ಕೂಡಲ ಸಂಗಮ ,ಗೊಡಚಿ ವೀರಭದ್ರ


ಕೂಡಲ ಸಂಗಮ ಎಂಬ ಮಹಾ ತಾಣ

ನಿಮಗೆ ಶರಣರ ವಿಚಾರಧಾರೆಗಳನ್ನು ಅರಿತುಕೊಳ್ಳುವ ಆಸೆ ಇದೆಯೇ? ಹಾಗಿದ್ದರೆ ಕೂಡಲ ಸಂಗಮದ ಶರಣ ಲೋಕಕ್ಕೆ ಹೋಗಿಬನ್ನಿ. ನೆನಪಿರಲಿ, ಸಮಯಾವಕಾಶ ಇಟ್ಟುಕೊಳ್ಳದೆ ಗಡಿಬಿಡಿಯಲ್ಲಿ ಹೋದರೆ ಏನೂ ಪ್ರಯೋಜನ ಆಗದು!
ಧರ್ಮಕರ್ತ ಬಸವಣ್ಣನ ವರವಿದ್ಯಾಭೂಮಿ, ತಪೋಸ್ಥಾನ, ಐಕ್ಯ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಬಸವ ಧರ್ಮೀಯರ ಕ್ಷೇತ್ರವಾಗಿ, ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಇಂತಿಪ್ಪ ತಾಣದಲ್ಲಿರುವುದು ಶರಣ ಲೋಕ ಅಥವಾ ಶರಣ ಮಂಟಪ. ಈ ಸಮುಚ್ಛಯ ಗಮನ ಸೆಳೆಯುವುದು ಚಾರಿತ್ರಿಕ ಹಾಗೂ ಐತಿಹಾಸಿಕ ಹಿನ್ನಲೆಯಿಂದ.
ಇಲ್ಲಿ ವಿಶ್ವಮಾನವ ಬಸವೇಶ್ವರ ಸೇರಿದಂತೆ ಆತನ ಸಮಕಾಲೀನ ಪ್ರಮುಖ ಶಿವ ಶರಣ-ಶರಣೆಯರ ಪ್ರತಿಮೆಗಳಿವೆ. ಬಸವಧರ್ಮ ಪೀಠದ ಮೂಲಕ ಅಸ್ತಿತ್ವಕ್ಕೆ ಬಂದಿರುವ ಈ ತಾಣ ಶರಣರ ಕಾಲಕ್ಕೆ ಹೋಗಿ ಬಂದ ಅನುಭವ ನೀಡುತ್ತದೆ. ಆ ಮೂಲಕ ನಮ್ಮ ನಾಡಿನ ಪ್ರಮುಖ ಶರಣರು, ಅವರ ಕಾಯಕ ಪ್ರಜ್ಞೆ, ಅವರ ತತ್ವಗಳನ್ನು ಪ್ರಚಾರ ಮಾಡುವ ಮೂಲಕ ಇಂದಿನವರಿಗೆ ಶರಣರ ಬಗ್ಗೆ ತಿಳಿಸಿ, ಅವರ ವಿಚಾರಧಾರೆಗಳಲ್ಲಿ ಆಸಕ್ತಿ ಮೂಡಿಸುವ ಕೆಲಸ ಮಾಡುವುದು ಶರಣಲೋಕದ ಉದ್ದೇಶ.
ಮಹಾದ್ವಾರಕ್ಕೆ ಮಡಿವಾಳ ಮಾಚಿದೇವನ ಹೆಸರಿಡಲಾಗಿದೆ. ಇನ್ನು ಒಳ ಹೊಕ್ಕರೆ ಶರಣರ ಪ್ರತಿಮೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಲ್ಲಿ 16 ಮಂಟಪಗಳಿವೆ. ಗಣಲಿಂಗದ ಇಕ್ಕೆಲಗಳಲ್ಲಿ ಈ ಪ್ರತಿಮೆಗಳನ್ನು ಅವರವರ ಕಾಯಕ ಮಾಡುವ ಶೈಲಿಯಲ್ಲಿ ಆಕರ್ಷಕವಾಗಿ ನಿಲ್ಲಿಸಲಾಗಿದೆ. ಹಚ್ಚಹಸಿರಿನ ಪರಿಸರ ಇವುಗಳಿಗೆ ಮತ್ತಷ್ಟು ಜೀವ ತುಂಬಿದೆ. ಶರಣರು, ಕಾಯಕಯೋಗಿಗಳಾದ ಮರಳುಸಿದ್ಧ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾರಯ್ಯ, ಚೌಡಯ್ಯ, ಅರಳಯ್ಯ, ಮಲಯ ಮಹಾದೇಶ್ವರ, ಮಡಿವಾಳ ಮಾಚಿದೇವ ಹೀಗೆ ಶರಣರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರತಿ ಪ್ರತಿಮೆಗಳ ಮುಂದೆ ಅವರವರ ಹೆಸರನ್ನು ನಮೂದಿಸಿದ್ದರಿಂದ ಪ್ರವಾಸಿಗರಿಗೆ ಮಾಹಿತಿ ಕೊರತೆ ಕಾಡುವುದಿಲ್ಲ.
ಇಲ್ಲಿಯೇ ಬಸವಧರ್ಮ ಪೀಠ ಸಂಸ್ಥಾಪನೆ ಮಾಡಿದ ಲಿಂಗೈಕ್ಯ ಲಿಂಗಾನಂದ ಮಹಾಸ್ವಾಮಿಗಳ ಸಮಾಧಿ ಗದ್ದುಗೆ ಇದ್ದು, ಇವರ 63 ಅಡಿ ಎತ್ತರದ ಪುತ್ಥಳಿ ನಿರ್ಮಾಣ ಮಾಡುವ ಯೋಜನೆ ಇದೆ. ಈ ಶರಣ ಲೋಕದ ಪ್ರಮುಖ ಆಕರ್ಷಣೆ ಕೇಂದ್ರ 9 ಅಡಿ ಎತ್ತರ ಗಣ ಲಿಂಗ ಅಥಾವ ಇಷ್ಟ ಲಿಂಗ. ಇದಕ್ಕೆ ಪ್ರವಾಸಿಗರು ನಮಸ್ಕರಿಸಿ ಭಕ್ತಿ ಸಮರ್ಪಿಸುತ್ತಾರೆ. ಇದರ ಕೆಳಗಡೆ ಅಂದರೆ ನೆಲ ಮಾಳಿಗೆಯಲ್ಲಿ ಬಸವೇಶ್ವರನ ಧ್ಯಾನ ಮಂಟಪವಿದೆ. ಇಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿ ಇದ್ದು ಇದಕ್ಕೆ ದಿನನಿತ್ಯ ಪೂಜೆ-ಪುನಸ್ಕಾರಗಳು ಸಲ್ಲುತ್ತವೆ. ಅಂದಹಾಗೆ ಇಲ್ಲಿ ಬಸವ ಜಯಂತಿ, ಸಂಕ್ರಾತಿ ದಿನಗಳಂದು ವಿಶೇಷ ಪೂಜೆ, ಪ್ರವಚನ, ಪ್ರಾರ್ಥನೆಗಳು ಜರುಗುತ್ತವೆ.
ವಸತಿಗೆ ತೊಂದರೆ ಇಲ್ಲ
ಬಸವ ತತ್ವ ಸಿದ್ಧಾಂತಗಳ ಪ್ರಚಾರಕ್ಕಾಗಿ ಮೀಸಲಾಗಿರುವ ಬಸವ ಮಹಾಮನೆ ಇದೆ. ಬಂದವರಿಗೆ ಉಳಿದುಕೊಳ್ಳಲು ಏಳು ಯಾತ್ರಿ ಭವನಗಳಿವೆ. ಈಗಾಗಿ ವಸತಿ, ದಾಸೋಹದ ಸಮಸ್ಯೆ ಇಲ್ಲ. ಪ್ರತಿ ಸಂಕ್ರಾತಿಗೆ ಇಲ್ಲಿ ಐದು ದಿನಗಳ ಕಾಲ ಶರಣ ಮೇಳ ನಡೆಯುತ್ತದೆ. ಇದಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗುತ್ತಾರೆ. ಈ ಶರಣ ಲೋಕ ವೀಕ್ಷಿಸಲು ವಯಸ್ಕರಿಗೆ ಐದು ರುಪಾಯಿ ಟಿಕೇಟ್ ಇದೆ.
ಮತ್ತೇನು ನೋಡಬಹುದು?
ಸಂಗಮೇಶ್ವರ ದೇವಾಲಯ, ಶ್ರೀ ಬಸವೇಶ್ವರರ ಐಕ್ಯ ಮಂಟಪ, ಚಾಲುಕ್ಯ ಶೈಲಿಯ ವಾಸ್ತುಶಿಲ್ಪವನ್ನು ನೆನಪಿಸುವ ಮಹಾದ್ವಾರ, ಪಿರಮಿಡ್ ಮಾದರಿಯ ದಾಸೋಹ ಭವನ, ಜಪಾನ್ ವಾಸ್ತು ಶೈಲಿಯಲ್ಲಿ ನಿರ್ಮಿಸಿರುವ ಉಪಹಾರ ಗೃಹ, ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಗೋಳಗುಮ್ಮಟದ ಇಮ್ಮಡಿ ವಿಸ್ತಾರ ಹೊಂದಿದ ವೃತ್ತಾಕಾರದ ಸಭಾಗೃಹ, ಬಸವ ಅಂತರಾಷ್ಟ್ರೀಯ ಕೇಂದ್ರ, ಪೂಜಾ ವನ, ರಥದ ಮನೆ ಹಾಗೂ ವೀಕ್ಷಣಾ ಗೋಪುರ.
- ಚಿತ್ರ-ಲೇಖನ: ಸ್ವರೂಪಾನಂದ ಎಂ.ಕೊಟ್ಟೂರು
ಸವದತ್ತಿ ಯಲ್ಲಮ್ಮನ ಸಹೋದರ
ವೀರಭದ್ರನ ಯಾರಿಗೆ ಗೊತ್ತಿಲ್ಲ? ದಕ್ಷನ ಯಜ್ಞ ನಿಲ್ಲಿಸಲು ಪರಶಿವನ ಆಜ್ಞೆಯಂತೆ ಉದ್ಭವಿಸಿದ ವೀರಭದ್ರನಿಗೆ ನಮ್ಮ ರಾಜ್ಯದಲ್ಲೂ ಹಲವಾರು ದೇವಸ್ಥಾನಗಳಿವೆ. ಅವುಗಳಲ್ಲಿ ಹೆಚ್ಚಿನವು ಉತ್ತರ ಕರ್ನಾಟಕದಲ್ಲಿಯೇ ಇವೆ. ಗೊಡಚಿ, ಕಾರಟಗಿ, ತಡಕೋಡ, ರಾಯಚೋಟಿ, ಶಿಂಗಟಾಲೂರು, ಬೆಳಗಾವಿ, ಯಡೂರ ವೀರಭದ್ರ ದೇವಾಲಯಗಳು ಬಹಳ ಪ್ರಸಿದ್ಧ. ಗೊಡಚಿ ವೀರಭದ್ರನ ವಿಶೇಷ ಎಂದರೆ ಈತ ಸವದತ್ತಿಯ ರೇಣುಕಾದೇವಿಯ ಸಹೋದರ ಸ್ವರೂಪ.

ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯಂದು ಇಲ್ಲಿ ರಥೋತ್ಸವ (ಈ ವರ್ಷ ಡಿ.17). ಇದು ಬಳವಲ ಹಣ್ಣುಗಳ ಮಾರುಕಟ್ಟೆಯೂ ಹೌದು, ವೃತ್ತಿ ನಾಟಕ ಕಂಪನಿಗಳ ಸುಗ್ಗಿಯೂ ಹೌದು. ಐದು ದಿನ ರಥೋತ್ಸವದ ಸಂಭ್ರಮ. ವಾಹನಗಳೇ ಅಲ್ಲದೆ ಚಕ್ಕಡಿಗಳಲ್ಲಿ ಬರುವವರೂ ಕಡಿಮೆ ಇಲ್ಲ. ಉತ್ತರ ಕರ್ನಾಟಕದ ಯಲ್ಲಮ್ಮ ದೇವಿ ಕ್ಷೇತ್ರ, ಬಾದಾಮಿ ಬನಶಂಕರಿ ಕ್ಷೇತ್ರ ಹೊರತು ಪಡಿಸಿದರೆ ಗೊಡಚಿ ಕ್ಷೇತ್ರವೇ ಹೆಚ್ಚು ಜನಸಂದಣಿ ಹೊಂದುವ ಜಾತ್ರಾ ಸ್ಥಳ.

ಅಗ್ನಿ ಕುಂಡ ರಥೋತ್ಸವದ ವಿಶೇಷ. ಬೆಳಗಾವಿಯಿಂದ ಆರಂಭವಾಗುವ ಕಟ್ಟಿಗೆ ಮೆರವಣಿಗೆ ಬೈಲಹೊಂಗಲ, ಹೊಸೂರ ರಥೋತ್ಸವದ ಹಿಂದಿನ ದಿನ ಗೊಡಚಿ ತಲುಪುತ್ತದೆ. ಅಂದು ಪುರವಂತರ ಸಮಾವೇಶ ಮತ್ತು ಅಗ್ನಿಕುಂಡ ಉತ್ಸವ. ರಥೋತ್ಸವದಂದು ಬೆಳಗ್ಗೆ ಶಾಸ್ತ್ರೋಕ್ತವಾಗಿ ಅಗ್ನಿ ಹೊತ್ತಿಸಿ, ದೇವರ ಮೂರ್ತಿಗೆ ಅಲಂಕಾರಿಕ ಪೂಜೆ, ಮಧ್ಯಾಹ್ನ 3 ಕ್ಕೆ ಪುರವಂತರಿಂದ ಅಗ್ನಿ ಪ್ರವೇಶ, ಸಂಜೆ ರಥೋತ್ಸವ ಜರುಗುವುದು.

ವಿಜಯನಗಲ ಶೈಲಿಯ ದೇವಾಲಯವಿದು. ಪ್ರಾಂಗಣದಲ್ಲಿ ವೀರಭದ್ರ, ಮುದಿವೀರಭದ್ರ, ಭದ್ರಕಾಳಿ ದೇವಾಲಯಗಳಿವೆ. ದೇವಾಲಯ ಎದುರಿಗೆ ದೀಪಮಾಲಿಕಾ ಕಂಭವಿದೆ. ಗರ್ಭಗುಡಿಯಲ್ಲಿರುವ ವೀರಭದ್ರ ವಿಗ್ರಹವು ಚತುರ್ಭುಜ ಹೊಂದಿದ್ದು, ಬಲ ಮುಂಗೈಯಲ್ಲಿ ಖಡ್ಗ, ಎಡ ಮುಂಗೈಯಲ್ಲಿ ವೃತ್ತಾಕಾರದ ಗುರಾಣಿ, ಬಲ ಹಿಂಗೈಯಲ್ಲಿ ತ್ರಿಶೂಲ, ಎಡ ಹಿಂಗೈಯಲ್ಲಿ ನಾಗರ ಹಡೆ ಹಿಡಿದಿದ್ದಾನೆ. ಸುಮಾರು ನಾಲ್ಕು ಅಡಿ ಎತ್ತರದ ರುಂಡಮಾಲಧಾರಿ ಮೂರ್ತಿ. ಈ ದೇವಾಲಯದ ಪೂರ್ವಕ್ಕೆ ದಿಗಂಬರೇಶ್ವರ ಮುನಿಯ ಗದ್ದುಗೆ ಇದೆ. ದಕ್ಷಿಣಕ್ಕೆ ವಿಭೂತಿಮಠ ಎಂಬ ಗವಿ, ಈಶಾನ್ಯ ದಿಕ್ಕಿಗೆ ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಗೂ ಮತ್ತು ಶಿವಶರಣರಿಗೂ ನಡೆದ ಯುದ್ದದ ಸ್ಥಳ 'ರಣಬಾಜಿ' ಇದೆ. ರಣಬಾಜಿಯ ಮೂರು ದಿಕ್ಕುಗಳಲ್ಲಿಯೂ ಮೂರು ಕೂಗುಬಸವಣ್ಣನ ಮಾಲಗಂಭಗಳಿವೆ.


ಕೊಡಚಿಯೇ ಗೊಡಚಿ ಆಯಿತೆ?

ಗೊಡಚಿ ಎಂಬ ಹೆಸರು ಬರಲು ಕಾರಣ ಇಲ್ಲಿ ಕೊಡಚಿ ಕಂಟೆಗಳಿದ್ದವಂತೆ. ಇದರ ಹಣ್ಣಿನ ರುಚಿ ಒಗರು. ಇಂಥ ಕಂಟೆಗಳು ದಟ್ಟವಾಗಿ ಬೆಳೆದಿದ್ದರಿಂದ ತಲೆ ಮರೆಸಿಕೊಳ್ಳುವವರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿತ್ತಂತೆ. ಕೊಡಚಿಯೇ ಗೊಡಚಿಯಾಗಿದೆ ಎಂದು ಹೇಳುವರು. ಇಲ್ಲಿಗೆ ಸಮೀಪದ 'ರಣಭಾಜಿ'ಯಲ್ಲಿ ಕಲ್ಯಾಣದ ಚಾಲುಕ್ಯರಿಗೂ, ಶಿವಶರಣರಿಗೂ ಘೋರ ಯುದ್ದ ಘಟಿಸಿದ್ದು. ನಂತರ ಶಿವಶರಣರು ಇದೇ ಮಾರ್ಗವಾಗಿ ಉಳುವಿ ಕ್ಷೇತ್ರದತ್ತ ಪಯಣಿಸಿದರು ಎನ್ನುತ್ತದೆ ಇತಿಹಾಸ. ಗೊಡಚಿ ಸೇರಿದಂತೆ ರಾಮದುರ್ಗ ತಾಲ್ಲೂಕು ಬಹುಕಾಲ ತೊರಗಲ್ಲು ಶಿಂಧೆ ಮಹಾರಾಜರ ಆಳ್ವಿಕೆಗೆ ಒಳಪಟ್ಟಿತ್ತು.


ಯಲ್ಲಮ್ಮನ ಸಹೋದರ!  

ಸವದತ್ತಿ ಯಲ್ಲಮ್ಮ ದೇವಿಯ ಸಹೋದರ ಸ್ವರೂಪ ಎಂಬುದಕ್ಕೆ ಕಥೆಯೊಂದಿದೆ. ದಕ್ಷ ಪ್ರಜಾಪತಿಯ ಯಜ್ಞವನ್ನು ತಡೆದ ವೀರಭದ್ರ ರೌದ್ರಾವತಾರದ ಭರದಲ್ಲಿ ಯಜ್ಞಕುಂಡದಲ್ಲಿ ಬೀಳುವ ಸಂದರ್ಭ. ಆಗ ರೇಣುಕಾದೇವಿ ಅವನ ನಡುಪಟ್ಟಿಯನ್ನು ಹಿಡಿದು ಎಳೆದು ಪಾರುಮಾಡಿದಳು ಎಂದು. ಅದರಂತೆ ಪ್ರತಿವರ್ಷ ವೀರಭದ್ರನು ಯಲ್ಲಮ್ಮನ ಜಾತ್ರೆಯ ಕಾಲಕ್ಕೆ ದೇವಿಗೆ ಸೀರೆ, ಕುಪ್ಪುಸ, ಹಸಿರು ಬಳೆ, ಉಲುಪಿ ಸಾಮಗ್ರಿಗಳನ್ನು ಸಹೋದರತ್ವದ ಕಾಣಿಕೆಯಾಗಿ ಕೊಡುವುದು; ಗೊಡಚಿ ಜಾತ್ರೆಯ ಕಾಲಕ್ಕೆ ವೀರಭದ್ರ ದೇವರಿಗೆ ದೋತರ, ಶಲ್ಯ, ನಂದಿಕೋಲು, ಪೂಜಾ ಸಾಮಗ್ರಿಗಳನ್ನು ಸಹೋದರಿ ಕಾಣಿಕೆಯಾಗಿ ಕಳಿಸಿಕೊಡುವ ಸಂಪ್ರದಾಯ ಇಂದಿಗೂ ಇದೆ. ಭದ್ರಕಾಳಿ ವೀರಭದ್ರನ ಹೆಂಡತಿ ಎನ್ನುವ ನಂಬಿಕೆ. ಅದಕ್ಕಾಗಿ ದೇವಾಲಯದ ಆವರಣದಲ್ಲಿ ಭದ್ರಕಾಳಿ ಮಂದಿರವೂ ಇದೆ.


ಊಟ, ವಸತಿ ತೊಂದರೆ ಇಲ್ಲ

ಗೊಡಚಿಯು ಬೆಳಗಾವಿಯಿಂದ 78 ಕಿ.ಮೀ, ತಾಲ್ಲೂಕು ಕೇಂದ್ರ ರಾಮದುರ್ಗದಿಂದ 14 ಕಿ.ಮೀ ದೂರದಲ್ಲಿದೆ. ಸವದತ್ತಿ, ಮುನವಳ್ಳಿ, ಗೋಕಾಕಗಳಿಂದಲೂ ಸಾರಿಗೆ ಸೌಲಭ್ಯವಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸತಿ ಮತ್ತು ಅನ್ನದಾಸೋಹ ವ್ಯವಸ್ಥೆ ಇದೆ. ಬೆಂಗಳೂರು, ಗುಲ್ಬರ್ಗ, ಬೀದರ್, ಪುಣೆ, ಮುಂಬೈ, ಕೊಲ್ಲಾಪುರಗಳಿಂದ ಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.


- ವೈ.ಬಿ. ಕಡಕೋಳ
  ಕೃಪೆ:ಕನ್ನಡಪ್ರಭ 

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

ಗುಬ್ಬಿ ತೋಟದಪ್ಪರವರು ಯಾರು? ಅವರ ಸಾಧನೆಗಳೇನು?