ಡೀಮ್ಡ್‌ ವಿಶ್ವವಿದ್ಯಾಲಯಗಳ ಹಗರಣ ಸೀಟು ಕಬಳಿಸಿದ ಆಡಳಿತ ಮಂಡಸೀಟು ಕಬಳಿಸಿದ ಆಡಳಿತ ಮಂಡಳಿ


ಬೆಂಗಳೂರು: ರಾಜ್ಯದ 9 ಡೀಮ್ಡ್ ವೈದ್ಯ­ಕೀಯ ವಿಶ್ವವಿದ್ಯಾಲಯಗಳು ಒಟ್ಟು 1042 ಸೀಟುಗಳನ್ನು ಸರ್ಕಾರಕ್ಕೆ ನೀಡದೇ ಇರುವ ಪ್ರಕರಣ ಬೆಳಕಿಗೆ ಬಂದಿದೆ.
ಕಾಲೇಜು ಆರಂಭಿಸಲು ನಿರಾ­ಕ್ಷೇಪಣಾ ಪತ್ರ ನೀಡುವಾಗ ಶೇ 25ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾಗೆ ಮೀಸ­ಲಿಡಬೇಕು ಎಂಬ ಷರತ್ತು ವಿಧಿಸ­ಲಾಗಿದೆ.
ಸರ್ಕಾರದೊಂದಿಗೆ ಒಪ್ಪಂದ ಮಾಡಿ­ಕೊಳ್ಳು­ವಾಗಲೂ ಇದನ್ನು ಸ್ಪಷ್ಟ­ವಾಗಿ ಹೇಳಲಾಗಿದೆ. 2010ರ ಜೂನ್‌ 26ರಂದು ಆದೇಶ ಹೊರಡಿಸಲಾಗಿದೆ.   ಇಷ್ಟಾದರೂ ಈ ಡೀಮ್ಡ್   ವಿಶ್ವ­ವಿದ್ಯಾಲಯಗಳು ಆದೇಶವನ್ನು ಪಾಲಿಸಿಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಸರ್ಕಾರಿ ಕೋಟಾದಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗ­ಬೇಕಾದ ಸೀಟುಗಳನ್ನು ಆಡಳಿತ ಮಂಡಳಿ ಕೋಟಾ ಮೂಲಕ ಕೋಟಿಗಟ್ಟಲೆ ರೂಪಾ­ಯಿಗೆ ಮಾರಾಟ ಮಾಡಿರು­ವುದು ಹಲವು ವರ್ಷಗಳಿಂದ ನಡೆದು ಬಂದಿದೆ ಎಂದು ಅವರು ವಿವರಿಸಿದರು.
ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು ಅಲ್ಪಸಂಖ್ಯಾತರಿಗೆ ಸೀಟುಗಳನ್ನು ನೀಡದೆ ಇರುವ ಪ್ರಕರಣ ಬೆಳಕಿಗೆ ಬಂದ ಬೆನ್ನಿಗೇ, ಡೀಮ್ಡ್‌ ವಿಶ್ವವಿದ್ಯಾಲಯಗಳ ಈ ಅಕ್ರಮ  ಬಯಲಾಗಿದೆ.
ಕೆ.ಎಸ್‌.ಹೆಗ್ಡೆ ಮೆಡಿಕಲ್‌ ಅಕಾಡೆಮಿ, ಯನಪೋಯ, ಜೆಎಸ್ಎಸ್, ಕಸ್ತೂರ­ಬಾ, ನಿಟ್ಟೆ ವಿಶ್ವವಿದ್ಯಾಲಯ ಶೇ 25ರ ಬದಲು ಶೇ 3ರಿಂದ 4ರಷ್ಟು ಸೀಟು­ಗಳನ್ನು ಮಾತ್ರ ನೀಡಿವೆ. 
ಬಿಎಲ್‌ಡಿಇ, ಜೆಎಸ್‌ಎಸ್‌ ವೈದ್ಯ­ಕೀಯ ಕಾಲೇಜು, ದೇವರಾಜ ಅರಸು ವಿಶ್ವವಿದ್ಯಾಲಯ, ಸಿದ್ಧಾರ್ಥ ವೈದ್ಯಕೀಯ ಕಾಲೇಜು ಒಂದು ಸೀಟನ್ನೂ ನೀಡಿಲ್ಲ. ಸರ್ಕಾರಕ್ಕೆ ನೀಡಬೇಕಾದ ಎಲ್ಲ ಸೀಟು­ಗಳನ್ನು ಆಡಳಿತ ಮಂಡಳಿ ಕೋಟಾ ಮೂಲಕ ಭರ್ತಿ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಶೇ 3ರಿಂದ 4ರಷ್ಟು ಸೀಟುಗಳನ್ನು ನೀಡಿರುವ ಕಾಲೇಜುಗಳು ಸಹ ಸರ್ಕಾರಿ ಕೋಟಾ ಸೀಟಿಗೆ, ಸರ್ಕಾರ ನಿಗದಿಪಡಿಸಿ­ರುವುದಕ್ಕಿಂತ ಹೆಚ್ಚಿನ ಶುಲ್ಕ ಪಡೆದಿವೆ. ಅಲ್ಲದೆ ಬೇಡಿಕೆ ಇಲ್ಲದ ಸೀಟುಗಳನ್ನು ನೀಡಲಾಗಿದೆ ಎಂದು ಅವು ಹೇಳಿವೆ.
ನೋಟಿಸ್‌ಗೆ ಕಿಮ್ಮತ್ತಿಲ್ಲ: ಸೀಟು ಬಿಟ್ಟು­ಕೊಡದ ವಿಶ್ವವಿದ್ಯಾಲಯಗಳಿಗೆ ಜನವರಿ, ಫೆಬ್ರುವರಿ ತಿಂಗಳಲ್ಲಿ ಸರ್ಕಾರ ನೋಟಿಸ್‌ ನೀಡಿತ್ತು. 
2014–15ನೇ ಸಾಲಿನಿಂದ ಶೇ 25ರಷ್ಟು ಸೀಟುಗಳನ್ನು ನೀಡಬೇಕು. ಹಿಂದಿನ ವರ್ಷಗಳಲ್ಲಿ ನೀಡದೆ ಇರುವ ಹಿಂಬಾಕಿ ಸೀಟುಗಳನ್ನೂ ಬಿಟ್ಟುಕೊಡ­ಬೇಕು. ಇಲ್ಲದಿದ್ದರೆ  ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು.
ಇದಕ್ಕೆ ಉತ್ತರ ಬಾರದ ಕಾರಣ ವೈದ್ಯ­ಕೀಯ ಶಿಕ್ಷಣ ಸಚಿವ ಡಾ.ಶರಣ­ಪ್ರಕಾಶ ಪಾಟೀಲ ಅವರು ಡೀಮ್ಡ್‌ ವಿಶ್ವವಿದ್ಯಾ­ಲಯಗಳ ರಿಜಿಸ್ಟ್ರಾರ್‌ಗಳ ಸಭೆ ಕರೆ­ದಿದ್ದರು. ಸರ್ಕಾರದ ಆದೇಶವನ್ನು ಕಡ್ಡಾ­ಯವಾಗಿ ಪಾಲಿಸಬೇಕು ಎಂದು ಸೂಚಿಸಿ­ದ್ದರು. ಆದರೆ, ಸ್ಪಷ್ಟ ಉತ್ತರ ನೀಡದ ರಿಜಿಸ್ಟ್ರಾರ್‌ಗಳು, ಈ ವಿಷಯ­ವನ್ನು ಆಡಳಿತ ಮಂಡಳಿಯ ಗಮನಕ್ಕೆ ತರುವು­ದಾಗಿ ತಿಳಿಸಿದರು ಎಂದು ಗೊತ್ತಾಗಿದೆ.
ಎಡವಿದ ಇಲಾಖೆ: ಸೀಟು ಹಂಚಿಕೆ ಪಟ್ಟಿ­ಯನ್ನು ಪ್ರತಿ ವರ್ಷ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಸಿದ್ಧಪಡಿ­ಸುತ್ತದೆ. ಡೀಮ್ಡ್‌ ವಿ.ವಿಗಳು ಶೇ 25ರಷ್ಟು ಸೀಟು­ಗಳನ್ನು ಸರ್ಕಾರಕ್ಕೆ ಬಿಟ್ಟುಕೊಡುವಂತೆ ನೋಡಿಕೊಳ್ಳ­ಬೇಕಾದ ಜವಾಬ್ದಾರಿ ಇಲಾಖೆಯ ಮೇಲಿದೆ.
ಆದರೆ, ಇಲಾಖೆ ಅಧಿಕಾರಿಗಳು ಇತ್ತ ಗಮನವನ್ನೇ ಹರಿಸಿಲ್ಲ. ಒಪ್ಪಂದದ ಪ್ರಕಾರ ಡೀಮ್ಡ್‌ ವಿಶ್ವವಿದ್ಯಾಲಯಗಳು ಸೀಟುಗಳನ್ನು ನೀಡಿರುವ ಬಗ್ಗೆ ಪರಿ­ಶೀಲಿಸಿಲ್ಲ ಎಂದು ಅಧಿಕಾರಿ ಹೇಳಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯ­ದರ್ಶಿ ವಿ.ರಶ್ಮಿ ಅವರು ಈಚೆಗೆ ಅಕ್ರಮ­ಗಳನ್ನು ಪತ್ತೆಹಚ್ಚಿ ಡೀಮ್ಡ್ ವಿ.ವಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿ­ದ್ದರು. ಇದಾದ ನಂತರ ವಿ.ವಿ.ಗಳ ಕಡೆ­ಯಿಂದ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆದಿದೆ ಎಂದು ಗೊತ್ತಾಗಿದೆ.
ಕೃಪೆ:ಪ್ರಜಾವಾಣಿ 

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website