ನಿತ್ಯ ಹರಿದ್ವರ್ಣದ ವಾಲ್‌ಪರೈ



ಒಂದರ ಪಕ್ಕ ಒಂದು ಸಾಲಾಗಿ ಕುಳಿತ ಚಿಗುರು ಹಸಿರು, ತೆಳು ಹಸಿರು, ಮಾಗಿದ ಹಸಿರು ಗುಚ್ಛಗಳು. ಅವುಗಳಿಂದ ಬೀಸುವ ತಂಗಾಳಿ ಮತ್ತು ದಾರಿಯುದ್ದಕ್ಕೂ ಸಿಗುವ ಅಚ್ಚ ಹಸಿರು ಸಿರಿ ಅನುಭವಿಸಲು ವಾಲ್‌ಪರೈ ಗಿರಿಧಾಮಕ್ಕೆ ತೆರಳಬೇಕು. ಚಹಾ ಮತ್ತು ಕಾಫಿಯ ಗುತ್ತು ಗುತ್ತು ಹಸಿರು ಗಿಡಗಳ ಸಾಲುಗಳನ್ನೇ ಹೊತ್ತಿರುವ ವಾಲ್‌ಪರೈ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಗೆ ಸೇರಿದ್ದು. ಸಮುದ್ರ ಮಟ್ಟದಿಂದ 1,193 ಮೀಟರ್ ಎತ್ತರದಲ್ಲಿ ಇರುವ ಈ ಗಿರಿಧಾಮ ಪಶ್ಚಿಮ ಘಟ್ಟದ ಅಣ್ಣಾಮಲೈ ಬೆಟ್ಟ ಸಾಲುಗಳಲ್ಲಿ ಒಂದು.
ಇಲ್ಲಿ ಮೊದಲು ಕಾಫಿ ತೋಟ ಆರಂಭಿಸಿದವರು (1846) ರಾಮಸ್ವಾಮಿ ಮೊದಲಿಯಾರ್. 1875ರಲ್ಲಿ ವೇಲ್ಸ್‌ನ ರಾಜಕುಮಾರ ಭಾರತಕ್ಕೆ ಬಂದಾಗ ಈ ಸುಂದರ ಗಿರಿಧಾಮವನ್ನು ಸಿದ್ಧಗೊಳಿಸಲು ಅಪ್ಪಣೆಯಾಯಿತು. ಆಗ ಅಲ್ಲಿ ವಸತಿಗೃಹಗಳನ್ನು ಮತ್ತು ಅಲ್ಲಿಗೆ ತಲುಪಲು ರಸ್ತೆ ಸಂಪರ್ಕವನ್ನು ನಿರ್ಮಿಸಲಾಯಿತು. ಆದರೆ ರಾಜಕುಮಾರನ ಆಗಮನ ರದ್ದಾಯಿತು. ಅಲ್ಲಿ ನಿರ್ಮಾಣವಾದ ರಸ್ತೆ ಸಂಪರ್ಕ ಮತ್ತು ವಸತಿಗೃಹಗಳನ್ನು ಬ್ರಿಟಿಷ್ ಅಧಿಕಾರಿಗಳು ಬಳಸತೊಡಗಿದರು.
ಕಾರ್ವರ್ ಮಾರ್ಷ್ ಎಂಬ ಅಧಿಕಾರಿ ಅಲ್ಲಿ ಕಾಫಿ ಮತ್ತು ಚಹಾ ತೋಟಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿದರು. ಇದೀಗ ಅಲ್ಲಿ ಖಾಸಗಿ ಮತ್ತು ಸರ್ಕಾರಿ ಚಹಾ ಮತ್ತು ಕಾಫಿ ತೋಟಗಳಿವೆ. ಜೊತೆಗೆ ಖಾಸಗಿ ಮತ್ತು ಸರ್ಕಾರಿ ವಸತಿ ಗೃಹಗಳು ಕೈಬೀಸಿ ಕರೆಯುತ್ತವೆ. ಇಂಥ ಸುಂದರ ಸುಸಜ್ಜಿತ ಗಿರಿಧಾಮಕ್ಕೆ ತಲುಪುವಾಗ 40 ಹೇರ್‌ಪಿನ್ ತಿರುವುಗಳನ್ನು ಸುತ್ತಿ ಸಾಗಬೇಕು. ಆ ಅನುಭವವನ್ನು ಕಷ್ಟಪಟ್ಟು ಸಹಿಸುವ ಪ್ರವಾಸಿಗರೂ ಇರುವಂತೆ ಅಂಥ ಅದ್ಭುತ ಅನುಭವ ಪಡೆಯಲು ಬರುವ ಪ್ರವಾಸಿಗರೂ ಇದ್ದಾರೆ. ಇದೀಗ ಇಲ್ಲಿ ಐಷಾರಾಮಿ ರೆಸಾರ್ಟ್‌ಗಳು, ಮನರಂಜನಾ ಉದ್ಯಾನ ಆರಂಭವಾಗಿದೆ.
ವಾಲ್‌ಪರೈ ಗಿರಿಧಾಮಕ್ಕೆ ಅಂಟಿಕೊಂಡಂತೆ ದಟ್ಟ ಕಾಡು ಇದೆ. ಅಲ್ಲಿ ಸಂಚರಿಸಲು ಅರಣ್ಯ ಇಲಾಖೆಯ ಅನುಮತಿ ಬೇಕು. ಚಾರಣಪ್ರಿಯರು ಅಲ್ಲಿ ಸಂಚರಿಸಲು ತೆರಳುವುದು ಇದೆ. ಆದರೆ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಮಾತ್ರ ಅದಕ್ಕೆ ಅವಕಾಶ ನೀಡಲಾಗಿದೆ. ಸಾಕಷ್ಟು ಕಾಡುಮೃಗಗಳು ಇರುವುದರಿಂದ ಅದು ಅಪಾಯಕಾರಿ ಪ್ರದೇಶ ಎಂದು ಗುರುತಿಸಲಾಗಿದೆ. ಆನೆಗಳು, ಚಿರತೆ, ಕರಡಿ, ಸಿಂಹ, ಜಿಂಕೆಗಳು, ನೀಲಗಿರಿ ತಾರ್, ಪಕ್ಷಿಗಳು ಈ ಕಾಡಿನಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಭಾರತದ ದೊಡ್ಡ ಮಂಗಟ್ಟೆ ಹಕ್ಕಿಗಳಂತೂ ಇಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ನೆಲೆಸಿವೆ.
ವಾಲ್‌ಪರೈಗೆ ಹತ್ತಿರದಲ್ಲಿಯೇ ಸೊಲೈಯಾರ್ ಅಣೆಕಟ್ಟು, ಅತಿರಂಪಲ್ಲಿ ಜಲಪಾತ, ಬಾಲಾಜಿ ದೇವಾಲಯ, ಪಂಚಮುಖಿ ವಿನಾಯಕ ದೇವಾಲಯ, ಮಂಕಿ ಜಲಪಾತ, ಅಲಿಯಾರ್ ಜಲಪಾತ ಇದೆ. ಈ ನಿತ್ಯ ಹರಿದ್ವರ್ಣದ ಕಾಡುಗಳನ್ನು ಅಚ್ಚಹಸಿರಾಗಿ ಇಟ್ಟಿರುವ ಮಳೆ ಜೂನ್ ತಿಂಗಳಲ್ಲಿ ಅತಿ ಹೆಚ್ಚಾಗಿ ಸುರಿಯುತ್ತದೆ. ಅದರಿಂದ ಆಗ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುತ್ತದೆ. ಅಲ್ಲದೇ ಮಳೆಗಾಲದಲ್ಲಿ ಭೂಕುಸಿತ ಸಂಭವಿಸುವುದರಿಂದ ಮಾರ್ಗವನ್ನು ಕೆಲವೊಮ್ಮೆ ಮುಚ್ಚಲಾಗಿರುತ್ತದೆ.
ಕೊಯಮತ್ತೂರಿನಿಂದ 100 ಕಿಮೀ, ಪೊಲ್ಲಾಚಿಯಿಂದ 65 ಕಿಮೀ, ಚಲಕುಡಿಯಿಂದ 130 ಕಿಮೀ ದೂರ ಇರುವ ವಾಲ್‌ಪರೈ ಪ್ರತಿಯೊಬ್ಬರೂ ನೋಡಲೇಬೇಕಾದ ವಿಶಿಷ್ಟ ಗಿರಿಧಾಮ.

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

ಗುಬ್ಬಿ ತೋಟದಪ್ಪರವರು ಯಾರು? ಅವರ ಸಾಧನೆಗಳೇನು?