ಇವಳೂ ನಿರ್ಭಯಾ!
ಪೊನ್ನಂಪೇಟೆಯಿಂದ ಕಾಮಾಟಿಪುರಕ್ಕೆ!
ಹರೆಯದ ಆಟಗಳು ಎಂಥ ದುಃಖದ ದಡಕ್ಕೆ ಕೊಂಡೊಯ್ದು ಬಿಸಾಕುತ್ತದೆ ಎಂಬುದಕ್ಕೆ ಈ ಕಥೆ ಸಾಕ್ಷಿ. ಅವತ್ತು ಮಣ್ಣಲ್ಲಿ ಮಣ್ಣಾದ ಹೆಣ್ಣುಮಗಳು ನೀತಾ, ದೆಹಲಿಯಲ್ಲಿ ಅತ್ಯಾಚಾರಗೊಂಡ 'ನಿರ್ಭಯಾ'ಳನ್ನೂ ಮೀರಿ ನಿಲ್ಲುತ್ತಾಳೆ. ಈ ಶೋಷಣೆಯನ್ನು ಕೊಂದು ಹಾಕಲು ಯಾವ ಪಾಷಣವಿದೆ?
ಅದು ಹಸಿರನ್ನು ಹೊದ್ದು ನಿಂತ ಕೊಡಗು. ಈ ಕಾಫಿ ಕಣಿವೆಯ ಮಡಿಲಲ್ಲಿರುವ ಪೊನ್ನಂಪೇಟೆಯ ಪಕ್ಕದ ಒಂದು ಸಣ್ಣ ಹಳ್ಳಿಯಲ್ಲಿ ಜಯಾಳ ವಾಸ. ವಿವಾಹಿತೆ. ಚಿಕ್ಕ ವಯಸ್ಸಲ್ಲೇ ಅವಳ ಕೊರಳಿಗೆ ತಾಳಿ ಬಿದ್ದಿತ್ತು. ಪತಿರಾಯ ಜಯಾಗೆ ಒಂದು ಮಗು ಕರುಣಿಸಿ ಅದೆಲ್ಲಿ ಪರಾರಿಯಾದನೋ ಗೊತ್ತಿಲ್ಲ! ಹೋದವನು ಇಂದು ಬರಬಹುದು, ನಾಳೆ ಬರಬಹುದು ಎಂದು ಕಾದಿದ್ದೇ ಬಂತು. ಪ್ರಯೋಜನವಾಗಲಿಲ್ಲ. ಹುಟ್ಟಿದ ಮಗುವಿಗೆ 'ನೀತಾ' ಎಂದು ಹೆಸರಿಟ್ಟ ಜಯಾ, ಮಗಳ ಕಣ್ಗಳಲ್ಲಿ ಕನಸಿನ ಹಣತೆ ಹಚ್ಚಿಟ್ಟು, ಅದರ ಬೆಳಕಲ್ಲೇ ದಿನದೂಡತೊಡಗಿದಳು.
ಕಾಫಿ ತೋಟಗಳಲ್ಲಿ ಕೂಲಿ ಮಾಡುವ ಜಯಾ, ತನ್ನ ಸ್ಥಿತಿ ಮಗಳಿಗೆ ಬರೋದು ಬೇಡವೆನ್ನುವುದು ಆಕೆಯಲ್ಲಿ ಕಂಗೊಳಿಸುತ್ತಿದ್ದ ನಿತ್ಯದ ಕಾಳಜಿ. ಹೀಗಾಗಿ, ಮಗಳನ್ನು ಶಾಲೆ ಮುಖಮಾಡಿದಳು. ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲೇ ಮುಗಿಸಿದ ನೀತಾ, ಹೈಸ್ಕೂಲಿಗೆ ಪೊನ್ನಂಪೇಟೆ ಕಡೆಗೆ ನಡೆದಳು. ಕೂಲಿಯ ಅಲ್ಪಸ್ವಲ್ಪ ಹಣದಲ್ಲೇ ನೀತಾಳಿಗೆ ಯಾವುದೇ ಕುಂದು ಬಾರದಂತೆ ನೋಡಿಕೊಳ್ಳುವಲ್ಲಿ ಜಯಾ ಯಶಸ್ವಿಯಾಗಿದ್ದಳು.
ಇವರಿದ್ದ ಕುಗ್ರಾಮದಿಂದ ಪೊನ್ನಂಪೇಟೆಗೆ 10 ಕಿ.ಮೀ. ದೂರ. ಅಲ್ಲಿಗೆ ನಿತ್ಯ ಹೋಗಿ ಬರಲು ಬಸ್ ಬಳಸಬೇಕಾದ ಅನಿವಾರ್ಯತೆ ಇತ್ತು. ಗ್ರಾಮದ ಇತರೆ ಹುಡುಗಿಯರೂ ಪಯಣಿಸುತ್ತಿದ್ದ ಕಾರಣ ಈ ಬಗ್ಗೆ ಜಯಾ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ, ಅದೇ ಬಸ್ಸು ಅವಳ ಬದುಕನ್ನು ಅಂಧಕಾರಕ್ಕೆ ತಳ್ಳುತ್ತದೆ ಎಂಬ ಎಳ್ಳಷ್ಟು ಸುಳಿವೂ ಜಯಾಗೆ ದೊರೆಯಲಿಲ್ಲ.
=
ನೀತಾ ಪೊನ್ನಂಪೇಟೆಗೆ ಹೋಗುತ್ತಿದ್ದ ಖಾಸಗಿ ಬಸ್‌ನಲ್ಲಿ ಕ್ಲೀನರ್ ಆಗಿದ್ದ ಹುಡುಗನ ಹೆಸರು ರಾಜೇಶ. ಅವನಿಗೆ ಹಿಂದೆ ಮುಂದೆ ಯಾರೂ ಇರಲಿಲ್ಲ. ಬಸ್ ಡ್ರೈವರ್ ನೀಡುವ ಪುಡಿಗಾಸೇ ಅವನ ಸ್ಯಾಲರಿ. ಆ ಚಿಲ್ಲರೆ ಕಾಸಿನಲ್ಲಿ ಒಳ್ಳೆಯ ಬಟ್ಟೆ ಹಾಕ್ಕೊಂಡು, ಶಾಲೆಗೆ ಹೋಗುವ ಹುಡುಗಿಯರಿಗೆ ಪೋಸು ಕೊಡುತ್ತಿದ್ದ. ಇಂಥ ದುರುಳನ ತೆಕ್ಕೆಗೆ ಜಾರಲು ನೀತಾಳಿಗೆ ಹೆಚ್ಚು ಕಾಲ ಬೇಕಾಗಲಿಲ್ಲ.
ಕ್ಲೀನರ್ ಜೊತೆಗೆ ಓಡಾಟ, ಮಾತು ಹೆಚ್ಚಾಗುತ್ತಿದೆ ಎಂಬ ಸುಳಿವು ದೊರೆತಿದ್ದರೆ ಬಹುಶಃ ಜಯಾ ಎಚ್ಚರಗೊಳ್ಳುತ್ತಿದ್ದಳೇನೋ? ಆದರೆ ಅದನ್ನವಳಿಗೆ ಹೇಳುವವರೂ ಇರಲಿಲ್ಲ. ಅದೊಂದು ದಿನ ಸ್ಕೂಲಲ್ಲಿ ಶಿಕ್ಷಕರಿಂದ ಜಯಾಳಿಗೆ ಕರೆಯೋಲೆ! ಜಯಾ ಶಾಲೆಗೆ ಹೋದಳು. ಆದರೆ, ಅಲ್ಲಿ ನೀತಾ ಎಂಬ ಎಂಟನೇ ತರಗತಿ ವಿದ್ಯಾರ್ಥಿನಿ ಶಾಲೆಗೆ ಬರದೆ ಗೈರು ಹಾಜರಾದ ಕಾರಣ ಪರೀಕ್ಷೆಗೆ ಕೂರಿಸಲು ಸಾಧ್ಯವಿಲ್ಲ ಎಂದು ಶಿಕ್ಷಕರು ಹೇಳಿದಾಗ ಜಯಾಗೆ ಆಕಾಶ ಕಳಚಿ ತಲೆ ಮೇಲೆ ಬಿದ್ದಂತಾಗಿತ್ತು!
ಒಂದು ದಿನವೂ ತಪ್ಪದೆ ಮನೆಯನ್ನು ಬಿಡುತ್ತಿದ್ದ ಮಗಳು ಶಾಲೆಗೆ ಹೋಗದೆ ಎಲ್ಲಿ ಹೋಗಿದ್ದಳು? ಶಿಕ್ಷಕರ ಕಾಲು ಹಿಡಿದು ಮಗಳ ಭವಿಷ್ಯ ಮಂಕಾಗದಂತೆ ಪರೀಕ್ಷೆಗೆ ಕೂರಿಸಿ ಎಂದು ಬೇಡಿಕೊಂಡಳು. ಜಯಾಳ ಮುಖ ನೋಡಿ ಶಿಕ್ಷಕರೂ ಕರಗಿಬಿಟ್ಟರು. ಮನೆಗೆ ಬಂದ ನಂತರ ಮಗಳನ್ನು ವಿಚಾರಿಸಿದರೆ ಅವಳಿಂದ ಯಾವುದೇ ಉತ್ತರ ಬರಲಿಲ್ಲ. ಕೊನೆಗೆ ಅವಳ ಜೊತೆಯಲ್ಲಿದ್ದ ಹಲವು ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ಹೊರ ಬಂದ ವಿಚಾರ ಜಯಾಳ ನಿದ್ದೆಗೆಡಿಸಿತ್ತು!
=
ಇರುವುದು ಏಕೈಕ ಮಗಳು. ಕ್ಲೀನರ್ ಜೊತೆಗೆ ಆಕೆ ಚಕ್ಕಂದ ಆಡುತ್ತಿದ್ದಾಳೆ ಎಂಬ ದಿಗಿಲಿನ ವಿಚಾರ ಕೇಳಿದ ಕೂಡಲೇ ಜಯಾ ಕಾರ್ಯಪ್ರವೃತ್ತಳಾದಳು. ಮಾರನೇ ದಿನವೇ ಖಾಸಗಿ ಬಸ್ ಬರುವವರೆಗೆ ಕಾದು ಕ್ಲೀನರ್‌ಗೆ ಹಿಗ್ಗಾಮುಗ್ಗಾ ಬೈದಳು. ಚಾಲಕನಿಗೆ ಎಚ್ಚರಿಕೆಯನ್ನೂ ನೀಡಿದಳು. ಇನ್ನು ತನ್ನ ಕೆಲಸ ಮುಗಿಯಿತು, ಮಗಳು ದಾರಿಗೆ ಬರುತ್ತಾಳೆ ಎಂದೇ ಜಯಾ ಭಾವಿಸಿದಳು. ಅದೇ ಅವಳು ಮಾಡಿದ ತಪ್ಪಾ? ಗೊತ್ತಿಲ್ಲ. ಆದರೆ ಅಂದು ಹೋದ ನೀತಾ ಎಂಬ ಹದಿನಾಲ್ಕು ವರ್ಷದ ಹುಡುಗಿ ಮತ್ತೆ ತನ್ನ ತಾಯಿಗೆ ಕಾಣಿಸಿದ್ದು ಮೂರು ವರ್ಷಗಳ ನಂತರ ಅದೂ ಯಾವ ಸ್ಥಿತಿಯಲ್ಲಿ?
ನಡೆಯಲೂ ತಾಣವಿಲ್ಲ, ಮುಖವೆಲ್ಲಾ ಭಯಾನಕವಾಗಿ ಗುರುತು ಹಿಡಿಯಲೂ ಅಸಾಧ್ಯದ ಸ್ಥಿತಿಯಲ್ಲಿ ಮನೆಯ ಮುಂದೆ ಬಂದ ಒಂದು ಹೆಂಗಸು 'ಅಮ್ಮಾ' ಎಂದು ಕರೆದ ಕೂಡಲೇ ಆ ತಾಯಿಯ ಕರುಳು ಚುರಕ್ ಎನ್ನದಿರಲಿಲ್ಲ. 'ಯಾರಮ್ಮಾ ನೀನು, ಯಾರು ಬೇಕು' ಎಂದು ಜಯಾ ಪ್ರಶ್ನಿಸುತ್ತಲೇ 'ನಾನಮ್ಮ ನೀತಾ' ಎಂದು ಅವಳು ಅಳತೊಡಗಿದಳು. ಮೂರು ವರ್ಷಗಳ ಹಿಂದೆ ಗೊಂಬೆಯಂತೆ ಶಾಲೆಗೆ ಹೋಗುತ್ತಿದ್ದ ನೀತಾ ಇಂದು ಕುರೂಪಿಯಾಗಿ, ಕಾಯಿಲೆರೂಪಿಯಾಗಿ ಬಂದಿರುವುದನ್ನು ಕಂಡು ಮಾತೃ ಹೃದಯ ಮರುಗಿತ್ತು.
ನಡೆಯಲಾಗದ ಸ್ಥಿಯಲ್ಲಿದ್ದ ಮಗಳನ್ನು ಅಕ್ಕರೆಯಿಂದ ಮನೆಯೊಳಗೆ ಕರೆದೊಯ್ದು ಉಪಚರಿಸಿದಳು. ಮಗಳು ತಿಂದು ಎಷ್ಟು ಹೊತ್ತಾಯಿತೋ ಎಂದುಕೊಂಡು ಕೂಡಲೇ ಊಟ ಬಡಿಸಿದಳು. ತನ್ನ ಹೊಟ್ಟೆಯಲ್ಲಿ ಮಗಳ ಮೇಲಿದ್ದ ಎಲ್ಲಾ ಕೋಪ ಮಾಯವಾಗಿ ಅನುಕಂಪವಾಗಿ ಪರಿವರ್ತನೆಯಾಗಿತ್ತು. ಏನು ನಡೆಯಿತು, ಇಷ್ಟು ದಿನ ಎಲ್ಲಿದ್ದೆ ಎಂದು ಸಾವಕಾಶವಾಗಿ ಪ್ರಶ್ನಿಸಿದಳು. ಅವಳ ಉತ್ತರ ಕೇಳಿ ತಾಯಿ ಸಂಪೂರ್ಣ ತತ್ತರಿಸಿದಳು.
ಏನಾಯಿತು?
ಬಸ್ ಬಳಿ ಬಂದು ಜಯಾ ಗಲಾಟೆ ಮಾಡಿದ ಕೂಡಲೇ ರಾಜೇಶ ಎಂಬ ಕ್ಲೀನರ್ ಓಡಿ ಹೋಗೋಣ ಎಂದು ನೀತಾಳಿಗೆ ಹೇಳಿದ. ಇದಕ್ಕೆ ತಲೆಯಾಡಿಸಿದ ನೀತಾ ರಾಜೇಶ್ ಜೊತೆ ಬರುವುದಕ್ಕೆ ಒಪ್ಪಿದಳು. ಅದೇ ದಿನ ಅವಳು ಶಾಲೆಗೆ ಹೋಗದೆ ರಾಜೇಶನ ಜೊತೆ ಬೆಂಗಳೂರಿನ ಬಸ್ ಹತ್ತಿದಳು.
ಬೆಂಗಳೂರಿಗೆ ಕರೆ ತಂದ ರಾಜೇಶ ಒಂದು ಬೃಹತ್ ಬಂಗಲೆಗೆ ನೀತಾಳನ್ನು ಕರೆತಂದ. ಅಲ್ಲಿ ಮಧ್ಯ ವಯಸ್ಸಿನ ಹೆಂಗಸೊಬ್ಬಳು ಆತ್ಮೀಯವಾಗಿ ಮಾತನಾಡಿಸಿ ಒಳಗೆ ಕರೆದೊಯ್ದಳು. ತಾನು ಪ್ರೀತಿಸಿದ ರಾಜೇಶನಿಗೆ ಎಂಥ ಗಣ್ಯರೆಲ್ಲಾ ಗೊತ್ತಿದೆ. ಬಣ್ಣ ಬಣ್ಣದ ಜೀವನ ಸಾಗಿಸಲು ರಾಜೇಶನಿಂದ ಮಾತ್ರ ಸಾಧ್ಯ. ತಾನು ಅವನ ಜೊತೆ ಬಂದು ಒಳ್ಳೆಯ ಕೆಲಸ ಮಾಡಿದೆ ಎಂಬ ನಿರ್ಧಾರಕ್ಕೆ ನೀತಾ ಬಂದಳು.
ಊಟ, ತಿಂಡಿ, ಕಾಫಿ ಯಾವುದಕ್ಕೂ ಕೊರತೆ ಇಲ್ಲದಂತೆ ಅವರನ್ನು ನೋಡಿಕೊಳ್ಳಲಾಯಿತು. ರಾತ್ರಿ ಮಲಗಲು ಒಂದು ಕೋಣೆಯನ್ನು ನೀತಾಳಿಗೆ ನೀಡಲಾಯಿತು. ಅಲ್ಲಿದ್ದ ಮಂಚ, ಹಾಸಿಗೆ ಅವಳ ಜೀವನದಲ್ಲಿ ಎಂದೂ ಕಂಡಿರಲಿಲ್ಲ. ಆದರೆ ರಾಜೇಶ ಕಾಣಿಸಲಿಲ್ಲ. ನೆಂಟರ ಮನೆಯಲ್ಲಿ ಮದುವೆ ಆಗದೆ ಒಂದೇ ಕೋಣೆಯಲ್ಲಿ ಮಲಗಬಾರದು ಎಂದು ದೂರ ಇರಬಹುದು ಎಂದೇ ಭಾವಿಸಿದಳು. ಬೆಳಗಾದ ಕೂಡಲೇ ನೀತಾಳನ್ನು ಎಬ್ಬಿಸಿದ ಮನೆಯೊಡತಿ 'ಬೇಗ ರೆಡಿಯಾಗು, ಹೊರಬೇಕು' ಎಂಬ ಆಜ್ಞೆ ಹೊರಡಿಸಿದಳು. ರಾಜೇಶನ ಜೊತೆ ಮದುವೆ ಮಾಡಿಸಬಹುದು ಎಂದೇ ಭಾವಿಸಿದ ನೀತಾ ರೆಡಿಯಾದಳು. ತಿಂಡಿ ತಿನ್ನುವಾಗ, 'ರಾಜೇಶ ಎಲ್ಲಿ?' ಎಂದು ಪ್ರಶ್ನಿಸಿದಳು. ಆದರೆ ಅದಕ್ಕೆ ಅವರಿಂದ ಸೂಕ್ತ ಉತ್ತರ ಬರಲಿಲ್ಲ. ಹೇಗೋ ಒಂದು ದಿನ ಸಹಿಸಿಕೊಂಡರೆ ಜೀವನ ಪೂರ್ತಿ ರಾಜೇಶ ತನ್ನನ್ನು ಕೈಬಿಡುವುದಿಲ್ಲ ಎಂದು ಭಾವಿಸಿದ ನೀತಾ ಹೊರಡಲು ಅನುವಾದಳು. ಅವಳು ಹತ್ತಿದ ಕಾರು ಬಂದು ರೇಲ್ವೆ ಸ್ಟೇಷನ್‌ನಲ್ಲಿ ನಿಂತಾಗಲೂ 'ರಾಜೇಶ ಎಲ್ಲಿ?' ಎಂದು ಮತ್ತೆ ಪ್ರಶ್ನಿಸಿದಳು. ಅವಳ ಪ್ರಶ್ನೆಗೆ ಉತ್ತರವಾಗಿ ಮುಖದ ಮೇಲೆ ಹೊಡೆತ ಬಿತ್ತು! ಬಾಯಿ ಮುಚ್ಚಿಕೊಂಡು ಟ್ರೈನ್ ಹತ್ತು ಎಂಬ ಗಂಭೀರ ಸ್ವರ ಅವಳನ್ನು ಆಜ್ಞಾಪಿಸಿತ್ತು. ಏನು ನಡೆಯುತ್ತಿದೆ ಎಂಬ ಯೋಚನೆಯಲ್ಲಿದ್ದಾಗಲೇ ರೈಲು ಹೊರಟಿತ್ತು!
=
ಮಾರನೇ ದಿನ ಟ್ರೈನು ಇಳಿದಾಗ ತಿಳಿಯಿತು ತಾನು ಬಾಂಬೆಯಲ್ಲಿದ್ದೇನೆ ಎಂಬ ಸತ್ಯ ಗೊತ್ತಾಯಿತು. ಇಲ್ಲಿಗೆ ಇವರು ಕರೆತಂದಿದ್ದಾದರೂ ಏಕೆ ಎಂಬ ಅವಳ ಪ್ರಶ್ನೆಗೆ ಸ್ವಲ್ಪ ಹೊತ್ತಿನಲ್ಲೇ ಉತ್ತರ ದೊರೆತಿತ್ತು. ತಾನು ಯಾರನ್ನು ನಂಬಿ ಹೆತ್ತ ತಾಯಿಗೆ ಮೋಸ ಮಾಡಿ ಹೊರಟು ಬಂದಿದ್ದೆನೋ ಅವನೊಬ್ಬ ವಂಚಕ. ತನ್ನನ್ನು ಮಾಂಸದ ಮನೆಗೆ ಮಾರಾಟ ಮಾಡಿ ಅವನು ಪರಾರಿಯಾಗಿದ್ದಾನೆ ಎಂಬ ಸತ್ಯ ಅವಳಿಗೆ ಅರಿವಾಗುವ ವೇಳೆಗೆ ಅವಳು ಪಂಜರದಲ್ಲಿ ಬಂಧಿಯಾಗಿದ್ದಳು. ಅಲ್ಲಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇಲ್ಲವೆಂಬ ಸತ್ಯ ಅರಿವಾದಾಗ ತನ್ನ ತಾಯಿ ನೆನಪಾಗಿದ್ದಳು. ಅವಳು ಹೇಳಿದ ಎಚ್ಚರಿಕೆಯ ಮಾತುಗಳು ಪುನರಾವರ್ತನೆಗೊಂಡವು. ಆದರೆ, ಕಾಲ ಮೀರಿತ್ತು.
=
ಸತತ ಮೂರು ವರ್ಷಗಳ ಕಾಲ ಇವಳು ಯಂತ್ರದಂತೆ ಜೀವಿಸತೊಡಗಿದಳು. ಮಾಂಸದ ಮನೆಯಲ್ಲಿ ನರಕಯಾತನೆಯನ್ನೇ ಅನುಭವಿಸಿಬಿಟ್ಟಳು. ಆದರೆ ಅದೊಂದು ದಿನ ಅವಳಿಗೆ ಬಂದ ಜ್ವರ ಬೇಗ ಗುಣವಾಗಲಿಲ್ಲ. ಆಸ್ಪತ್ರೆಗೆ ಹೋದಾಗ ತಿಳಿದಿದ್ದು, ಬರಿಸಿಡಿಲಿನಂಥ ವಿಷಯ! ಅವಳಿಗೆ ಏಡ್ಸ್! ಇನ್ನು ಅವಳು ಅವರಿಗೆ ಬೇಡವಾಗಿದ್ದಳು. ಇಷ್ಟು ದಿನ ಅವಳು ದುಡಿದ ಕಾರಣಕ್ಕೆ ಒಂದಷ್ಟು ಪುಡಿಗಾಸು ಕೈಯಲ್ಲಿಟ್ಟು ಬೆಂಗಳೂರಿನ ಟ್ರೈನು ಹತ್ತಿಸಿದರು.
=
ಹಾಗೆ ವಾಸಿಯಾಗದ ಕಾಯಿಲೆಯಿಂದ ಮನೆಗೆ ಬಂದ ನೀತಾಳ ಕರುಣಾಜನಕ ಕತೆ ಕೇಳಿದ ತಾಯಿ ಜಯಾ ಅಸಹಾಯಕಳಾಗಿದ್ದಳು. ತನಗೆ ಬಂದ ಸ್ಥಿತಿ ತನ್ನ ಮಗಳಿಗೆ ಬರಬಾರದು ಎಂದು ಭಾವಿಸಿದ್ದ ಜಯಾ ತನಗಿಂತ ಘೋರವಾದ ಸ್ಥಿತಿಯಲ್ಲಿರುವ ನೀತಾಳನ್ನು ಕಂಡು ದುಃಖಿತಳಾದಳು. ಆರೈಕೆ ಮಾಡುವುದೊಂದೇ ಅವಳ ಮುಂದಿನ ಕರ್ತವ್ಯ, ತಾತ್ಕಾಲಿಕ ದಾರಿ.
ಸತತ ಒಂದು ವರ್ಷ ತಾಯಿಯ ಆರೈಕೆಯಲ್ಲಿ ಜೀವ ಹಿಡಿದಿಟ್ಟುಕೊಂಡಿದ್ದ ನೀತಾ, ಕಳೆದ ವರ್ಷ ಕೊನೆಯುಸಿರೆಳೆದಳು. ಮಗಳ ಸಮಾಧಿಯ ಬಳಿ ತಾಯಿ ಜಯಾ ಇಂದಿಗೂ ಕಣ್ಣೀರು ಸುರಿಸುತ್ತಾಳೆ. ತನ್ನ ಮಗಳಿಗೆ ಬಂದ ಸ್ಥಿತಿ ಯಾವ ಹೆಣ್ಣು ಮಗುವಿಗೂ ಬಾರದಿರಲಿ ಎಂದು ಕಾಣದ ದೇವರಲ್ಲಿ ಪ್ರಾರ್ಥಿಸುತ್ತಾಳೆ!
-ಅಶ್ವತ್ಥನಾರಾಯಣ್ ಎಲ್.,
ಕೃಪೆ: ಬೈಟುಕಾಫಿ ಕನ್ನಡಪ್ರಭ
ಕೃಪೆ: ಬೈಟುಕಾಫಿ ಕನ್ನಡಪ್ರಭ
Comments
Post a Comment