ದಕ್ಷಿಣ ಕಾಶಿ ಮಹಾಕೂಟ,ಕಿಗ್ಗ ಎಂಬ ಸಗ್ಗದ ಸಿರಿ,ಜಮಾಲಾಬಾದ್ ಕಮಾಲ್ ನೋಡಿ


ದಕ್ಷಿಣ ಕಾಶಿ ಮಹಾಕೂಟ* ಮಹೇಶ ಬಿ.ನರೇಗಲ್ಲ, ಬಾಗಲಕೋಟ

ಭಾರತದ ದಕ್ಷಿಣ ಕಾಶಿಯಂದೇ ಪ್ರಸಿದ್ಧವಾಗಿರುವ ಈ ಕ್ಷೇತ್ರ ಬಾದಾಮಿಯಿಂದ 14ಕಿಮೀ ದೂರ ಕ್ರಮಿಸಿದರೆ 'ಮಹಾಕೂಟ' ಸಿಗುತ್ತದೆ. ಪ್ರಾಚೀನ ದೇವಾಲಯಗಳ ಕೂಟವೇ 'ಮಹಾಕೂಟ'. ಇಲ್ಲಿ ನಿರ್ಮಿತವಾದ ಸುಂದರ, ಹಸಿರಿನಿಂದ ಕೂಡಿದ ಬೆಟ್ಟಗಳ ಮಧ್ಯೆ ಗುಡಿಗಳ ಗುಂಪು ಇದೆ. ಜಲ ಹಾಗೂ ವನಸಿರಿಗಳಿಂದ ಕೂಡಿದ ಈ ಕ್ಷೇತ್ರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ನಾನಾ ದೇವರಗಳು ಒಂದೇ ಆವರಣದಲ್ಲಿ ಮೇಳೈಸಿದ್ದು, ಆವರಣದಾಚೆಗೂ ಒಂದೆರಡು ಗುಡಿಗಳಿವೆ. ಹಸಿರು ಹಾಗೂ ಬೆಟ್ಟಗಳ ಮಧ್ಯೆ ಇರುವ ಮಹಾಕೂಟ ಈ ಭಾಗದ ಜನರಿಗೆ 'ದಕ್ಷಿಣ ಕಾಶಿ'ಯಾಗಿದೆ.

ಐತಿಹ್ಯ
ಕೋಟಿ ಲಿಂಗಗಳಾಗಲು ಒಂದೇ ಒಂದು ಲಿಂಗ ಕಡಿಮೆಯಾದ ಕಾರಣ ಈ ಕ್ಷೇತ್ರ 'ಕಾಶಿ'ಯಾಗುವ ಅವಕಾಶ ಕಳೆದುಕೊಂಡಿತು ಎಂದು ಹೇಳಲಾಗುತ್ತಿದೆ. ನಾನಾ ಲಿಂಗಗಳ ಕೂಟವಾದ ಇದು 'ಮಹಾಕೂಟ' ಎಂದು ಕರೆಯಲ್ಪಡುತ್ತದೆ.

ಇಲ್ಲಿನ ಕಲ್ಯಾಣಿ 'ವಿಷ್ಣು ಪುಷ್ಕರಣಿ' ಎಂದು ಹೆಸರುವಾಸಿಯಾಗಿದೆ. ಶಿವ, ವಿಷ್ಣು, ಗೌರಿ, ಸರಸ್ವತಿ, ವೀರಭದ್ರ, ಇನ್ನಿತರ ದೇವತೆಗಳ ಅಪೂರ್ವ ಶಿಲ್ಪಕಲೆ ನೋಡುಗರನ್ನು ಮೂಕವಿಸ್ಮಯ ಮಾಡುವಂತಿದೆ.

ಹೆಸರು ಬಂದಿದ್ದು ಹೀಗೆ...
ಮಂಗಲೇಶನ ಶಾಸನವೊಂದು ಇಲ್ಲಿಯ ದೇವರನ್ನು ಮಕುಟೇಶ್ವರನಾಥ ಎಂದು ಹೇಳಲಾಗುತ್ತದೆ. ಅದೇ 'ಮಹಾಕುಟೇಶ್ವರ' ಕ್ರಮೇಣ 'ಮಾಕೂಟೇಶ್ವರ'ನಾಗಿ ನಂತರ 'ಮಹಾಕೂಟೇಶ್ವ'ನಾಗಿ ಕರೆಯಲ್ಪಡುತ್ತಿದೆ. ಈ ಹೆಸರಿನಿಂದಾಗಿ ಕ್ಷೇತ್ರಕ್ಕೆ 'ಮಹಾಕೂಟ' ಎಂದು ಹೆಸರು ಬಂದಿತು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ.

ಶಿಲ್ಪಕಲೆಯ ಶೈಲಿ
ಮಾಕೂಟೇಶ್ವರ ಮಂದಿರ ದ್ರಾವೀಡ ವಿಮಾನ ಶೈಲಿಯಾಗಿದೆ. ಮಂದಿರದ ಹೊರಭಿತ್ತಿ, ಶಿವ, ಅರ್ಧನಾರೀಶ್ವರ, ಲಕುಲೀಶ ಮೊದಲಾದ ಶಿಲ್ಪಗಳಿಂದ ಅಲಂಕೃತವಾಗಿದೆ. ಲಗುಳೇಶ್ವರ, ಸರಸ್ವತಿ, ವೀರಭದ್ರ, ವೇಣುಗೋಪಾಲ ಮೂರ್ತಿ ಆಕರ್ಷಕವಾಗಿವೆ. ವಿಷ್ಣು ಪುಷ್ಕರಣಿಯ ಉತ್ತರ ದಡದಲ್ಲಿರುವ ಸಂಗಮೇಶ್ವರ ದೇಗುಲ ಔತ್ತಕೀಯ ವಾಸ್ತುಶಿಲ್ಪ ಶೈಲಿಯಿಂದ ಕೂಡಿದೆ.

ಹೊರಭಿತ್ತಿ ಶಿಲ್ಪಗಳು ಇದರ ವಿಶೇಷತೆ. ಇದರ ದಕ್ಷಿಣ ಗೋಡೆಯ ಮೇಲೆ ಲಕುಲೀಶ ಮೂರ್ತಿ, ಉತ್ತರ, ಪಶ್ಚಿಮ ಗೋಡೆಗಳ ಮೇಲೆ ಹರಿಹರ, ಅರ್ಧನಾರೀಶ್ವರ ಪ್ರತಿಮೆಗಳಿವೆ. 'ಕಲ್ಯಾಣಿ'ಯ ಪಶ್ಚಿಮಕ್ಕಿರುವ ಮಹಾಲಿಂಗ ಗುಡಿಯ ಬಾಹ್ಯ ಭಿತ್ತಿಗಳಲ್ಲಿ ವರಹಾ, ಉಗ್ರ ನರಸಿಂಹ, ಶಂಖ, ಚಕ್ರದಾರಿ ವಿಷ್ಣು ದೇವತೆಗಳಿವೆ. ಕ್ರಿ.ಶ.602ರ ಮಂಗಲೇಶನ ವಿಜಯ ಸ್ತಂಭವು ಕುಲಿಚೂರ್ಯರಿಂದ ಗೆದ್ದು ತಂದ ಸಂಪತ್ತನ್ನು ಆತ ಮಕುಟೇಶ್ವರನಾಥನಿಗೆ ಸಲ್ಲಿಸಿದ ಬಗ್ಗೆ ಹಾಗೂ ದೇವಾಲಯಕ್ಕೆ ಹತ್ತು ಹಳ್ಳಿಗಳನ್ನು ದತ್ತಿಯಾಗಿ ಬಿಟ್ಟುಕೊಟ್ಟ ಬಗ್ಗೆ ತಿಳಿಸುತ್ತದೆ.

ಬತ್ತದ ಹೊಂಡ..!
ಹಲವಾರು ವಿಶೇಷತೆಗಳಲ್ಲಿ ವಿಶೇಷ ಎನಿಸುವುದು ಇಲ್ಲಿನ ಹೊಂಡ. ಸತತ ಬರಗಾಲದ ಭೀಕರತೆಗೆ ಹಳ್ಳ, ಕೊಳ್ಳ, ಕೆರೆ, ಬಾವಿಗಳು ಕ್ರಮೇಣ ಬತ್ತಿದರೂ ಮಹಾಕೂಟದ ಹೊಂಡ ಮಾತ್ರ ಬರದ ಭೀಕರತೆಗೂ ಒಳಗಾಗಿ ಬತ್ತದೇ ತನ್ನಮಟ್ಟ ಕಾಯ್ದುಕೊಂಡಿದೆ. ಇಲ್ಲಿ ಉದ್ಭವವಾಗುವ ಹೆಚ್ಚಿನ ನೀರನ್ನು ಕಾಲುವೆ ಮೂಲಕ ಹೊರಹಾಕಿದರೂ ಬೊಗಸೆ ನೀರೂ ಕಡಿಮೆಯಾಗದೇ ಎಂದಿನಂತೆಯೇ ಕಾಣುತ್ತಿದ್ದು, ಬರದ ನಾಡಿನ ಚೇತನ ಚೆಲುಮೆಯಾಗಿದೆ. ಈ ಹೊಂಡದಲ್ಲಿ ಈಶ್ವರ ಲಿಂಗವಿದ್ದು, ಹೊಂಡದಲ್ಲಿ ಮುಳುಗಿ ದರ್ಶನ ಮಾಡುವುದು ಇನ್ನೊಂದು ವಿಶೇಷ. ಈಜು ಬಲ್ಲವರು ಮಾತ್ರ ನೀರಿನಲ್ಲಿ ಮುಳುಗಿ ಈಶ್ವರ ದರ್ಶನ ಪಡೆದು ಬರುತ್ತಾರೆ. ಇಷ್ಟೆಲ್ಲ ವಿಶೇಷತೆ ಇರುವ ಮಹಾಕೂಟಕ್ಕೆ ಬರಲು ಬಾದಾಮಿಗೆ ಬಂದು ಅರ್ಧ ಗಂಟೆಗೊಮ್ಮೆ ಬಸ್ಸಿನ ಸೌಕರ್ಯವಿದೆ. ಸ್ವಂತ ವಾಹನ ಇದ್ದವರು ಬನಶಂಕರಿ ದೇವಿ ದರ್ಶನ ಪಡೆದು, ಶಿವಯೋಗಿ ಮಂದಿರ ನೋಡಿಕೊಂಡು ಮಹಾಕೂಟಕ್ಕೆ ತಲುಪಬಹುದು.

ಹೋಗೋದು ಹೇಗೆ?
ಪ್ರತಿದಿನ ಸಂಚರಿಸುವ ಯಶವಂತಪುರ-ಸೊಲ್ಲಾಪುರ ರೈಲ್ವೆ ಮುಖಾಂತರ ಬಾದಾಮಿಗೆ ಇಳಿದುಕೊಳ್ಳಬೇಕು. ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್‌ಗಳು, ಖಾಸಗಿ ಬಸ್ಸುಗಳು ಮೂಲಕ ಬಾದಾಮಿಗೆ ತಲುಪಬಹುದು.

ವಸತಿ ವ್ಯವಸ್ಥೆ
ಬಾದಾಮಿಯಿಂದ ಕೇವಲ 14 ಕಿಮೀ ದೂರದಲ್ಲಿ ಮೆಣಬಸ್ತಿ, ಬನಶಂಕರಿ ಹಾಗೂ ಶಿವಯೋಗಮಂದಿರ ನೋಡಿಕೊಂಡು ಮಹಾಕೂಟಕ್ಕೆ ತಲುಪಬೇಕು. ಮಹಾಕೂಟದಲ್ಲೂ ವಸತಿ ವ್ಯವಸ್ಥೆ ಇದೆ. ಆದರೆ ಬಾದಾಮಿಯಲ್ಲಿಯೇ ಉತ್ತಮ ಹೊಟೇಲ್‌ಗಳು ಇರುವುದರಿಂದ ಅಲ್ಲಿಯೇ ಉಳಿದುಕೊಳ್ಳುವುದು ಉತ್ತಮ.

ಶಿವಯೋಗಿಮಂದಿರದಲ್ಲಿ ನಿತ್ಯ ಮಧ್ಯಾಹ್ನ, ರಾತ್ರಿ ಉಚಿತ ಪ್ರಸಾದದ ವ್ಯವಸ್ಥೆ ಇರುತ್ತದೆ. ಮಹಾಕೂಟದಲ್ಲಿ ಜಾತ್ರೆ ಸಂದರ್ಭದಲ್ಲಿ ಮಾತ್ರ ಉಚಿತ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ. ಬಾದಾಮಿಯಲ್ಲಿ ಹೊಟೇಲ್‌ಗಳು ಇರುವುದರಿಂದ ಅಲ್ಲಿಂದಲೇ ಕೊಂಡು ಹೋಗಬಹುದು.

ಕಿಗ್ಗ ಎಂಬ ಸಗ್ಗದ ಸಿರಿ
ಕಿಗ್ಗ ಎಂಬ ಸಗ್ಗದ ಸಿರಿ: ಬೇಸಿಗೆಯ ದಿನಗಳಲ್ಲಿ ಇಲ್ಲಿಗೊಮ್ಮೆ ಬನ್ನಿ* ಶಶಿಧರ ಬಂಗೇರ, ಬೆಳ್ಳಾಯರು
ಕಿಗ್ಗ... ಮಲೆನಾಡಿನ ಮೂಲೆಯಲ್ಲಿರೋ ಸುಂದರವಾದ ಹಳ್ಳಿ. ಜನಸಂಖ್ಯೆ ಕಡಿಮೆಯಿದ್ದರೂ ಮೂಲಭೂತ ಸೌಕರ್ಯಕ್ಕೇನೂ ಕೊರತೆಯಿಲ್ಲದ ಇಲ್ಲಿ ಪಕ್ಕದಲ್ಲೇ ಎರಡು ಹಳ್ಳಿಗಳಿವೆ. ಮಗೆಬೈಲು ಮತ್ತು ಹುಲುಗಾರುಬೈಲು. ನಿಸರ್ಗ ಸೌಂದರ್ಯದಿಂದ ಜನಮನ ಸೂರೆಗೊಳ್ಳುವ ಈ ಹಳ್ಳಿಗಳು ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತದೆ. ಬೇಸಿಗೆಯಲ್ಲೂ ಕೂಲ್ ಆಗಿರುವ ಕಿಗ್ಗಕ್ಕೆ ಬೆಂಗಳೂರು, ಮೈಸೂರು ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಬರುವ ಪ್ರವಾಸಿಗರು, ಚಾರಣಿಗರು ಇಲ್ಲಿ ಹರಿವ ತೊರೆ, ಜಲಧಾರೆಯಲ್ಲಿ ಮಿಂದೆದ್ದು ಪುಳಕಿತರಾಗುತ್ತಾರೆ. ಹಳ್ಳಿಯಷ್ಟೇ ಸುಂದರವಾದ ಹಳ್ಳಿಗರ ಮನಸ್ಸನ್ನು ಕಂಡು ಧನ್ಯತಾಭಾವ ಅನುಭವಿಸುತ್ತಾರೆ. ಪ್ರವಾಸಿಗರ ಹಾಟ್‌ಸ್ಪಾಟ್ ಆಗಿರುವ ಕಿಗ್ಗ ಇತ್ತೀಚಿನ ದಿನಗಳಲ್ಲಿ ನಕ್ಸಲರ ಓಡಾಟ, ಎಎನ್‌ಎಫ್ ಸುತ್ತಾಟದಿಂದ ಸುದ್ದಿಯಲ್ಲಿದ್ದರೂ ಇಲ್ಲಿ ಪ್ರವಾಸಿಗರ ತಿರುಗಾಟಕ್ಕೆ ಭಂಗ ಉಂಟಾಗಿಲ್ಲ ಅನ್ನೋದು ನೆಮ್ಮದಿಯ ಸಂಗತಿ.

ಶೃಂಗೇರಿಯಿಂದ ಇಲ್ಲಿಗೆ ಬನ್ನಿ!
ಶೃಂಗೇರಿ ಶಾರದಾಂಬೆ ಸನ್ನಿಧಿಯಿಂದ 10ಕಿ.ಮೀ. ದೂರವಿರುವ ಕಿಗ್ಗ ಹಳ್ಳಿ ನಿಸರ್ಗ ಚೆಲುವಿನ ಬೀಡು. ಹೀಗಾಗಿ ಶಾರದಾಂಬೆಯ ದರ್ಶನಕ್ಕೆ ಬರುವ ಹೊರಜಿಲ್ಲೆ, ರಾಜ್ಯಗಳ ಭಕ್ತರು ಇಲ್ಲಿಗೆ ಭೇಟಿ ನೀಡುವುದು ಸುಲಭ. ಡಾಂಬಾರು ರಸ್ತೆಯೂ ಚೆನ್ನಾಗಿದ್ದು, ಪ್ರವಾಸಿಗರು ತ್ರಾಸವಿಲ್ಲದೆ ಸಂಚರಿಸಲು ಯಾವುದೇ ಸಮಸ್ಯೆಯಿಲ್ಲ.

ರಮಣೀಯ ತಾಣಗಳು
ಸಿರಿಮನೆ ಜಲಪಾತ
ಕಿಗ್ಗದ ಅತೀ ಪ್ರಸಿದ್ಧ ಪ್ರವಾಸಿ ತಾಣವೆಂದರೆ ಸಿರಿಮನೆ ಜಲಪಾತ. ಕಿಗ್ಗ ಪೇಟೆಯಿಂದ 6ಕಿ.ಮೀ. ದೂರದಲ್ಲಿರುವ ಈ ಜಲಪಾತ ಮಡಿಕೇರಿಯ ಅಬ್ಬಿ ಫಾಲ್ಸ್ ಅನ್ನು ನೆನಪಿಸುತ್ತದೆ. ಮೇಲಿನಿಂದ ವಿವಿಧ ಕವಲುಗಳಾಗಿ ಬಂಡೆಯ ಮೇಲಿಂದ ಧುಮ್ಮಿಕ್ಕುವ ಜಲಧಾರೆಯಲ್ಲಿ ವರ್ಷಪೂರ್ತಿ ನೀರು ಬತ್ತುವುದಿಲ್ಲ. ಆಗಸ್ಟ್‌ನಿಂದ ನವೆಂಬರ್‌ವರೆಗೆ ಇಲ್ಲಿ ನೀರಿನ ಬಿರುಸು ಕಡಿಮೆಯಗುವುದಿಲ್ಲ. ಹೀಗಾಗಿ ಇಲ್ಲಿ ಭೇಟಿಕೊಡುವ ಪ್ರವಾಸಿಗರ ಸಂಖ್ಯೆಯೂ ಜಾಸ್ತಿ. ಸಾಮಾನ್ಯವಾಗಿ ವರ್ಷದ ಹೆಚ್ಚಿನ ತಿಂಗಳು ಬರಿದಾಗದ ಜಲಧಾರೆಗೆ ನಿತ್ಯ ಪ್ರವಾಸಿಗರ ಬರವೂ ಇಲ್ಲ.

ಮಗೆಬೈಲು ಜಲಧಾರೆ
ಕಿಗ್ಗ ಪೇಟೆಯಿಂದ 4ಕಿಮೀ ದೂರದಲ್ಲಿರೋ ಮಗೆಬೈಲು ಹಳ್ಳಿಯ ದಟ್ಟ ಅರಣ್ಯದ ನಡುವೆ ಮರೆಯಾಗಿರುವ ಜಲಧಾರೆಯೊಂದಿದೆ. ಭಟ್ಟರ ಮನೆಯ ಹಿಂಬದಿ ಗುಡ್ಡವನ್ನೇರಿದರೆ ಪುಟ್ಟದಾದ 'ಮಗೆಬೈಲು ಜಲಪಾತಕ್ಕೆ ದಾರಿ' ಬೋರ್ಡ್ ಕಾಣಸಿಗುತ್ತದೆ. ಮುಂದೆ ಕಾಡಿನ ದಾರಿಯಲ್ಲಿ ಅಂದಾಜು ಎರಡು ಕಿಮೀ ಹತ್ತಿ, ಇಳಿಯುತ್ತಾ ಸಾಗಿದರೆ ಜಲಧಾರೆಯ ಬುಡದವರೆಗೆ ತಲುಪಲು ಸಾಧ್ಯ. ಕಾಡಿನಲ್ಲಿ ಮರೆಯಾಗಿರುವ ಮತ್ತು ದಾರಿ ಯೋಗ್ಯವಾಗಿರದ ಕಾರಣ ಇಲ್ಲಿಗೆ ಪ್ರವಾಸಿಗರು ಬರಲು ಕಷ್ಟಪಡುವುದಿಲ್ಲ. ಚಾರಣಿಗರು ಕಷ್ಟಪಟ್ಟಾದರೂ ಸರಿ, ಹತ್ತಿಯೇ ಸಿದ್ಧ ಎಂದು ಸಾಹಸಕ್ಕೆ ಮುಂದಾಗುತ್ತಾರೆ. ಇಲ್ಲಿಗೆ ಚಾರಣ ಬೆಳೆಸುವವರು ಜೀವನದಲ್ಲಿ ಮರೆಯಲಾಗದ ರೋಮಾಂಚನ ಅನುಭವ ಪಡೆಯುವುದರಲ್ಲಿ ಸಂಶಯವಿಲ್ಲ. ಮಳೆಗಾಲದಲ್ಲಿ ಇಂಬಳಗಳ ಕಾಟವಿದ್ದರೆ ಬೇಸಿಗೆಯಲ್ಲಿ ಸಮಸ್ಯೆಯಿಲ್ಲ.

ನರಸಿಂಹ ಪರ್ವತ
ಕಿಗ್ಗ ಪೇಟೆಯಲ್ಲಿನ ಋಷ್ಯಶೃಂಗೇಶ್ವರನ ಸನ್ನಿಧಿಯಿಂದ 7 ಕಿ.ಮೀ. ದೂರದಲ್ಲಿದೆ ನರಸಿಂಹ ಪರ್ವತ ಎನ್ನುವ ಚಾರಣಿಗರ ಸ್ವರ್ಗ. ಇಲ್ಲಿಗೆ ಹೋಗಲು ಕಾಡಿನ ದಾರಿಯಲ್ಲಿ ಹತ್ತಾರು ಅಡೆತಡೆಯನ್ನು ಎದುರಿಸುತ್ತ ಚಾರಣ ನಡೆಸಲೇಬೇಕು. ನರಸಿಂಹ ದೇವರ ಪಾದುಕೆ ಇಲ್ಲಿನ ಬಂಡೆಯ ಮೇಲೆ ನಿಸರ್ಗ ದತ್ತವಾಗಿ ಮೂಡಿರುವ ಕಾರಣ ಪರ್ವತಕ್ಕೆ ಈ ಹೆಸರು ಶಾಶ್ವತವಾಯಿತು ಎನ್ನುವ ಪ್ರತೀತಿಯೂ ಇದೆ. ಪರ್ವತದ ತುದಿಯಲ್ಲಿ ಋಷಿಮುನಿಗಳು ವಾಸಿಸುತ್ತಿದ್ದರು ಅನ್ನುವುದಕ್ಕೆ ಪುರಾವೆಯೂ ಸಿಗುತ್ತದೆ. ಅರೆಯುವ ಕಲ್ಲುಗಳು, ದೇವರ ಪುಟ್ಟ ವಿಗ್ರಹಗಳು ಇಲ್ಲಿವೆ.

ಮನೆಯೂಟದ ಸೊಗಸು
ಹಳ್ಳಿ ಎಂದಮೇಲೆ ಅಲ್ಲಿ ಸಾಮಾನ್ಯವಾಗಿ ಲಾಡ್ಜ್, ಐಶಾರಾಮಿ ಹೋಟೆಲ್‌ಗಳು ಇರಲಾರದು. ಅಲ್ಲೇನಿದ್ದರೂ ಗೂಡಂಗಡಿ ಇಲ್ಲವೇ ಮನೆಯೂಟ ಒದಗಿಸುವ ಸಣ್ಣದಾದ ಕ್ಯಾಂಟೀನ್‌ಗಳು ಮಾತ್ರ ಕಂಡುಬರುತ್ತವೆ. ಕಿಗ್ಗ ಪೇಟೆಯಲ್ಲಿ ಭಟ್ಟರ ಕ್ಯಾಂಟೀನ್ ಕಳೆದ ಹಲವು ದಶಕಗಳಿಂದ ಕಾರ್ಯಾಚರಿಸುತ್ತ ಚಾರಣಿಗರು, ಪ್ರವಾಸಿಗರ ಹಸಿವೆ ತಣಿಸುತ್ತಿದೆ. ಇಲ್ಲಿ ಬೆಳಗ್ಗಿನ ತಿಂಡಿಗೆ ಶುಚಿರುಚಿಯಾದ ಅವಲಕ್ಕಿ ಉಪ್ಪುಕರಿ, ಮಧ್ಯಾಹ್ನದ ವೇಳೆ ಅನ್ನ, ಸಾರು ಭಾರೀ ಫೇಮಸ್.

ಸ್ಟೇ ಸೌಲಭ್ಯವಿಲ್ಲ
ಕಿಗ್ಗದಲ್ಲಿ ಪ್ರವಾಸಿಗರು ಉಳಿಯಲು ಮನಸ್ಸು ಮಾಡಿದರೆ ಹಳ್ಳಿಗರಲ್ಲಿ ಮೊದಲೇ ವಿಚಾರಿಸುವುದು ಒಳಿತು. ಇಲ್ಲವಾದಲ್ಲಿ ಪಕ್ಕದ ಶಂಗೇರಿ ಇಲ್ಲವೇ ಆಗುಂಬೆಯಲ್ಲಿ ಉಳಿಯಬಹುದು. ಆಗುಂಬೆಯಲ್ಲಿ ಸರಕಾರಿ ವಸತಿಗೃಹ, ಲಾಡ್ಜ್‌ಗಳು ಇದ್ದು, ಉತ್ತಮ ವ್ಯವಸ್ಥೆಯನ್ನು ಕಲ್ಪಿಸುತ್ತವೆ. ಶೃಂಗೇರಿಯಲ್ಲಿ ಮಠದ ಛತ್ರ, ಲಾಡ್ಜ್, ಸರಕಾರಿ ವಸತಿಗೃಹಗಳು ಇದ್ದು ಪ್ರವಾಸಿಗರಿಗೆ ಉತ್ತಮ ಸೌಲಭ್ಯವನ್ನು ಒದಗಿಸುತ್ತಿವೆ.

ಜಮಾಲಾಬಾದ್ ಕಮಾಲ್ ನೋಡಿ
ಜಮಾಲಾಬಾದ್ ಕಮಾಲ್ ನೋಡಿ* ಹೇಮಮಾಲಾ
ಜಮಾಲಾಬಾದ್, ನರಸಿಂಹಗಡ ಹಾಗೂ ಗಡಾಯಿಕಲ್ಲು ಎಂಬ ವಿವಿಧ ಹೆಸರಿನಿಂದ ಕರೆಯಲ್ಪಡುವ ಅಕರ್ಷಕ ಕೋಟೆಯು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ 6 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಈ ಕೋಟೆಯು, ಬೃಹದಾಕಾರದ ಗ್ರಾನೈಟ್ ಕಲ್ಲಿನ ತುದಿಯಲ್ಲಿದೆ. ಹಿಂದೆ ಇಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕೋಟೆ ಇತ್ತಂತೆ. 1794 ರಲ್ಲಿ, ಟಿಪ್ಪು ಸುಲ್ತಾನನು ಇದನ್ನು ನವೀಕರಿಸಿ ತನ್ನ ತಾಯಿಯಾದ ಜಮಾಲಾಬಿಯ ನೆನಪಿಗಾಗಿ 'ಜಮಾಲಾಬಾದ್'
ಎಂದು ಹೆಸರಿಟ್ಟನಂತೆ.

ಜಮಲಾಬಾದ್ ಕೋಟೆಯನ್ನೇರಲು 1876 ಮೆಟ್ಟಿಲುಗಳನ್ನೇರಬೇಕು. ಆರಂಭದಲ್ಲಿ ಸುಲಭವಾಗಿ ಹತ್ತಬಹುದಾದರೂ ಕೊನೆಗೆ ತೀರಾ ಕಡಿದಾದ ಮೆಟ್ಟಿಲುಗಳಿವೆ. ಅಲ್ಲಿ ಹಸಿರು ಮರಗಳ ನೆರಳು ಕಡಿಮೆ. ಹಾಗಾಗಿ ಬಿಸಿಲಿನ ಝಳವೂ ನಮ್ಮ ಶ್ರಮ ಹೆಚ್ಚಿಸುತ್ತದೆ.

ದಾರಿಯಲ್ಲಿ ಒಂದು ಕಡೆ ಮುರಿದು ಬಿದ್ದ ಫಿರಂಗಿ ಈಗಲೂ ಇದೆ. ಕೋಟೆಯ ಮೇಲೆ ಬಹುಶ: ಮದ್ದುಗುಂಡುಗಳನ್ನು ಇಡುತ್ತಿದ್ದ ಕೋಣೆ ಇದೆ. ಒಂದು ಕೊಳವಿದೆ. ಆದರೆ ಅದರ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ಕೋಟೆಯನ್ನು ಹತ್ತಲು ಶ್ರಮ ಹಾಗೂ 3-4 ತಾಸು ಸಮಯ ಬೇಕು. ಆದರು, ಕೋಟೆಯ ಮೇಲಿನಿಂದ ಕಾಣಿಸುವ ಪ್ರಕೃತಿ ಸೌಂದರ್ಯ ಈ ಶ್ರಮವನ್ನು ಸಾರ್ಥಕಗೊಳಿಸುತ್ತದೆ.

ಬಿಸಿಲಿನ ಝಳವು ಜೋರಾಗಿ ಇದ್ದುದರಿಂದ, ನಾವು ದಾರಿಯುದ್ದಕ್ಕೂ ಕಿತ್ತಳೆ, ಸೌತೆಕಾಯಿ ತಿನ್ನುತ್ತಾ ನಿಧಾನವಾಗಿ ಚಾರಣ ಮಾಡಿದೆವು. ಬೆಳಗ್ಗೆ ಸುಮಾರು 9 ಗಂಟೆಗೆ ಹತ್ತಲಾರಂಭಿಸಿದ್ದೆವು. ಎಲ್ಲರೂ ಕೋಟೆಯನ್ನೇರಿ ಕೆಳಗಿಳಿಯುವಷ್ಟರಲ್ಲಿ ಮಧ್ಯಾಹ್ನ 3 ಗಂಟೆ ಆಗಿತ್ತು.

ಜಮಾಲಾಬಾದ್ ಕೋಟೆ ಪ್ರವೇಶಿಸಲು ಅರಣ್ಯ ಇಲಾಖೆಯ ಅನುಮತಿ ಬೇಕು. ಅಲ್ಲಿ ಟಿಕೆಟ್ ಕೌಂಟರ್ ಇದೆ. ಕೋಟೆಯ ಕೆಳಭಾಗದಲ್ಲಿ ಒಂದು ಸಣ್ಣ ಅಂಗಡಿ ಇದ್ದು, ಅದರಲ್ಲಿ ನೀರು, ಜ್ಯೂಸ್ ಇತ್ಯಾದಿ ಸಿಗುತ್ತದೆ. ಆದರೆ ಊಟ ಸಿಗುವುದಿಲ್ಲ. ಹಾಗಾಗಿ, ನಮಗೆ ಊಟ ಬೇಕಿದ್ದರೆ ನಾವೇ ಒಯ್ಯಬೇಕು ಅಥವಾ ಬೆಳ್ತಂಗಡಿ-ಉಜಿರೆ ಗೆ ಹೋಗಬೇಕು.

Comments