ಇದು 1989ರ ಮಾತು. ಕೋಲ್ಕತಾ ಸಮೀಪದ ಹಳ್ಳಿಯವನಾದ ಸುದೀಪ್ ದತ್ತಾ ಎಂಬ 17 ವರ್ಷದ ಹುಡುಗ, ಪುಟ್ಟ ಲಗೇಜಿನೊಂದಿಗೆ ರೈಲು ಹತ್ತಿ ಮುಂಬಯಿಗೆ ಬಂದ. ಹೊಟ್ಟೆಪಾಡಿಗೆ ಯಾವುದಾದರೂ ಕೆಲಸ ಹುಡುಕುವುದು ಅವನ ಉದ್ದೇಶವಾಗಿತ್ತು. ಮುಂಬಯಿಯಲ್ಲಿ ಅವನಿಗೆ ಸ್ನೇಹಿತರಿರಲಿಲ್ಲ. ಬಂಧುಗಳಿರಲಿಲ್ಲ. ಗಾಡ್‌ಫಾದರ್‌ಗಳೂ ಇರಲಿಲ್ಲ. ಹಾಗಾಗಿ, ಮೊದಲ ಎರಡು ವರ್ಷ ಥೇಟ್ ಭಿಕ್ಷುಕರ ಥರಾ ಬದುಕಿಬಿಟ್ಟ. ಬಾಡಿಗೆ ಮನೆ ಮಾಡುವಂಥ ಆರ್ಥಿಕ ಚೈತನ್ಯವಿಲ್ಲದ ಕಾರಣದಿಂದ, ತಾನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯ ಒಂದು ಮೂಲೆಯಲ್ಲಿ ಮಲಗುತ್ತಿದ್ದ. ಸಂಬಳದ ಹಣ ಬೇಗನೇ ಮುಗಿದು ಹೋದಾಗ, ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡ. ಅಂಥವನು ಇವತ್ತು, ಅದೇ ಮುಂಬಯಿಯಲ್ಲಿ, ವರ್ಷಕ್ಕೆ 1000 ಕೋಟಿ ರೂ. ವಹಿವಾಟು ನಡೆಸುವ ಕಂಪನಿಯೊಂದರ 'ಬಾಸ್' ಆಗಿದ್ದಾನೆ. ದೇಶದ ಅತಿ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಜಾಗ ಪಡೆದುಕೊಂಡಿದ್ದಾನೆ. ನಂಬೋದೇ ಕಷ್ಟ ಎಂಬಂತಿರುವ ತಮ್ಮ ಬದುಕಿನ ಸಕ್ಸಸ್ ಸ್ಟೋರಿಯನ್ನು ಸದ್ಯ ಹಾಂಕಾಂಗ್ ಪ್ರವಾಸದಲ್ಲಿರುವ ಸುದೀಪ್ ದತ್ತಾ ಅವರೇ ವಿವರಿಸಿದ್ದು ಹೀಗೆ:
ಕೋಲ್ಕೊತಾಗೆ ಹತ್ತಿರವಿರುವ ದುರ್ಗಾಪುರ ನನ್ನ ಹುಟ್ಟೂರು. ಅಲ್ಲಿನ ಹಿಂದೂಸ್ತಾನ್ ಫರ್ಟಿಲೈಸರ್ ಕಂಪನಿಯಲ್ಲಿ ನಮ್ಮ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿದ್ದರು. ಮನೇಲಿ ನನ್ನೊಂದಿಗೆ ಅಣ್ಣ, ಅಕ್ಕ, ತಂಗಿ ಹಾಗೂ ಅಮ್ಮ ಇದ್ದರು. ಎಲ್ಲರ ಬದುಕಿಗೆ ಅಪ್ಪನ ಸಂಬಳವೇ ಆಧಾರವಾಗಿತ್ತು. 1980ರ ದಶಕದಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬನ ಸಂಬಳ ಎಷ್ಟಿತ್ತು ಎಂಬುದನ್ನು ವಿವರಿಸುವ ಅಗತ್ಯವೇ ಇಲ್ಲ. ನಮಗೆ ಹೊಟ್ಟೆಗಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಹೊಟ್ಟೆಗಿಲ್ಲ ಎಂಬಂಥ ಪರಿಸ್ಥಿತಿ. 10ನೇ ತರಗತಿಯಲ್ಲಿದ್ದಾಗಲೂ ಊಟದ ಹೆಸರಲ್ಲಿ ಮನೇಲಿ ನನಗೆ ಸಿಗುತ್ತಿದ್ದುದು ಗಂಜಿ ಮಾತ್ರ. ಕಾಲೇಜು ಮುಗಿಸಿ, ದುರ್ಗಾಪುರದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಬೇಕು. ಇಲ್ಲವಾದರೆ, ಬಾಡಿಗೆಗೆ ಆಟೋರಿಕ್ಷಾ ಪಡೆದು, ಅದನ್ನು ಓಡಿಸುತ್ತಾ ಕುಟುಂಬಕ್ಕೆ ನೆರವಾಗಬೇಕು ಎಂಬುದು ನನ್ನ ಆಸೆಯಾಗಿತ್ತು. ನನ್ನ ನಿರ್ಧಾರವನ್ನು ಗೆಳೆಯರ ಮುಂದೆ ಹೇಳಿದರೆ ಅವರೆಲ್ಲ-'ನೋಡೋಕೆ ಸಿನಿಮಾ ಹೀರೋ ಥರಾ ಇದೀಯ. ಅಂಥವನು ಆಟೋ ಓಡಿಸೋದಾ? ಬೇಡ, ಬೇಡ. ಸೀದಾ ಬಾಂಬೆಗೆ ಹೋಗಿ ಬಿಡು. ಹೇಗಾದ್ರೂ ಮಾಡಿ ಅಮಿತಾಭ್ ಬಚ್ಚನ್‌ನ ಭೇಟಿ ಮಾಡು. ನಿನ್ನ ಪರಿಚಯ ಹೇಳಿಕೋ. ಕಷ್ಟ ಹೇಳಿಕೋ. ಸಿನಿಮಾದಲ್ಲಿ ಒಂದು ಛಾನ್ಸ್ ಕೊಡಿಸಿ ಸಾರ್ ಅಂತ ಕೇಳು. ಅಮಿತಾಭ್ ಬಚ್ಚನ್ ಖಂಡಿತ ನಿನಗೆ ಹೆಲ್ಪ್ ಮಾಡ್ತಾರೆ. ಮುಂದೆ ಹೇಳೋದೇನಿದೆ? ಹೀರೋ ಆಗಿ ರಾಜನ ಥರಾ ಬದುಕು' ಎನ್ನುತ್ತಿದ್ದರು. ಅವರ ಮಾತು ಮುಗಿವ ಮೊದಲೇ ಅಮಿತಾಭ್‌ರನ್ನು ಭೇಟಿಯಾದಂತೆ, ಹಿಂದಿ ಚಿತ್ರವೊಂದರ ಹೀರೋ ಆದಂತೆ ಕಲ್ಪಿಸಿಕೊಂಡು ನಾನು ಥ್ರಿಲ್ಲಾಗುತ್ತಿದ್ದೆ.
ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆಯೇ, ಮನೆಯಲ್ಲಿ ಖರ್ಚಿನ ಪ್ರಮಾಣವೂ ಹೆಚ್ಚಿತು. ಇಂಥ ಸಂದರ್ಭದಲ್ಲಿ ನಮ್ಮಣ್ಣ ಬಾಂಬೆಗೆ ಹೋದ. ಭವಿಷ್ಯ ಅರಸಿಕೊಂಡು ಬಾಂಬೆಗೆ ಹೋಗುವುದು ಪಶ್ಚಿಮ ಬಂಗಾಳದಲ್ಲಿ ತೀರಾ ಕಾಮನ್. ಮೊದಲ ಒಂದು ವರ್ಷ ಎಲ್ಲವೂ ಚೆನ್ನಾಗಿತ್ತು. ಅಣ್ಣ ದುಡಿಯಲು ನಿಂತಿದ್ದ. ಪ್ರತಿ ತಿಂಗಳೂ ದುಡ್ಡು ಕಳಿಸುತ್ತಿದ್ದ. ಸದ್ಯ, ಕಷ್ಟಗಳು ಸ್ವಲ್ಪ ಕಡಿಮೆ ಆದವು ಎಂದು ಮನೆಯಲ್ಲಿ ಎಲ್ಲರೂ ಖುಷಿ ಪಡುತ್ತಿದ್ದಾಗಲೇ ಆಗಬಾರದ್ದು ಆಗಿಹೋಯ್ತು. ಬಾಂಬೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಅಣ್ಣ ಸತ್ತು ಹೋದ. ಮನೆಗೆ ಆಧಾರವಾಗಬೇಕಿದ್ದ ಹಿರಿಯ ಮಗ ದಿಢೀರ್ ಸತ್ತು ಹೋದಾಗ ತಂದೆ ಶಾಕ್‌ಗೆ ಒಳಗಾದರು. ಮಗನ ನೆನಪಲ್ಲಿ ಕೊರಗಿ ಕೊರಗಿ, ಕೆಲವೇ ತಿಂಗಳುಗಳಲ್ಲಿ ಕಣ್ಣು ಮುಚ್ಚಿದರು.
ಎಂಟೇ ತಿಂಗಳುಗಳ ಅಂತರದಲ್ಲಿ ಅಣ್ಣ ಮತ್ತು ಅಪ್ಪನನ್ನು ಕಳೆದುಕೊಂಡ ಮೇಲೆ ನಮ್ಮ ಕುಟುಂಬ ಅಕ್ಷರಶಃ ಬೀದಿಗೆ ಬಿತ್ತು. ಎಲ್ಲರನ್ನೂ ಸಾಕಬೇಕಾದ ಹೊಣೆ ನನ್ನ ಮೇಲಿತ್ತು. ನಾನು ಆಗಷ್ಟೇ ಸೆಕೆಂಡ್ ಪಿಯುಸಿ ಪರೀಕ್ಷೆ ಬರೆದಿದ್ದೆ. ಡಿಗ್ರಿ ಮಾಡುವ ಆಸೆಯಿತ್ತು ನಿಜ. ಆದರೆ, ಓದಲು ಅಗತ್ಯವಿದ್ದಂಥ ಪೂರಕ ವಾತಾವರಣವೇ ಇರಲಿಲ್ಲ. ಆಗಿದ್ದಾಗಲಿ, ಬಾಂಬೆಗೆ ಹೋಗಿ ನೌಕರಿ ಹಿಡಿಯಬೇಕು. ಆ ದುಡಿಮೆಯಲ್ಲಿ ಅಮ್ಮ ಹಾಗೂ ಸೋದರಿಯರನ್ನು ಸಾಕಬೇಕು. ಅವಕಾಶ ಸಿಕ್ಕಿದರೆ, ಅಮಿತಾಭ್ ಬಚ್ಚನ್‌ರನ್ನೂ ಭೇಟಿಯಾಗಿ, ಸಿನಿಮಾದಲ್ಲಿ ಒಂದು ಛಾನ್ಸ್ ಕೊಡಿಸಿ ಸಾರ್ ಎಂದು ಕೇಳಿಬಿಡಬೇಕು ಎಂಬ ನಿರ್ಧಾರದೊಂದಿಗೇ, ಪುಟ್ಟ ಲಗೇಜಿನೊಂದಿಗೆ 1989ರ ಒಂದು ಮುಂಜಾನೆ, ಬಾಂಬೆಯ ರೈಲು ಹತ್ತಿದೆ.
ನನ್ನ ಕಲ್ಪನೆಗೂ, ವಾಸ್ತವದ ಬದುಕಿಗೂ ಅಜಗಜಾಂತರವಿದೆ ಎಂಬುದು ಬಾಂಬೆಗೆ ಬಂದ ಎರಡೇ ದಿನಗಳಲ್ಲಿ ಅರಿವಿಗೆ ಬಂತು. ಕೆಲಸ ಕೇಳಿಕೊಂಡು ಹೋದರೆ, ಯಾವ ಊರು? ಎಲ್ಲಿ ಉಳಿದಿದ್ದೀ? ನಿನ್ನೊಂದಿಗೆ ಯಾರ್ಯಾರು ಇದ್ದಾರೆ? ಪರಿಚಯದ ಜನರೇ ಜೊತೆಗಿಲ್ಲ ಎಂದರೆ ಕೆಲಸ ಕೊಡುವುದಾದರೂ ಹೇಗೆ? ತಿಂಗಳ ನಂತರ, ಸಂಬಳ ತಗೊಂಡು ನೀನು ಪರಾರಿಯಾಗಲ್ಲ ಎಂಬುದಕ್ಕೆ ಗ್ಯಾರಂಟಿ ಏನು ಎಂದೆಲ್ಲಾ ಕೇಳುತ್ತಿದ್ದರು. ಹಾಗಾಗಿ, ಆರಂಭದ ಎರಡು ವಾರಗಳಲ್ಲಿ ಅಂಗಡಿಗಳಲ್ಲಿ ಗಂಟೆಗಳ ಲೆಕ್ಕಕ್ಕೆ ಕೆಲಸ ಮಾಡಿದೆ. ಇಪ್ಪತ್ತು ದಿನಗಳ ನಂತರ, ಔಷಧ ಹಾಗೂ ಶಾಂಪೂಗಳನ್ನು ತುಂಬುವ ಪೌಚ್‌ಗಳನ್ನು ತಯಾರಿಸುವ ಒಂದು ಚಿಕ್ಕ ಕಂಪನಿಯಲ್ಲಿ ಕೊರಿಯರ್ ಬಾಯ್ ಕೆಲಸ ಸಿಕ್ಕಿತು. ಅಲ್ಲಿ ಪಿ.ಎಫ್., ಬೋನಸ್‌ನ ಅನುಕೂಲವಿತ್ತು. ದಿನಕ್ಕೆ 15 ರೂ. ಸಂಬಳವೆಂದು ನಿಗದಿಯಾಯಿತು. ನನ್ನೊಂದಿಗೆ 12 ಮಂದಿ ಕೆಲಸಗಾರರಿದ್ದರು. ಅದೊಂದು ದಿನ ಮಾಲೀಕರೊಂದಿಗೆ ನನ್ನ ಬದುಕಿನ ಕಥೆ ಹೇಳಿಕೊಂಡೆ. ಕರಗಿದ ಅವರು, ಮನೆ ಮಾಡಿದ್ರೆ ಜಾಸ್ತಿ ಖರ್ಚು ಬೀಳುತ್ತೆ. ಫ್ಯಾಕ್ಟರಿಯಲ್ಲೇ ಉಳ್ಕೋ. ಓ.ಟಿ. ಕೆಲಸ ಮಾಡು. ಎಕ್ಸ್ ಟ್ರಾ ಸಂಬಳ ಸಿಗುತ್ತೆ ಅಂದರು. ತಕ್ಷಣವೇ ಒಪ್ಪಿಕೊಂಡೆ.
ಈ ಸಂದರ್ಭದಲ್ಲಿಯೇ, ಅಂದರೆ 1990ರಲ್ಲಿ ಅದೇ ಮೊಟ್ಟ ಮೊದಲ ಬಾರಿಗೆ ಅಮಿತಾಭ್ ಬಚ್ಚನ್ ಅಭಿನಯದ ದೀವಾರ್ ಸಿನಿಮಾ ನೋಡಿದೆ. ಅದರಲ್ಲಿ ಅಮಿತಾಭ್‌ಗೆ ಒಂದು ಛೇಂಬರ್ ಇರುತ್ತದೆ. ಆ ದೃಶ್ಯ ಮನದಲ್ಲಿ ಅಚ್ಚಳಿಯದೆ ಉಳಿದು ಬಿಡ್ತು. ಮುಂದೊಂದು ದಿನ ಸ್ವಂತ ಕಂಪನಿ ಶುರು ಮಾಡಿ ಇಂಥದೇ ಛೇಂಬರ್ ಮಾಡಿಸ್ಕೋಬೇಕು ಅನ್ನಿಸಿಬಿಡ್ತು. ಅವತ್ತಿನಿಂದಲೇ ಎರಡು ಕಡೆಗಳಲ್ಲಿ ದುಡಿಮೆಗೆ ನಿಂತೆ. ಪೈಸೆಗೆ ಪೈಸೆ ಕೂಡಿಸುತ್ತಾ ಸ್ವಂತ ಕಂಪನಿ ಆರಂಭಿಸುವ ಬಗ್ಗೆಯೇ ಯೋಚಿಸುತ್ತಿದ್ದೆ.
ಹೀಗಿದ್ದಾಗಲೇ, ನನಗೆ ಆಶ್ರಯ ನೀಡಿದ್ದ ಪೌಚ್ ತಯಾರಿಕಾ ಕಂಪನಿ ನಷ್ಟದ ಸುಳಿಗೆ ಸಿಕ್ಕಿ ಬಿತ್ತು. ಮಾಲೀಕರು ಕಂಪನಿಯನ್ನು ಮುಚ್ಚಲು ಅಥವಾ ಯಾರಿಗಾದರೂ ಮಾರಲು ನಿರ್ಧರಿಸಿದರು. ಈ ವೇಳೆಗೆ ಕೊರಿಯರ್ ಬಾಯ್, ಅಕೌಂಟೆಂಟ್, ಸೇಲ್ಸ್ ಮ್ಯಾನೇಜರ್, ಮೆಡಿಕಲ್ ರೆಪ್... ಹೀಗೆ ಹಲವು ಅವತಾರಗಳಲ್ಲಿ ದುಡಿದಿದ್ದೆ. ಔಷಧ ವ್ಯಾಪಾರ ಕ್ಷೇತ್ರದ ಒಳಗುಟ್ಟುಗಳು ಅರ್ಥವಾಗಿದ್ದವು. ನಂಬಿಗಸ್ತ ವ್ಯಾಪಾರಿಗಳೂ ಪರಿಚಯವಾಗಿದ್ದರು. ಹಾಗಾಗಿ, ಮಾಲೀಕರಿಂದ ಕಂಪನಿಯನ್ನು ಖರೀದಿಸಲು, ಅದನ್ನು ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿದೆ. ಇದು 1991ರ ಮಾತು. ಅವತ್ತಿಗೆ ನನ್ನಲ್ಲಿ ಒಟ್ಟು ಉಳಿತಾಯದ ಹಣವೆಂದು ಇದ್ದದ್ದು 16000 ರೂ. ಅದನ್ನು ಮಾಲೀಕರ ಮುಂದಿಟ್ಟು ಹೇಳಿದೆ: 'ಫ್ಯಾಕ್ಟರಿಯನ್ನು ನನಗೇ ಮಾರಿ. ಯಾರನ್ನೂ ಕೆಲಸದಿಂದ ತೆಗೆಯದೆ ಮುಂದುವರಿಸಿಕೊಂಡು ಹೋಗ್ತೇನೆ. ಮುಂದಿನ 2 ವರ್ಷ ಬರುವ ಲಾಭವನ್ನೆಲ್ಲ ನಿಮಗೇ ಬಿಟ್ಟು ಕೊಡ್ತೇನೆ...'
ಮರುದಿನದಿಂದಲೇ ಪೌಚ್‌ಗಳ ತಯಾರಿಕೆ ಮತ್ತೆ ಶುರುವಾಯಿತು. ಹಿಂದಿನ ದಿನದವರೆಗೂ ಯಕಶ್ಚಿತ್ ಅಟೆಂಡರ್ ಆಗಿದ್ದ ನಾನು ಈಗ ಮಾಲೀಕನಾಗಿದ್ದೆ. ಅವತ್ತಿಗೆ ನನಗಿನ್ನೂ ಇಪ್ಪತ್ತು ವರ್ಷ. ಹಳೆಯ ನೌಕರರೇ ಜೊತೆಗಿದ್ದುದ್ದರಿಂದ ಅವರಿಂದ ಕೆಲಸ ತೆಗೆಯುವುದೂ ಸುಲಭವಾಯಿತು. ಲಾಸ್‌ನಲ್ಲಿದ್ದ ಕಂಪನಿಯನ್ನು ಲಾಭದ ಹಳಿಯ ಮೇಲೆ ತರಬೇಕಿತ್ತು. ಹಾಗಾಗಿ ಹಗಲು ರಾತ್ರಿ ದುಡಿದೆ. ಈ ವರ್ಷ ಜಾಸ್ತಿ ಲಾಭ ಬಂದ್ರೆ ಬೋನಸ್‌ನಲ್ಲೂ ಹೆಚ್ಚಳ ಮಾಡ್ತೀನಿ ಅಂದೆ. ಪರಿಣಾಮ, ನೌಕರರೂ ಗಂಟೆಗಳ ಪರಿವೆಯಿಲ್ಲದೆ ದುಡಿದರು. ವರ್ಷದ ಕೊನೆಗೆ ಎಲ್ಲಾ ಖರ್ಚು ಕಳೆದು ಒಂದು ಲಕ್ಷ ರೂ. ಲಾಭ ಬಂತು. ಈ ಹಣವನ್ನು ಬೇರೊಂದು ಬಿಜಿನೆಸ್‌ನಲ್ಲಿ ಹೂಡಿ ಅಲ್ಲಿಯೂ ಅದೃಷ್ಟ ಪರೀಕ್ಷಿಸಬೇಕು ಅನ್ನಿಸ್ತು. ಆಗ ಕಾಣಿಸಿದ್ದೇ ವಿನೈಲ್ ಮತ್ತು ಫ್ಲೆಕ್ಸ್ ಪ್ರಿಟಿಂಗ್ ಯುನಿಟ್.
ಎಲ್ಲರಿಗೂ ಗೊತ್ತಿರುವಂತೆ, ತುಂಬಾ ಹಿಂದಿನಿಂದಲೂ ವಾರವಾರವೂ ಹೊಸ ಮಾತ್ರೆ, ಸಿರಪ್‌ಗಳು ವೈದ್ಯಕೀಯ ಕ್ಷೇತ್ರಕ್ಕೆ ಬರುತ್ತಲೇ ಇವೆ. ಅವುಗಳೆಲ್ಲಾ ಜನರನ್ನು ತಲುಪಬೇಕು ಎಂದರೆ, ಮೆಡಿಕಲ್ ಸ್ಟೋರ್‌ಗಳಲ್ಲಿ ಪೋಸ್ಟರ್‌ಗಳನ್ನು ಹಾಕಬೇಕು. ಇಂಥಾ ಪೋಸ್ಟರ್‌ಗಳು ವಾರಕ್ಕೆ ಲಕ್ಷದ ಲೆಕ್ಕದಲ್ಲಿ ಪ್ರಿಂಟ್ ಆಗುತ್ತವೆ. ಈ ವಿಷಯ ಗೊತ್ತಾದ ಮೇಲೆ ನಾನು ಸುಮ್ಮನಿರಲಿಲ್ಲ. ಆ ಕ್ಷೇತ್ರದ ಎಲ್ಲ ಅಗತ್ಯಗಳನ್ನೂ ತಿಳಿದುಕೊಂಡೆ. ಇದು 2006ರ ಮಾತು. ಅವತ್ತಿನ ಸಂದರ್ಭದಲ್ಲಿ ವಿನೈಲ್ ಪ್ರಿಂಟಿಂಗ್ ಕ್ಷೇತ್ರದ ದಿಗ್ಗಜ ಅನ್ನಿಸಿಕೊಂಡಿದ್ದುದು ಅಟ್ಲಾಂಟಾ ವಿನೈಲ್ ಕಂಪನಿ. ಮೊದಲು ಅಲ್ಲಿ ಶೇರುಗಳನ್ನು ಖರೀದಿಸಿದೆ. ನಂತರದ ದಿನಗಳಲ್ಲಿ ನಮ್ಮದೇ ವಿನೈಲ್ ಪ್ರಿಂಟಿಂಗ್ ಯುನಿಟ್ ಆರಂಭಿಸಿದೆ.
ಸಿಪ್ಲಾ, ಫೈಜರ್, ರ್ಯಾನ್‌ಬಾಕ್ಸಿ, ವೊಕ್ಹಾರ್ಟ್, ಲ್ಯೂಪಿನ್, ಕ್ಯಾಡಿಲಾ... ಇವೆಲ್ಲಾ ಔಷಧ ತಯಾರಿಕೆ ಉದ್ಯಮದ ದೈತ್ಯ ಕಂಪನಿಗಳು. ಇವು 15-20 ಮಾತ್ರೆಗಳ ಒಂದೊಂದು ಸೆಟ್ ತಯಾರಿಸುತ್ತವೆ. ಮಾತ್ರೆಗಳನ್ನು ಇಟ್ಟಿರುತ್ತಾರಲ್ಲಾ, ಹಾಳೆ? ಅದು ಅಲ್ಯುಮಿನಿಯಂನಿಂದ ತಯಾರಾಗಿರುತ್ತೆ. ಇಂಥ ಹಾಳೆಗಳು ಒಂದು ವರ್ಷಕ್ಕೆ ಲಕ್ಷ ಲಕ್ಷದ ಸಂಖ್ಯೆಯಲ್ಲಿ ಬೇಕಾಗುತ್ತವೆ. ಅವುಗಳನ್ನು ತಯಾರಿಸಿದರೆ, ಅದರಿಂದ ದೊಡ್ಡ ಲಾಭವಿದೆ ಎಂಬ ಮತ್ತೊಂದು ಸಂಗತಿ ಆಗಲೇ ಅರಿವಿಗೆ ಬಂತು. ನನ್ನ ಅದೃಷ್ಟಕ್ಕೆ ನಷ್ಟದಿಂದ ಬಸವಳಿದು ಮುಚ್ಚುವ ಹಂತ ತಲುಪಿದ್ದ ಅಲ್ಯುಮಿನಿಯಂ ಶೀಟ್ ತಯಾರಿಕಾ ಕಂಪನಿಯೊಂದರ ವಿಷಯ ತಿಳಿಯಿತು. ನಾನು ತಡ ಮಾಡಲಿಲ್ಲ. ತಕ್ಷಣವೇ ಆ ಕಂಪನಿ ಖರೀದಿಸಿದೆ. ಔಷಧ ತಯಾರಿಕಾ ಕ್ಷೇತ್ರದ ಎಲ್ಲ ಕಂಪನಿಗಳಿಗೂ ಖುದ್ದಾಗಿ ಭೇಟಿ ಕೊಟ್ಟೆ. ನನ್ನ ಬಗ್ಗೆ, ಹೊಸ ಕಂಪನಿಯ ಬಗ್ಗೆ, ನನ್ನ ಕನಸುಗಳ ಬಗ್ಗೆ ಹೇಳಿಕೊಂಡೆ. ಪ್ರತಿಸ್ಪರ್ಧಿ ಕಂಪನಿಗಳಿಗಿಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಅಲ್ಯುಮಿನಿಯಂ ಹಾಳೆಯನ್ನು, ಔಷಧ ಹಾಗೂ ಶಾಂಪೂ ಬಳಕೆಗೆ ಬೇಕಾಗುವ ಪೌಚ್‌ಗಳನ್ನು ಕೊಡುವುದಾಗಿ ಪ್ರಾಮಿಸ್ ಮಾಡಿದೆ. ಅದುವರೆಗೆ ಬಂದಿದ್ದ ಲಾಭದ ಹಣವನ್ನೆಲ್ಲ ವಿನಿಯೋಗಿಸಿ ಗೋವಾಕ್ಕೆ ಸಮೀಪದ ದಮನ್‌ನಲ್ಲಿ ESSDEE (ಎಸ್.ಡಿ. ಎಂದರೆ ನನ್ನ ಹೆಸರಿನ ಮೊದಲ ಅಕ್ಷರಗಳು) Aluminium foil Sheet Factory ಆರಂಭಿಸಿದೆ. ಔಷಧ ಕ್ಷೇತ್ರದ ಎಲ್ಲ ದೈತ್ಯ ಕಂಪನಿಗಳೂ ನನ್ನ ಗ್ರಾಹಕರಾದರು. ಇದೇ ವೇಳೆಗೆ ಸ್ವೀಟ್ ಮತ್ತು ಆಹಾರವನ್ನು ಪಾರ್ಸೆಲ್ ಕಳಿಸಲೂ ನಾವು ತಯಾರಿಸುವ ಅಲ್ಯುಮಿನಿಯಂ ಹಾಳೆಗೆ ಬೇಡಿಕೆ ಬಂತು. ಪರಿಣಾಮ, ಕೈ ಹಾಕಿದ ಪ್ರತಿಯೊಂದು ಕ್ಷೇತ್ರದಲ್ಲೂ ನಿರೀಕ್ಷೆಗಿಂತ ನಾಲ್ಕು ಪಟ್ಟು ಹೆಚ್ಚಿನ ಲಾಭ ಬಂತು. ದೇಶದ ಶ್ರೀಮಂತ ವ್ಯಾಪಾರಿಗಳ ಪಟ್ಟಿಯಲ್ಲಿ ನನ್ನ ಹೆಸರೂ ಕಾಣಿಸಿಕೊಂಡಿತು!
ಇವತ್ತು ನನ್ನಲ್ಲಿ ಆರು ಐಷಾರಾಮಿ ಕಾರುಗಳಿವೆ. ಮುಂಬಯಿ, ಗೋವಾ, ದಯು, ದಮನ್‌ನಲ್ಲಿ ESSDEE ಕಂಪನಿಯ ಫ್ಯಾಕ್ಟರಿಗಳಿವೆ. ದೀವಾರ್ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಕೂತಿರ್ತಾರಲ್ಲ, ಅಂಥದೇ ಛೇಂಬರ್ ಇದೆ. ಆದ್ರೆ ಇದ್ಯಾವುದೂ ಆಕಸ್ಮಿಕವಾಗಿ ಬಂದಿದ್ದಲ್ಲ. ಈ ಯಶಸ್ಸಿನ ಹಿಂದೆ ಸಾವಿರಾರು ಮಂದಿಯ ಪರಿಶ್ರಮವಿದೆ. ಕನಸುಗಳಿವೆ. ಇವತ್ತು ವರ್ಷದ ಹೆಚ್ಚು ಸಮಯವನ್ನು ವಿಮಾನ ಪ್ರಯಾಣದಲ್ಲಿ ಕಳೀತೀನಿ ನಿಜ. ಆದರೆ, ಬರೀ 24 ವರ್ಷದ ಹಿಂದೆ ಮುಂಬಯಿಯಲ್ಲಿ ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡಿದ್ದನ್ನು ನಾನು ಮರೆತಿಲ್ಲ. ಮನುಷ್ಯ ಸಂಭ್ರಮದಿಂದ ದುಡಿಯಬೇಕು ಅಂದರೆ ಅವನಿಗೆ ಒಳ್ಳೆಯ ಸಂಬಳ ಕೊಡಬೇಕು ಎಂಬುದು ನನ್ನ ಪಾಲಿಸಿ. ಅದನ್ನು ಅಕ್ಷರಶಃ ಜಾರಿಗೆ ತಂದಿದ್ದೀನಿ. ಹಾಗಾಗಿ, ನನ್ನೊಂದಿಗಿರುವ ನೌಕರರು ಬೇರೆ ಕಂಪನಿಗೆ ಗುಳೇ ಹೋಗಬಹುದು ಎಂಬ ಚಿಂತೆ ಯಾವತ್ತೂ ನನ್ನನ್ನು ಕಾಡಿಲ್ಲ. ನಾವೆಲ್ಲಾ ಒಂದು ಕುಟುಂಬದವರೆಂತೆಯೇ ಇರುವುದರಿಂದ ಎಲ್ಲರೂ ಕಂಪನಿಯ ಯಶಸ್ಸಿನ ಬಗ್ಗೆಯೇ ಸದಾ ಯೋಚಿಸ್ತಾ ಇರ್ತಾರೆ. ನನ್ನ ಸಕ್ಸಸ್ ಹಿಂದಿರುವ ನಿಜವಾದ ಕಾರಣ ನೌಕರರು. ಈ ಪರಿಶ್ರಮ ಮತ್ತು ನಿಷ್ಠೆಯ ದುಡಿಮೆ.
ನಾನೀಗ ಸಂಪೂರ್ಣವಾಗಿ ಮುಂಬೈವಾಲಾ ಆಗಿದೀನಿ ನಿಜ. ಆದರೆ ಹುಟ್ಟೂರನ್ನು ಮರೆತಿಲ್ಲ. ನಮ್ಮ ಭಾಗದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದಲೇ ದುರ್ಗಾಪುರದಲ್ಲಿ ಅಲ್ಯುಮಿನಿಯಂ ಫಾಯಿಲ್ ಯುನಿಟ್ ಆರಂಭಿಸಿದ್ದೇನೆ. 600ಕ್ಕೂ ಹೆಚ್ಚು ಎಂಬಿಎ ಹಾಗೂ ಎಂಜಿನಿಯರಿಂಗ್ ಪದವೀಧರರಿಗೆ ಕೆಲಸ ಕೊಟ್ಟಿದ್ದೀನಿ. ಅವರನ್ನು ಕಂಡಾಗಲೆಲ್ಲ ನಾನು ಡಿಗ್ರಿ ಮಾಡಲಿಲ್ಲ ಎಂಬುದೂ, ಅದಕ್ಕೆ ಬಡತನವೇ ಕಾರಣವಾಯ್ತು ಎಂಬುದೂ ನೆನಪಾಗಿ ಸಂಕಟವಾಗುತ್ತೆ. ನನಗೆ ಬಂದಂಥ ಸಂಕಟ ಈಗಿನ ಹುಡುಗರಿಗೆ ಬರಬಾರದು ಎಂಬ ಉದ್ದೇಶದಿಂದಲೇ, ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಎಂಬಿಎ, ಎಂಸಿಎ ಶಿಕ್ಷಣದ ಪೂರ್ತಿ ಶುಲ್ಕ ಪಾವತಿಸಬೇಕೆಂದು ನಿರ್ಧರಿಸಿದ್ದೇನೆ. ಇದು ಖಂಡಿತ ದೊಡ್ಡ ಕೆಲಸವಲ್ಲ. ನನ್ನ ಆತ್ಮಸಂತೋಷಕ್ಕಾಗಿ ಮಾಡ್ತಿರೋ ಕೆಲಸ ಅಷ್ಟೆ...'
---
ಈಗ ಹೇಳಿ: ಬದುಕು ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ, ಅಲ್ಲವೇ? ಸುದೀಪ್ ದತ್ತಾನ ಸಾಧನೆ, ಎಲ್ಲರೂ ಮೆಚ್ಚುವಂಥಾದ್ದು. ಹೌದಲ್ಲವೇ?
-ಎ.ಆರ್. ಮಣಿಕಾಂತ್
Comments
Post a Comment