ಕುರಿಯನ್


ಕೃಷಿಯಲ್ಲಿ ಹೆಚ್ಚು ಲಾಭವಿಲ್ಲ ಅನ್ನೋದು ಹಲವು ರೈತರ ಅಳಲು. ಆದರೆ, ಬರೀ ಮಳೆ, ಬೆಳೆ ನೆಚ್ಚಿಕೊಳ್ಳದೆ ಅದರ ಜತೆ ಉಪಕಸುಬು ಕೈಗೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅದಕ್ಕೆ ತಾಜಾ ನಿದರ್ಶನವೇ ಕುರಿ ಕೆಂಪಣ್ಣ.

1978ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಆನೂರಿನ ರೈತ ಸಣ್ಣ ಕೆಂಪಣ್ಣಗೆ ಇದ್ದದ್ದು 2 ಎಕರೆ ತುಂಡು ಜಮೀನು. ಬರೀ ಮಳೆ ನೆಚ್ಚಿ ಬೇಸಾಯ ಮಾಡಿದರೆ ಬದುಕಲು ಫಜೀತಿ ಅನುಭವಿಸಬೇಕಾಗುತ್ತದೆ ಎಂಬುದನ್ನು ಅವರು ಆಗಲೇ ಅರಿತಿದ್ದರು. ಏನು ಮಾಡಬೇಕು ಎಂಬ ಚಿಂತೆ ಅವರ ಮನವನ್ನು ಗುಂಗಿ ಹುಳುವಿನಂತೆ ಕೊರೆಯತೊಡಗಿತ್ತು. ಕಡೆಗೆ ತಾನೇಕೆ ಕುರಿ ಸಾಕಬಾರದು ಎಂದು ಯೋಚಿಸಿದರು.

ತಡಮಾಡಲಿಲ್ಲ. 'ಕಾರಿಡಲ್‌' ಎಂಬ ವಿದೇಶಿ ತಳಿಯ ಕುರಿಯೊಂದನ್ನು ಕೊಂಡರು. ಕ್ರಮೇಣ ಕುರಿ ಸಾಕಣೆ ಸಾಕಷ್ಟು ಪಾಠ ಕಲಿಸತೊಡಗಿತು. ಆ ಕ್ಷೇತ್ರದ ಒಂದೊಂದೇ ಪೆಟ್ಟುಗಳನ್ನು ನುಂಗತೊಡಗಿದರು. ಆರಂಭದಲ್ಲಿ ಒಂದು ಕುರಿ ಇದ್ದದ್ದು ಮೆಲ್ಲನೆ ಎರಡಾಯಿತು, ಕೆಲವರ್ಷಗಳಲ್ಲಿ ಹತ್ತಾಯಿತು. ಹಲವು ವರ್ಷ ಕಳೆದಾಗ ನೂರರ ಗಡಿ ದಾಟಿತು. ನಿಧಾನಕ್ಕೆ ಇವರ ಕುರಿ ಸಾಕಣೆ ಸುದ್ದಿ ಸುತ್ತಮುತ್ತಲಿನ ಹಳ್ಳಿಗೂ ಹಬ್ಬಿತು. ಜನ ಇವರನ್ನು ಪ್ರೀತಿಯಿಂದ 'ಕುರಿ ಕೆಂಪಣ್ಣ' ಅಂತಲೇ ಕರೆಯತೊಡಗಿದರು.

1987ರ ಹೊತ್ತಿಗೆ ಅಮೆರಿಕದಿಂದ ಭಾರತಕ್ಕೆ ಬಂದಿದ್ದ ರ್ಯಾಂಬುಲೆಟ್ ತಳಿಯ ಕುರಿ ಕೊಂಡರು. ಇದು ಅವರಿಗೆ ಭರ್ಜರಿ ಲಾಭ ತಂದುಕೊಟ್ಟಿತು. ಈಗ ಅವರ ಬಳಿ ಸಾವಿರಕ್ಕೂ ಅಧಿಕ ಕುರಿಗಳಿವೆ. ಆ ಪೈಕಿ 600 ಮರಿ ಹಾಕುವ ಸಾಮರ್ಥ್ಯ ಹೊಂದಿವೆ. 100 ಟಗರುಗಳಿವೆ. 300 ಮರಿಗಳು ಅಂದರೆ ಮೂರರಿಂದ ಆರು ತಿಂಗಳಿನ ಒಳಗಿನವು ಇವೆ.

ಆಹಾರ ಹೇಗೆ?

ಕುರಿಗಳಿಗೆ ಎರಡು ಹೊತ್ತು ಆಹಾರ, ನೀರು ಕೊಡಬೇಕು. ಮುಸುಕಿನ ಜೋಳ, ರಾಗಿ, ಬತ್ತ ಸೇರಿದಂತೆ ವಿವಿಧ ಒಣ ಮತ್ತು ಹಸಿ ಹುಲ್ಲು, ಹಿಪ್ಪು ನೇರಳೆ ಸೊಪ್ಪನ್ನು ಆಹಾರವಾಗಿ ನೀಡುತ್ತಾರೆ. ದಿನಕ್ಕೆ ಒಣಮೇವಾದರೆ ಎರಡೂವರೆ ಕೆಜಿಯಷ್ಟು ನೀಡಬೇಕು. ಹಸಿ ಮೇವಾದರೆ 4 ಕೆಜಿ. ಹೆಚ್ಚು ಆಹಾರ ಕೊಟ್ಟಂತೆ ಕುರಿಯ ತೂಕ ಹೆಚ್ಚುತ್ತದೆ.

ರ್ಯಾಂಬುಲೆಟ್ ಕುರಿಗಳನ್ನು ಈ ರೀತಿ ಕೂಡಿ ಹಾಕಿ ಮೇಯಿಸಬೇಕೆಂದೇನಿಲ್ಲ. ಅವುಗಳನ್ನು ಅಲೆದಾಡಿಸಿ ಮೇಯಿಸಬಹುದು. ಚೆನ್ನಾಗಿ ಮೇಯಿಸಿದರೆ 2 ವರ್ಷಕ್ಕೆ 3 ಬಾರಿ ಮರಿ ಹಾಕುತ್ತವೆ. ಅಲ್ಲದೆ, ಆ ಕುರಿಗಳು ಭಾರತೀಯ ಹವಾಮಾನಕ್ಕೂ ಹೊಂದಿಕೊಳ್ಳುತ್ತವೆ ಎಂಬುದಕ್ಕೆ ಸಣ್ಣ ಕೆಂಪಣ್ಣ ಅವರೇ ಸಾಕ್ಷಿ.

ಮೇವು ಬೆಳೆಯುವ ವಿಧ

ಕುರಿಗಳಿಗೆ ಮೇವು ಒದಗಿಸಲು 12 ಎಕರೆ ಪ್ರದೇಶದಲ್ಲಿ ವರ್ಷಕ್ಕೆ ಮೂರು ಬಾರಿ ಮೆಕ್ಕೆಜೋಳ ಬೆಳೆಯುತ್ತಾರೆ. ಇದನ್ನು ತೆನೆಸಹಿತ ಕುರಿಗಳಿಗೆ ಆಹಾರವಾಗಿ ಬಳಸುತ್ತಾರೆ. ಇದಕ್ಕಾಗಿ ಮೇವು ಕಟಾವು ಮಾಡುವ ಯಂತ್ರವಿದೆ. ಇನ್ನು 30 ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯುತ್ತಾರೆ. ಇದನ್ನು ತೆನೆಸಹಿತ ಆಹಾರವಾಗಿ ಕುರಿಗಳಿಗೆ ನೀಡುತ್ತಾರೆ.

ವ್ಯತ್ಯಾಸ ಉಂಟು

ಸ್ಥಳೀಯ ಮತ್ತು ರ್ಯಾಂಬುಲೆಟ್ ಕುರಿ ಸಾಕುವುದರಿಂದ ಲಾಭದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಸ್ಥಳೀಯ ಕುರಿ ದಿನಕ್ಕೆ ಸರಾಸರಿ 100 ಗ್ರಾಂ ಬೆಳೆದರೆ ರ್ಯಾಂಬುಲೆಟ್ ಕುರಿ ಇದರ ದುಪ್ಪಟ್ಟು ಬೆಳೆಯುತ್ತದೆ. ಹೀಗಾಗಿ ಸ್ಥಳೀಯ ಕುರಿಗೆ ಹೋಲಿಸಿದರೆ ದುಪ್ಪಟ್ಟು ಲಾಭ ಗಿಟ್ಟಿಸಬಹುದು ಎಂದು ಹೇಳುತ್ತಾರೆ.

ಬೃಹತ್ ಶೆಡ್

ಇಷ್ಟೊಂದು ಬೃಹತ್ ಪ್ರಮಾಣದ ಕುರಿಗಳಿಗೆ ಅನುಕೂಲವಾಗುವಂತೆ ದೊಡ್ಡ ಶೆಡ್ ನಿರ್ಮಿಸಿದ್ದಾರೆ. ಗಾಳಿ, ಬೆಳಕು ಸಮರ್ಪಕವಾಗಿ ಬರುವ ವ್ಯವಸ್ಥೆ ಇದೆ. ಕುರಿಗಳ ನಿರ್ವಹಣೆಗಾಗಿ ನಿತ್ಯ 8 ಆಳುಗಳು ಕೆಲಸ ಮಾಡುತ್ತಾರೆ. ಕುರಿಗಳಿಗೆ ಆಹಾರ ಕೊಡುವುದು, ನೀರು ಕುಡಿಸುವುದು, ಆರೈಕೆ ಮಾಡುವುದು ಅವರ ನಿತ್ಯದ ಕಾಯಕ. ಸಣ್ಣ ಕೆಂಪಣ್ಣ ಅವರ ಅನುಭವ ಕೇಳಲು ಮೊ. 9449730563 ಸಂಪರ್ಕಿಸಬಹುದು.

ಮಾಂಸ ಉತ್ಪಾದನೆ ಯೋಜನೆ

ಕುರಿ ಸಾಕಣೆಯಲ್ಲಿ ಭರ್ಜರಿ ಯಶಸ್ಸು ಗಳಿಸಿರುವ ಕುರಿ ಕೆಂಪಣ್ಣ ಅವರದು ಭವಿಷ್ಯದಲ್ಲಿ ಬಹುದೊಡ್ಡ ಯೋಜನೆ. ಅದುವೇ ಮಾಂಸ ಉತ್ಪಾದನೆ. ಒಂದೂವರೆ ಕೋಟಿ ರು. ವೆಚ್ಚದಲ್ಲಿ ಕುರಿ ಮಾಂಸ ತಯಾರಿಸುವ ಯೋಜನೆ ಇದೆ. ಹೊರಗಡೆಯಿಂದ ಕುರಿಗಳನ್ನು ಕೊಂಡು ಅವುಗಳಿಂದ ಮಾಂಸ ಉತ್ಪಾದನೆ ಮಾಡುವ ಯೋಜನೆಯಿದು. ಒಂದು ಶಿಫ್ಟ್(8 ಗಂಟೆ ಅವಧಿ)ನಲ್ಲಿ ನೂರು ಕುರಿಗಳ ಮಾಂಸ ಉತ್ಪಾದಿಸುವ ಗುರಿ ಹೊಂದಿದ್ದಾರೆ. ಇದು ಕೈಹಿಡಿದರೆ ಇದನ್ನು ಮತ್ತಷ್ಟು ವಿಸ್ತಾರಗೊಳಿಸುವ ಇರಾದೆ ಹೊಂದಿದ್ದಾರೆ. ಮೂರ್ನಾಲ್ಕು ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳುತ್ತಾರೆ.

ಲಾಭ ಹೇಗೆ?

ಸಾಮಾನ್ಯವಾಗಿ ಕುರಿಯನ್ನು ಮೂರು ಉದ್ದೇಶಗಳಿಗಾಗಿ ಸಾಕುತ್ತಾರೆ-  ಮಾಂಸ, ಉಣ್ಣೆ ಮತ್ತು ಗೊಬ್ಬರ. ಕೆಜಿಗೆ 350ರಂತೆ ಮಾಂಸ ಮಾರಲಾಗುತ್ತದೆ. ಕುರಿ ಗೊಬ್ಬರಕ್ಕೆ ಭಾರಿ ಬೇಡಿಕೆ. ಸಾವಿರ ಕುರಿಗಳಿಂದ ಪ್ರತಿವರ್ಷ 120 ಟ್ರ್ಯಾಕ್ಟರ್ ಗೊಬ್ಬರ ಉತ್ಪಾದನೆಯಾಗುತ್ತದೆ. ಒಂದು ಟ್ರ್ಯಾಕ್ಟರ್ ಗೊಬ್ಬರಕ್ಕೆ (1ಟನ್) 4 ಸಾವಿರದಂತೆ ಮಾರುತ್ತಾರೆ. ಒಂದು ಕುರಿಯಿಂದ ವರ್ಷಕ್ಕೆ ಎರಡರಿಂದ ಎರಡೂವರೆ ಕೆಜಿ ಉಣ್ಣೆ ಉತ್ಪಾದನೆಯಾಗುತ್ತದೆ. ಪ್ರತಿ ಕೆಜಿಗೆ 50ರಂತೆ ಮಾರುತ್ತಾರೆ. ಕುರಿ ನಿರ್ವಹಣೆಗೆ ಎಲ್ಲ ಖರ್ಚನ್ನು ಕಳೆದು ಕನಿಷ್ಠ ಶೇ.50ರಷ್ಟು ಲಾಭ ಬರುತ್ತದೆ.

ರೋಗ ಬರುತ್ತೆ

ಇತರ ಕುರಿಗಳಂತೆಯೇ ರ್ಯಾಂಬುಲೆಟ್ ಕುರಿಗಳಿಗೂ ಎಂಟ್ರೋಟಾಕ್ಸಿನಿಯಾ, ಗಂಟಲುಬೇನೆ, ಈಟಿ ರೋಗ, ಹೊಟ್ಟೆಬಾಕ ಕಾಯಿಲೆ, ಸಿಡುಬು, ನೀಲಿ ನಾಲಿಗೆ, ಕಾಲು ಬಾಯಿ ಜ್ವರ, ಕ್ಲೆಮಿಡಿಯಾಸಿಸ್, ಮೇಕ್ರೋಪ್ಲಾಸ್ಮಾ ಮುಂತಾದ ರೋಗಗಳು ಬರುತ್ತವೆ. ಈ ಕೆಲವು ಕಾಯಿಲೆಗಳಿಗೆ ರಾಜ್ಯದಲ್ಲಿ ಔಷಧವೇ ಲಭ್ಯವಿಲ್ಲ. ಇನ್ನು ಕೆಲವು ಕೆಲವು ಕಾಯಿಲೆಗಳಿಗೆ ಕೃಷಿ ವಿವಿಗಳು ಉಚಿತವಾಗಿ ಔಷಧ ಪೂರೈಸುತ್ತವೆ. ರೋಗಗಳಿಗೆ ಔಷಧೋಪಚಾರವನ್ನು ಕೆಂಪಣ್ಣ ಅವರೇ ನಿರ್ವಹಿಸುತ್ತಾರೆ.

ಶೇ.50 ಲಾಭ

ಕುರಿಗಳ ನಿರ್ವಹಣೆಗಾಗಿಯೇ ಶೇ.50ರಷ್ಟು ಖರ್ಚು ತಗಲುತ್ತದೆ. ಉಳಿದ ಶೇ.50 ನಿವ್ವಳ ಲಾಭ. ರೋಗ- ರುಜಿನ ತಗಲದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

- ಸಣ್ಣ ಕೆಂಪಣ್ಣ, ಕುರಿ ಸಾಕಣೆದಾರ

1000

ಒಟ್ಟು ಕುರಿಗಳ ಸಂಖ್ಯೆ

1000ಟನ್

ವರ್ಷಕ್ಕೆ ಕುರಿಗಳಿಗೆ ಕೊಡುವ ಮೇವಿನ ಪ್ರಮಾಣ

35ಲಕ್ಷ

ವಾರ್ಷಿಕ ಆದಾಯ

15ಲಕ್ಷ

ವಾರ್ಷಿಕ ಖರ್ಚು

20ಲಕ್ಷ

ವಾರ್ಷಿಕ ನಿವ್ವಳ

ಆದಾಯ



-ಮಹೇಶ್ ಅರ
ಳಿ

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

ಗುಬ್ಬಿ ತೋಟದಪ್ಪರವರು ಯಾರು? ಅವರ ಸಾಧನೆಗಳೇನು?