ಹೊನ್ನೆಲೆಗಳ ಹೊನ್ನಾಳಿ


ತನ್ನ ವಿಶಿಷ್ಟ ಸಂಸ್ಕೃತಿ, ಭಾಷೆಯಿಂದ ಗಮನ ಸೆಳೆದಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿಗೆ ಐತಿಹಾಸಿಕ ಹಿನ್ನೆಲೆ ಇದೆ. ಅದನ್ನು ಸಾರಿ ಹೇಳುವಂತೆ ಪಾಳೇಗಾರರು ಕಟ್ಟಿದ ಕೋಟೆಯ ದಿಡ್ಡಿಬಾಗಿಲ ಅವಶೇಷ ತುಂಗಭದ್ರಾ ನದಿಗೆ ಮುಖ ಮಾಡಿ ನಿಂತಿದೆ.

ಪಟ್ಟಣದ ಆಕರ್ಷಣೆಗಳಲ್ಲಿ ಮುಖ್ಯವಾದುದು ತುಂಗಭದ್ರಾ ತೀರದ ಪ್ರಶಾಂತ ವಾತಾವರಣದಲ್ಲಿರುವ, ದ್ವಿತೀಯ ಮಂತ್ರಾಲಯವೆಂದೇ ಪ್ರಸಿದ್ಧಿ ಪಡೆದಿರುವ ರಾಘವೇಂದ್ರಸ್ವಾಮಿಗಳ ಮಠ. ಮಾರಿಕಾಂಬ ದೇವಸ್ಥಾನ, ಶ್ರೀ ಹಳದಮ್ಮ ದೇವಸ್ಥಾನ, ದುರ್ಗಾಂಬ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನಗಳೊಂದಿಗೆ ಜಾಮಿಯಾ ಮಸೀದಿ ಹಾಗೂ ಚರ್ಚ್, ಬ್ರಿಟಿಷರ ಕಾಲದ ಹಳೆಯ ಕಟ್ಟಡಗಳೂ ಗಮನ ಸೆಳೆಯುತ್ತವೆ.

ಹೊನ್ನಾಳಿಗೆ ಆತುಕೊಂಡಿರುವ ಹಿರೇಕಲ್ಮಠದಲ್ಲಿನ ಪ್ರಸಿದ್ಧ ಬೃಹಚ್ಛಿಲಾಮಠ (ಹಿರೇಕಲ್ಮಠ) ಸಂಪೂರ್ಣ ಶಿಲೆಯಿಂದಲೇ ನಿರ್ಮಾಣವಾಗಿದೆ. ಚನ್ನಪ್ಪಸ್ವಾಮಿ ಗದ್ದುಗೆ ಇರುವ ಈ ದಿವ್ಯ ಸನ್ನಿಧಿ ಸರ್ವಧರ್ಮೀಯರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ.

ಬ್ರಿಟಿಷರ ಕಾಲದಲ್ಲಿ ತುಂಗಭದ್ರಾ ತೀರದ ಪ್ರಕೃತಿ ಮಡಿಲಲ್ಲಿ ನಿರ್ಮಿತವಾದ ಪ್ರವಾಸಿ ಮಂದಿರ ಮಹಾತ್ಮಾ ಗಾಂಧೀಜಿಯವರು ಪದಾರ್ಪಣೆ ಮಾಡಿ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ನೀಡಿದ ಸ್ಥಳವಾಗಿದೆ. ಇನ್ನು ಹೊನ್ನಾಳಿ-ತುಮ್ಮಿನಕಟ್ಟೆ ರಸ್ತೆಯಲ್ಲಿ ಐದು ಕಿಲೋಮೀಟರ್ ದೂರದಲ್ಲಿ ಬಳ್ಳೇಶ್ವರದಲ್ಲಿ ಜೈನ ಧರ್ಮೀಯರ ಪವಿತ್ರ ಕ್ಷೇತ್ರ ಪಾರ್ಶ್ವನಾಥ ಬಸದಿ ಹಾಗೂ ಬಳ್ಳಲಿಂಗೇಶ್ವರ ದೇವಸ್ಥಾನ ಸರ್ವಧರ್ಮೀಯರ ನೆಲೆಗೆ ಸಾಕ್ಷಿಯಾಗಿವೆ.

ಹೊನ್ನಾಳಿಗೆ ಹದಿನೈದು ಕಿ.ಮೀ. ದೂರದಲ್ಲಿ ಗೋವಿನಕೋವಿ ಗ್ರಾಮದ ಸಮೀಪದಲ್ಲಿನ ತುಂಗಭದ್ರಾ ನದಿಯ ಮಧ್ಯದಲ್ಲಿ ನಿಸರ್ಗ ನಿರ್ಮಿತ ನಡುಗಡ್ಡೆಯಲ್ಲಿನ ಗಡ್ಡೆರಾಮೇಶ್ವರ ದೇವಸ್ಥಾನ ಅದ್ಭುತವೂ ಆಕರ್ಷಣೀಯವೂ ಆಗಿದೆ. ಹದಿನೈದು ಕಿ.ಮೀ. ದೂರದ ಬೆಟ್ಟದ ತಪ್ಪಲಿನ ಪ್ರಕೃತಿಯ ಮಡಿಲಲ್ಲಿ ನೆಲೆಗೊಂಡ ತೀರ್ಥರಾಮೇಶ್ವರ ದೇವಸ್ಥಾನ, ದೇವಸ್ಥಾನದ ಆವರಣದಲ್ಲಿರುವ ಪವಿತ್ರ ತೀರ್ಥಕುಂಡ ಇವುಗಳು ಇಲ್ಲಿನ ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳವಾಗಿವೆ. ಬೆಳವಳದ ಈ ನೆಲದಲ್ಲಿ ಹಚ್ಚ ಹಸುರಾಗಿ ಬೆಳೆದ ಬೆಳೆಯನ್ನು ಬೆಟ್ಟದ ಮೇಲಿನಿಂದ ನೋಡುವುದೇ ಒಂದು ಅವಿಸ್ಮರಣೀಯ ಅನುಭವ.

ಇಲ್ಲಿನ ಸಮೀಪದ ಬೆಳಗುತ್ತಿ ತನ್ನದೇ ಆದ ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿದೆ. ಇಲ್ಲಿ ಹಿಂದೆ ಆಳಿದ ಅರಸು ಮನೆತನದ ಅರಮನೆ ಅವರ ವಂಶಸ್ಥರು ಈಗಲೂ ಇಲ್ಲಿ ಇದ್ದಾರೆ. ಇಲ್ಲಿನ ಐತಿಹಾಸಿಕ ಸಾಕ್ಷಿಯಾಗಿ ಉಮಾಮಹೇಶ್ವರ ದೇವಸ್ಥಾನ ಇನ್ನಿತರೆ ದೇವಸ್ಥಾನಗಳು ನೆಲೆಗೊಂಡಿವೆ.

ಹೊನ್ನಾಳಿ-ಹರಿಹರ ಮುಖ್ಯ ರಸ್ತೆಯಲ್ಲಿ ಹೊನ್ನಾಳಿಗೆ 8 ಕಿ.ಮೀ. ದೂರದಲ್ಲಿನ ಮಾಸಡಿ ಗ್ರಾಮದ ಬೃಹತ್ ಉಡೇವು ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ಬಿದನೂರು ಸಂಸ್ಥಾನದ ದೊರೆಗಳು ಕಟ್ಟಿಸಿದ ದೇವಸ್ಥಾನಗಳು ಇವೆ. ಹೊನ್ನಾಳಿಯಿಂದ 8 ಕಿ.ಮೀ. ದೂರದಲ್ಲಿರುವ ಕರಡಿಕಲ್ಲು ಗುಡ್ಡ ಪ್ರಕೃತಿ ಸೌಂದರ್ಯದೊಂದಿಗೆ ಧಾರ್ಮಿಕ ಕ್ಷೇತ್ರವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 25 ಕಿ.ಮೀ. ದೂರದಲ್ಲಿರುವ ಸೂರಗೊಂಡನಕೊಪ್ಪ ಗ್ರಾಮದ ಸೇವಾಲಾಲ್ ದೇವಸ್ಥಾನ ಬಣಜಾರ್ ಸಮಾಜದ ಮುಖ್ಯ ಧಾರ್ಮಿಕ ಕೇಂದ್ರವಾಗಿದೆ. ತಾಲ್ಲೂಕಿನ ಸವಳಂಗದಲ್ಲಿರುವ ವಿಶಾಲವಾದ ಕೆರೆಯೂ ಪ್ರೇಕ್ಷಣೀಯ ತಾಣವಾಗಿದೆ.



- ಪ್ರೇಮಕುಮಾರ ಭಂಡಿಗಡಿ
  ಕೃಪೆ:ಕನ್ನಡಪ್ರಭ 

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

Contribution of Shahu Chhatrapati Maharaj