ನೆಲದಡಿಯ ಅಣೆಕಟ್ಟು


ದಕ್ಷಿಣ ಇಸ್ರೇಲಿನ ‘ಅರವಾ ಮರುಭೂಮಿ’ಯಲ್ಲಿ ಕರೆದೊಯ್ಯುತ್ತಿದ್ದ ಸಹಕಾರ ಕೃಷಿ ಸಮಿತಿ ಮುಖ್ಯಸ್ಥ ಶಮಿ ಬರ್ಕಾನ್ ‘ಪಕ್ಕದಲ್ಲಿ ಕಾಣಿಸುತ್ತಿರುವುದು ಶೈಜಾಫ್ ಡ್ಯಾಂ’ ಎಂದು ತೋರಿಸಿದರು. ಅತ್ತ ಕಡೆ ನೋಡಿದಾಗ ಎಕರೆಗಟ್ಟಲೇ ವಿಸ್ತೀರ್ಣದಲ್ಲಿ ಟಾರ್ಪಾಲಿನ್ (ತಾಡಪತ್ರೆ) ಹಾಕಿದ್ದು ಬಿಟ್ಟರೆ ಬೇರಾವ ಅಣೆಕಟ್ಟು ಕಾಣಿಸಲಿಲ್ಲ.
ಸ್ವಲ್ಪ ಸಮಯದಲ್ಲಿ ವಾಹನ ಮಣ್ಣಿನ ದಿಬ್ಬವೊಂದನ್ನು ಏರಿ, ಬೆಟ್ಟದ ತುದಿಯಲ್ಲಿ ನಿಂತಿತು. ಇಳಿದು ಕೆಳಗೆ ನೋಡಿದಾಗಲೂ ಟಾರ್ಪಾಲಿನ್ ಹಾಸಿದ ಪ್ರದೇಶ ಹೊರತುಪಡಿಸಿದರೆ ಬೇರಾವ ಜಲಾಶಯವೂ ಗೋಚರಿಸಲಿಲ್ಲ. ‘ಶೈಜಾಫ್ ಡ್ಯಾಂ’ ಎಂದು ಶಮಿ ಬರ್ಕಾನ್ ಅದರತ್ತಲೇ ಬೊಟ್ಟು ಮಾಡಿ ತೋರಿಸಿದರು. ಇದು ನೀರನ್ನು ಸಂಗ್ರಹಿಸಿಟ್ಟುಕೊಂಡ ಜಲಾಶಯ ಎಂದಾಗಲಷ್ಟೇ ಅದರ ಸ್ವರೂಪ ಗೊತ್ತಾಯಿತು. ಅಣೆಕಟ್ಟು ಎಂದರೆ ನದಿಗೆ ಅಡ್ಡಲಾಗಿ ಕಟ್ಟಿದ ಎತ್ತರದ ಗೋಡೆ ಎಂಬ ಭಾವನೆ ಮೂಡುತ್ತದೆ. ಆದರೆ ಇದು ನದಿಪಾತ್ರದೊಳಗಿನ ಅಣೆಕಟ್ಟು. ಎತ್ತರವಲ್ಲ; ಆಳ ಇರುವಂಥದು!
ನೆಲದಲ್ಲೇ ಆಳವಾಗಿ ಈ ಅಣೆಕಟ್ಟು ನಿರ್ಮಿಸಿದ ಕಾರಣ? ಮತ್ತದೇ ನೀರಿನ ಕೊರತೆ. ಇಸ್ರೇಲಿನ ಉತ್ತರ ಭಾಗದ ಜನವಸತಿ ಪ್ರದೇಶಗಳು ಸಮುದ್ರದಿಂದ ತೆಗೆದು ಸಂಸ್ಕರಿಸಿದ ಅಥವಾ ‘ಗೆಲಿಲೀ’ ಸರೋವರದ ನೀರನ್ನು ಪಡೆಯುತ್ತವೆ. ಇದನ್ನು ಬಳಸಿದ ಬಳಿಕ ಸಂಸ್ಕರಿಸಿ, ಆ ಭಾಗದ ಕೃಷಿಗೆ ಬಳಸುತ್ತಾರೆ. ಆದರೆ ದಕ್ಷಿಣದ (ಅರವಾ ಮರುಭೂಮಿ) ಭಾಗಕ್ಕೆ ಆ ಭಾಗ್ಯ ಇಲ್ಲ. ಕೃಷಿಗೆ ಬೇಕಾದ ನೀರನ್ನು ಇಲ್ಲೇ ಹಿಡಿದಿಟ್ಟುಕೊಳ್ಳಬೇಕು. ಇದನ್ನೇ ಸವಾಲಾಗಿ ಸ್ವೀಕರಿಸಿ, ಇಲ್ಲಿನ ಎಂಜಿನಿಯರ್‌ಗಳು ವಿಶಿಷ್ಟ ಡ್ಯಾಂ ನಿರ್ಮಿಸಿದ್ದಾರೆ.
ಅರವಾ ಪ್ರದೇಶದಲ್ಲಿ ಸುರಿಯುವ ಮಳೆ ವಾರ್ಷಿಕ ೨೫ ಮಿ.ಮೀ. ಮಾತ್ರ. ಇದರ ಪೂರ್ವಕ್ಕೆ ಇಡಮ್ ಪರ್ವತ; ಪಶ್ಚಿಮ-–ಉತ್ತರಕ್ಕೆ ನೆಗೆವ್ ಪರ್ವತ ಶ್ರೇಣಿ ವ್ಯಾಪಿಸಿದೆ. ಮಳೆ ಬಂದಾಗ ಆಚೀಚಿನ ಪರ್ವತಗಳಿಂದ ಕೆಳಕ್ಕೆ ಹರಿದು ಸುಮಾರು ೫೦ ಕಿ.ಮೀ ಕ್ರಮಿಸಿ ಬರುವ ‘ನೆಕರಾಟ್’ ನದಿಯ ನೀರು, ಮುಂದೆ ಸಮುದ್ರ ಸೇರದಂತೆ ‘ದಿಗ್ಬಂಧನ’ ಹಾಕಿ ಇಂಗುವಂತೆ ಮಾಡಲಾಗುತ್ತದೆ. ಅಲ್ಲಿಂದ ಸುಮಾರು ೫೦ ಕೊಳವೆಬಾವಿಗಳ ಮೂಲಕ ಹೊರತೆಗೆದು ಈ ಭಾಗದ ಹಳ್ಳಿ- ಪಟ್ಟಣಗಳಿಗೆ ಹಾಗೂ ಉದ್ಯಮಗಳಿಗೆ ಪೂರೈಸಲಾಗುತ್ತದೆ.
ಹಗಲು ಹೊತ್ತಿನಲ್ಲಿ ಕೊಳವೆಬಾವಿಗಳು ಜನತೆ, ಉದ್ಯಮಗಳಿಗೆ ನೀರು ಪೂರೈಸಿದರೆ ರಾತ್ರಿ ಸಮಯದಲ್ಲಿ ಜಲಾಶಯಕ್ಕೆ ಪಂಪ್ ಮಾಡುತ್ತವೆ. ಇಲ್ಲಿಂದ ಅಗತ್ಯವಿದ್ದಾಗಲೆಲ್ಲ ಕೃಷಿಗೆ ನೀಡಲಾಗುತ್ತದೆ. ‘ಭಾರತದಂತೆ ನಮ್ಮಲ್ಲಿ ನದಿ ದೊಡ್ಡ ಪ್ರಮಾಣದಲ್ಲಿ ಹರಿಯುವುದಿಲ್ಲ. ಹೀಗಾಗಿ ಅದರ ಹರಿವಿನ ಹಾದಿಯಲ್ಲೇ ಹಿಡಿದಿಟ್ಟುಕೊಳ್ಳಬೇಕು. ಅದಕ್ಕಾಗಿ ಇಂಥ ಐದು ವಿಭಿನ್ನ ಅಣೆಕಟ್ಟು ಕಟ್ಟಿಕೊಂಡಿದ್ದೇವೆ’ ಎಂದು ಶಮಿ ಬರ್ಕಾನ್ ವಿವರಿಸುತ್ತಾರೆ.
ಮೊದಲು ಈ ತಾಣದಲ್ಲಿ ಸಣ್ಣ ಕೆರೆಯೊಂದಿತ್ತು. ಇಲ್ಲೇ ‘ಶೈಜಾಫ್’ ಅಣೆಕಟ್ಟು ನಿರ್ಮಿಸಲು ನಿರ್ಧರಿಸ­ಲಾ­ಯಿತು. ನಿರ್ಮಾಣ ಕಾಮಗಾರಿಯನ್ನು ಇಸ್ರೇಲಿನ ಮೆಕೊರೊ ವಾಟರ್ ಕಂಪೆನಿ ವಹಿಸಿಕೊಂಡು, ಬರೀ ಒಂದೇ ವರ್ಷದಲ್ಲಿ (೨೦೦೫) ಮುಗಿಸಿದ್ದೊಂದು ವಿಶೇಷ. ಸುಮಾರು ೧೧.೫ ಮೀಟರ್ ಆಳದವರೆಗೆ ಅಗೆದ ಮಣ್ಣಿನ ಪ್ರಮಾಣ ೩.೨ ಲಕ್ಷ ಘನ ಮೀಟರ್‌ನಷ್ಟಿದೆ. ಇದನ್ನು ಪಕ್ಕದಲ್ಲೇ ಪೇರಿಸಲಾಗಿದೆ.
ಒಟ್ಟು ನಾಲ್ಕು ಎಕರೆ ವಿಸ್ತಾರದ ಈ ಅಣೆಕಟ್ಟೆ ಸಂಗ್ರಹ ಸಾಮರ್ಥ್ಯ ೧೫ ಕೋಟಿ ಲಿೀಟರ್. ತಲಾ ಮೂರೂವರೆ ಮೀಟರ್ ಎತ್ತರದ ಮೂರು ಟ್ಯಾಂಕುಗಳನ್ನು ಒಂದರ ಮೇಲೊಂದು ಜೋಡಿಸಿ ಇಟ್ಟಂತೆ ಈ ಅಣೆಕಟ್ಟು ರೂಪುಗೊಂಡಿದೆ. ತೀರಾ ಕೆಳಗಿನ ಟ್ಯಾಂಕ್‌ನ ತಳಭಾಗ ಯಾವುದೇ ಕಾರಣಕ್ಕೂ ಸೋರದಂತೆ ನಿರ್ಮಿಸಲಾಗಿದೆ. ಆದರೆ ಹೇಗೋ ಏನೋ ಕಣಕಣಗಳಾಗಿ ಜಿನುಗುವ ನೀರು, ಟ್ಯಾಂಕಿನ ತಳದಿಂದ ನೆಲದತ್ತ ಸೋರಿಕೆಯಾಗಿ ಬಿಡುತ್ತದೆ. ‘ಅದನ್ನೂ ಬಿಡುವುದಿಲ್ಲ ನಾವು. ಹೀಗೆ ಜಿನುಗಿ ಪುಟ್ಟ ತೊಟ್ಟಿಯಲ್ಲಿ ಸಂಗ್ರಹವಾಗುವ ನೀರು ಮತ್ತೆ ಮೇಲಕ್ಕೆ ಟ್ಯಾಂಕಿಗೆ ಬಂದು ಸೇರುವಂತೆ ಮಾಡಿದ್ದೇವೆ’ ಎಂದು ‘ಅರವಾ ಒಳಚರಂಡಿ ವಿಭಾಗ’ದ ನಿರ್ದೇಶಕಿ ಅಮಿ ಶಸೆಮ್ ಹೇಳುತ್ತಾರೆ.
ಬಿಸಿಲಿಗೆ ನೀರು ಆವಿಯಾಗದಂತೆ ಇಡೀ ಅಣೆಕಟ್ಟೆಗೆ ಹೊದಿಕೆ ಹಾಕುವುದು ಇನ್ನೊಂದು ಕುತೂಹಲದ ಅಂಶ. ಒಂದೂವರೆ ಮಿಲಿಮೀಟರ್‌ ದಪ್ಪದ ಪಾಲಿಪ್ರೊಪಿಲೀನ್- ಪದಾರ್ಥದಿಂದ ತಯಾರಿಸಿದ ಟಾರ್ಪಾಲಿನ್ ಹೊದಿಕೆಯನ್ನು ಸದಾ ನೀರಿನ ಮೇಲೆ ಹಾಕಲಾಗುತ್ತದೆ. ದೂಳು, ಕಸ–ಕಡ್ಡಿ ಬೀಳದಂತೆ ತಡೆಯುವ ಈ ಹೊದಿಕೆ, ಕನಿಷ್ಠ ಪ್ರಮಾಣದ ನೀರು ಕೂಡ ಆವಿಯಾಗದಂತೆ ನೋಡಿಕೊಳ್ಳುತ್ತದೆ.
‘ನಾಲ್ಕು ವರ್ಷಗಳಿಂದ ಬಳಸುತ್ತಿದ್ದೇವೆ. ಈ ಕವಚ ಎಷ್ಟು ಬಲಿಷ್ಟವೆಂದರೆ... ಇತ್ತ ಕಡೆ ಬನ್ನಿ’ ಎನ್ನುತ್ತ ಅಮಿ ಶಸೆಮ್ ಎಲ್ಲರನ್ನೂ ಅದರ ಮೇಲೆ ಕರೆದೊಯ್ದರು. ಹೊದಿಕೆ ಒಂದಷ್ಟೂ ಅಲ್ಲಾಡಲಿಲ್ಲ! ಇಲ್ಲಿ ಸಂಗ್ರಹವಾಗುವ ನೀರನ್ನು ಮಣ್ಣಿನ ದಿಬ್ಬದ ಮೇಲಿರುವ (೭೦ ಮೀಟರ್ ಎತ್ತರದಲ್ಲಿ) ಟ್ಯಾಂಕಿಗೆ ಕಳಿಸಲಾಗುತ್ತದೆ. ಅಲ್ಲಿಂದ ಕೃಷಿ ಜಮೀನುಗಳಿಗೆ ವಿತರಣೆ ಮಾಡಲಾಗು­ತ್ತದೆ. ಚೆನ್ನಾಗಿ (ಅಂದರೆ ೩ ಸೆಂ.ಮೀ) ಮಳೆ ಸುರಿದು, ಸರಿಯಾಗಿ ಹರಿದರೆ ಈ ನದಿ ಆಳ ಒಂದೆರಡು ಅಡಿಗಿಂತ ಹೆಚ್ಚಿರುವುದಿಲ್ಲ. ಅದನ್ನೇ ಪ್ರವಾಹ ಎಂಬುದಾಗಿ ಪರಿಗಣಿಸಲಾಗುತ್ತದೆ! ಈ ಪ್ರವಾಹವನ್ನು ಹಿಡಿದಿಟ್ಟುಕೊಳ್ಳುವ ಅಣೆಕಟ್ಟು ಇದು!
ಈ ಡ್ಯಾಂನಲ್ಲಿ ಸಂಗ್ರಹವಾಗುವ ನೀರು ಇಂಗುವಂತಿಲ್ಲ; ಆವಿಯಾಗಲು ಕೂಡ ಬಿಡುವುದಿಲ್ಲ. ಯಾಕೆಂದರೆ ಹನಿ ನೀರಿಗೂ ಇಲ್ಲಿ ಬೆಲೆಯಿದೆ.
–ಲೇಖಕರು ಇಸ್ರೇಲ್‌ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿದ್ದರು. ಅಲ್ಲಿಯ ಅನುಭವದ ಮೂರನೇ ಕಂತು ಇದು.
ಮುಂದಿನ ವಾರ: ಹನಿ ಹನಿ ನೀರ್ ಕಹಾನಿ!

ಆನಂದತೀರ್ಥ ಪ್ಯಾಟಿ 
ಕೃಪೆ:ಪ್ರಜಾವಾಣಿ 

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

ಗುಬ್ಬಿ ತೋಟದಪ್ಪರವರು ಯಾರು? ಅವರ ಸಾಧನೆಗಳೇನು?