ಹೆಂಗಸರೇಕೆ ಗಂಡನಿಗೆ ಮೋಸ ಮಾಡ್ತಾರೆ?


ಹೆಂಡತಿಯರು ಮೋಸ ಮಾಡಲು 5 ಕಾರಣಗಳು, ಟಾಪ್ 10 ಸೀಕ್ರೆಟ್

ಅದು ಕೋರ್ಟ್ ರೂಂ. ಕಟಕಟೆಯಲ್ಲಿ ನಿಂತವಳು 32 ವರ್ಷದ ಮಹಿಳೆ. ಬೆಂಗಳೂರಿನಲ್ಲಿ ನಾಲ್ಕೈದು ವರ್ಷದ ಹಿಂದೆ ನಡೆದ ಡೈವೊರ್ಸ್ ಕೇಸಿನ ವಿಚಾರಣೆಯಿದು.

ಗಂಡನ ಪರ ವಕೀಲರು ಆಕೆಗೆ ಕೇಳುತ್ತಾರೆ.

'ನೀವು ಬೇರೆ ಗಂಡಸಿನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಹೌದಾ?'
'ಹೌದು' ಆಕೆ ಧೈರ್ಯವಾಗಿ ಒಪ್ಪಿಕೊಳ್ಳುತ್ತಾಳೆ.
'ಯಾಕೆ ಗಂಡನಿಗೆ ಮೋಸ ಮಾಡಿದಿರಿ?'
'ಯಾಕಂದ್ರೆ ಅವರು ಯಾವಾಗ್ಲೂ ಆಫೀಸ್ ಕೆಲಸದಲ್ಲಿ ಬ್ಯುಸಿಯಾಗಿರ್ತಿದ್ರು. ಮನೆಯಲ್ಲಿ ನನಗೆ ಒಬ್ಬಳಿಗೇ ಬೋರ್ ಆಗ್ತಿತ್ತು!'
ನ್ಯಾಯಾಧೀಶರೂ ಸೇರಿದಂತೆ ಇಡೀ ಕೋರ್ಟ್ ಹಾಲ್ ದಂಗಾಗಿತ್ತು. ಗಂಡನಿಗೆ ಮೋಸ ಮಾಡಲು ಇದೂ ಒಂದು ಕಾರಣವಾ?
ಆಗಿರಬಹುದು. ಏಕೆಂದರೆ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಅವಳನ್ನು ಸೃಷ್ಟಿಸಿದ ಬ್ರಹ್ಮನಿಗೂ ಸಾಧ್ಯವಾಗಿಲ್ಲವಂತೆ. ಇನ್ನು ನರಮನುಷ್ಯನಿಗೆ ಸಾಧ್ಯವೇ? ಆ ಕೇಸನ್ನು ಸಾಮಾನ್ಯವಾಗಿ ಎಲ್ಲಾ ಡೈವೊರ್ಸ್ ಪ್ರಕರಣಗಳಲ್ಲೂ ಮಾಡುವಂತೆ ಫ್ಯಾಮಿಲಿ ಕೋರ್ಟ್‌ಗೆ ವರ್ಗಾಯಿಸಲಾಯಿತು. ಅಲ್ಲಿ ಗಂಡ-ಹೆಂಡತಿ ಒಂದಾಗಿ ಬಾಳಲು ಆರು ತಿಂಗಳು ಟೈಮ್ ಕೊಟ್ಟು ನೋಡಲಾಯಿತು. ಅವರಿಬ್ಬರೂ ಒಂದಾಗಲಿಲ್ಲ. ನಂತರ ಡೈವೊರ್ಸ್ ಮಂಜೂರಾಯಿತು. ಯಾವಾಗಲೂ ಆಫೀಸ್ ಕೆಲಸದಲ್ಲಿ ಬ್ಯುಸಿಯಾಗಿ ಹೆಂಡತಿಯನ್ನು 'ಚೆನ್ನಾಗಿ ನೋಡಿಕೊಳ್ಳದ ತಪ್ಪಿಗೆ' ಗಂಡ ಆಕೆಗೆತಿಂಗಳಿಗೆ ಮೂವತ್ತೈದು ಸಾವಿರ ರೂ. ವಿಚ್ಛೇದನ ಹಣ ನೀಡಬೇಕೆಂದು ಕೋರ್ಟ್ ತೀರ್ಪು ನೀಡಿತು.

ಇದು ಒಂದು ರೀತಿಯಲ್ಲಿ ನಮ್ಮ ನ್ಯಾಯವ್ಯವಸ್ಥೆಯ ಅಣಕವೂ ಹೌದು. ಹೆಂಡತಿ ಗಂಡನಿಗೆ ಮೋಸ ಮಾಡಿದರೂ, ಗಂಡ ಹೆಂಡತಿಗೆ ಮೋಸ ಮಾಡಿದರೂ ಅಥವಾ ಇನ್ನಾವುದೇ ಕಾರಣಕ್ಕೆ ವಿಚ್ಛೇದನ ನೀಡಿದರೂ ನಮ್ಮ ಕಾನೂನಿನ ಪ್ರಕಾರ ಗಂಡನೇ ಹೆಂಡತಿಗೆ ಮಾಸಾಶನ ಕೊಡಬೇಕು.
ವಿಷಯ ಅದಲ್ಲ. ಏಕೆ ಹೆಂಡತಿಯರು ಗಂಡನಿಗೆ ಮೋಸ ಮಾಡುತ್ತಾರೆ? ಇದು ಶತಮಾನಗಳಿಂದ ಸಮಾಜವನ್ನು ಕಾಡುತ್ತಾ ಬಂದಿರುವ ಪ್ರಶ್ನೆ. ಗಂಡಸರು ಹೆಂಡತಿಗೆ ಮೋಸ ಮಾಡುವುದೇ ಇಲ್ಲ ಎಂದಲ್ಲ. ಮಾಡುತ್ತಾರೆ. ನಿಜವಾಗಿ ನೋಡಿದರೆಹೆಂಡತಿಯರು ಗಂಡನಿಗೆ ಮೋಸ ಮಾಡುವುದಕ್ಕಿಂತ ಹೆಚ್ಚು ಗಂಡಂದಿರೇ ಹೆಂಡತಿಗೆ ಮೋಸ ಮಾಡುತ್ತಾರೆ ಅಥವಾ ಹಾಗೊಂದು ನಂಬಿಕೆಯಂತೂ ನಮ್ಮಲ್ಲಿದೆ. ಆದರೆ ಅದಕ್ಕೆ ಕಾರಣಗಳು ಬಹಳ ಸಾಮಾನ್ಯವಾಗಿರುತ್ತವೆ ಮತ್ತು ಮೂರ್ನಾಲ್ಕು ಕಾರಣಗಳು ಮಾತ್ರ ಇರಬಹುದು. ಬೇರೆ ಮಹಿಳೆಯ ಬಲೆಗೆ ಬೀಳುವುದು, ಮನೆಯಲ್ಲಿ ಹೆಂಡತಿಯಿಂದ ಸುಖ ಸಿಗದೆ ಇರುವುದು, ದುಡ್ಡಿದೆ ಎಂದು ಮೋಜು ಮಾಡಲು ಅಥವಾವರದಕ್ಷಿಣೆ ಹಣಕ್ಕಾಗಿ- ಇವಿಷ್ಟೇ ಕಾರಣಗಳಿಗೆ ಹೆಚ್ಚಾಗಿ ಗಂಡಂದಿರು ಹೆಂಡತಿಗೆ ಮೋಸ ಗೀಸ ಮಾಡುತ್ತಾರೆ. ಆದರೆ ಹೆಂಗಸರು ಗಂಡನಿಗೆ ಮೋಸ ಮಾಡುವುದಕ್ಕೆ ಇರುವ ಕಾರಣಗಳು ಮಾತ್ರ ಬಹಳ ವಿಚಿತ್ರವೂ, ವಿಶಿಷ್ಟವೂ, ಕುತೂಹಲಕಾರಿಯೂ, ವೆರೈಟಿಯೂ ಆಗಿರುತ್ತವೆ.
ರಷ್ಯಾದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ, ಮೋಸ ಮಾಡುವ ಗಂಡಸರು ಹೆಂಡತಿಯ ಕೈಗೆ ಸಿಕ್ಕಿಬೀಳುವುದು ಬಹಳ ಹೆಚ್ಚು. ಆದರೆ, ಹೆಂಗಸರು ಗಂಡನಿಗೆ ಮೋಸ ಮಾಡುವಾಗ ಬಹಳ ನಾಜೂಕಾಗಿ ವ್ಯವಹರಿಸುತ್ತಾರೆ. ಅದು ಗಂಡನಿಗೆ ಗೊತ್ತಾಗುವುದು ಕಡಿಮೆ ಅಥವಾ ಗೊತ್ತಾಗುವಾಗ ಬಹಳ ಸಮಯ ಹಿಡಿದಿರುತ್ತದೆ. ರಷ್ಯಾದ ವಿಷಯದಲ್ಲಿ ಹೀಗಾಯಿತು, ಭಾರತಕ್ಕೂ ಇದು ಅನ್ವಯಿಸಬೇಕೆಂದಿಲ್ಲ ಎಂದು ನೀವು ಹೇಳಬಹುದು. ಆದರೆ, ಕೌಟುಂಬಿಕ ವ್ಯವಸ್ಥೆಯಲ್ಲಿ ರಷ್ಯಾ ಹಾಗೂ ಭಾರತಕ್ಕೆ ಬಹಳ ಸಾಮ್ಯತೆಗಳಿವೆ. ರಷ್ಯಾದವರೂ ಭಾರತೀಯರಂತೆ ಸಂಪ್ರದಾಯಸ್ಥರು ಮತ್ತು ಕೌಟುಂಬಿಕ ವ್ಯವಸ್ಥೆಯನ್ನು ತುಂಬಾ ಗೌರವಿಸುತ್ತಾರೆ. ಇತರ ಪಾಶ್ಚಾತ್ಯ ರಾಷ್ಟ್ರಗಳಲ್ಲಿರುವಂತೆ ರಷ್ಯಾದಲ್ಲಿ ಮುಕ್ತ ಸಂಬಂಧಗಳಾಗಲೀ, ಮದುವೆಯ ವಿಷಯದಲ್ಲಿ ತುಂಬಾ ಸ್ವಾತಂತ್ರ್ಯವಾಗಲೀ ಇಲ್ಲ. ಅಮೆರಿಕ, ಬ್ರಿಟನ್ ಮುಂತಾದ ದೇಶಗಳಲ್ಲಿ ಮೂರು ಮೂರು ವರ್ಷಕ್ಕೆ ಡೈವೊರ್ಸ್ ನೀಡಿ ಹೊಸತೊಂದು ಮದುವೆಯಾಗುವಂತೆ ರಷ್ಯಾದಲ್ಲಿ ಮಾಡುವುದಿಲ್ಲ. ಒಮ್ಮೆ ಮದುವೆಯಾದರೆ ಅದು ಜೀವನದ ಕೊನೆಯವರೆಗೂ ಉಳಿಯಬೇಕಾದ ಸಂಬಂಧ ಎಂಬ ಪರಂಪರಾಗತ ನಂಬಿಕೆಯೇ ರಷ್ಯಾದಲ್ಲೂ ಇದೆ. ಹಾಗಾಗಿ ಅಲ್ಲಿ ನಡೆದ ಅಧ್ಯಯನದ ಫಲಿತಾಂಶ ಭಾರತಕ್ಕೂ ಹೆಚ್ಚುಕಮ್ಮಿ ಯಥಾವತ್ತಾಗಿ ಅನ್ವಯಿಸುತ್ತದೆ ಎಂದು ನಂಬುವುದಕ್ಕೆ ಸಾಕಷ್ಟುಕಾರಣಗಳಿವೆ. ಹಾಗಾಗಿ ನಮ್ಮಲ್ಲೂ ಸಡಿಲ ಕಚ್ಚೆಯ ಗಂಡಸರು ಬೇಗ ಸಿಕ್ಕಿಬೀಳುತ್ತಾರೆ. ಗಂಡನಿಂದಾಚೆ ಸುಖ ಹುಡುಕುವ ಹೆಂಗಸರು ಸ್ವಲ್ಪ ತಡೆದು ಸಿಕ್ಕಿಬೀಳುತ್ತಾರೆ.
ನಂಬಿಕೆಯಿಲ್ಲದಿದ್ದರೆ ಮದುವೆಯಿಲ್ಲ
ಮದುವೆಯೆಂಬುದು ನಂಬಿಕೆಯ ಮೇಲೆ ನಡೆದುಕೊಂಡು ಬರುತ್ತಿರುವ ವ್ಯವಸ್ಥೆ. ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಎಷ್ಟೇ ಅನುಕರಿಸುತ್ತಿದ್ದರೂ ಭಾರತದ ಮಧ್ಯಮ ವರ್ಗದಲ್ಲಿ ಮದುವೆಯ ವ್ಯವಸ್ಥೆ ಇನ್ನೂ ಸಾಂಪ್ರದಾಯಿಕವಾಗಿಯೇ ಉಳಿದಿದೆ. ಇವತ್ತಿಗೂ ಇಲ್ಲಿ ವಿವಾಹ ಬಂಧನ ಒಂದು ಪವಿತ್ರ ಸಂಬಂಧ. ಇದು ದೇವರು ಹಾಕಿದ ಗಂಟು, ಮದುವೆಗಳು ಸ್ವರ್ಗದಲ್ಲಿನಡೆಯುತ್ತವೆ, ಒಂದು ಹೆಣ್ಣಿಗೆ ಒಂದು ಗಂಡನ್ನು ಬ್ರಹ್ಮನೇ ಜೋಡಿಸಿರುತ್ತಾನೆ, ಯಾರ ಹಣೆಯಲ್ಲಿ ಯಾರ ಹೆಸರು ಬರೆದಿದೆಯೋಅವರ ಜೊತೆಗೇ ಮದುವೆಯಾಗುತ್ತದೆ... ಹೀಗೆ ಹಲವಾರು ನಂಬಿಕೆಗಳನ್ನು ನಮ್ಮ ದೇಶದ ಜನಸಾಮಾನ್ಯರು ಇವತ್ತಿಗೂ ಗೌರವಿಸುತ್ತಾರೆ, ಅದನ್ನೇ ಪಾಲಿಸುತ್ತಾರೆ.
ಇದು ಕುರುಡು ನಂಬಿಕೆಯೇ? ಇರಬಹುದು. ಆದರೆ, ನಮ್ಮಸಂಸ್ಕೃತಿಯ ಮೌಲ್ಯಗಳನ್ನು ಉಳಿಸಲು ಇದೊಂದು ಒಳ್ಳೆಯ ನಂಬಿಕೆಯಾಗಿ ಇಂದಿಗೂ ನಮ್ಮವರನ್ನು ಕೈಹಿಡಿದು ನಡೆಸುತ್ತಿದೆ. ಪ್ರಸಿದ್ಧ ಹಾಲಿವುಡ್ ನಟ ವಿಲ್‌ಸ್ಮಿತ್ ಹಾಗೂ ಅವನ ಹೆಂಡತಿ ಜೇಡಾ  ನಡುವಿನ ಸಂಬಂಧದಂತೆ 'ನಿನಗೆ ಇಷ್ಟ ಬಂದವರ ಜೊತೆ ನೀನು ಮಲಗು, ನನಗೆ ಇಷ್ಟ ಬಂದವರ ಜೊತೆ ನಾನು ಮಲಗುತ್ತೇನೆ. ಯಾರೂ ಒಬ್ಬರನ್ನೊಬ್ಬರು ಪ್ರಶ್ನಿಸಬಾರದು' ಎಂಬ ಉಪದ್ವ್ಯಾಪದ ಒಪ್ಪಂದಗಳು ನಮ್ಮಲ್ಲಿ ನಡೆಯುವುದಿಲ್ಲ. ಅಕ್ರಮ ಸಂಬಂಧಗಳು ಅನೈತಿಕ ಹಾಗೂ ಅವುಗಳನ್ನು ಗಂಡ-ಹೆಂಡತಿ ಇವರಿಬ್ಬರಲ್ಲಿ ಯಾರೊಬ್ಬರೂ ಸಹಿಸಿಕೊಳ್ಳಬೇಕಿಲ್ಲ ಎಂದು ನಮ್ಮ ಕಾನೂನು ಕೂಡ ಹೇಳುತ್ತದೆ. ಅಕ್ರಮ ಸಂಬಂಧ ಇರುವುದು ಸಾಬೀತಾದರೆ ಹಿಂದು ವಿವಾಹ ಕಾಯ್ದೆ ಅಥವಾ ಮುಸ್ಲಿಂ ವಿವಾಹ ಕಾಯ್ದೆಯಡಿ ಬಹಳ ಸುಲಭವಾಗಿ ಕೋರ್ಟ್‌ಗಳು ವಿಚ್ಛೇದನ ಮಂಜೂರು ಮಾಡುತ್ತವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೀಗಿಲ್ಲ. ಅಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತ್ರ ಇಂತಹ ವಿಷಯಗಳಲ್ಲಿ ನೈತಿಕವಾಗಿ ಸ್ವಚ್ಛವಾಗಿರಬೇಕು ಎಂದು ಜನ ಬಯಸುತ್ತಾರೆ. ಜನಸಾಮಾನ್ಯರು ತಮಗೆ ಹೇಗೆ ಬೇಕೋ ಹಾಗೆ ಸ್ವೇಚ್ಛೆಯಿಂದ ಬದುಕುತ್ತಾರೆ. ಹಿಂದೆ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅಕ್ರಮ ಸಂಬಂಧದಿಂದಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಆದರೆ ಅದು, ಅವರು ಮೋನಿಕಾ ಲೆವನ್‌ಸ್ಕಿ ಜೊತೆ ಹೊಂದಿದ್ದ ಅಕ್ರಮ ಸಂಬಂಧವು ಅಧ್ಯಕ್ಷ ಪದವಿಯಂತಹ ಉನ್ನತ ಪದವಿಯಲ್ಲಿದ್ದುಕೊಂಡು ನೈತಿಕವಾಗಿ ಮಾಡಿದ ತಪ್ಪು ಎಂಬ ಕಾರಣಕ್ಕಾಗಿತ್ತೇ ಹೊರತು ಅದು ಕಾನೂನಾತ್ಮಕವಾಗಿ ತಪ್ಪು ಎಂಬ ಕಾರಣಕ್ಕಾಗಿರಲಿಲ್ಲ.
ನಮ್ಮ ದೇಶದಲ್ಲಿ ಮದುವೆಗೆ ಯಾವತ್ತೂ ನಂಬಿಕೆಯೇ ತಳಹದಿ. ಗಂಡ ಹೆಂಡತಿಯಲ್ಲಿ ಅಥವಾ ಹೆಂಡತಿ ಗಂಡನಲ್ಲಿ ನಂಬಿಕೆ ಕಳೆದುಕೊಂಡರು ಅಂದರೆ ಆ ಮದುವೆ ಮುರಿದುಬಿತ್ತು ಎಂದೇ ಅರ್ಥ. ಕಾನೂನುಬದ್ಧವಾಗಿ ಡೈವೊರ್ಸ್ ನೀಡುವುದು ಔಪಚಾರಿಕತೆಯಷ್ಟೆ.
ಮದುವೆಯಲ್ಲಿ ನಂಬಿಕೆ ಕಳೆದುಕೊಳ್ಳುವುದಕ್ಕೆ ಪ್ರಮುಖ ಕಾರಣ ಸಂಗಾತಿಗಳಲ್ಲಿ ಒಬ್ಬರು ಇನ್ನೊಬ್ಬರಿಗೆ ಮಾಡುವ ಮೋಸ, ವಿಶ್ವಾಸದ್ರೋಹ.

ಈ ಮೋಸವನ್ನು ಸಮಾಜವೂ ಒಪ್ಪುವುದಿಲ್ಲ

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮದುವೆಯೆಂಬುದು ತೀರಾ ಖಾಸಗಿಯಾದ ಒಂದು ಅಫೇರ್. ಅದಕ್ಕೂ ಸಮಾಜಕ್ಕೂ ಸಂಬಂಧವೇ ಇಲ್ಲ. ಅಷ್ಟೇಕೆ, ಒಂದುಮದುವೆಯ ವಿಷಯದಲ್ಲಿ ತೀರಾ ಹತ್ತಿರದ ಸಂಬಂಧಿಕರೂ ಅಲ್ಲಿ ತಲೆ ಹಾಕುವುದಿಲ್ಲ. ಅಪ್ಪ ಅಮ್ಮ ಕೂಡ ತಮ್ಮ ಮಕ್ಕಳ ಮದುವೆಯ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಮದುವೆ ಅಂದರೆ ಅಲ್ಲಿ ಗಂಡ ಹಾಗೂ ಹೆಂಡತಿಗಷ್ಟೇಸಂಬಂಧಿಸಿದ್ದು. ಅದನ್ನು ಪ್ರಶ್ನಿಸುವ ಅಧಿಕಾರ ಅವರ ಮಕ್ಕಳಿಗೂ ಇಲ್ಲ.


ಭಾರತದಲ್ಲಿ ಹೀಗಿಲ್ಲ. ಇಲ್ಲಿ ಮದುವೆಯೆಂಬುದು ಗಂಡ ಹೆಂಡತಿಗಷ್ಟೇ ಸಂಬಂಧಿಸಿದ ವಿಷಯಲ್ಲ. ಮೊದಲನೆಯದಾಗಿ, ಇದು ಎರಡು ಕುಟುಂಬಗಳ ನಡುವೆ ಏರ್ಪಡುವ ಸಂಬಂಧ. ಇಲ್ಲಿ ನಡೆಯುವ ಮದುವೆಗಳಲ್ಲಿ ಹುಡುಗ-ಹುಡುಗಿ ಎಷ್ಟು ಮುಖ್ಯವೋ ಬೀಗಣ್ಣ ಬೀಗಿತ್ತಿಯೂ ಅಷ್ಟೇ ಮುಖ್ಯ! ಭಾರತದಲ್ಲಿ ಬೀಗರೂ ಪರಸ್ಪರ 'ಮದುವೆಯಾಗುತ್ತಾರೆ.' ಹುಡುಗ ಹುಡುಗಿಗೆ ಒಪ್ಪಿಗೆಯಾದ ಮಾತ್ರಕ್ಕೆ ಇಲ್ಲಿ ಮದುವೆ ನಡೆಯುವುದಿಲ್ಲ. ಅವರಿಬ್ಬರ ಕುಟುಂಬಗಳೂ ಪರಸ್ಪರ ಒಪ್ಪಿಕೊಳ್ಳಬೇಕು. ಆಮೇಲಷ್ಟೇ ಮದುವೆ. ಕಾನೂನು ಇದನ್ನು ಪರಿಗಣಿಸುವುದಿಲ್ಲವಾದರೂ, ಶೇ.99ರಷ್ಟು ಮದುವೆಗಳು ಹೀಗೇ ಏರ್ಪಡುತ್ತವೆ.

ಎರಡನೆಯದಾಗಿ, ನಮ್ಮ ದೇಶದಲ್ಲಿ ಮದುವೆ ಒಂದು ಸಾಮಾಜಿಕ ಚೌಕಟ್ಟಿಗೆ ಒಳಪಟ್ಟಿರುತ್ತದೆ. ಒಂದು ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿದೆ ಎಂದರೆ ಊರವರೆಲ್ಲಾ ಸೇರಿ ಬುದ್ಧಿ ಹೇಳಲು ಬರುತ್ತಾರೆ. ಇದು ನಮಗೆ ಸಂಬಂಧಿಸಿದ್ದು, ನಾವು ನೋಡಿಕೊಳ್ಳುತ್ತೇವೆ ಹೋಗಿ ಎಂದು ಹೇಳಿದರೆ ಯಾರೂ ಹೋಗುವುದಿಲ್ಲ. ಏಕೆಂದರೆ, ಒಂದು ಮದುವೆಯನ್ನು ಉಳಿಸುವುದು ತಮ್ಮ ಜವಾಬ್ದಾರಿ ಎಂದೇ ನಮ್ಮ ಸಮಾಜದ ಹಿರಿಯರು ನಂಬುತ್ತಾರೆ. ಆದ್ದರಿಂದಲೇ ಗಂಡ-ಹೆಂಡತಿಯ ನಡುವೆ ನಡೆಯುವ ಪರಸ್ಪರ ಮೋಸಗಳನ್ನು ಈ ಸಮಾಜ ಬಹಳ ಹೀನಾಯವಾಗಿ ನೋಡುತ್ತದೆ. ನಮ್ಮಲ್ಲಿ ಮದುವೆಯೆಂಬುದು ಖಾಸಗಿ ಅಫೇರ್ ಖಂಡಿತ ಅಲ್ಲ.


ಹಾಗಾಗಿಯೇ ಗಂಡ ಏನಾದರೂ ಸಾಧನೆ ಮಾಡಿದರೆ ಅವನ ಜೊತೆಗೆ ಹೆಂಡತಿಯನ್ನೂ ಕರೆದು ಸನ್ಮಾನಿಸುತ್ತಾರೆ.ಸಂಗಾತಿಯ ಯಶಸ್ಸಿನಲ್ಲಿ ಗಂಡ ಅಥವಾ ಹೆಂಡತಿಯ ಪಾತ್ರವೂ ದೊಡ್ಡದು ಎಂದು ನಾವು ನಂಬುತ್ತೇವೆ. ಬೇರಾವುದೇ ದೇಶದಲ್ಲಿ ಹೀಗಿಲ್ಲ.


ಗಂಡನಿಗೆ ಗೊತ್ತಿಲ್ಲದೆ ಹೆಂಡತಿ ಒಂದು ಲಕ್ಷ ರೂಪಾಯಿ ಕಳೆದಳು ಎಂದು ಮನೆಯಲ್ಲಿ ಜಗಳವಾದರೆ ಅಕ್ಕಪಕ್ಕದವರು 'ಹೋಗಲಿ ಬಿಡು' ಎಂದು ಸಮಾಧಾನ ಮಾಡುತ್ತಾರೆ. ಆದರೆ, ಗಂಡ ಅಥವಾ ಹೆಂಡತಿ ನಡುವೆ ಅಕ್ರಮ ಸಂಬಂಧದವಿಷಯದಲ್ಲಿ ಮನಸ್ತಾಪ ಬಂದಾಗ ಎಲ್ಲರೂ ಅದೊಂದು ಮಹಾಪರಾಧ ಎಂದೇಪರಿಗಣಿಸಿಬಿಡುತ್ತಾರೆ. ಅಲ್ಲಿ ಕ್ಷಮೆಯ ವಿಷಯ ಬರುವುದು ಕಡಿಮೆ.

ಮೋಸವೆಂದರೆ ಅಕ್ರಮ ಸಂಬಂಧ ಮಾತ್ರವೇ?

ಮರಳಿ ವಿಷಯಕ್ಕೆ ಬರೋಣ. ಮೋಸ ಎಂದರೇನು? ಮದುವೆಯಲ್ಲಿ ಮೋಸ ಅಂದರೆ ಅಕ್ರಮ ಸಂಬಂಧ ಮಾತ್ರವೇ? ಒಂದರ್ಥದಲ್ಲಿ ಹೌದು, ಇನ್ನೊಂದರ್ಥದಲ್ಲಿ ಅಲ್ಲ.

ಒಂದರ್ಥದಲ್ಲಿ ಹೌದು ಏಕೆಂದರೆ, ಗಂಡ ಹೆಂಡತಿಯ ನಡುವೆ ಮೋಸದ ಪ್ರಶ್ನೆ ಬಂದಾಗ ಅದು ಬಹುತೇಕ ಶೇ.90ರಷ್ಟು ಸಲ ಅಕ್ರಮ ಸಂಬಂಧದ ವಿಷಯಕ್ಕೇಬರುತ್ತದೆ. ಗಂಡ ಅಥವಾ ಹೆಂಡತಿ ತನ್ನ ಸಂಗಾತಿಯಲ್ಲಿ ನಂಬಿಕೆ ಕಳೆದುಕೊಳ್ಳುವುದು ಕೂಡ ಹೆಚ್ಚಾಗಿ ಈ ವಿಷಯಕ್ಕೇ.ಅವರಿಬ್ಬರೂ ಪರಸ್ಪರರಲ್ಲಿ ಇನ್ಯಾವುದೇ ನ್ಯೂನತೆಗಳನ್ನು ಬೇಕಾದರೂ ಹಲ್ಲುಮಟ್ಟೆ ಕಚ್ಚಿ ಸಹಿಸಿಕೊಂಡು ಬಿಡುತ್ತಾರೆ. ಆದರೆ ಗಂಡ ಇನ್ನೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ ಅಥವಾ ಹೆಂಡತಿ ಇನ್ನೊಬ್ಬನ ಜೊತೆ 'ಓಡಾಡುತ್ತಿದ್ದಾಳೆ' ಎಂಬುದನ್ನು ಮಾತ್ರ ಸಹಿಸಿಕೊಳ್ಳುವುದಿಲ್ಲ. ಅವರಿಬ್ಬರೇ ಅಲ್ಲ, ಅವರಲ್ಲಿ ಯಾರಾದರೂ ಹೀಗೆ ಮಾಡುತ್ತಿದ್ದಾರೆ ಎಂದಾದರೆ ಅವರ ಮಕ್ಕಳು ಕೂಡ ಅದನ್ನು ಸಹಿಸಿಕೊಳ್ಳುವುದಿಲ್ಲ. ತಾಯಿಯ ಅಕ್ರಮ ಸಂಬಂಧ ಗೊತ್ತಾಗಿ ಹೇಸಿಗೆ ಪಟ್ಟುಕೊಂಡುಅವಳನ್ನೂ ಅವಳ ಪ್ರಿಯಕರನನ್ನೂ ಮಕ್ಕಳು ಕೊಲೆ ಮಾಡಿದ ನೂರಾರು ಉದಾಹರಣೆಗಳಿವೆ.


ಆದರೆ, ಮೋಸವೆಂದರೆ ಅಕ್ರಮ ಸಂಬಂಧ ಮಾತ್ರ ಅಲ್ಲ. ಮದುವೆಯೆಂಬ ವ್ಯವಸ್ಥೆಯಲ್ಲಿ ನಡೆಯುವ ವಿಶ್ವಾಸದ್ರೋಹವೆಲ್ಲವೂ ಮೋಸವೇ. ಒಬ್ಬರ ನಂಬಿಕೆಗೆ ಇನ್ನೊಬ್ಬರು ಘಾಸಿ ಮಾಡಿದರೆ ಇಲ್ಲಿ ಅದು ಮೋಸವೆಂದೇ ಕರೆಸಿಕೊಳ್ಳುತ್ತದೆ. ಕಾನೂನು ಕೂಡ ಇದನ್ನೇ ಹೇಳುತ್ತದೆ. ದೇಹದಲ್ಲಿರುವ ನ್ಯೂನತೆಯನ್ನು ಮುಚ್ಚಿಟ್ಟು ಮದುವೆಯಾಗುವುದು, ಶೈಕ್ಷಣಿಕ ಅರ್ಹತೆ ಬಗ್ಗೆ ಸುಳ್ಳು ಹೇಳಿ ಮದುವೆಯಾಗುವುದು, ಮನೆತನದ ಬಗ್ಗೆ ಇರುವ ಅಪವಾದಗಳನ್ನು ಮುಚ್ಚಿಡುವುದು, ಸಂಬಳದ ವಿಷಯದಲ್ಲಿ ಸುಳ್ಳು ಹೇಳುವುದು, ಅಷ್ಟು ಆಸ್ತಿಯಿದೆ ಇಷ್ಟು ಆಸ್ತಿಯಿದೆ ಎಂದು ಕತೆ ಹೇಳಿ ಮದುವೆಯಾಗಿ ನಂತರ ಅದು ಸುಳ್ಳು ಎಂದು ಗೊತ್ತಾಗುವುದು, ಗಂಡ ಅಥವಾ ಹೆಂಡತಿಗೆ ಗೊತ್ತಿಲ್ಲದೆ ದೊಡ್ಡ ದೊಡ್ಡ ವ್ಯವಹಾರಗಳನ್ನು ರಹಸ್ಯವಾಗಿ ನಡೆಸುವುದು, ಪರಸ್ಪರರಿಗೆ ತಿಳಿಯದಂತೆ ಆಸ್ತಿಯನ್ನು ಇನ್ಯಾರದ್ದೋ ಹೆಸರಿಗೆ ವರ್ಗಾಯಿಸುವುದು ಇವೆಲ್ಲವೂ ಮೋಸವೇ. ಬಹಳ ಸಲ ಇಂತಹ ವಿಷಯಕ್ಕೂ ಡೈವೊರ್ಸ್ ನೀಡಲಾಗುತ್ತದೆ.


ಹೆಣ್ಣು ಮಾಡುವ ಮೋಸಕ್ಕೆ 'ಬೆಲೆ' ಹೆಚ್ಚು!

ಅಕ್ರಮ ಸಂಬಂಧಗಳ ವಿಷಯದಲ್ಲಿ ಹೆಂಗಸರಿಗಿಂತ ಗಂಡಸರೇ ಮುಂದಿದ್ದಾರೆ ಎಂಬುದು ಸಾರ್ವಕಾಲಿಕ ಸತ್ಯ. ಇದಕ್ಕೆ ಕಾರಣ ಗಂಡಸರು ಬಹಳ ಸಮಯವನ್ನು ಮನೆಯ ಹೊರಗೆ ಕಳೆಯುತ್ತಾರೆ ಮತ್ತುಅವರಿಗೆ ಹೀಗೆ 'ಬೇಲಿ ಹಾರಲು' ಅವಕಾಶ ಹೆಚ್ಚು ಸಿಗುತ್ತದೆ ಎಂಬುದು ಕೂಡ ಹೌದು. ಜೊತೆಗೆ, ಗಂಡಸರಿಗೆ ನಾನು ಗಂಡಸು ಹಾಗಾಗಿ ಏನು ಮಾಡಿದರೂ ನಡೆಯುತ್ತದೆ ಎಂಬ ವಿಚಿತ್ರ ಅಹಂಕಾರವೊಂದು ತೀರಾ ಇತ್ತೀಚಿನ ವರ್ಷಗಳವರೆಗೂ ಇತ್ತು. ಈಗ ಬಿಗಿ ಕಾನೂನುಗಳು ಬಂದಿರುವುದರಿಂದ ಮತ್ತು ವಿವಾಹಕ್ಕೆ ಸಂಬಂಧಿಸಿದ ಕಾನೂನುಗಳೆಲ್ಲ ಹೆಣ್ಣಿನ ಪರವಾಗಿಯೇ ಇರುವುದರಿಂದ ಗಂಡಸರ ಈ ದರ್ಪ ಮಣ್ಣುಪಾಲಾಗಿದೆ. ವಿಪರ್ಯಾಸ ಏನೆಂದರೆ, ಕಾನೂನಿನ ವಿಷಯದಲ್ಲಿ ಹೆಂಗಸರಿಗೇ ನಿಧಾನವಾಗಿ ಇಂತಹದ್ದೊಂದು ಅಹಂಕಾರ ಬರುತ್ತಿದೆ! 'ನಾನು ಹೆಣ್ಣು, ಹಾಗಾಗಿ ಏನು ಮಾಡಿದರೂ ಕಾನೂನನ್ನು ನನ್ನ ಪರವಾಗಿ ತಿರುಗಿಸಿಕೊಳ್ಳಬಹುದು' ಎಂಬ ಭಾವನೆ ವಿದ್ಯಾವಂತ ಮಹಿಳೆಯರಲ್ಲಿ ಮೂಡುತ್ತಿರುವುದು ಮಹಿಳೆಯರಲ್ಲೂ ಸ್ವೇಚ್ಛೆಗೆ ಹಾಗೂ ವೈವಾಹಿಕ ಕಾನೂನಿನ ದುರ್ಬಳಕೆಗೆ ಕಾರಣವಾಗುತ್ತಿದೆ. ಆದರೆ ಇದು ವ್ಯಾಪಕವಾಗಿಯೇನೂ ಹರಡಿಲ್ಲ. ಹರಡುವಅಪಾಯವಂತೂ ಇದೆ.


ಮದುವೆಯಲ್ಲಿ ಹೆಣ್ಣು ಮಾಡುವ ಮೋಸ ಹೆಚ್ಚು ಸುದ್ದಿಯಾಗುತ್ತದೆ ಏಕೆಂದರೆ ಅದು ಅಪರೂಪ ಎಂಬ ಕಾರಣಕ್ಕೆ. ಮತ್ತು ನಮ್ಮ ಮಾಧ್ಯಮಗಳೂ ಇಂತಹ ವಿಷಯಗಳಿಗೆ ಹೆಚ್ಚು ಪ್ರಚಾರ ಕೊಡುತ್ತವೆ. ಹೀಗೆ ಮಾಡುವುದು ಅವುಗಳ ಪ್ರಸಾರ ಅಥವಾ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಇರುವ ಅಡ್ಡಮಾರ್ಗ. ಆದರೆ, ಇದರ ಮೂಲವೂ ಜನರೇ. ಅವರಿಗೆ ಹೆಣ್ಣಿನ ವಿಷಯದಲ್ಲಿ ಕುತೂಹಲ ಜಾಸ್ತಿ. ಗಂಡಸರಿಗಷ್ಟೇ ಅಲ್ಲ, ಹೆಂಗಸರಿಗೂ ಹೆಣ್ಣಿನ ವಿಷಯದಲ್ಲಿ ಕುತೂಹಲ ಜಾಸ್ತಿ! ಹಾಗಾಗಿ ಆಕೆಗೆ ಸಂಬಂಧಿಸಿದ ವಿಷಯಗಳನ್ನು ತಿಳಿದುಕೊಳ್ಳಲು ಸಮಾಜ ಕಾತುರವಾಗಿರುತ್ತದೆ. ಆದ್ದರಿಂದಲೇ ಗಂಡನು ಹೆಂಡತಿಗೆ ಮಾಡುವ ಮೋಸಕ್ಕಿಂತ ಹೆಂಡತಿಯು ಗಂಡನಿಗೆ ಮಾಡುವ ಮೋಸದ 'ತೂಕ' ಹೆಚ್ಚು.


ಕೆಲ ಅರಬ್ ರಾಷ್ಟ್ರಗಳಲ್ಲಿ ಹೆಣ್ಣುಅಕ್ರಮ ಸಂಬಂಧ ಇರಿಸಿಕೊಂಡರೆ ಅವಳಿಗೆ ಕಲ್ಲು ಹೊಡೆದು ಸಾಯಿಸುವ, ಬಹಿರಂಗವಾಗಿ ಗಲ್ಲಿಗೇರಿಸುವ ಅಮಾನವೀಯ ಶಿಕ್ಷೆಗಳಿವೆ. ಇವುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಗುವುದರಿಂದ, ಹೆಣ್ಣಿನಅಕ್ರಮ ಸಂಬಂಧಗಳನ್ನು ಜಗತ್ತು ಬೇರೆಯದೇ ದೃಷ್ಟಿಕೋನದಿಂದ ನೋಡುತ್ತದೆ.


ಆದರೆ ಇವ್ಯಾವುವೂ ಹೆಂಗಸರು ಗಂಡನಿಗೆ ಮಾಡುವ ಮೋಸಕ್ಕೆ ಸಮರ್ಥನೆಯಲ್ಲ. ಮೋಸ ಮೋಸವೇ. ಹೆಣ್ಣು ಮಾಡಿದರೂ ಗಂಡು ಮಾಡಿದರೂ ಅದು ಮೋಸವೇ. ಜಾರಿದ ಮನಸ್ಥಿತಿಯಲ್ಲಿ ಇದು ಘಟಿಸಿಬಿಡುತ್ತದೆ. ಮುಂದೆ ಈ ರಹಸ್ಯವನ್ನು ಕಾಪಾಡಿಕೊಳ್ಳಲು ಅಥವಾ ಅದರ ಸುಖವನ್ನು ಮತ್ತೆ ಮತ್ತೆ ಪಡೆಯಲು ಅದನ್ನು ಬಹಳ ಕಾಲದವರೆಗೆ ಜೀವಂತವಾಗಿ ಕಾಪಾಡಿಕೊಳ್ಳುವ ಅನಿವಾರ್ಯತೆಗೆ ನಾವು ಸಿಲುಕುತ್ತೇವೆ. ವಾಸ್ತವವಾಗಿ, ಮದುವೆಯಲ್ಲಿ ಹೀಗೆ ಮೋಸ ನಡೆಯುವುದು ಒಂದೇ ಬಾರಿ. ನಂತರ ನಡೆಯುವುದೆಲ್ಲ ಅದರ ಮುಂದುವರಿದ ಭಾಗವಷ್ಟೆ.


ಹೆಂಡತಿಯರು ಮೋಸ ಮಾಡಲು 5 ಕಾರಣಗಳು

ಸಾಮಾನ್ಯವಾಗಿ ಎಲ್ಲರಿಗೂ ಇರುವ ಒಂದು ತಪ್ಪು ಕಲ್ಪನೆಯೇನೆಂದರೆ, ದಾಂಪತ್ಯದಲ್ಲಿ ಮೋಸ ಮಾಡುವವರು ಯಾವಾಗಲೂ ಗಂಡಸರು ಎಂಬುದು. ಆದರೆ, ಹೆಂಗಸರೂ ಅಷ್ಟೇ ಪ್ರಮಾಣದಲ್ಲಿ ಮೋಸ ಮಾಡುತ್ತಾರೆಂದು ಸಾಮಾಜಿಕ ಅಧ್ಯಯನದ ವರದಿಗಳು ಹೇಳುತ್ತವೆ.


ಹೆಂಡತಿಯರು ಗಂಡನಿಗೆ ಮೋಸ ಮಾಡಲು ಬೇಕಾದಷ್ಟು ಕಾರಣಗಳಿವೆ.ಅವುಗಳಲ್ಲಿ ಐದು ಪ್ರಮುಖ ಕಾರಣಗಳು ಇಲ್ಲಿವೆ.


ಮೊದಲನೆಯದಾಗಿ, ಹೆಂಡತಿಗೆ ತನ್ನನ್ನು ಗಂಡ ಕಡೆಗಣಿಸುತ್ತಿದ್ದಾನೆಂಬ ಭಾವನೆ ಬಂದರೆ ಆಕೆ ಅಕ್ರಮ ಸಂಬಂಧಕ್ಕಿಳಿಯುವ ಸಾಧ್ಯತೆ ಹೆಚ್ಚು. ನನ್ನ ಬಗ್ಗೆ ಗಂಡ ಸಾಕಷ್ಟು ಗಮನ ಕೊಡುವುದಿಲ್ಲ, ನನ್ನನ್ನು ನಿರ್ಲಕ್ಷಿಸುತ್ತಿದ್ದಾನೆ, ನಾನು ಬರೀ ಮನೆಗೆ ಸೀಮಿತವಾಗಿದ್ದೇನೆ, ಗಂಡನ ಬದುಕಿನಲ್ಲಿ ನನಗೆಅಷ್ಟೇನೂ ಮಹತ್ವವಿಲ್ಲ ಎಂಬ ಯೋಚನೆ ಹೆಂಡತಿಯ ಮನಸ್ಸಿಗೆ ಹೊಕ್ಕಿದರೆ ಆಕೆ ಮನೆಯ ಹೊರಗೆ ಇವನ್ನೆಲ್ಲ ಹುಡುಕಿಕೊಳ್ಳಲು ಮುಂದಾಗುತ್ತಾಳೆ. ಹೊರಗಿನ ಸಂಬಂಧದಲ್ಲಿ ಆಕೆಗೆ ಮೊದಮೊದಲು ಸಾಕಷ್ಟು ಲಕ್ಷ್ಯ, ಬೆಲೆ, ಮಹತ್ವ ಎಲ್ಲವೂ ಸಿಗುತ್ತದೆ. ಏಕೆಂದರೆ ಆಕೆಯನ್ನು ಬಳಸಿಕೊಳ್ಳುವಗಂಡಸಿಗೆ ಅವಳ ಅವಶ್ಯಕತೆಯಿರುತ್ತದೆ. ದಿನ ಕಳೆದಂತೆ ಅವನಿಗೆ ಆಕೆಯಲ್ಲಿ ಆಕರ್ಷಣೆ ಕಡಿಮೆಯಾಗುತ್ತ ಹೋಗುತ್ತದೆ. ಆಗಅವಳಿಗೆ ಆ ಸಂಬಂಧವೂ ಬೋರು ಹೊಡೆಸತೊಡಗುತ್ತದೆ.


ಗಂಡ-ಹೆಂಡತಿಯ ಸಂಬಂಧ ಕೇವಲ ಸೆಕ್ಸ್‌ಗೆ ಸೀಮಿತವಾದಾಗಲೂ ಆಕೆ ಇನ್ನೊಬ್ಬ ಗಂಡಸಿನಲ್ಲಿ ಪ್ರೀತಿ ಹುಡುಕಬಹುದು. ಇನ್ನೊಬ್ಬ ಗಂಡಸು ಅವಳ ಜೊತೆ ಆರಂಭದಲ್ಲಿ ಸೆಕ್ಸ್‌ಗಿಂತ ಹೆಚ್ಚಾಗಿ ಸ್ಪರ್ಶ, ಪ್ರೀತಿ, ಕಿಸ್, ಗಿಫ್ಟ್ ಕೊಡುವುದು, ಆಗಾಗ ನೆನಪಿಸಿಕೊಂಡು ಮೆಸೇಜ್ ಮಾಡುವುದು, ತನ್ನ ಕಷ್ಟ-ಸುಖ ಹೇಳಿಕೊಳ್ಳುವುದು ಮಾಡುತ್ತಾನೆ. ಆಗ ಭಾವನಾತ್ಮಕವಾಗಿ ಅವಳಿಗೆ ಅವನ ಜೊತೆ ಸಂಬಂಧ ಬೆಳೆಯುತ್ತದೆ. ಅದು ನಂತರ ದೈಹಿಕಸಂಬಂಧಕ್ಕೆ ತಿರುಗುತ್ತದೆ.


ಹೆಂಡತಿಗೆ ಒಂಟಿತನ ಕಾಡತೊಡಗಿದರೆ ಅವಳು ಇನ್ನೊಂದು ಸಂಬಂಧಕ್ಕಾಗಿ ಹಾತೊರೆಯಬಹುದು. ಬಹಳ ದೀರ್ಘಕಾಲದವರೆಗೆ ಮನೆಯಲ್ಲಿ ಒಂಟಿಯಾಗಿರುವ ಹೆಂಗಸರು ಹೀಗೆ ಮಾಡುವ ಸಾಧ್ಯತೆ ಹೆಚ್ಚು. ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ಗಂಡ ದೂರವಿದ್ದರೆ ಅವಳಿಗೆ ತನ್ನ ಬದುಕಿಗೊಂದು ಅರ್ಥವೇ ಇಲ್ಲ ಅನ್ನಿಸತೊಡಗುತ್ತದೆ. ಆಗ ರೊಮ್ಯಾಂಟಿಕ್ ಆದ ಸಂಬಂಧವೊಂದುಅವಳಿಗೆ ಬೇಕು ಅನ್ನಿಸಬಹುದು. ಗಂಡ ಸೇನೆಯಲ್ಲಿದ್ದರೆ ಅಥವಾ ದೂರದ ದೇಶದಲ್ಲಿ ಬಹಳ ಕಾಲ ಇದ್ದರೆ ಹೆಂಡತಿ ತನ್ನ ಖಾಲಿತನವನ್ನು ತುಂಬಿಕೊಳ್ಳಲು ಇನ್ನೊಬ್ಬರೊಂದಿಗೆ ಅಫೇರ್ ಆರಂಭಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂಬುದು ಸಾಕಷ್ಟು ಅಧ್ಯಯನದಿಂದ ಸಾಬೀತಾಗಿದೆ.


ಗಂಡನಿಂದ ತನಗೆ ಕಡಿಮೆ ಪ್ರೀತಿ ಸಿಗುತ್ತಿದೆ ಎಂಬ ಭಾವನೆ ಹೆಂಡತಿಗೆ ಬಂದರೂ ಅವಳು ಇನ್ನೊಂದು ಸಂಬಂಧಕ್ಕೆ ಕೈಹಾಕಬಹುದು. ಕೆಲ ಮಹಿಳೆಯರಿಗೆ ಗಂಡನ ಬಗ್ಗೆ ಏನೇನೋ ನಿರೀಕ್ಷೆಗಳಿರುತ್ತವೆ. ಅವುಗಳಲ್ಲಿ ಹೆಚ್ಚಿನವು ಅನ್ ಪ್ರಾಕ್ಟಿಕಲ್ ಆಗಿರಬಹುದು. ಆದರೆ ಅದು ಭ್ರಮಾಲೋಕದಲ್ಲಿ ವಿಹರಿಸುವ ಹೆಂಡತಿಗೆ ಪ್ರಾಕ್ಟಿಕಲ್ ಆಗಿಯೇ ತೋರುತ್ತದೆ. ಆಗ ಅವಳು ತನ್ನ ನಿರೀಕ್ಷೆಗಳನ್ನೆಲ್ಲ ಇನ್ಯಾರಲ್ಲೋ ಸಾಕಾರಗೊಳಿಸಿಕೊಳ್ಳಲು ಮುಂದಾಗುತ್ತಾಳೆ. ಕೊನೆಗೊಂದು ದಿನ ಭ್ರಮೆಯ ಮೊಟ್ಟೆ ಒಡೆದ ಮೇಲೆಅವಳಿಗೆ ವಾಸ್ತವದ ಅರಿವಾಗುತ್ತದೆ.ಅಷ್ಟರಲ್ಲಿ ತಡವಾಗಿರುತ್ತದೆ.


ಕೆಲ ಮಹಿಳೆಯರಿಗೆ ಪ್ರೀತಿಯ ವಿಷಯದಲ್ಲಿ ಮಾನಸಿಕ ತೊಂದರೆಗಳಿರುತ್ತವೆ. ಬಾಲ್ಯದಲ್ಲಿ ಲೈಂಗಿಕವಾಗಿ ಆಕೆಯನ್ನು ಯಾರಾದರೂ ದುರ್ಬಳಕೆ ಮಾಡಿಕೊಂಡಿದ್ದರೆ ಅದು ಸೆಕ್ಸನ್ನೇ ದ್ವೇಷಿಸುವ ಅಥವಾ ಯಾವಾಗಲೂ ಸೆಕ್ಸ್ ಬಯಸುವ ವಿಪರೀತ ಮನಸ್ಥಿತಿಗೆ ದೂಡಬಹುದು. ತೀರಾ ತೀವ್ರವಾದ ಸಂಬಂಧಗಳಿಗೆ ಆಕೆ ಅಡಿಕ್ಟ್ ಆದರೆ ಒಬ್ಬರಾದ ಮೇಲೊಬ್ಬರಂತೆ ಸಂಗಾತಿಯನ್ನು ಹುಡುಕುತ್ತಲೇ ಹೋಗುತ್ತಾಳೆ. ಇಂಥವರಿಗೆ ಆರಂಭದಲ್ಲೇ ಮಾನಸಿಕ ಚಿಕಿತ್ಸೆ ದೊರೆತರೆ ಅಕ್ರಮ ಸಂಬಂಧಗಳಿಂದ ದೂರವಿರುತ್ತಾರೆ.


ಟಾಪ್ 10 ಸೀಕ್ರೆಟ್

ಈ ಹತ್ತು ವಿಧದ ಮಹಿಳೆಯರು ಗಂಡನಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚು!

ಟೀವಿ ಧಾರಾವಾಹಿಗಳನ್ನು ನೋಡಿ, ಸಿನಿಮಾಗಳನ್ನು ನೋಡಿ, ಪತ್ರಿಕೆಗಳಲ್ಲಿ ಕ್ರೈಂ ಪುಟ ನೋಡಿ, ಅಲ್ಲೆಲ್ಲ ಗಂಡ ಅಥವಾ ಪ್ರಿಯಕರನಿಗೆ ಮೋಸ ಮಾಡುವ ಹೆಂಗಸರ ಬಗ್ಗೆ ಸಾಕಪ್ಪಾ ಸಾಕು ಎನ್ನಿಸುವಷ್ಟು ಕತೆಗಳಿರುತ್ತವೆ;  ಇವುಗಳನ್ನು ನೋಡಿದ ಗಂಡಸರಿಗೆ ತಮ್ಮ ಸಂಗಾತಿಯ ಬಗ್ಗೆಯೂ ಹೆದರಿಕೆ ಹುಟ್ಟುವಷ್ಟು!


ಅಮೆರಿಕದ ಸಾಮಾಜಿಕ ವಿಜ್ಞಾನಿಗಳ ತಂಡವೊಂದು ಈ ಬಗ್ಗೆ 20 ವರ್ಷ ಸಂಶೋಧನೆ ನಡೆಸಿದೆ. ಮೋಸ ಮಾಡಿದ, ಮೋಸ ಮಾಡುವ ಬಗ್ಗೆಯೋಚಿಸುತ್ತಿರುವ, ಗಂಡನಿಗೆ ನಿಷ್ಠಳಾಗಿರುವ ಹೆಂಗಸರು ಹಾಗೂ ಹೆಂಡತಿಯಿಂದ ಮೋಸಹೋದ ಗಂಡಸರನ್ನು ಅಧ್ಯಯನಕ್ಕೊಳಪಡಿಸಿ, ಅವರ ಸಂದರ್ಶನ ಮಾಡಿ ಈ ಸಮಾಜಶಾಸ್ತ್ರರ ತಂಡ ವರದಿಯೊಂದನ್ನು ಸಿದ್ಧಪಡಿಸಿದೆ. ಅದರ ಪ್ರಕಾರಗಂಡ ಅಥವಾ ಸಂಗಾತಿಗೆ ಮೋಸ ಮಾಡುವ ಸಾಧ್ಯತೆ ಈ ಹತ್ತು ವಿಧದಹೆಂಗಸರಲ್ಲಿ ಹೆಚ್ಚು.


1.ಪುರುಷ ಸ್ನೇಹಿತರು ಹೆಚ್ಚಿದ್ದರೆ

ಹೆಂಡತಿ ಅಥವಾ ಪ್ರಿಯತಮೆಗೆ ಗಂಡ ಅಥವಾ ಪ್ರಿಯಕರನ ಹೊರತಾಗಿ ಬಹಳ ಪುರುಷ ಸ್ನೇಹಿತರಿದ್ದರೆ ಆಕೆ ಅವರ್ಯಾರಾದರೂ ಒಬ್ಬರ ಅಥವಾ ಹೆಚ್ಚಿನವರ ಜೊತೆ ಅಫೇರ್ ಆರಂಭಿಸುವ ಸಾಧ್ಯತೆ ಹೆಚ್ಚು. ಆರಂಭದಲ್ಲಿ ಅವಳ ಸ್ನೇಹ ಬರೀ ಸ್ನೇಹವಾಗಿಯೇ ಇರಬಹುದು. ಆದರೆ ಕೊನೆಯವರೆಗೂ ಅದು ಹಾಗೇ ಉಳಿಯಬೇಕೆಂದಿಲ್ಲ. ಯಾವುದಾದರೂ ಕಾರಣಕ್ಕೆ ಗಂಡನೊಂದಿಗೆ ವೈಮನಸ್ಯ ಬಂದಾಗ ದುರ್ಬಲ ಮನಸ್ಥಿತಿಯಲ್ಲಿ ಆಕೆ ತನ್ನ ಪುರುಷ ಸ್ನೇಹಿತರ ಜೊತೆ ಭಾವನಾತ್ಮಕವಾಗಿ ಬೆರೆಯಬಹುದು. ಆಗ ಅದು ಸೆಕ್ಸ್‌ಗೆ ಕಾರಣವಾಗಬಹುದು.


2.ಗಂಡನಿಗೆ ಮೋಸ ಮಾಡುತ್ತಿರುವ ಸ್ನೇಹಿತೆಯರು ಈಕೆಗಿದ್ದರೆ

ಗೆಳತಿಯರೂ ಒಮ್ಮೊಮ್ಮೆ ಬಹಳ ಡೇಂಜರಸ್ ಆಗಬಹುದು! ಅಕ್ರಮ ಸಂಬಂಧದಲ್ಲಿ ತೊಡಗಿರುವ ಗೆಳತಿಯರು ಯಾರಿಗಾದರೂ ಇದ್ದರೆ ಅಂತಹ ಮಹಿಳೆಯರೂ ಅಕ್ರಮ ಸಂಬಂಧಕ್ಕೆ ಇಳಿಯುವ ಸಾಧ್ಯತೆಯಿರುತ್ತದೆ. ಅಂತಹ ಸಂಬಂಧಗಳಲ್ಲಿರುವ ಮೋಜು ಅಥವಾ ಥ್ರಿಲ್ ಬಗ್ಗೆ ಗೆಳತಿಯರು ಈಕೆಯ ತಲೆ ಕೆಡಿಸಬಹುದು. ಮಾಡಲು ಏನೂ ಕೆಲಸವಿಲ್ಲದೆ ಯಾವಾಗಲೂ ಕ್ಲಬ್‌ನಲ್ಲಿ ಸೇರಿ ಹರಟೆ ಹೊಡೆಯುವ ಶ್ರೀಮಂತ ಗಂಡಂದಿರಪತ್ನಿಯರಲ್ಲಿ ಈ ಚಾನ್ಸ್ ಹೆಚ್ಚು.


3.ಗಮನಕ್ಕಾಗಿ ಹಾತೊರೆಯುವ ಹೆಂಗಸಾಗಿದ್ದರೆ

ಕೆಲ ಮಹಿಳೆಯರು ಭಾವನಾತ್ಮಕವಾಗಿ ಬಹಳ ದುರ್ಬಲರಾಗಿರುತ್ತಾರೆ. ಅವರಿಗೆ ಯಾವಾಗಲೂ ತಮ್ಮನ್ನು ಗಂಡ ನೆಗ್ಲೆಕ್ಟ್ ಮಾಡುತ್ತಿದ್ದಾನೆಂಬ ತಪ್ಪು ಭಾವನೆಯೊಂದು ಮನಸ್ಸಿನಲ್ಲಿ ಹೊಕ್ಕಿಕೊಂಡು ಕೊರೆಯುತ್ತಿರುತ್ತದೆ. ಆ ಗಂಡ ಇರುವುದೇ ಹಾಗಿರಬಹುದು ಅಥವಾಅವನಿಗೆ ದಿನವಿಡೀ ಪ್ರೀತಿ ವ್ಯಕ್ತಪಡಿಸುತ್ತಿರುವುದು ಹೇಗೆಂದು ಗೊತ್ತಿರದೆ ಇರಬಹುದು. ಅದು ಹೆಂಡತಿಗೆ ಅರ್ಥವಾಗದಿದ್ದರೆ, ಗಂಡ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆಂಬ ಭಾವನೆ ಬಂದು ತನ್ನತ್ತ ಲಕ್ಷ್ಯ ಕೊಡುವ ಸಂಗಾತಿಯ ಹುಡುಕಾಟಕ್ಕೆ ಆಕೆ ಇಳಿಯಬಹುದು.


4.ದುಬಾರಿ ಲೈಫ್‌ಸ್ಟೈಲ್‌ನ ಹುಚ್ಚಿದ್ದರೆ

ಯಾವಾಗಲೂ ಶಾಪಿಂಗ್ ಮಾಡುತ್ತಿರಬೇಕು, ದುಬಾರಿ ವಸ್ತುಗಳನ್ನೇ ಖರೀದಿ ಮಾಡಬೇಕು, ಶ್ರೀಮಂತ ಹೆಂಗಸರಂತೆ ತಾನೂ ರಾಯಲ್ ಆಗಿ ಬದುಕಬೇಕೆಂಬ ಆಸೆಯಿರುವ ಮಹಿಳೆಯರು ಶ್ರೀಮಂತ ಗಂಡಸರನ್ನು ಬುಟ್ಟಿಗೆ ಹಾಕಿಕೊಳ್ಳುವ ಸಾಧ್ಯತೆಯಿರುತ್ತದೆ. ಇದಕ್ಕೆ ಪ್ರಾಪಂಚಿಕ ಮೋಹ ಎನ್ನುತ್ತಾರೆ. ಇದು ಎಲ್ಲರಲ್ಲೂ ತಕ್ಕಮಟ್ಟಿಗೆ ಇರುತ್ತದೆ. ಆದರೆ ಅತಿಯಾದಾಗ ಅಕ್ರಮ ಸಂಬಂಧಕ್ಕೆ ಎಡೆ ಮಾಡಿಕೊಡಬಹುದು. ಇಂಥವರನ್ನು ಬಲೆಗೆ ಬೀಳಿಸಿಕೊಳ್ಳಲುಸೊಗಸುಗಾರ ಗಂಡಸರೂ ಕಾಯುತ್ತಿರುತ್ತಾರೆ.


5.ತುಂಬಾ ಅಹಂಕಾರಿಯಾಗಿದ್ದರೆ

ಗಂಡನ ಜೊತೆ ಜಿದ್ದಿಗೆ ಬೀಳುವ ಕೆಲ ಹೆಂಗಸರುಅವನೆದುರು ತಮ್ಮಅಹಂಕಾರ ತಣಿಯದಿದ್ದರೆ ಆ ಸೇಡು ತೀರಿಸಿಕೊಳ್ಳಲು ಇನ್ನೊಬ್ಬರ ಜೊತೆ ಹೋಗುವುದಿದೆ. ಅವರು ಬೇರೆ ಬೇರೆ ಗಂಡಸರನ್ನು ಸೋಲಿಸಿ, ತನ್ನನ್ನು ತೃಪ್ತಿಪಡಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ವಿಲಕ್ಷಣ ಸಂತೋಷದಲ್ಲಿ ತೇಲುತ್ತಿರುತ್ತಾರೆ. ಗಂಡಸರನ್ನು ತನಗಾಗಿ ಹಾತೊರೆಯುವಂತೆ ಮಾಡುವುದೇ ಅವಳ ಜೀವನದ ಪರಮೋದ್ದೇಶವಾಗುತ್ತದೆ. ಇದೊಂದು ರೀತಿಯ ಮಾನಸಿಕ ಕಾಯಿಲೆ. ಇಂಥವರು ಒಬ್ಬರಿಗೆ ನಿಷ್ಠರಾಗಿರುವ ಸಾಧ್ಯತೆ ಬಹಳ ಕಡಿಮೆ.


6.ಅತಿಯಾದ ಸಾಹಸಿ ಪ್ರವೃತ್ತಿಯಿದ್ದರೆ

ಕೆಲ ಮಹಿಳೆಯರಿಗೆ ರಿಸ್ಕ್ ತೆಗೆದುಕೊಳ್ಳುವುದೆಂದರೆ ಒಂಥರಾ ಹುಚ್ಚು. ಅವರು ಅತಿಯಾದ ಸಾಹಸಿ ಪ್ರವೃತ್ತಿಯವರು. ಅಂಥವರು ಅಪಾಯ ಮೈಮೇಲೆ ಎಳೆದುಕೊಳ್ಳುವುದರಲ್ಲೇ ಥ್ರಿಲ್ ಅನುಭವಿಸುತ್ತಾರೆ. ಇನ್ನೊಬ್ಬರ ಜೊತೆ ಸಂಬಂಧ ಇರಿಸಿಕೊಳ್ಳುವುದೂಅವರ ಪಾಲಿಗೆ ಒಂದು ರೀತಿಯ ಸಾಹಸ. ಅದು ಗಂಡನಿಗೆ ತಿಳಿಯಬಾರದು ಎಂಬ ರಿಸ್ಕ್ ತೆಗೆದುಕೊಳ್ಳುವುದು ಅವರಿಗೆ ಖುಷಿ ಕೊಡುತ್ತದೆ. ಇಂಥವರು ಬರೀ ಥ್ರಿಲ್‌ಗಾಗಿ, ಯಾವುದೇ ಸುಖಕ್ಕಾಗಿ ಅಲ್ಲ, ಅಕ್ರಮ ಸಂಬಂಧ ಇರಿಸಿಕೊಳ್ಳುತ್ತಾರೆ.


7.ಸುಲಭವಾಗಿಬೇಸರಗೊಳ್ಳುವವಳು

ದೈನಂದಿನ ಬದುಕಿನ ಏಕತಾನತೆಯಿಂದ ಸುಲಭವಾಗಿ ಬೋರಾಗುವವರು ತಮ್ಮ ಬೇಸರ ಕಳೆಯಲು ಅಥವಾ ಆ ಕ್ಷಣದ ಎಕ್ಸೈಟ್‌ಮೆಂಟ್‌ಗಾಗಿ ಇನ್ನೊಂದು ಸಂಬಂಧ ಹುಡುಕಿಕೊಳ್ಳುವ ಸಾಧ್ಯತೆಯಿರುತ್ತದೆ. ಮಾತುಮಾತಿಗೂ ಬೇಸರ ಮಾಡಿಕೊಳ್ಳುವವರು, ಇದ್ದಕ್ಕಿದ್ದಂತೆ ಡಲ್ ಆಗುವವರು ಹೀಗೆ ಮಾಡುವ ಸಾಧ್ಯತೆ ಹೆಚ್ಚು.


8.ಗಂಡನಿಂದ ಮೋಸ ಹೋಗಿದ್ದರೆ

ಗಂಡನಿಗೆ ಅಕ್ರಮ ಸಂಬಂಧವಿದೆ ಎಂಬುದು ತಿಳಿದರೆ ಅದರ ಸೇಡು ತೀರಿಸಿಕೊಳ್ಳಲು ಅಥವಾ ಅವನು ಮಾಡಿದರೆ ಸರಿ, ನಾನು ಮಾಡಿದರೆ ತಪ್ಪೇ ಎಂಬ ಹಠಕ್ಕೆ ಬಿದ್ದು ಅಕ್ರಮ ಸಂಬಂಧಕ್ಕೆ ಮುಂದಾಗುವ ಹೆಂಗಸರು ಹೆಚ್ಚಿದ್ದಾರೆ. ಹೀಗೆ ಮಾಡುವುದು ಇವರಿಗೆ ಮಾನಸಿಕ ನೆಮ್ಮದಿ ನೀಡುತ್ತದೆ. ವಿಶ್ವಾಸದ್ರೋಹಕ್ಕೆ ಮಹಿಳೆಯರು ನೀಡುವ ಉತ್ತರವೂ ಬಹಳ ಸಲ ವಿಶ್ವಾಸದ್ರೋಹವೇ ಆಗಿರುತ್ತದೆ.


9.ಸೆಕ್ಸ್, ಮದ್ಯ, ಡ್ರಗ್ ಅಡಿಕ್ಟ್ ಆಗಿದ್ದರೆ

ಕೆಲವರು ಸೆಕ್ಸ್‌ಗೆಅಡಿಕ್ಟ್ ಆಗಿರುತ್ತಾರೆ.ಅವರಿಗೆ ಪ್ರತಿದಿನವೂ ಅದು ಬೇಕು. ಆದರೆ, ಗಂಡನಿಗೆ ಅಷ್ಟೊಂದು ಬೇಕಿರುವುದಿಲ್ಲ. ಅಂಥ ಮಹಿಳೆಯರು ಹೊರಗೆ ಅದನ್ನು ಹುಡುಕಿಕೊಳ್ಳುತ್ತಾರೆ. ಮದ್ಯ ಅಥವಾ ಡ್ರಗ್ಸ್‌ಗೆ ಅಡಿಕ್ಟ್ ಆಗಿರುವ ಮಹಿಳೆಯರೂ ಹಣಕ್ಕಾಗಿ ಅಥವಾ ಆ ಚಟದ ಕಾರಣಕ್ಕಾಗಿ ಅಕ್ರಮ ಸಂಬಂಧಗಳಿಗೆ ಇಳಿಯುತ್ತಾರೆ. ಕುಡಿದಾಗ ಅಥವಾ ಡ್ರಗ್ಸ್ ತೆಗೆದುಕೊಂಡಾಗ ತನಗೆ ಏನಾಗುತ್ತಿದೆ ಎಂಬುದೇ ತಿಳಿಯದೆ ಕೆಲವರು ಗಂಡನಿಗೆ ಮೋಸಮಾಡಬಹುದು. ಅಥವಾ ಈ ಚಟಗಳಿಂದ ಅವರ ನಿರ್ಣಾಯಕ ಶಕ್ತಿ ಕುಂದುವುದರಿಂದ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಜಡ್ಜ್ ಮಾಡಲು ಸಾಧ್ಯವಾಗದೆ ಮೋಜುಗಾರರ ಬಲೆಗೆ ಬೀಳಬಹುದು.


10.ಗಂಡನಿಂದ ಲೈಂಗಿಕ ತೃಪ್ತಿ ಸಿಗದಿದ್ದರೆ

ತನಗೆ ಬೇಕಾದಷ್ಟು ಸುಖವನ್ನು ಗಂಡ ನೀಡುತ್ತಿಲ್ಲ ಎಂದಾದರೆ ಮಹಿಳೆ ಅದನ್ನು ಹೊರಗೆಲ್ಲಾದರೂ ಹುಡುಕಿಕೊಳ್ಳಲು ಹೋಗುವ ಸಾಧ್ಯತೆಯಿರುತ್ತದೆ. ಆದರೆ, ಲೈಂಗಿಕ ಸುಖವೇ ದಾಂಪತ್ಯವಲ್ಲ. ಅಲ್ಲಿ ದೇಹದ ತೃಪ್ತಿಗಿಂತ ಮನಸ್ಸಿನ ತೃಪ್ತಿ ಮುಖ್ಯ. ಮಾನಸಿಕವಾಗಿಯೂ ಗಂಡಅವಳಿಗೆ ಹತ್ತಿರವಾಗಿರದೆ, ಲೈಂಗಿಕವಾಗಿಯೂ ತೃಪ್ತಿಪಡಿಸದಿದ್ದರೆ ಆಗ ಅವೆರಡನ್ನೂ ಹೆಂಡತಿ ಇನ್ನೊಬ್ಬನ ಜೊತೆಗಿನಅಕ್ರಮ ಸಂಬಂಧದಲ್ಲಿ ಹುಡುಕಬಹುದು.


ಇವಿಷ್ಟೇ ಅಲ್ಲ. ಸೆಕ್ಸನ್ನು ಒಂದು ಆಟವಾಗಿ ನೋಡುವ, ಆತ್ಮವಿಶ್ವಾಸದ ಕೊರತೆಯಿಂದ ಬಳಲುವ, ಮೊದಲು ಗಂಡನಿಗೆ ಮೋಸ ಮಾಡಿ ಸಿಕ್ಕಿಹಾಕಿಕೊಳ್ಳದೆ ಗೆದ್ದಿರುವ, ಸಣ್ಣ ವಯಸ್ಸಿನಿಂದಲೂ ಸೆಕ್ಸ್‌ನಲ್ಲಿ ತುಂಬಾ ಅನುಭವವಿರುವ, ಗಂಡನಿಗಿಂತ ಹೆಚ್ಚು ಲೈಂಗಿಕ ಆಸಕ್ತಿ ಹೊಂದಿರುವ, ಪಾರ್ಟಿ ಗರ್ಲ್ ಎಂಬ ಖ್ಯಾತಿ ಪಡೆದಿರುವ, ತನ್ನ ಬಗ್ಗೆ ಸದಾ ಬೇರೆಯವರು ಮಾತಾಡಿಕೊಳ್ಳುತ್ತಿರಬೇಕೆಂದು ಬಯಸುವ ಮಹಿಳೆ ಕೂಡ ಮನೆಯ ಹೊರಗಿನ 'ಸಾಹಸಕ್ಕೆ' ಇಳಿಯುವ ಸಾಧ್ಯತೆ ಹೆಚ್ಚು.


-ವಿಂದುಮಾನ್


(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ
)

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website