುತ್ತದೆ. ಸ್ಥಳೀಯ ಭೌಗೋಳಿಕ ಸನ್ನಿವೇಶ, ತಲೆತಲಾಂತರದಿಂದ ಗುಜ್ಜುಗಳನ್ನು ಬಿಡದೇ ಕಾಡುತ್ತಿರುವ ಬರಗಾಲ, ನರ್ಮದೆಯಂಥ ನದಿಯನ್ನು ಸಂರಕ್ಷಿಸಿಕೊಳ್ಳುವ ಸವಾಲು ಇವೆಲ್ಲವೂ ಇದಕ್ಕೆ ಕಾರಣವಿರಬಹುದು.

ಕಂಕಾರಿಯಾ ಜಲಾಶಯದ ಪುನರುಜ್ಜೀವನವೊಂದೇ ಸಾಕು ಗುಜರಾತ್‌ನ ಅಭಿವೃದ್ಧಿಯನ್ನು ಸಾರಲು. ಅಹಮದಾಬಾದ್‌ನ ಹೃದಯ ಭಾಗದಲ್ಲಿದೆ ಈ ಐತಿಹಾಸಿಕ ಜಲಾಶಯ. ಆಧುನಿಕ ಭಾರತದ ಎಲ್ಲ ಜಲ ಮೂಲಗಳಂತೆಯೇ ಇದು ಇನ್ನಿಲ್ಲದ ಜೀರ್ಣಾವಸ್ಥೆಯನ್ನು ತಲುಪಿ, ಕಸದ ತೊಟ್ಟಿಯಾಗುತ್ತಾ ಸಾಗಿತ್ತು. ಅದರಲ್ಲೂ ರಾಜಧಾನಿ ಎನಿಸಿಕೊಂಡ ನಗರಗಳಲ್ಲಿರುವ ಎಲ್ಲ ಕೆರೆಕಟ್ಟೆಗಳೂ ಒತ್ತುವರಿಯಂಥ ಸಮಸ್ಯೆಗಳಿಂದ ಎಂದಿಗೂ ಮುಕ್ತವಲ್ಲ. ಕಂಕಾರಿಯಾದ ಸ್ಥಿತಿಯೂ ಇದೇ ಆಗಿತ್ತು. ಇವತ್ತು ಅದೇ ಪೂರ್ವಗ್ರಹದೊಂದಿಗೆ ನೀವು ಆ ಬೃಹತ್ ಸರೋವರದ ಎದುರು ಹೋಗಿ ನಿಂತರೆ ನಿಬ್ಬೆರಗಾಗುತ್ತೀರಿ.

ಈ ಜಲಾಶಯ ಹದಿನೈದನೇ ಶತಮಾನದ್ದೆಂದು ಹೇಳಲಾಗಿದೆ. ಏನಿಲ್ಲವೆಂದರೂ ಸದ್ಯಕ್ಕೆ ಎರಡೂವರೆ ಕಿ.ಮೀಟರ್‌ಗಳಷ್ಟು ಸುತ್ತಳತೆಯನ್ನು ಹೊಂದಿರುವ ಜಲಾಶಯದ ಸುತ್ತಲೂ ಗಿಡಗಂಟಿಗಳು ಬೆಳೆದು ಹೋಗಿದ್ದವು. ಇಡೀ ನಗರದ ತ್ಯಾಜ್ಯ ಇಲ್ಲೇ ಬಂದು ಸೇರಿ ಪಾಚಿಗಟ್ಟಿ, ಕೊಳೆತು ನಾರುತ್ತಿತ್ತು. ನಗರ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಸಾಗುತ್ತಿದ್ದರೆ ಈ ಜಲಾಶಯ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ವಿನಾಶದತ್ತ ಸಾಗಿತ್ತು. ಸುತ್ತಲೂ ಕೊಳೆಗೇರಿಗಳು ಪ್ರತಿದಿನವೂ ಕೆರೆಯಂಗಳವನ್ನು ಆಕ್ರಮಿಸಿಕೊಳ್ಳುತ್ತಾ ಬೆಳೆಯುತ್ತಿದ್ದವು. ಇವಿಷ್ಟೂ ಏಳೆಂಟು ವರ್ಷಗಳ ಹಿಂದಿನ ಮಾತು. ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಈ ಜಲಾಶಯ ಅಹಮದಾಬಾದ್‌ನ ಅಭಿವೃದ್ಧಿ ಮತ್ತು ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿ ಕಂಡಿದ್ದಿರಬೇಕು. ಸರೋವರದ ಪುನರುಜ್ಜೀವನಕ್ಕೆ ಸಮಗ್ರ ಯೋಜನೆಯೊಂದನ್ನು ರೂಪಿಸಲು ಆದೇಶಿಸಿದರು. ಕೇವಲ ಎರಡು ವರ್ಷಗಳಲ್ಲಿ ಆ ಪ್ರದೇಶದ ಚಿತ್ರಣವೇ ಬದಲಾಗಿತ್ತು. 2008ರಲ್ಲಿ ಕಂಕಾರಿಯಾ ಜಲಾಶಯ ಸಮೃದ್ಧತೆ ಮತ್ತು ಸೌಂದರ್ಯದೊಂದಿಗೆ ನಳನಳಿಸುತ್ತಿತ್ತು. ಬರೀ ಜಲಾಶಯ ಅಭಿವೃದ್ಧಿಯಾಗಿರಲಿಲ್ಲ, ಜೊತೆಗೆ ಸುತ್ತಲಿನ ಒಟ್ಟು 34 ಹೆಕ್ಟೇರ್ ಪ್ರದೇಶವೂ ಅಭಿವೃದ್ಧಿ ಕಂಡಿತ್ತು. ಇವತ್ತಿಗೆ ಅದು ಕೇವಲ ಜಲಮೂಲವಷ್ಟೇ ಅಲ್ಲ, ಸುಂದರ ಪ್ರವಾಸಿ ತಾಣವೂ ಹೌದು. ಬೆಂಗಳೂರಿನ ಕೆರೆಗಳ ವಿಚಾರದಲ್ಲಿ ನಮ್ಮ ಸರಕಾರಕ್ಕೆ ಕಂಕಾರಿಯಾ ಜಲಾಶಯ ಮಾದರಿಯಾಗುವುದಿಲ್ಲವೇ?

ಇವೆಲ್ಲಕ್ಕಿಂತ ಹೆಚ್ಚಾಗಿ ಪಾಕ್‌ನ ಗಡಿಯ ನಮ್ಮ ಸೈನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ನಿಜಕ್ಕೂ ಶ್ಲಾಘನೀಯ. ಸ್ವಾತಂತ್ರೋತ್ತರ 70 ವರ್ಷಗಳಾದರೂ ಕಛ್ ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರವಿತ್ತು. ಬರೀ ತತ್ವಾರವಲ್ಲ, ಅಲ್ಲಿ ಹಗಲಿರುಳೆನ್ನದೇ ದೇಶದ ಗಡಿಯನ್ನು ಕಾಯುತ್ತಿದ್ದ ಸೈನಿಕರಿಗೆ ಹನಿ ನೀರೂ ಇರಲಿಲ್ಲ. ಅಲ್ಲಿ ಧರ್ಮಶಾಲಾ ಕ್ಯಾಂಪ್‌ನ ಸೈನಿಕರಿಗೆ ಒಂಟೆಗಳ ಮೇಲೆ ಕುಡಿಯುವ ನೀರನ್ನು ಹೊತ್ತೊಯ್ಯಲಾಗುತ್ತಿತ್ತು. ಬ್ರಿಟಿಷರ ಕಾಲದಿಂದಲೂ ಇದು ಪರಂಪರೆಯಾಗಿ ಮುಂದುವರಿದುಕೊಂಡು ಬಂದಿತ್ತು. ಇದಕ್ಕಾಗಿ ಬಳಸುತ್ತಿದ್ದ ಒಂಟೆಗಳ ಸಂಖ್ಯೆ 800. ಇದಕ್ಕೆ ವರ್ಷಕ್ಕೆ ಆಗುತ್ತಿದ್ದ ವೆಚ್ಚ ತಲಾ 25 ಸಾವಿರ ರು.ಗಳಂತೆ 2 ಕೋಟಿ. ಮೋದಿ ಸರಕಾರ ಇದಕ್ಕಾಗಿ 9 ಕೋಟಿ ರು.ಗಳ ಯೋಜನೆ ರೂಪಿಸಿ ಒಂದೇ ವರ್ಷದಲ್ಲಿ 27 ಕಿ.ಮೀ. ಪೈಪ್‌ಲೈನ್ ನಿರ್ಮಿಸಿ ಕಳೆದ ಸ್ವಾತಂತ್ರ್ಯೋತ್ಸವದಂದು ಸೈನಿಕರಿಗೆ ಸಮರ್ಪಿಸಿತು. ರಾಜಕೀಯ ಇಚ್ಛಾಶಕ್ತಿಗೆ ಒಂದು ಉದಾಹರಣೆಯಿದು.

ನರ್ಮದಾ  ಕಾಲುವೆಯದ್ದು ಇನ್ನೊಂದು ಸಾಧನೆ. 1964ರಲ್ಲಿ ಆರಂಭಿಸಲಾಗಿದ್ದ ಸರಿ ಸುಮಾರು 530 ಕಿ.ಮೀ. ಉದ್ದದ ದಾಖಲೆಯ ಅವಧಿಯಲ್ಲಿ ಪೂರ್ಣಗೊಳಿಸಿ ನಾಡಿಗರ್ಪಿಸಿದರು ಮೋದಿ. ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ರಾಜಸ್ಥಾನದೊಂದಿಗೆ ಈ ಕಾಲುವೆ ವಿವಾದಕ್ಕೆ ತಳಕು ಹಾಕಿಕೊಂಡಿತ್ತು.1300 ಕಿ.ಮೀ. ಉದ್ದದ ಕಾಲುವೆಯ ವಿವಾದ 50 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿತ್ತು. ಪರಿಣಾಮ ದಿನದಿಂದ ದಿನಕ್ಕೆಅಕ್ಕಪಕ್ಕದ ಸಾವಿರಾರು ಹೆಕ್ಟೇರ್ ನೆಲ ಬಿರುಕುಬಿಡುತ್ತಲೇ ಸಾಗಿತ್ತು. ಇವತ್ತು ಗುಜರಾತ್‌ನ ಮಧ್ಯಭಾಗದಲ್ಲಿ ಪುಟ್ಟ ನದಿಯ ಸ್ವರೂಪದಲ್ಲಿ ಕಾಲುವೆ ತುಂಬಿ ಹರಿಯುತ್ತಿದೆ.

ಹಲವಾರು ವಿವಾದಗಳಿಂದ ಭಾರೀ ಸುದ್ದಿಮಾಡಿದ ಸರ್ದಾರ್ ಸರೋವರ ಯೋಜನೆ ಗೊತ್ತೇ ಇದೆ. ಇದೂ ಅದೇ ಅಣೆಕಟ್ಟೆಯಿಂದ ನೀರು ಪೂರೈಸುವ ಯೋಜನೆಯೇ. ಆದರೆ ಇಲ್ಲಿ ಯಾವುದೇ ವಿವಾದ ಇಲ್ಲ. ನರ್ಮದಾ- ಮಾಹಿ ನದಿಗಳಿಂದ ಕುಡಿಯುವ ನೀರು ತೆಗೆದುಕೊಂಡು ಹೋಗಲಾಗಿದೆ. ಇದರಲ್ಲೇನು ವಿಶೇಷ? ಖಂಡಿತಾ ವಿಶೇಷವಿದೆ. ಅಸ್ತಿತ್ವದಲ್ಲಿರುವ ಯೋಜನೆಯಿಂದಲೇ ಹೆಚ್ಚುವರಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಇದರ ಹೆಗ್ಗಳಿಕೆ. ಮೂಲ ಸರ್ದಾರ ಸರೋವರ ಯೋಜನೆ ಇರುವುದು ಭರೂಚ್ ಜಿಲ್ಲೆಯ ನವಗಾಂವ್ ಎಂಬಲ್ಲಿ. ಈ ಅಣೆಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಸುಮಾರು 3571 ಎಂಎಲ್‌ಡಿಯಷ್ಟು ನೀರು ನಿಗದಿಯಾಗಿದೆ. ಇಲ್ಲಿಂದ ಸುಮಾರು 35 ಕಿ. ಮೀ. ದೂರದ ನರ್ಮದಾ ಮುಖ್ಯ ಕಾಲುವೆಗೆ ನೀರನ್ನು ಪಂಪ್ ಮಾಡಲಾಗುತ್ತದೆ. ಆ ಕಾಲುವೆ ತಿಂಬ ಹಳ್ಳಿಯ ಬಳಿ ಮಾಹಿಯ ಕಾಲುವೆಗೆ ಸಂಪರ್ಕಿಸುತ್ತದೆ. ಅಲ್ಲಿಂದ ಮತ್ತೆ ಪ್ರಯಾಣ ಮುಂದುವರಿಸುವ ನೀರು ಕನೇವಲ್ ಹಾಗೂ ಪರೇಜ್ ಎಂಬ ಎರಡು ಬೃಹತ್ ಕೆರೆ ಒಡಲು ಸೇರುತ್ತದೆ. ಅಲ್ಲಿಗೇ ನೀರಿನ ಯಾನ ನಿಲ್ಲುವುದಿಲ್ಲ. ಮತ್ತೆ ಅಲ್ಲಿಂದ ನೀರನ್ನು ಭಾವನಗರ, ಅಮ್ರೇಲಿ ಹಾಗೂ ರಾಜಕೋಟ್ ಜಿಲ್ಲೆಗಳಿಗೆ, 450 ಕಿ.ಮೀ ಉದ್ದದ ಸೌರಾಷ್ಟ್ರ ಪೈಪ್‌ಲೈನ್ ಯೋಜನೆಯ ಮೂಲಕ ಏತದಿಂದ ಕೊಂಡೊಯ್ಯಲಾಗುತ್ತದೆ. ಅಹಮದಾಬಾದ್‌ಗೂ ಇದೇ ನೀರನ್ನು ಕುಡಿಯಲು ಒದಗಿಸಲಾಗುತ್ತಿದೆ.

ಇವಿಷ್ಟು ಯೋಜನೆ. ನಿಜವಾಗಿ ಇಲ್ಲಿ ಸರ್ದಾರ್ ಸರೋವರದಿಂದ ನೀರು ಸರಿಸುಮಾರು 280 ಕಿ. ಮೀ. ನಷ್ಟು ದೂರದ ಪ್ರಯಾಣ ಬೆಳೆಸುತ್ತದೆ. ಉದ್ದಕ್ಕೂ ಇರುವ ಸಣ್ಣಪುಟ್ಟ ಕೆರೆಗಳನ್ನು ತುಂಬಿಯೇ ನೀರು ಮುಂದಕ್ಕೆ ಹೋಗುವಂತೆ ಯೋಜಿಸಲಾಗಿದೆ. ಜತೆಗೆ ಕನೇವಲ್ ಹಾಗೂ ಪರೇಜ್ ಕೆರೆಗಳೂ ತುಂಬುವುದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಅನಾಯಾಸವಾಗಿ ಏರಿಕೆ ಕಂಡುಬಂದಿದೆ. ವೈಜ್ಞಾನಿಕ, ದೂರದೃಷ್ಟಿಯಿಂದ ರೂಪಿಸಲಾಗಿರುವ ಯೋಜನೆಗಳು ಹೇಗೆ ಉಪಯುಕ್ತವಾಗುತ್ತವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಅಂದಾಜು 1200 ಕ್ಯೂಸೆಕ್ಸ್ ನೀರಿನ ಪಂಪಿಂಗ್ ಸಂದರ್ಭದಲ್ಲೇ ಮಧ್ಯದಲ್ಲಿ ತುಸು ತಿರುವು ತೆಗೆದುಕೊಂಡು ಮೂರು ಪುಟ್ಟ ಪುಟ್ಟ ಒಡ್ಡುಗಳನ್ನು ನಿರ್ಮಿಸಲಾಗಿದೆ. ಇಂಥ ಇನ್ನೂ ಕೆಲವು ಪುಟ್ಟ ಪುಟ್ಟ ನಿರ್ಮಾಣ, ಪ್ರಯತ್ನಗಳಿಂದ ನದಿಯಲ್ಲಿನ ಪ್ರವಾಹದ ನೀರನ್ನೇ ಯಶಸ್ವಿಯಾಗಿ ಬಳಸಿಕೊಳ್ಳಲಾಗಿದೆ. ಸಾಕಷ್ಟು ವಿವಾದ, ಅಡ್ಡಿ ಆತಂಕಗಳ ನಡುವೆಯೂ ನೀರಾವರಿಯ ವಿಚಾರದಲ್ಲಿ ನಮಗಿಂತ ಹತ್ತಾರು ಹೆಜ್ಜೆ ಮುಂದೆ ಹೋಗಿರುವ ಗುಜರಾತ್, ಇಂಥ ಇಚ್ಛಾಶಕ್ತಿಯಿಂದ ಮಾತ್ರ ಭೀಕರ ಬರಕ್ಕೂ ಎದೆಯೊಡ್ಡಿ ನಿಂತಿದೆ. ಬಂಡವಾಳ ಕ್ರಾಂತಿಯನ್ನೂ  ಸಾಧಿಸಿದೆ.

ದೇಶದಲ್ಲಿ ಇಂದಿಗೂ ಶೇ. 50ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ 'ನೀರು ಸರಬರಾಜು ಯೋಜನೆ' ಎಂಬ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ. ಗಮನಾರ್ಹ ಸಂಗತಿಯೆಂದರೆ, ಹೀಗೆ 'ನೀರು ಸರಬರಾಜು' ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್ಯಕ್ರಮವಾಗಿಯಾಗಲೀ ಹೇರಿಕೆಯಾಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ. ಅದನ್ನೇ ಮೋದಿಯವರು ಗುಜರಾತ್‌ನ ಎಲ್ಲ ಹಳ್ಳಿಗಳಿಗೆ ದಕ್ಕಿಸಿಕೊಟ್ಟಿದ್ದಾರೆ.

ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ. ಮೋದಿ ಅದನ್ನೇ ಗುಜರಾತ್‌ನಲ್ಲೂ ಮಾಡಿರುವುದು.


-ರಾಧಾಕೃಷ್ಣ ಎಸ್. ಭಡ್ತಿ
  ಕೃಪೆ:ಕನ್ನಡಪ್ರಭ 

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

Contribution of Shahu Chhatrapati Maharaj