ಅಭಿವೃದ್ಧಿಯೋ ಅಧಃಪತನವೋ?
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪು ಮೂವತ್ತು ವರ್ಷಗಳಷ್ಟು ಸುದೀರ್ಘ ಕಾಲ ನರ್ಮದಾ ಕಣಿವೆಯ ಉದ್ದಗಲಕ್ಕೂ ನಡೆದಾಡಿತು. ಶ್ರಮ ಬೇಡಿದ ನಡಿಗೆ ಅದು; ಸುಖಾಸುಮ್ಮನೆ ಸಂತೋಷಕ್ಕೆಂದು ನಡೆದದ್ದಲ್ಲ.
ನರ್ಮದಾ ಕಣಿವೆಯಲ್ಲಿ ಸರ್ಕಾರ ನಿರ್ಮಿಸಲು ಹೊರಟಿದ್ದ ಬೃಹತ್ ಜಲ ವಿದ್ಯುತ್ ಹಾಗೂ ನೀರಾವರಿ ಯೋಜನೆಗಳಿಂದ ಪರಿಸರದ ಮೇಲೆ ಆಗುವ ಸಂಭವನೀಯ ಪರಿಣಾಮಗಳನ್ನು ಖುದ್ದು ಅಧ್ಯಯನ ಮಾಡುವುದು, ಜೊತೆಗೆ ಕಣಿವೆಯ ನೈಸರ್ಗಿಕ, ಸಾಂಸ್ಕೃತಿಕ ಸಂಪತ್ತನ್ನು ಕಂಡು ದಾಖಲಿಸುವುದು ಆ ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆಯಾಗಿತ್ತು.
ತಮ್ಮ ಪ್ರವಾಸವನ್ನು ಆಧರಿಸಿ ಅವರು ವರದಿಯೊಂದನ್ನು ಸಿದ್ಧಪಡಿಸಿದರು. ಅದರ ಒಂದಷ್ಟು ಅಂಶಗಳು ಲಂಡನ್ನಿನ `ಎಕಾಲಜಿಸ್ಟ್' ಮತ್ತು ಮುಂಬೈನ `ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ'ಯಲ್ಲಿ (ಇಪಿಡಬ್ಲ್ಯು) ಪ್ರಕಟಗೊಂಡವು. ಹೇರಳವಾದ ಮಾಹಿತಿಯನ್ನು ತುಸು ಕೊರೆ ಎನ್ನಬಹುದಾದ ಗದ್ಯಶೈಲಿಯಲ್ಲಿ ವಿದ್ಯಾರ್ಥಿಗಳು ಬರೆದಿದ್ದರು. ಪರಿಗಣನೆಗೆ ಯೋಗ್ಯವಾದ, ಆಸಕ್ತಿಕರ ಐತಿಹಾಸಿಕ ಮಾಹಿತಿ ಅದು. ಮುಂಬೈನಲ್ಲಿ ಹೋರಾಟಗಾರ್ತಿಯಾಗಿ ಆಗ ಗುರುತಿಸಿಕೊಂಡಿದ್ದ ಮೇಧಾ ಪಾಟ್ಕರ್ ಇಪಿಡಬ್ಲ್ಯುನಲ್ಲಿ ಪ್ರಕಟವಾದ ಲೇಖನ ಓದಿದ ನಂತರ ನರ್ಮದಾ ಕಣಿವೆಯ ಕಡೆಗೆ ಚಳವಳಿಯ ಉದ್ದೇಶ ಇಟ್ಟುಕೊಂಡು ಹೊರಟರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯು 30 ದೊಡ್ಡ ಅಣೆಕಟ್ಟುಗಳು ಹಾಗೂ 135 ಮಧ್ಯಮ ಗಾತ್ರದ ಅಣೆಕಟ್ಟುಗಳ ನಿರ್ಮಾಣವನ್ನು ಒಳಗೊಂಡಿತ್ತು. ವಿದ್ಯಾರ್ಥಿ ಸಂಶೋಧಕರು ಕೇಳಿದ ಮೂಲ ಪ್ರಶ್ನೆ- ಸಂಬಂಧಪಟ್ಟ ಅಧಿಕಾರಿಗಳು ಈ ಯೋಜನೆಗಳ ಸಾಮಾಜಿಕ ಹಾಗೂ ಪರಿಸರ ಸಂಬಂಧಿ ಪರಿಣಾಮಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಾರೆಯೇ? ಅಂಥ ಅಧ್ಯಯನ ನಡೆದಿಲ್ಲ ಎಂಬುದನ್ನು ವಿದ್ಯಾರ್ಥಿಗಳೇ ಪತ್ತೆಹಚ್ಚಿದರು. ನರ್ಮದಾ ಕಣಿವೆಯು ವಿವಿಧ ಸ್ವರೂಪದ ಅರಣ್ಯ ಪ್ರದೇಶಗಳನ್ನು ಒಳಗೊಂಡಿತ್ತು.
ಜೀವಿವೈವಿಧ್ಯದಲ್ಲಂತೂ ತುಂಬಾ ಶ್ರೀಮಂತವಾಗಿತ್ತು. ಅಣೆಕಟ್ಟುಗಳನ್ನು ಕಟ್ಟಿದರೆ ಆಗುವ ಅರಣ್ಯ ಹಾಗೂ ವನ್ಯಜೀವಿಗಳ ಸಂಭಾವ್ಯ ನಾಶ, ಆ ಕಾಡುಗಳನ್ನೇ ನೆಚ್ಚಿಕೊಂಡು ಬದುಕುತ್ತಿರುವ ಹಳ್ಳಿಗರ ಮೇಲೆ ಆಗುವ ಪರಿಣಾಮಗಳ ಕುರಿತು ಯಾವ ಅಧ್ಯಯನವೂ ನಡೆದಿರಲಿಲ್ಲ. ಅಷ್ಟೆಲ್ಲಾ ಅಣೆಕಟ್ಟುಗಳನ್ನು ಕಟ್ಟಿದರೆ ಕಂಪನ ಸೂಕ್ಷ್ಮವೂ ಆದ ಆ ನೆಲ ತಾಳಿಕೊಳ್ಳುವುದಾದರೂ ಹೇಗೆ ಎಂಬ ಬಗೆಗೂ ಸಂಶೋಧನೆ ಕೈಗೊಂಡಿರಲಿಲ್ಲ.
ಸಾಮಾಜಿಕ, ವೈಜ್ಞಾನಿಕವಾಗಿ ನಿರ್ಲಕ್ಷ್ಯ ಮಾಡಿರುವುದು ವಿದ್ಯಾರ್ಥಿಗಳ ಅಧ್ಯಯನದಿಂದ ಸ್ಪಷ್ಟವಾಗಿತ್ತು. ಆರಂಭಗಾರರು, ಕುಶಲಕರ್ಮಿಗಳು, ವಿವಿಧ ಬುಡಕಟ್ಟಿಗೆ ಸೇರಿದವರನ್ನು ಒಳಗೊಂಡ ಹಲವು ಸಮುದಾಯಗಳಿಗೆ ನರ್ಮದಾ ಕಣಿವೆ ವಾಸಸ್ಥಾನವಾಗಿತ್ತು. ಯೋಜನೆ ಸಿದ್ಧಪಡಿಸಿದವರು ಆ ಸಮುದಾಯಗಳ ಜೀವನ ಕ್ರಮ-ಶೈಲಿಯನ್ನು ತಿಳಿಯುವ ಗೊಡವೆಗೆ ಹೋಗಿರಲಿಲ್ಲ.
ಅಣೆಕಟ್ಟುಗಳನ್ನು ಕಟ್ಟಿದರೆ ಮುಳುಗಡೆಯಾಗುವ ದೇವಸ್ಥಾನ ಮೊದಲಾದ ಪವಿತ್ರ ಸ್ಥಳಗಳು, ಅರಣ್ಯಗಳು, ಹಳ್ಳಿಗಳು ಎಷ್ಟೆಂಬುದನ್ನೂ ಅಂದಾಜು ಮಾಡಿರಲಿಲ್ಲ. ಅಷ್ಟೇ ಅಲ್ಲ, ಯೋಜನೆಯನ್ನು ಸಿದ್ಧಪಡಿಸುವ ಯಾವ ಹಂತದಲ್ಲೂ ಸ್ಥಳೀಯರ ಅಭಿಪ್ರಾಯ ಸಂಗ್ರಹ ಮಾಡಿರಲಿಲ್ಲ.
ಅಣೆಕಟ್ಟುಗಳ ನಿರ್ಮಾಣದಿಂದ ಹತ್ತು ಲಕ್ಷ ಮಂದಿ ಮುಳುಗಡೆಯ ಕಾರಣದಿಂದ ಸ್ಥಳಾಂತರಗೊಳ್ಳಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಅಂದಾಜು ಮಾಡಿದ್ದರು. ಹಾಗಿದ್ದೂ ಸಂತ್ರಸ್ತರಿಗೆ ಪುನರ್ವಸತಿ ಒದಗಿಸುವ ಹಿನ್ನೆಲೆಯಲ್ಲಿ ಮಾನವಶಾಸ್ತ್ರದ ನೆಲೆಗಟ್ಟಿನ ಯಾವ ಅಧ್ಯಯನವನ್ನೂ ಸರ್ಕಾರ ನಡೆಸಿರಲಿಲ್ಲ. ಎಷ್ಟೋ ಕಡೆ ಪರ್ಯಾಯ ನೆಲೆ ಕಲ್ಪಿಸಲು ಸ್ಥಳಗಳನ್ನೇ ನಿರ್ಧರಿಸಿರಲಿಲ್ಲ. ನಿಗದಿಪಡಿಸಿದ್ದ ಪರಿಹಾರ ಧನ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಇತ್ತು. ನಿರ್ಮಾಣ ಕಾಮಗಾರಿ ಹಾಗೂ ಪುನರ್ವಸತಿಯ ವೆಚ್ಚವಂತೂ ವಿದ್ಯಾರ್ಥಿಗಳ ಪ್ರಕಾರ ವಾಸ್ತವಕ್ಕಿಂತ ಶೇ 300ರಷ್ಟು ಕಡಿಮೆ ಇತ್ತು.
ಮಣ್ಣಿನ ಫಲವತ್ತತೆ, ನೀರಿನ ಪ್ರಮಾಣ ಹಾಗೂ ಹಿತಕರ ಹವಾಮಾನ ಸಂರಕ್ಷಿಸುವಲ್ಲಿ ಕಣಿವೆಯ ನೈಸರ್ಗಿಕ ಕಾಡುಗಳ ಪಾತ್ರ ಮಹತ್ವದ್ದಾಗಿತ್ತು. ಇಂಥ ಕಾಡುಗಳ ಮರಗಳಿಗೆ ಕೊಡಲಿ ಬಿದ್ದರೆ ಅಥವಾ ಅವು ಜಲಾವೃತಗೊಂಡರೆ ಆಗುವ ಹಾನಿಯನ್ನು ಅರಿಯುವ ಯತ್ನವೇ ನಡೆದಿರಲಿಲ್ಲ. ಹಿಂದೆ ಅದೇ ಪ್ರದೇಶದಲ್ಲಿ ದೊಡ್ಡ ದೊಡ್ಡ ನಾಲೆಗಳನ್ನು ನಿರ್ಮಿಸಿದಾಗ ಮಣ್ಣಿನ ಲವಣಾಂಶ ಹೆಚ್ಚಾಯಿತಲ್ಲದೆ ಅಗತ್ಯಕ್ಕಿಂತ ಹೆಚ್ಚು ನೀರು ಅದರೊಳಗೆ ಸೇರಿ ಅದರ ಸಹಜ ಗುಣ ಹಾಳಾಯಿತು. ಹಾಗಿದ್ದೂ ಈ ಭಾರೀ ಯೋಜನೆ ಜಾರಿಗೆ ತರುವ ಮೊದಲು ಅಂಥ ಯಾವ ದುಷ್ಪರಿಣಾಮಗಳನ್ನೂ ಲಕ್ಷ್ಯಕ್ಕೆ ತೆಗೆದುಕೊಂಡಿರಲಿಲ್ಲ.
ವಿದ್ಯಾರ್ಥಿ ಸಂಶೋಧಕರ ಪ್ರಕಾರ ನರ್ಮದಾ ಯೋಜನೆಗಳು ಪರಿಸರ ಧಾರಣಾಶಕ್ತಿಯನ್ನು ಹಾಳುಗೆಡಹುವ ಸಂಕೇತಗಳಾಗಿದ್ದವು. ಆರ್ಥಿಕ ಅಭಿವೃದ್ಧಿಗೆ ಭಾರತ ಆರಿಸಿಕೊಂಡ ಈ ದಾರಿ ಪರಿಸರ ಹಾನಿಯಷ್ಟೇ ಅಲ್ಲದೆ ದೊಡ್ಡ ಮಟ್ಟದ ಸಮಾಜೋ ಸಾಂಸ್ಕೃತಿಕ ನಾಶಕ್ಕೂ ಕಾರಣವಾಗಬಲ್ಲುದಾಗಿತ್ತು. ಅಸಮಾನತೆಯ ಹೆಚ್ಚಳ, ಕೆಲವರ ಕೈಯಲ್ಲೇ ಅಧಿಕಾರ ಉಳಿಯುವುದು, ಅಮೂಲ್ಯ ಸಾಂಪ್ರದಾಯಿಕ ಸಂಸ್ಕೃತಿ-ಬೌದ್ಧಿಕ ಸಂಪನ್ಮೂಲದ ನಾಶ, ಏಕತೆಗೆ ಭಂಗ ಉಂಟಾಗಿ ಸಂಬಂಧಗಳು ಜಾಳಾಗಿ ಜನರು ದ್ವೀಪಗಳಂತೆ ಬದುಕುವ ಪರಿಸ್ಥಿತಿ, ನಮ್ಮಳಗಿನ ಧೀಶಕ್ತಿಯ ನಾಶ ಎಲ್ಲಕ್ಕೂ ಯೋಜನೆಗಳು ಕಾರಣವಾಗುತ್ತವೆ ಎಂದು ವಿದ್ಯಾರ್ಥಿಗಳು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರು.
ಆಧುನಿಕ ಭಾರತದ ಇತಿಹಾಸ ಮರೆತ ಪ್ರಮುಖ ಮೈಲಿಗಲ್ಲುಗಳಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೂಪಿಸಿದ ವರದಿಯೂ ಒಂದು. ಮೇಧಾ ಪಾಟ್ಕರ್ ಇಪಿಡಬ್ಲ್ಯುನಲ್ಲಿ ಆ ವರದಿಯನ್ನು ಓದದೇ ಹೋಗಿದ್ದರೆ ಅವರು ನರ್ಮದಾ ಬಚಾವೊ ಆಂದೋಲನ (ಎನ್‌ಬಿಎ) ಪ್ರಾರಂಭಿಸುತ್ತಿರಲಿಲ್ಲ. ಅಹಿಂಸಾ ಮಾರ್ಗವನ್ನು ಬಿಡದ ಈ ಪ್ರಮುಖ ಆಂದೋಲನಕ್ಕೆ ಕಣಿವೆಯ ಹಳ್ಳಿಗರ ದೊಡ್ಡ ಬೆಂಬಲ ದೊರೆಯಿತು. ಪಟ್ಟಣ-ನಗರ ನಿವಾಸಿಗಳ ಸಹಾನುಭೂತಿಯೂ ಸಂದಿತು.
ಅನಿಯಂತ್ರಿತ ಆರ್ಥಿಕ ಪ್ರಗತಿಯಿಂದ ಉಂಟಾಗುವ ಪರಿಸರ ಸಂಬಂಧಿ, ಸಾಮಾಜಿಕ ಪರಿಣಾಮಗಳ ಮೇಲೆ ಆಂದೋಲನ ಬೆಳಕು ಚೆಲ್ಲಿತು. ಅಣೆಕಟ್ಟು ನಿರ್ಮಾಣದಿಂದ ಸಂತ್ರಸ್ತರಾಗುವವರ ಬದುಕಿನ ತಲ್ಲಣಗಳು ಆ ಬೆಳಕಿನಲ್ಲಿ ಕಂಡವು. ತಾವು ನಂಬಿದ ದೇವರು, ಬದುಕು ಕಟ್ಟಿಕೊಂಡ ಕೊಪ್ಪಲು, ನೆಚ್ಚಿಕೊಂಡ ಭೂಮಿ ಎಲ್ಲವನ್ನೂ ತೊರೆದು ಅನಿವಾರ್ಯವಾಗಿ ಬೇರೆಡೆಗೆ ಸ್ಥಳಾಂತರಗೊಳ್ಳುವ ಜನರ ಪಡಿಪಾಟಲನ್ನು; ಪರರ ಫಲಕ್ಕಾಗಿ ಇಹವ ತೊರೆದವರ ಪರದಾಟದ ಕಥನಗಳನ್ನು ಸಾರಿದ ಆಂದೋಲನ ಅದು.
ಯೋಜನೆಯ ಪ್ರಮುಖ ಅಣೆಕಟ್ಟು `ಸರ್ದಾರ್ ಸರೋವರ'ವನ್ನು ಎನ್‌ಬಿಎ ತನ್ನ ಚಳವಳಿ ಕೇಂದ್ರವಾಗಿಸಿಕೊಂಡಿತು. ಗುಜರಾತಿನ ಜನರ ಲಾಭಕ್ಕಾಗಿ ಮಧ್ಯಪ್ರದೇಶದ ಜನ ಕಳೆದುಕೊಳ್ಳಬೇಕಾದುದರ ವಾಸ್ತವದ ಮೇಲೆ ನಿಂತಿದ್ದ ಯೋಜನೆ ಅದು. ಸರ್ದಾರ್ ಸರೋವರ ಅಣೆಕಟ್ಟಿನ ನಿರ್ಮಾಣದಿಂದ ಸಂತ್ರಸ್ತರಾದವರಲ್ಲಿ ಹೆಚ್ಚಿನವರು ಆದಿವಾಸಿಗಳು.
ಪಾಟ್ಕರ್ ಹಾಗೂ ಅವರ ಅನುಯಾಯಿಗಳು ಸಂಭಾವ್ಯ ಸಂತ್ರಸ್ತರನ್ನು ಒಂದುಗೂಡಿಸಿ ಚಳವಳಿಯನ್ನು ತೀವ್ರಗೊಳಿಸಿದರು. ಬುದ್ಧಿಜೀವಿಗಳ ಸಹಾನುಭೂತಿಯೂ ಸಿಕ್ಕಿದ್ದರಿಂದ ಚಳವಳಿ ಎದ್ದುಕಂಡಿತು. ಚಳವಳಿಕಾರರ ಮುಖ್ಯ ಘೋಷವಾಕ್ಯ: `ಬಂಧ್ ನಹೀ ಬನೇಗಾ! ಕೋಯಿ ನಹೀ ಹಠೇಗಾ!' (ಕಟ್ಟಲಾಗದು ಅಣೆಕಟ್ಟು, ಕದಲರು ಯಾರೂ ಈ ಜಾಗ ಬಿಟ್ಟು!).
ಈಗ ನರ್ಮದಾ ಬಚಾವೊ ಆಂದೋಲನದ ಬಗೆಗೆ ಹಲವು ಕೃತಿಗಳು ಬಂದಿವೆ. ಅಮಿತಾ ಬವಿಸ್ಕರ್ ಬರೆದ `ಇನ್ ದಿ ಬೆಲ್ಲಿ ಆಫ್ ದಿ ರಿವರ್: ಆದಿವಾಸಿ ಅಸರ್ಶನ್ ಇನ್ ದಿ ನರ್ಮದಾ ವ್ಯಾಲಿ' (1995), ರಂಜಿತ್ ದ್ವಿವೇದಿಯವರ `ಕಾನ್‌ಫ್ಲಿಕ್ಟ್ ಅಂಡ್ ಕಲೆಕ್ಟಿವ್ ಆ್ಯಕ್ಷನ್: ದಿ ಸರ್ದಾರ್ ಸರೋವರ್ ಪ್ರಾಜೆಕ್ಟ್ ಇನ್ ಇಂಡಿಯಾ' (2006) ಸೇರಿದಂತೆ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಕೆಲವು ಆಸಕ್ತಿಕರ ಪುಸ್ತಕಗಳು ಸಿಗುತ್ತವೆ.
ಮೇಧಾ ಪಾಟ್ಕರ್ ಅವರ ಚರಿಷ್ಮಾ, ಧೈರ್ಯ, ಅವರ ಸಹ ಹೋರಾಟಗಾರರ ಬದ್ಧತೆಯನ್ನು ನಾನು ಮೆಚ್ಚಿದ್ದೆನಾದರೂ ಅವರ ಕಾರ್ಯತಂತ್ರದ ಕುರಿತು ನನಗೆ ಕೆಲವು ಆಕ್ಷೇಪಗಳಿದ್ದವು. ಅಮೆರಿಕ ಕಾಂಗ್ರೆಸ್‌ವರೆಗೆ ಆ ಸಮಸ್ಯೆಯನ್ನು ಕೊಂಡೊಯ್ದು ಅದನ್ನು ಅಂತರರಾಷ್ಟ್ರೀಯಗೊಳಿಸಿದ್ದು ತಪ್ಪು ಎಂಬುದು ನನ್ನ ನಂಬಿಕೆ. ಸುಪ್ರಿಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಆಂದೋಲನವು ರಾಜೀಸೂತ್ರವೊಂದನ್ನು ಮುಂದಿಡಬಹುದಿತ್ತು.
ಅಣೆಕಟ್ಟಿನ ಬಹುಪಾಲು ನಿರ್ಮಾಣ ಆಗಿಹೋಗಿತ್ತು. ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಅದಕ್ಕಾಗಿ ಖರ್ಚು ಮಾಡಲಾಗಿತ್ತು. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಪುಣೆಯ ಎಂಜಿನಿಯರ್‌ಗಳು ಜಾಣ ರಾಜೀಸೂತ್ರವೊಂದನ್ನು ಯೋಚಿಸಿದರು: ಅಣೆಕಟ್ಟನ್ನು ಅಂದುಕೊಂಡಷ್ಟು ಎತ್ತರ ನಿರ್ಮಿಸಬಾರದು. ಹಾಗಾದಲ್ಲಿ ಪುನರ್ವಸತಿಯ ಸಮಸ್ಯೆಯನ್ನು ಕಡಿಮೆ ಮಾಡಬಹುದು. ವಿಶೇಷವಾಗಿ ವಿನ್ಯಾಸಗೊಳಿಸಿದ `ಓವರ್‌ಫ್ಲೋ ಕಣಿವೆ'ಗಳನ್ನು ನಿರ್ಮಿಸಿ, ಅವುಗಳ ಮೂಲಕ ಕಛ್ ಹಾಗೂ ಸೌರಾಷ್ಟ್ರದ ಬರಪೀಡಿತ ಪ್ರದೇಶಗಳಿಗೆ ನೀರು ಹರಿಸಬಹುದು.
ಈ ರಾಜೀಸೂತ್ರವನ್ನು ಸುಪ್ರಿಂಕೋರ್ಟ್ ಎದುರು ಬಲವಾಗಿ ಮಂಡಿಸಿದ್ದರೆ ನ್ಯಾಯಮೂರ್ತಿಗಳು ಬಹುಶಃ ಒಪ್ಪಿರುತ್ತಿದ್ದರು. ಅಣೆಕಟ್ಟಿನ ಎತ್ತರ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಪ್ರಸ್ತಾವ ಬಂದಾಗ ನ್ಯಾಯಾಲಯವು ಕಡಿಮೆ ಮಾಡುವುದಕ್ಕೇ ಒಪ್ಪಿಗೆ ಸೂಚಿಸುವುದು ಸಹಜ.
ಸುಪ್ರಿಂಕೋರ್ಟ್ ತೀರ್ಪು ಹೊರಬಿದ್ದು ಒಂದು ದಶಕ ದಾಟಿದೆ. ನರ್ಮದಾ ನೀರು ಕೇಂದ್ರ ಗುಜರಾತ್ ತಲುಪಿದ್ದಾಗಿದೆ. ಕಛ್ ಹಾಗೂ ಸೌರಾಷ್ಟ್ರಕ್ಕೆ ಇದರಿಂದ ಆಗಿರುವ ಅನುಕೂಲ ಅಷ್ಟರಲ್ಲೇ ಇದೆ. ಮಧ್ಯಪ್ರದೇಶದ ಸಂತ್ರಸ್ತರ ಪುನರ್ವಸತಿ ಸೌಕರ್ಯದ ಬಗೆಗೆ ತೀವ್ರ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಯೋಜನೆಯಿಂದ ಆಗಿರುವ ಅರಣ್ಯ ನಾಶ, ಬುಡಕಟ್ಟು ಜನಾಂಗದವರ ನೆಲೆಗಳ ನಾಶದ ಪ್ರಮಾಣವನ್ನು ಇನ್ನೂ ಅಳೆಯಲಾಗುತ್ತಿದೆ.
ಸರ್ದಾರ್ ಸರೋವರ್ ಯೋಜನೆ ವಿರುದ್ಧದ ಹೋರಾಟದಲ್ಲಿ ಎನ್‌ಬಿಎ ಸೋತಿರಬಹುದು. ಆದರೆ ಜನಮಾನಸದ ಮೇಲೆ ಅದರ ಹೋರಾಟ ಗಣನೀಯ ಪರಿಣಾಮ ಬೀರಿತು. ಮೇಧಾ ಪಾಟ್ಕರ್ ಹಾಗೂ ಅವರ ಸಹ ಹೋರಾಟಗಾರರು ಆಂದೋಲನ ಮಾಡದೇ ಇದ್ದರೆ ಅಣೆಕಟ್ಟಿನ ನಿರ್ಮಾಣದಿಂದ ಕಾರ್ಖಾನೆ, ಹೆದ್ದಾರಿ ಎಲ್ಲವನ್ನೂ ಕಳೆದುಕೊಂಡು ತಮ್ಮ ಬದುಕುವ ಹಕ್ಕಿಗಾಗಿ ಪರದಾಡಿದ ಸಂತ್ರಸ್ತರನ್ನು ಮಾಧ್ಯಮ ಹಾಗೂ ಮಧ್ಯಮವರ್ಗ ಕಡೆಗಣಿಸುತ್ತಿದ್ದವು.
ಹಿಂದೆ ಸಾರ್ವಜನಿಕ ಅಥವಾ ಖಾಸಗಿ ಕಂಪೆನಿಗಳು ಭೂಸ್ವಾಧೀನ ಮಾಡಿಕೊಂಡಾಗ ಪರಿಹಾರ ನೀಡುವಲ್ಲಿ ಜುಗ್ಗತನ ತೋರುತ್ತಿದ್ದವು. `ರಾಷ್ಟ್ರೀಯ ಹಿತಾಸಕ್ತಿ'ಯ ನೆಪವನ್ನು ಅವು ಮುಂದಿಡುತ್ತಿದ್ದವು. ನರ್ಮದಾ ಬಚಾವೊ ಆಂದೋಲನದ ನಂತರ ಅಭಿವೃದ್ಧಿ ಯೋಜನೆಗಳಿಂದಾಗಿ ಮನೆ, ಭೂಮಿ ಕಳೆದುಕೊಂಡವರಿಗೆ ಪರಿಹಾರವನ್ನಷ್ಟೇ ಕೊಟ್ಟರೆ ಸಾಲದು ಎಂಬ ಚರ್ಚೆ ನಡೆಯತೊಡಗಿದೆ.
ಇವೆಲ್ಲಾ ಸಾಧ್ಯವಾದದ್ದು ದೆಹಲಿ ವಿಶ್ವವಿದ್ಯಾಲಯದ ಆ ವಿದ್ಯಾರ್ಥಿಗಳು ಸಿದ್ಧಪಡಿಸಿದ ಮೂಲ ವರದಿಯಿಂದ. 1983ರಲ್ಲಿ ನರ್ಮದಾ ಕಣಿವೆಯಲ್ಲಿ ಪ್ರವಾಸ ಕೈಗೊಂಡ ಆ ವಿದ್ಯಾರ್ಥಿಗಳಲ್ಲಿ ಬಹುಪಾಲು `ಕಲ್ಪವೃಕ್ಷ್' ಸಂಸ್ಥೆಗೆ ಸೇರಿದವರು. 1979ರಲ್ಲಿ ಪ್ರಾರಂಭವಾದ `ಕಲ್ಪವೃಕ್ಷ್' ಈಗಲೂ ಕ್ರಿಯಾಶೀಲವಾಗಿದೆ.
ದೆಹಲಿ ಹಾಗೂ ಪುಣೆಯಲ್ಲಿ ಅದರ ಕಚೇರಿಗಳಿದ್ದು, ಪರಿಸರ ಸಮುದಾಯಗಳಲ್ಲಿ `ಕೆವಿ' ಎಂದೇ ಜನಪ್ರಿಯವಾಗಿದೆ. ಸಮುದಾಯಗಳ ಸಂರಕ್ಷಣೆ, ಗಣಿಗಾರಿಕೆಯಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳು, ನಗರ ಪರಿಸರ ವಿಜ್ಞಾನ, ಪರಿಸರ ಶಿಕ್ಷಣ ಮೊದಲಾದ ಸಮಸ್ಯೆಗಳ ಮೇಲೆ `ಕೆವಿ' ಬೆಳಕು ಚೆಲ್ಲುತ್ತಿದೆ (ಅದರ ಪ್ರಕಟಣೆಗಳ ಉದಾಹರಣೆಗೆ ಇಂಟರ್ನೆಟ್‌ನಲ್ಲಿ http://www.kalpavriksh.org/index.php/publications.html ನೋಡಿ).
ದೆಹಲಿ ಮತ್ತು ಅರಾವಳಿ ಪರ್ವತ ಶ್ರೇಣಿಯಲ್ಲಿ `ಕೆವಿ' ಪ್ರಮುಖ ಕೆಲಸಗಳನ್ನು ಆಗಲೇ ಮಾಡಿದೆ. 1984ರಲ್ಲಿ ಅದು ಪ್ರಕಟಿಸಿದ ನರ್ಮದಾ ವರದಿಯಿಂದ ರಾಷ್ಟ್ರೀಯ ಮಟ್ಟದಲ್ಲಿ `ಕಲ್ಷವೃಕ್ಷ್' ಏನೆಂಬುದು ಗೊತ್ತಾಯಿತು. ಅಂದಿನಿಂದಲೂ `ಕೆವಿ' ಕೆಲವೊಮ್ಮೆ ಏಕಾಂಗಿಯಾಗಿಯೂ, ಬಹುತೇಕ ದೂರದೃಷ್ಟಿ ಉಳ್ಳದ್ದಾಗಿಯೂ, ಸದಾ ಸ್ವಂತ ದನಿಯನ್ನು ಹೊಮ್ಮಿಸುತ್ತಲೂ ಅಭಿವೃದ್ಧಿ ಕುರಿತಂತೆ ದೇಶ ಹಾಗೂ ಅದರಾಚೆಗೂ ಚರ್ಚೆಯನ್ನು ಹುಟ್ಟುಹಾಕುತ್ತಾ ಬಂದಿದೆ.
ರಾಮಚಂದ್ರ ಗುಹಾ
Comments
Post a Comment