ಚುಕ್ಕಿಗಳಂಥ ಮಿನುಗು ಕತೆಗಳಲ್ಲಿ ಆಗಸದಗಲ ನೀತಿ!
- ವಿಶ್ವೇಶ್ವರ ಭಟ್ ಜೀವನವೆಂಬುದು ನೀವು ಯಾವುದಕ್ಕೆ ಹೆಚ್ಚು ಆದ್ಯತೆ ಕೊಡುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಬಿಸಿಲಿನ ಝಳದೊಂದಿಗೆ ಚುನಾವಣೆಯ ಕಾವೂ ಸೇರಿಕೊಂಡಿದೆ. ರಾಜಕಾರಣಿಗಳೆಲ್ಲ ನಿಮ್ಮ ಮನೆ ಬಾಗಿಲಲ್ಲಿ ಜಮಾಯಿಸಿ ತಮ್ಮ ತಮ್ಮ ಕತೆ ಹೇಳುವ, ಕನಸು ತೋರಿಸುವ ಸಮಯ. ಇವರದ್ದೆಲ್ಲಾ ಕತೆ ಯಾರಿಗೆ ಬೇಕಿದೆ ಎಂಬ ಪ್ರಶ್ನೆ ಥಟ್ಟನೆ ನಿಮ್ಮ ಮನದಲ್ಲಿ ಎದ್ದರೆ ಅದಕ್ಕೆ ನನ್ನ ಅನುಮೋದನೆಯೂ ಇದೆ. ಹಾಗೆಂದೇ ಇಲ್ಲಿ ಬೇರೆಯದೇ ಹರವಿನ ಮೂರು ಕತೆಗಳ ಕೈ ಜಗ್ಗಿದ್ದೇನೆ. -- ಪ್ರಯಾಣಿಕರ ದೋಣಿಯೊಂದು ಬಿರುಗಾಳಿಗೆ ಸಿಲುಕಿ ಛಿದ್ರವಾಯಿತು. ಕೊನೆಯಲ್ಲಿ ಕೇವಲ ಇಬ್ಬರು ಪ್ರಯಾಣಿಕರು ಮಾತ್ರ ಸಮೀಪದಲ್ಲೇ ಇದ್ದ ಚಿಕ್ಕ ದ್ವೀಪವೊಂದರತ್ತ ಈಜಿ ಬದುಕುಳಿದರು. ಅವರಿಬ್ಬರೂ ಮಿತ್ರರೇ! ಮುಂದೇನು ಮಾಡಬೇಕು ಎನ್ನುವುದು ತೋಚದೆ ದೇವರಿಗೆ ಮೊರೆ ಹೋಗುವುದೇ ಕೊನೆಯ ದಾರಿ ಎಂದವರು ನಿಶ್ಚಯಿಸಿದರು. ಆದರೆ ಯಾರ ಪ್ರಾರ್ಥನೆಗೆ ದೇವರು ಬೇಗ ಓಗೊಡುತ್ತಾನೆ ಎಂಬುದನ್ನು ಪರೀಕ್ಷಿಸಲು ಇಬ್ಬರೂ ದ್ವೀಪದ ವಿರುದ್ಧ ದಿಕ್ಕುಗಳಲ್ಲಿ ವಾಸಿಸಬೇಕೆಂದು ನಿರ್ಧರಿಸಿ, ಅದರಂತೆಯೇ ದೂರವಾದರು. ಅವರು ಮೊದಲು ಪ್ರಾರ್ಥಿಸಿದ್ದು ಆಹಾರಕ್ಕಾಗಿ. ಮರುದಿನ ಬೆಳಗ್ಗೆ ಮೊದಲನೇ ವ್ಯಕ್ತಿ ಇದ್ದ ತುಸು ದೂರದಲ್ಲೇ ಹಣ್ಣು ತುಂಬಿದ ಮರವೊಂದು ಬೆಳೆದು ನಿಂತಿತ್ತು. ಆದರೆ...