ಬಿಸಿಲಿನ ಝಳದೊಂದಿಗೆ ಚುನಾವಣೆಯ ಕಾವೂ ಸೇರಿಕೊಂಡಿದೆ. ರಾಜಕಾರಣಿಗಳೆಲ್ಲ ನಿಮ್ಮ ಮನೆ ಬಾಗಿಲಲ್ಲಿ ಜಮಾಯಿಸಿ ತಮ್ಮ ತಮ್ಮ ಕತೆ ಹೇಳುವ, ಕನಸು ತೋರಿಸುವ ಸಮಯ. ಇವರದ್ದೆಲ್ಲಾ ಕತೆ ಯಾರಿಗೆ ಬೇಕಿದೆ ಎಂಬ ಪ್ರಶ್ನೆ ಥಟ್ಟನೆ ನಿಮ್ಮ ಮನದಲ್ಲಿ ಎದ್ದರೆ ಅದಕ್ಕೆ ನನ್ನ ಅನುಮೋದನೆಯೂ ಇದೆ. ಹಾಗೆಂದೇ ಇಲ್ಲಿ ಬೇರೆಯದೇ ಹರವಿನ ಮೂರು ಕತೆಗಳ ಕೈ ಜಗ್ಗಿದ್ದೇನೆ.
--
ಪ್ರಯಾಣಿಕರ ದೋಣಿಯೊಂದು ಬಿರುಗಾಳಿಗೆ ಸಿಲುಕಿ ಛಿದ್ರವಾಯಿತು. ಕೊನೆಯಲ್ಲಿ ಕೇವಲ ಇಬ್ಬರು ಪ್ರಯಾಣಿಕರು ಮಾತ್ರ ಸಮೀಪದಲ್ಲೇ ಇದ್ದ ಚಿಕ್ಕ ದ್ವೀಪವೊಂದರತ್ತ ಈಜಿ ಬದುಕುಳಿದರು.
ಅವರಿಬ್ಬರೂ ಮಿತ್ರರೇ! ಮುಂದೇನು ಮಾಡಬೇಕು ಎನ್ನುವುದು ತೋಚದೆ ದೇವರಿಗೆ ಮೊರೆ ಹೋಗುವುದೇ ಕೊನೆಯ ದಾರಿ ಎಂದವರು ನಿಶ್ಚಯಿಸಿದರು. ಆದರೆ ಯಾರ ಪ್ರಾರ್ಥನೆಗೆ ದೇವರು ಬೇಗ ಓಗೊಡುತ್ತಾನೆ ಎಂಬುದನ್ನು ಪರೀಕ್ಷಿಸಲು ಇಬ್ಬರೂ ದ್ವೀಪದ ವಿರುದ್ಧ ದಿಕ್ಕುಗಳಲ್ಲಿ ವಾಸಿಸಬೇಕೆಂದು ನಿರ್ಧರಿಸಿ, ಅದರಂತೆಯೇ ದೂರವಾದರು.
ಅವರು ಮೊದಲು ಪ್ರಾರ್ಥಿಸಿದ್ದು ಆಹಾರಕ್ಕಾಗಿ. ಮರುದಿನ ಬೆಳಗ್ಗೆ ಮೊದಲನೇ ವ್ಯಕ್ತಿ ಇದ್ದ ತುಸು ದೂರದಲ್ಲೇ ಹಣ್ಣು ತುಂಬಿದ ಮರವೊಂದು ಬೆಳೆದು ನಿಂತಿತ್ತು. ಆದರೆ ಇನ್ನೊಬ್ಬನಿದ್ದ ಜಾಗ ಮಾತ್ರ ಬರಡಾಗಿಯೇ ಇತ್ತು.
ಒಂದು ವಾರದ ನಂತರ ಮೊದಲನೇ ವ್ಯಕ್ತಿಗೆ ಏಕಾಂಗಿತನ ಕಾಡತೊಡಗಿತು, ಹಾಗಾಗೆ ತನಗೊಬ್ಬಳು ಸಂಗಾತಿ ಬೇಕೆಂದು ದೇವರಲ್ಲಿ ಮೊರೆಯಿಟ್ಟ. ಮರುದಿನ ಇನ್ನೊಂದು ಯಾತ್ರಿಕರ ಹಡಗು ಬಿರುಗಾಳಿಗೆ ಸಿಲುಕಿ ಧ್ವಂಸವಾಯಿತು. ಅದರಿಂದ ಬದುಕುಳಿದದ್ದು ಒಬ್ಬ ಹೆಂಗಸು ಮಾತ್ರ. ಆಕೆ ಈಜಿಕೊಂಡು ಮೊದಲನೇ ವ್ಯಕ್ತಿಯಿದ್ಧ ಸ್ಥಳಕ್ಕೆ ಬಂದಳು! ಎರಡನೆಯ ವ್ಯಕ್ತಿ ಏಕಾಂಗಿಯಾಗೇ ಉಳಿದ.
ನಂತರ ಮೊದಲನೇ ವ್ಯಕ್ತಿ ತನಗೆ ಮನೆ, ಬಟ್ಟೆ, ಇನ್ನಷ್ಟು ಆಹಾರ ಕೊಡಬೇಕೆಂದು ದೇವರಿಗೆ ಅರ್ಜಿ ಸಲ್ಲಿಸಿದ. ಅವನ ಆಸೆಗಳೆಲ್ಲವೂ ಈಡೇರಿದವು. ಎರಡನೇ ವ್ಯಕ್ತಿಯ ಬಳಿ ಇನ್ನೂ ಏನೂ ಇರಲಿಲ್ಲ.
ಕೊನೆಗೊಂದು ದಿನ ಮೊದಲನೇ ವ್ಯಕ್ತಿಗೆ ತನ್ನ ಸಂಗಾತಿಯೊಂದಿಗೆ ಆ ದ್ವೀಪದಿಂದ ಹೊರಟುಬಿಡಬೇಕು ಎನ್ನುವ ತುಡಿತ ಹೆಚ್ಚಾಯಿತು. ಹಾಗಾಗಿ ತನಗಾಗಿ ದೋಣಿಯೊಂದನ್ನು ಕಳುಹಿಸುವಂತೆ ಆತ ದೇವರಲ್ಲಿ ಪ್ರಾರ್ಥಿಸಿದ. ಮರುದಿನ ತೀರದಲ್ಲಿ ದೋಣಿಯೊಂದು ಸಿದ್ಧವಾಗಿ ನಿಂತಿತ್ತು!
ಇನ್ನೇನು ದೋಣಿ ಹೊರಡಬೇಕು...ಅಷ್ಟರಲ್ಲಿ ದಿಗಂತದಿಂದ ದನಿಯೊಂದು ಕೇಳಿಸಿತು. 'ನಿನ್ನ ಸ್ನೇಹಿತನನ್ನು ಇಲ್ಲೇ ಬಿಟ್ಟು ಹೋಗುವೆಯಾ? '
' ಇವೆಲ್ಲ ನನ್ನ ಪ್ರಾರ್ಥನೆಯ ಫಲ. ನನ್ನ ಗೆಳೆಯನ ಒಂದೂ ಪ್ರಾರ್ಥನೆಯನ್ನು ನೀನು ( ದೇವರು ) ಆಲಿಸಿಲ್ಲ, ಹಾಗಾಗಿ ಈ ಸುಖವನ್ನು ಅನುಭವಿಸಲು ಆತ ಅರ್ಹನಲ್ಲ ' ಎಂದ ಮೊದಲನೇ ವ್ಯಕ್ತಿ.
' ನೀನು ತಪ್ಪು ತಿಳಿದಿದ್ದೀಯ '! ಎಂದುತ್ತರಿಸಿತು ಆಕಾಶವಾಣಿ. ' ಆತ ನನ್ನ ಬಳಿ ಒಂದೇ ಒಂದು ಬಾರಿ ಪ್ರಾರ್ಥಿಸಿದ್ದ. ಆತನ ಇಂಗಿತಕ್ಕೆ ನಾನು ಅಸ್ತು ಅಂದಿದ್ದೆ. ಒಂದು ವೇಳೆ ಆತನ ಪ್ರಾರ್ಥನೆಯನ್ನು ನಾನು ಆಲಿಸದಿದ್ದರೆ. ನಿನಗಿದೆಲ್ಲ ಸಿಗುತ್ತಿರಲಿಲ್ಲ. '
' ಆತ ಅಂಥದ್ದೇನು ಬೇಡಿಕೊಂಡ ಅಂತ ನಾನು ಸಹಾಯ ಮಾಡಬೇಕು?' ಎಂದು ಅಬ್ಬರಿಸಿದ ಮೊದಲ ವ್ಯಕ್ತಿ. ' ನನ್ನ ಗೆಳೆಯನ ಎಲ್ಲಾ ಪ್ರಾರ್ಥನೆಗಳನ್ನೂ ಆಲಿಸು ದೇವರೇ ' ಎಂದಾತ ನನ್ನಲ್ಲಿ ಕೇಳಿಕೊಂಡಿದ್ದ! '
ನೀತಿ: ದೇವರು ನಮ್ಮ ಇಂಗಿತವನ್ನು ಈಡೇರಿಸಿದರೆ ಅದಕ್ಕೆ ನಮ್ಮ ಪ್ರಾರ್ಥನೆಯೊಂದೇ ಕಾರಣವಲ್ಲ. ನಮಗಾಗಿ ದೇವರಲ್ಲಿ ಪ್ರಾರ್ಥಿಸುವವರ ಪಾಲೂ ಅದರಲ್ಲಿ ಇರುತ್ತದೆ. ನಿಮ್ಮ ಗೆಳೆಯರನ್ನು ಪ್ರೀತಿಸಿ. ಪ್ರೀತಿಸಿದವರ ಕೈ ಬಿಡಬೇಡಿ.
--
ವ್ಯಕ್ತಿಯೊಬ್ಬ ಪಾರ್ಕಿನ ಬೆಂಚಿನ ಮೇಲೆ ಕುಳಿತು ಜಾರುಬಂಡೆ ಆಡುತ್ತಿದ್ದ ಪುಟ್ಟ ಹುಡಗನೊಬ್ಬನ ಆಟವನ್ನು ನೋಡುತ್ತಿದ್ದ. ಕೆಲ ಸಮಯದ ನಂತರ ಆತನ ಪಕ್ಕದಲ್ಲಿ ಮಹಿಳೆಯೊಬ್ಬಳು ಬಂದು ಕುಳಿತಳು. ' ಆ ಹುಡುಗ ನನ್ನ ಮಗ ' ಎಂದು ಮಾತಿಗಿಳಿದಳಾಕೆ. ' ತುಂಬಾ ಮುದ್ದಾಗಿದೆ ನಿಮ್ಮ ಮಗು ' ಎಂದು ನಕ್ಕ ಆ ವ್ಯಕ್ತಿ, ಪಾರ್ಕಿನಲ್ಲಿ ಚಿಕ್ಕ ಸೈಕಲ್ ಓಡಿಸುತ್ತಿದ್ದ ಹುಡುಗಿಯೊಬ್ಬಳತ್ತ ಕೈತೋರಿಸಿ ಹೇಳಿದ, ' ಆಕೆ ನನ್ನ ಮಗಳು ಜಾಹ್ನವಿ '.
ನಂತರ ವಾಚ್ ನೋಡಿಕೊಂಡ ವ್ಯಕ್ತಿ ತನ್ನ ಮಗಳನ್ನು ಕೂಗಿದ. ' ಪುಟ್ಟ ಹೊತ್ತಾಯ್ತು ಹೋಗೋಣ್ವಾ? '
' ಇನ್ನೊಂದು ಐದು ನಿಮಿಷ ಅಪ್ಪ...ಆಮೇಲೆ ಹೋಗೋಣ '
ಐದು ನಿಮಿಷದ ನಂತರ ಆತ ಮತ್ತೆ ಎದ್ದು ನಿಂತು ತನ್ನ ಮಗಳನ್ನು ಕರೆದ...'ಐದು ನಿಮಿಷ ಅಪ್ಪ ' ಎನ್ನುವ ಅದೇ ಉತ್ತರ ಆ ಹುಡುಗಿಯಿಂದ ಬಂತು.
' ಆಯ್ತು... ' ಎಂದಂದು ಆತ ನಕ್ಕು ಸುಮ್ಮನೆ ಕುಳಿತ.
'ನಿಮಗೆ ನಿಜಕ್ಕೂ ತುಂಬಾ ತಾಳ್ಮೆಯಿದೆ ' ಎಂದು ಆಶ್ಚರ್ಯದಿಂದ ಆತನಿಗೆ ಹೇಳಿದಳು ಆ ಮಹಿಳೆ.
ಆಗ ಆ ವ್ಯಕ್ತಿ ನಿಟ್ಟುಸಿರು ಬಿಟ್ಟು ಹೇಳಿದ, ' ನನ್ನ ಹಿರಿಯ ಮಗ ಕಳೆದ ವರ್ಷ ಇದೇ ಹತ್ತಿರದ ರಸ್ತೆಯಲ್ಲಿ ಸೈಕಲ್ ನಡೆಸುತ್ತಿದ್ದ. ವೇಗವಾಗಿ ಬಂದ ಕಾರೊಂದು ಆತನನ್ನು ಕೊಂದುಬಿಟ್ಟಿತು. ನಾನು ಅವನೊಂದಿಗೆ ಹೆಚ್ಚು ಸಮಯ ಕಳೆಯಲೇ ಇಲ್ಲ ಎನ್ನುವ ಕೊರಗು ಸದಾ ನನ್ನನ್ನು ಕಾಡುತ್ತಲೇ ಇರುತ್ತದೆ. ಅವನೊಂದಿಗೆ ಮತ್ತೆ ಐದು ನಿಮಿಷ ಕಳೆಯುವ ಅವಕಾಶ ಸಿಗುತ್ತದೆಂದರೆ ನಾನು ಏನು ಮಾಡುವುದಕ್ಕೂ ಸಿದ್ಧ. ಅಂತಹ ತಪ್ಪನ್ನು ನನ್ನ ಮಗಳೊಂದಿಗೂ ಮಾಡುವುದಕ್ಕೆ ನನಗಿಷ್ಟವಿಲ್ಲ. ತನಗೆ ಆಟವಾಡುವುದಕ್ಕೆ ಇನ್ನು ಐದು ನಿಮಿಷ ಸಿಕ್ಕಿತು ಎಂದಾಕೆ ಭಾವಿಸುತ್ತಿದ್ದಾಳೆ, ಆದರೆ ಆಕೆ ಆಟವಾಡುವುದನ್ನು ನೋಡುವುದಕ್ಕೆ ನನಗೆ ಇನ್ನೂ ಐದು ನಿಮಿಷ ಸಿಗುತ್ತದಲ್ಲ ಎಂಬ ಸಂತೋಷ ನನಗೆ '
ನೀತಿ: ಜೀವನವೆಂಬುದು ನೀವು ಯಾವುದಕ್ಕೆ ಹೆಚ್ಚು ಆದ್ಯತೆ ಕೊಡುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಿರಿ.
--
ದುರಾಸೆಗೆ ಮಿತಿಯೆಲ್ಲಿದೆ?
ಅದು ಪರ್ವತ ಶ್ರೇಣಿಗಳಿಂದ ಕೂಡಿದ್ದ ಪ್ರದೇಶ. ಅಲ್ಲಿನ ಭೂಭಾಗದ ಮೇಲೆ ಮೇಲಿಂದ ಮೇಲೆ ಹಿಮ ಆವರಿಸಿಕೊಳ್ಳುತ್ತಿತ್ತು. ಪರ್ವತ ಶ್ರೇಣಿಯಲ್ಲಿ ವರ್ಷವಿಡೀ ಒಂದೊಂದೇ ಚಿಕ್ಕಚಿಕ್ಕ ತಾತ್ಕಾಲಿಕ ಜಲಪಾತಗಳು ಸೃಷ್ಟಿಯಾಗಿ ಕೆಲವೇ ದಿನಗಳಲ್ಲಿ ಮಾಯವಾಗುತ್ತಿದ್ದವು. ಈ ಕಾರಣದಿಂದ ಆ ಪ್ರದೇಶವನ್ನು ಅಪರೂಪದ ಪ್ರವಾಸಿ ಕ್ಷೇತ್ರವೆಂದೂ, ಭೂಲೋಕದ ಸ್ವರ್ಗವೆಂದೂ ಕರೆಯಲಾಗುತ್ತಿತ್ತು.
ಇಂಥ ಪ್ರದೇಶಕ್ಕೆ, ಗೌರವಾನ್ವಿತ ಕುಟುಂಬಕ್ಕೆ ಸೇರಿದ ಮಹಿಳೆಯೊಬ್ಬರು ಪ್ರವಾಸಕ್ಕೆಂದು ಆಗಮಿಸಿದ್ದರು. ಪರ್ವತ ಶ್ರೇಣಿಯಲ್ಲಿ ಅಡ್ಡಾಡುತ್ತಿದ್ದ ಸಂದರ್ಭದಲ್ಲಿ ಕೊರಕಲಿನಂತಿದ್ದ ಪ್ರದೇಶದಲ್ಲಿ ಭಾರೀ ಬೆಲೆ ಬಾಳುವ ಮುತ್ತಿನ ಹರಳೊಂದು ಅವರಿಗೆ ಸಿಕ್ಕಿತು.
ಮರುದಿನ ಮತ್ತೊಬ್ಬ ಪ್ರವಾಸಿ ಈಕೆಯನ್ನು ಭೇಟಿಯಾಗಿ ಹೇಳಿದ: ' ಅಮ್ಮಾ, ಬೆಳಗಿನಿಂದ ಪರ್ವತ ಶ್ರೇಣಿಯ ಉದ್ದಕ್ಕೂ ಸುತ್ತಾಡಿ ಬಂದಿದ್ದೇನೆ. ವಿಪರೀತ ಹಸಿದಿದ್ದೇನೆ. ತಿನ್ನಲು ಏನಾದರೂ ಕೊಡಿ. ಹಸಿವು ನೀಗಿಸಿ...'
ಹಸಿದವರಿಗೆ ಅನ್ನ ಕೊಡುವುದು ತನ್ನ ಧರ್ಮ ಎಂದುಕೊಂಡ ಆಕೆ, ಆಹಾರದ ಪೊಟ್ಟಣ ತೆಗೆಯಲು ಬ್ಯಾಗ್ ತೆರೆದಳು. ಈ ಪ್ರವಾಸಿ ಕುತೂಹಲದಿಂದ ಇಣುಕಿ ನೋಡಿದ. ಆಗಲೇ, ಬ್ಯಾಗ್‌ನ ಒಳಗಿದ್ದ ಕಣ್ಣು ಕೋರೈಸುವಂಥ ಹೊಳಪಿನ ಮುತ್ತಿನ ಹರಳು ಕಾಣಿಸಿತು. ಆತ, ಅವಸರದಲ್ಲಿ ಊಟ ಮುಗಿಸಿದ ನಂತರ-' ಅಮ್ಮಾ, ನನಗೆ ಮುತ್ತಿನ ಹರಳು ಪಡೆಯಬೇಕೆಂಬ ಆಸೆಯಾಗಿದೆ. ಅದನ್ನು ಕೊಡುವಿರಾ? ' ಎಂದು ಪ್ರಾರ್ಥಿಸಿದ.
ಅವನ ಮಾತು ಮುಗಿಯುತ್ತಿದ್ದಂತೆಯೇ ಈಕೆ ಅದನ್ನು ಕೊಟ್ಟೇ ಬಿಟ್ಟಳು. ಆನಂತರದ ಒಂದೆರಡು ಗಂಟೆಗಳ ಕಾಲವೂ ಆ ಪ್ರವಾಸಿಗ ಅಲ್ಲಿಯೇ ಇದ್ದ. ಆಗಲೂ, ಅಪರೂಪದ ಮುತ್ತಿನ ಹರಳು ಕಳೆದುಕೊಂಡ ಸಂಕಟ ಅವಳ ಮುಖದಲ್ಲಿ ಸ್ವಲ್ಪವೂ ಕಾಣಲಿಲ್ಲ.
ಈ ಕಡೆ, ಮುತ್ತಿನ ಹರಳು ಪಡೆದುಕೊಂಡ ಯಾತ್ರಿಕ ತನ್ನ ಅದೃಷ್ಟಕ್ಕೆ ವಂದಿಸಿದ. ಅನಿರೀಕ್ಷಿತವಾಗಿ ಒಲಿದು ಬಂದ ಆಭರಣವನ್ನು ನೆನಪಿಸಿಕೊಂಡು ಥೈ ಥೈ ಥೈ ಕುಣಿದ. ಈ ಹರಳನ್ನು ಮಾರಿದರೆ ಅದೆಷ್ಟೋ ಲಕ್ಷ ಹಣ ಸಿಗುತ್ತದೆ. ಅದನ್ನು ಒಂದು ಕಡೆ ಕೂಡಿಟ್ಟರೆ, ಸಾಯುವವರೆಗೂ ನೆಮ್ಮದಿಯಿಂದ ಬದುಕಬಹುದು ಎಂದುಕೊಂಡ. ಈ ಯೋಚನೆಯಲ್ಲಿಯೇ ಆತ ಪ್ರವಾಸ ಮೊಟಕುಗೊಳಿಸಿ ತನ್ನ ಊರಿಗೆ ಹೋಗಿಬಿಟ್ಟ. ಅದಕ್ಕೂ ಮುಂಚೆ, ತನಗೆ ಹರಳು ನೀಡಿದ್ದ ಹೆಂಗಸನ್ನು ಭೇಟಿ ಮಾಡಿ ತನ್ನ ಮನದ ಇಂಗಿತವನ್ನು ತಿಳಿಸಿದ್ದ. ಆಕೆ ನಸುನಕ್ಕು-' ನೀವು ಹೋಗಿ ಬನ್ನಿ. ಒಳ್ಳೆಯದಾಗಲಿ. ನಾನು ಇನ್ನೂ ಒಂದು ತಿಂಗಳವರೆಗೆ ಇಲ್ಲಿಯೇ ಇರುತ್ತೇನೆ ' ಎಂದಿದ್ದಳು.
ಹೀಗೆ ಹೋದವನು ಹತ್ತು ದಿನಗಳ ನಂತರ ಅದೇ ಪರ್ವತ ಶ್ರೇಣಿಗೆ ವಾಪಸ್ ಬಂದ. ತನಗೆ ಮುತ್ತಿನ ಹರಳು ನೀಡಿದ್ದ ಹೆಂಗಸನ್ನು ಹುಡುಕಿಕೊಂಡು ಹೋದ. ಆಕೆ ಕಂಡೊಡನೆ ಅದೇ ಹಳೆಯ ವಿಶ್ವಾಸದಿಂದ ' ಅಮ್ಮಾ ' ಎಂದ. ಆಕೆ ಇವನನ್ನು ಪ್ರೀತಿಯಿಂದ ಮಾತಾಡಿಸಿದಳು. ಕ್ಷೇಮ ಸಮಾಚಾರ ವಿಚಾರಿಸಿದಳು. ಆನಂತರ ಇವನು ಬ್ಯಾಗಿನಿಂದ ಈ ಹಿಂದೆ ಪಡೆದುಕೊಂಡಿದ್ದ ಮುತ್ತಿನ ಹರಳನ್ನು ಆಕೆಯ ಕೈಗಿಟ್ಟು ಹೇಳಿದ: ನನಗೆ ಮೊದಲೇ ಗೊತ್ತಿತ್ತು. ಇದು ಲಕ್ಷ ಲಕ್ಷ ರುಪಾಯಿ ಬೆಲೆಬಾಳುವ ಆಭರಣ. ಇದಕ್ಕಿಂತ ಹೆಚ್ಚಿನ ಬೆಲೆ ಬಾಳುವ ಆಭರಣ ನಿಮ್ಮಲ್ಲಿ ಇದೆಯೇನೋ. ಆ ಕಾರಣದಿಂದಲೇ ಇದು ಬೇಕು ಅಂದ ತಕ್ಷಣ ನೀವು ಕೊಟ್ಟುಬಿಟ್ರೇನೋ ಎಂಬ ಅನುಮಾನ ನನ್ನನ್ನು ಬಿಟ್ಟೂ ಬಿಡದೆ ಕಾಡಿತು. ಹೆಚ್ಚು ಬೆಲೆ ಬಾಳುವುದನ್ನೇ ಪಡೆಯಬೇಕು ಎಂಬ ಆಸೆಯಿಂದ ಈ ಹರಳನ್ನು ವಾಪಸ್ ಮಾಡುತ್ತಿದ್ದೇನೆ...'
ಆಸೆಗೆ ಮಿತಿಯುಂಟು. ಆದರೆ ದುರಾಸೆಗೆ ಮಿತಿ ಎಂಬುದೇ ಇಲ್ಲ ಎಂಬುದನ್ನು ಸೂಕ್ಷ್ಮವಾಗಿ ವಿವರಿಸುವ ಈ ಕಥೆ ಪೌಲ್ ಕೊಯಿಲೋ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದು.
-ವಿಶ್ವೇಶ್ವರ ಭಟ್
Comments
Post a Comment