ಭೂರಮೆಯ ಸ್ವರ್ಗ ಚಾರ್ಮಾಡಿ ಘಾಟಿ

  • ಇದು ಪ್ರವಾಸಿಗರ ನಿತ್ಯ ಸ್ವರ್ಗ ಚಾರ್ಮಾಡಿಯ ಸೊಬಗು.

    • ಗುರು ಮುಂಡಾಜೆ, ಚಿತ್ರ: ದಿವಾಕರ ಪ್ರಭು, ಬೆಳ್ತಂಗಡಿ | Jul 27, 2013
      ಬೆಳ್ತಂಗಡಿ: ಎಡೆಬಿಡದೆ ಧೋ ಎಂದು ಸುರಿಯುವ ಧಾರಾಕಾರ ಮಳೆ. ಚುಮು ಚುಮು ಚಳಿಯೊಂದಿಗೆ ತಣ್ಣನೆಯ ವಾತಾವರಣ. ಕಲ್ಲು ಬಂಡೆಗಳಿಗೆ ಮುತ್ತಿಕ್ಕುವ ಮಂಜು ಇನ್ನೊಂದೆಡೆ. ಬೃಹದಾಕಾರದ ಮರಗಳ ದಟ್ಟ ಕಾನನದ ಮಧ್ಯೆ ಧುಂಬಿಗಳ ಝೇಂಕಾರದೊಂದಿಗೆ ಆಳವಾದ ಕಣಿವೆ - ಪ್ರಪಾತಗಳ ನಡುವೆ ಝುಳು ಝುಳು ನಿನಾದದಿಂದ ಹಕ್ಕಿಗಳ ಚಿಲಿ ಪಿಲಿ ಕಲರವದೊಂದಿಗೆ ಹರಿಯುತ್ತಿರುವ ಜಲಪಾತಗಳು - ತೊರೆಗಳು. ಹಸಿರನ್ನು ಹೊದ್ದು ಮಲಗಿರುವಂತೆ ಕಾಣುವ ಎತ್ತರದ ಬೆಟ್ಟ ಗುಡ್ಡಗಳು. ಇದು ಪ್ರವಾಸಿಗರ ನಿತ್ಯ ಸ್ವರ್ಗ ಚಾರ್ಮಾಡಿಯ ಸೊಬಗು. ಮಳೆಗಾಲ ಆರಂಭವಾದೊಡನೆ ಪ್ರವಾಸಿಗರಿಗೆ ಪಕ್ಕನೆ ನೆನಪಿಗೆ ಬರುವ ಪ್ರಕೃತಿ ನಿರ್ಮಿತ ಸ್ವರ್ಗ ಎಂದೇ ಕರೆಯಬಹುದಾದ ಚಾರ್ಮಾಡಿಯು ಯುವ ಪೀಳಿಗೆಯ ನೆಚ್ಚಿನ ಪಿಕ್ನಿಕ್‌ ತಾಣವೂ ಹೌದು.

      ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದಿಕೊಂಡಿದ್ದು, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಚಾರ್ಮಾಡಿ ಮಳೆಗಾಲದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಪಾಯಕಾರಿ ತಿರುವುಗಳನ್ನು ಹೊಂದಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಿ ಮುಂದೆ ಸಾಗಿದಂತೆ ಸೋಮನ ಕಾಡು, ಅಣ್ಣಪ್ಪ ಬೆಟ್ಟ ಸಮೀಪ ಹತ್ತಾರು ಜಲಪಾತಗ‌ಳು ಎತ್ತರದ ಗುಡ್ಡದಿಂದ ಇಳಿಯುತ್ತಿರುವ ದೃಶ್ಯ ಕಣ್ಣಿಗೆ ಹಬ್ಬ. ಮಾರ್ಗದಲ್ಲಿ ಸಂಚರಿಸುವ ನೂರಾರು ಪ್ರವಾಸಿ ವಾಹನದವರು ಜಲಪಾತಗಳ ಸಮೀಪ ನಿಲ್ಲಿಸಿ ನೀರಾಟದಲ್ಲಿ ತೊಡಗಿಕೊಂಡಿರುತ್ತಾರೆ. ಸರಕಾರಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಕೂಡಾ ಒಮ್ಮೆ ಕತ್ತೆತ್ತಿ ಚಾರ್ಮಾಡಿಯ ವಿಹಂಗಮ ನೋಟವನ್ನು ಸವಿಯಲು ಮರೆಯುವುದಿಲ್ಲ.


      ದ. ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದಿಂದ ಆರಂಭವಾಗುವ ಘಾಟಿ ಪ್ರದೇಶ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಕೊನೆಗೊಳ್ಳುತ್ತದೆ. ಘಾಟಿ ಪ್ರದೇಶದಲ್ಲಿ ಗುಡ್ಡದ ಮೇಲೆ ಮಲಯ ಮಾರುತ ಎಂಬ ಅತಿಥಿ ಗೃಹವಿದ್ದು, ಈ ಅತಿಥಿಗೃಹದ ಬಳಿಯಿಂದ ಚಾರ್ಮಾಡಿ ಘಾಟಿ ಪ್ರದೇಶದ ಸಂಪೂರ್ಣ ಚಿತ್ರಣವನ್ನೂ ನೋಡಬಹುದಾಗಿದೆ. ಪ್ರವಾಸಿಗರು ಪ್ರಕೃತಿ ವೀಕ್ಷಣೆಯಲ್ಲಿಯೇ ಮೈ ಮರೆಯದೆ ಸ್ವಲ್ಪ ಜಾಗರೂಕತೆಯಲ್ಲಿರುವುದು ಮುಖ್ಯ. ಪರಿಸರವನ್ನು ಸ್ವತ್ಛವಾಗಿಡುವುದು ಅತೀ ಮುಖ್ಯ.

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

Contribution of Shahu Chhatrapati Maharaj