ಕೊಲ್ಲಿ ದ್ವೀಪ,ಕೆಳದಿ, ಮಲ್ಲಳ್ಳಿ ಜಲಪಾತ


ಕಪಿಲಾ ನದಿಯ ದಂಡೆಯಲ್ಲಿರುವ ಭೀಮನಕೊಲ್ಲಿ ಕಳೆಯೇ ವಿಭಿನ್ನ. ಇದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿಗೆ ಸೇರುತ್ತದೆ. ಮೂರು ಕಡೆ ಜಲಾವೃತಗೊಂಡು, ಪರ್ಯಾಯ ದ್ವೀಪ ಕ್ಷೇತ್ರ ಎನಿಸಿಕೊಂಡಿದೆ ಈ ಭೀಮನಕೊಲ್ಲಿ.

ಪ್ರತಿವರ್ಷ ಫೆಬ್ರವರಿಯಲ್ಲಿ ಅಲ್ಲಿ ಮಹದೇಶ್ವರಸ್ವಾಮಿ ಜಾತ್ರೆ ನಡೆಯುತ್ತದೆ. ಕೈಲಾಸಪತಿ ಪರಶಿವ ಮಹದೇಶ್ವರನಾಗಿ ಭೂಮಂಡಲದಲ್ಲಿ ಅವತರಿಸಿ, ತಮ್ಮ ಧಾರ್ಮಿಕ ಪಯಣದ ಕಾಲದಲ್ಲಿ ಶ್ರೀಕ್ಷೇತ್ರ ಭೀಮನಕೊಲ್ಲಿಗೆ ಬಂದು ಭಕ್ತರು ಹರಕೆ ನೆರವೇರಿಸಿ, ಅಲ್ಲಿಂದ ಶ್ರೀಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ ಎಂಬುದು ಪ್ರತೀತಿ. ಅಂದು ಈ ಕ್ಷೇತ್ರದಲ್ಲಿ ಶಿವನು ತಪಸ್ಸು ಆಚರಿಸಿ, ಸದ್ಬೋಧನೆ ಮಾಡಿದ ಪುಣ್ಯ ಸ್ಥಳದಲ್ಲಿ ಶಿವಲಿಂಗ ಉದ್ಭವಿಸಿ, ಸರ್ವರ ಆರಾಧ್ಯ ದೈವವಾಗಿ ಪೂಜಿತವಾಗುತ್ತಿದೆ.

ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಕಬಿನಿ ಜಲಾಶಯ ನಿರ್ಮಾಣವಾದ ನಂತರ ಭೀಮನಕೊಲ್ಲಿ ಕ್ಷೇತ್ರದ ಮೂರು ಕಡೆ ಜಲಾವೃತಗೊಂಡಿತು. ಬಹುಕಾಲ ಜನ ಸಂಪರ್ಕವಿಲ್ಲದಂತಾಗಿತ್ತು. ಆದರೆ 1989-90 ರಿಂದ ಪವಿತ್ರ ಯಾತ್ರಾ ಸ್ಥಳ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿದೆ. ನಾಡಿನ ಮೂಲೆ ಮೂಲೆಗಳಿಂದ ಭಕ್ತರು, ಪ್ರವಾಸಿಗರು ವರ್ಷವಿಡೀ ಇಲ್ಲಿಗೆ ಬರುತ್ತಿದ್ದಾರೆ. ದೋಣಿ ವಿಹಾರ, ನೈಸರ್ಗಿಕ ಶಿಬಿರ ನಡೆಸುವವರಿಗೆ, ಪ್ರವಾಸಿಗರಿಗೆ, ಪರಿಸರ ಪ್ರಿಯರಿಗೆ ಬೇಕಾದ ನೈಸರ್ಗಿಕ ವಾತಾವರಣ ಈ ಕ್ಷೇತ್ರದಲ್ಲಿದೆ. ಮಂಗಳಕಾರ್ಯ, ಸೇವಾ ಕೈಂಕರ್ಯ, ಅನ್ನದಾಸೋಹ ಮೊದಲಾದ ಸೇವೆ ಮಾಡಿಸುವವರಿಗೆ ಹೇಳಿ ಮಾಡಿಸಿದ ತಾಣ.

ಇಲ್ಲಿರುವ ಶ್ರೀಮಹದೇಶ್ವರ ದೇವಸ್ಥಾನದಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಅರ್ಚಕರು ಹಾಜರಿದ್ದು, ಪೂಜೆ ನೆರವೇರಿಸುತ್ತಾರೆ. ಪ್ರತಿ ಅಮಾವಾಸ್ಯೆ, ಕಾರ್ತಿಕ ಮಾಸದ ಎಲ್ಲಾ ಸೋಮವಾರ ಮತ್ತು ಜಾತ್ರಾ ಮಹೋತ್ಸವ ಸಂದರ್ಭ ಪ್ರಸಾದದ ವ್ಯವಸ್ಥೆ ಇದೆ. ಆರ್ಥಿಕವಾಗಿ ಸಶಕ್ತವಾದ ನಂತರ ನಿತ್ಯ ದಾಸೋಹ ಮಾಡುವ ಉದ್ದೇಶ ದೇವಸ್ಥಾನ ಸಮಿತಿಗೆ ಇದೆ.

ಪರಿಸರ ಪ್ರವಾಸೋದ್ಯಮ

ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿದರೆ ಪರಿಸರ ಪ್ರವಾಸೋದ್ಯಮ ತಾಣವಾಗಿ ರೂಪಿಸಬಹುದು. ಭೀಮನಕೊಲ್ಲಿ ಕ್ಷೇತ್ರದ ಸುತ್ತಲೂ ಟ್ರ್ಯಾಕ್ ನಿರ್ಮಿಸಿ, ಸೈಕ್ಲಿಂಗ್, ಪಕ್ಕದಲ್ಲಿಯೇ ನದಿ ಇರುವುದರಿಂದ ಬೋಟಿಂಗ್‌ಗೆ ಅವಕಾಶ ಕಲ್ಪಿಸಬಹುದು. ಹಟ್ ಮಾದರಿಯ 30 ಕಾಟೇಜ್ ನಿರ್ಮಿಸಿ, ಖಾಸಗಿಯವರಿಗೆ ಊಟ- ತಿಂಡಿ ಗುತ್ತಿಗೆ ನೀಡಿದರೆ ಸಾಕು. ಇದಕ್ಕಾಗಿ ಮೂಲ  ಸೌಕರ್ಯ ಒದಗಿಸಲು ರು. 15 ಕೋಟಿ ಬೇಕಾಗಬಹುದು. ಈ ಎಲ್ಲಾ ಸೌಲಭ್ಯ ಕಲ್ಪಿಸಿದಲ್ಲಿ ಇದು ಕ್ಲಿಕ್ ಆಗುವುದರಲ್ಲಿ ಹಾಗೂ ಸರ್ಕಾರಕ್ಕೆ ಹಾಕಿರುವ ಬಂಡವಾಳ ಕೆಲವೇ ವರ್ಷಗಳಲ್ಲಿ ವಾಪಸ್ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಸಮೀಪದಲ್ಲಿಯೇ ಕಾರಾಪುರ ಜಂಗಲ್ ಲಾಡ್ಜ್, ಆರೆಂಜ್ ಕೌಂಟಿ ಮತ್ತು ಸಿಕಾಡ ರೆಸಾರ್ಟ್‌ಗಳಿವೆ. ಅವರು ಈಗಾಗಲೇ ಬೋಟಿಂಗ್ ಮತ್ತಿತರ ಸೌಲಭ್ಯ ಕಲ್ಪಿಸಿ, ಲಾಭ ಪಡೆಯುತ್ತಿದ್ದಾರೆ. ಭೀಮನಕೊಲ್ಲಿಯ ಬಹುಭಾಗ ತೋಟಗಾರಿಕೆ ಇಲಾಖೆಗೆ ಸೇರಿದ. ಈಗಾಗಲೇ ತೋಟಗಾರಿಕೆ ಇಲಾಖೆಯು ಕೆಮ್ಮಣ್ಣು ಗುಂಡಿ ಹಾಗೂ ನಂದಿ ಬೆಟ್ಟವನ್ನು ಪ್ರವಾಸಿತಾಣಗಳಾಗಿ ಅಭಿವೃದ್ಧಿಪಡಿಸಿರುವಂತೆ ಈ ಕ್ಷೇತ್ರವನ್ನೂ ಅಭಿವೃದ್ಧಿಪಡಿಸಬಹುದು. <

ಹೀಗೆ ಬನ್ನಿ...

ಭೀಮನಕೊಲ್ಲಿ ಮೈಸೂರಿನಿಂದ 65 ಕಿ.ಮೀ., ಎಚ್.ಡಿ. ಕೋಟೆಯಿಂದ 27 ಕಿ.ಮೀ. ದೂರದಲ್ಲಿದೆ. ಮೈಸೂರಿನಿಂದ ಎಚ್.ಡಿ. ಕೋಟೆ ರಸ್ತೆಯಲ್ಲಿ ಹ್ಯಾಂಡ್‌ಪೋಸ್ಟ್ ತಲುಪಿ, ಅಲ್ಲಿಂದ ಬೀಚನಹಳ್ಳಿ ಮಾರ್ಗವಾಗಿ ಭೀಮನಕೊಲ್ಲಿ ತಲುಪಬಹುದು. ಎಚ್.ಡಿ. ಕೋಟೆಯಿಂದ ಸಾರಿಗೆ ಸಂಸ್ಥೆಯ ಬಸ್ ಸೌಲಭ್ಯವಿದೆ. ಮೂರಾ ಬಂದ್ ಬಳಿ ಇಳಿದು, ಆಟೋ, ಜೀಪುಗಳಲ್ಲೂ ಭೀಮನಕೊಲ್ಲಿ ತಲುಪಬಹುದು. ಸ್ವಂತ ಅಥವಾ ಬಾಡಿಗೆ ವಾಹನಗಳಲ್ಲಿ ಹೋದಲ್ಲಿ ಅನುಕೂಲ. ಅಲ್ಲಿ ಯಾವುದೇ ಹೋಟೆಲ್‌ಗಳಿಲ್ಲ. ಹೀಗಾಗಿ ಜೊತೆಯಲ್ಲಿಯೇ ಊಟ- ತಿಂಡಿ- ನೀರು ತೆಗೆದುಕೊಂಡು ಹೋದಲ್ಲಿ ದೇವಸ್ಥಾನ ನೋಡಿಕೊಂಡು, ಪರ್ಯಾಯ ದ್ವೀಪದಲ್ಲಿ ಆರಾಮವಾಗಿದ್ದು ಬರಬಹುದು. ಒಟ್ಟಾರೆ ಪಿಕ್ನಿಕ್‌ಗೆ ಹೇಳಿ ಮಾಡಿಸಿದ ತಾಣ. ಸರಿಯಾಗಿ ಪ್ಲ್ಯಾನ್ ಮಾಡಿದಲ್ಲಿ ಕಬಿನಿ, ನುಗು ಜಲಾಶಯ, ಚಿಕ್ಕದೇವಮ್ಮನಬೆಟ್ಟ ನೋಡಿಕೊಂಡು ಬರಬಹುದು.

-ಚಿತ್ರ- ಲೇಖನ: ಅಂಶಿ ಪ್ರಸನ್ನಕುಮಾರ್

ಕೆಳದಿಯ ಕಳೆ



ಕೆಳದಿ ಇಂದು ಒಂದು ಸಾಮಾನ್ಯ ಹಳ್ಳಿ. ಮೇಲ್ನೋಟಕ್ಕೆ ಇದು ಹಿಂದೊಮ್ಮೆ ರಾಜಧಾನಿಯಾಗಿತ್ತು ಎಂದು ಯಾರಿಗೂ ಅನಿಸದು. ಇಲ್ಲಿರುವ ಹೊಯ್ಸಳ- ದ್ರಾವಿಡ ಶೈಲಿಯ ರಾಮೇಶ್ವರ ದೇವಾಲಯದಿಂದ ಪ್ರಖ್ಯಾತವಾಗಿದೆ ಕೆಳದಿ.

ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯ ಸಂದರ್ಭ, ಇಲ್ಲಿಯೇ ಹುಟ್ಟಿ ಬೆಳೆದ ಸಾಮಾನ್ಯ ಮನೆತನದ ಚೌಡಗೌಡನೆಂಬ ರೈತನಿಗೆ ನಿಕ್ಷೇಪವೊಂದು ದೊರೆತು ಅದರ ಸಹಾಯದಿಂದ ಸಣ್ಣ ಪಾಳೆಯಪಟ್ಟೊಂದನ್ನು ಅವನು ಕಟ್ಟಿಕೊಂಡನಂತೆ. ಅದೇ ಮುಂದೆ ಕೆಳದಿ ರಾಜಮನೆತನವಾಗಿ, ಕೆಳದಿಯು ರಾಜಧಾನಿಯಾಗಿ ಬೆಳೆಯಿತು.

ಊರು ಬಹು ಬೇಗ ಬೆಳೆಯಿತು. ಅರಮನೆ, ಕೋಟೆ, ಕೆರೆಗಳನ್ನು ಇಲ್ಲಿ ಚೌಡಪ್ಪ ನಾಯಕ ಕಟ್ಟಿಸಿದ. ಜೊತೆಗೆ ಸುಂದರವಾದ ರಾಮೇಶ್ವರ ದೇವಾಲಯವನ್ನೂ ಕಟ್ಟಿಸಿದ. ಮುಂದೆ ಇಕ್ಕೇರಿಗೆ, ನಂತರ, ಬಿದನೂರಿಗೆ ರಾಜಧಾನಿಯನ್ನು ಬದಲಾಯಿಸಲಾಯಿತು. ಇದರ ಪ್ರಾಮುಖ್ಯತೆ ಇಳಿಮುಖವಾಯಿತು. ಆದರೆ ಇಲ್ಲಿ ವಿಸ್ತಾರವಾಗಿ ಹರಡಿರುವ ಹಳೆಯ ಊರಿನ ನಿವೇಶನಗಳೂ, ದೇವಾಲಯಗಳೂ, ಕೆರೆ, ಮಠಗಳೂ ಹಿಂದಿನ ವೈಭವಕ್ಕೆ ತೋರುಬೆರಳಾಗಿ ನಿಂತಿವೆ.
ಹೀಗೆ ಬನ್ನಿ

ಶಿವಮೊಗ್ಗದಿಂದ ಜಿಲ್ಲೆಯ ಸಾಗರದಿಂದ 7 ಕಿ.ಮೀ. ದೂರದಲ್ಲಿದೆ. ಸಾಕಷ್ಟು ಸರಕಾರಿ ಹಾಗೂ ಖಾಸಗಿ ಬಸ್ ಸೌಕರ್ಯವಿದೆ

ಮಳ್ಳಿ ಮಲ್ಲಳ್ಳಿ


ಕರ್ನಾಟಕ ಪ್ರವಾಸೋದ್ಯಮ ವಿಷಯ ಬಂದಾಗಲೆಲ್ಲ ಶೌರ್ಯ, ಸಂಸ್ಕೃತಿಯಲ್ಲಿ ವಿಶೇಷ ಕೊಡುಗೆ ನೀಡಿರುವ ಕೊಡಗು ಜಿಲ್ಲೆಯನ್ನು ಮರೆಯಲು ಸಾಧ್ಯವೇ ಇಲ್ಲ. ಮನಸ್ಸು ಆಕರ್ಷಿಸುವ ಇಲ್ಲಿನ ಪ್ರವಾಸ ತಾಣಗಳು ಸದಾ ಸ್ಮರಣೆಯಲ್ಲಿ ಉಳಿಯುವಂಥವು. ಅಂಥ ಚೆಲುವಿನ ತಾಣಗಳಲ್ಲಿ ಸೋಮವಾರಪೇಟೆ ಸನಿಹದ ಮಲ್ಲಳ್ಳಿ ಜಲಪಾತವೂ ಒಂದು.

ಸುಮಾರು 200 ಅಡಿ (ಅಂದಾಜು 62 ಮೀ.) ಎತ್ತರದಿಂದ ಭೋರ್ಗರೆವ ಈ ಫಾಲ್ಸ್ ಕುಮಾರಧಾರ ನದಿಯ ಕೊಡುಗೆಯಾಗಿದೆ. ಸುತ್ತಲೂ ಬೆಟ್ಟಗಳಿಂದ ಆವೃತವಾಗಿರುವ ಹಚ್ಚಹಸಿರು ಕಾನನದಲ್ಲಿ ಜಲಪಾತದ ಮೊರೆತ ತನ್ಮಯರಾಗಿಸುತ್ತದೆ. ಪುಷ್ಪಗಿರಿ (ಕುಮಾರಪರ್ವತ) ಸಂರಕ್ಷಿತಾರಣ್ಯದಲ್ಲಿ ಧುಮ್ಮಿಕ್ಕಿ ಹರಿಯುವ ನದಿಯು ಮುಂದೆ ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಸೇರುತ್ತದೆ. ಈ ನದಿಗಳ ಸಂಗಮ ಪವಿತ್ರ ಕ್ಷೇತ್ರವಾಗಿ ಭಕ್ತರನ್ನು ಆಕರ್ಷಿಸುತ್ತದೆ.

ಬೆಂಗಳೂರಿನಿಂದ 265 ಕಿ.ಮೀ. ಸೋಮವಾರಪೇಟೆಯಿಂದ 25 ಕಿ.ಮೀ. ಅಂತರದಲ್ಲಿದೆ. ಬೆಟ್ಟದಹಳ್ಳಿ ಗ್ರಾಪಂ ವ್ಯಾಪ್ತಿಯ ಈ ನಿಸರ್ಗ ಸಿರಿಗೆ ತಲುಪಲು ರಜಾದಿನಗಳಲ್ಲಿ ಪಯಣಿಗರು ಚಾರಣ ಕೈಗೊಳ್ಳುವುದು ಪರಿಸರ ಆಸ್ವಾದಿಸಲು. ಎತ್ತರದ ಬೆಟ್ಟಗಳ ಮಧ್ಯೆ ಧೋ ಎಂದು ಸುರಿವ ಈ ಫಾಲ್ಸ್ ಅನ್ನು ಎತ್ತರದ ದಂಡೆ ಮೇಲೆ ನಿಂತು ನೋಡುವುದೇ ಚಂದ. ಮಳೆ, ಬಿಸಿಲಿನ ಬೆಳಕಿನಾಟದಲ್ಲಂತೂ ಝರಿ ಅದ್ಭುತವಾಗಿ ಗೋಚರಿಸುವುದು.  ನೂರಾರು ಅಡಿ ಎತ್ತರದಿಂದಲೇ ವೀಕ್ಷಿಸಬೇಕಿರುವ ಈ ಜಲಪಾತದ ಬುಡಕ್ಕೆ ತೆರಳುವ ಕಾಲು ದಾರಿ ದುರ್ಗಮ. ಬೆಟ್ಟದ ಕಾಲು ದಾರಿಯಲ್ಲೇ ಇಳಿದು ಫಾಲ್ಸ್ ತಲುಪಲು ಸಾಹಸ ಬೇಕು. ಕೆಲವೇ ದೂರದವರೆಗೆ ಮಾತ್ರ  ಮೆಟ್ಟಿಲುಗಳಿವೆ. ಮುಕ್ಕಾಲು ಕಿ.ಮೀ. ಭಯಾನಕ ಕಾಲು ದಾರಿಯಿದೆ. ಮಳೆಗಾಲದಲ್ಲಿ ತೆರಳುವಾಗ ಪ್ರಾಣಭಯ ಕಾಡದಿರದು. ಎಂಥ ಹಠವಾದಿ ಸಾಹಸಿಗನನ್ನೂ ತರಗಲೆಯಂತೆ ತೇಲಿಸಿಬಿಡುವಂಥ ವೇಗದ ಹರಿವು ಇರುವ ಕಾರಣ ಫಾಲ್ಸ್‌ಗೆ ಇಳಿಯುವುದು ಅಪಾಯಕರ.

ಫಾಲ್ಸ್‌ಗೆ ತೆರಳುವ ಕಾಲುದಾರಿಯ ಮೆಟ್ಟಿಲುಗಳಲ್ಲಿ ವಿರಮಿಸುವುದೇ ಮನಕಾನಂದ. ಇಲ್ಲಿನ ಬೃಹತ್ ಬಂಡೆಗಳು ಹಾಗೂ ಕಾನನ ಮಧ್ಯೆ ಭೋರ್ಗರೆವ ಜಲಪಾತದ ರಮಣೀಯತೆ ನಿಮಗೆಂದೂ ಸಪ್ಪೆ ಎನಿಸುವಂತಹ ಫೋಟೋಗಳನ್ನು ಕ್ಲಿಕ್ಕಿಸಲು ಅವಕಾಶ ನೀಡುವುದಿಲ್ಲ. ದಡದಿಂದ ಜಲಪಾತ ಸುಮಾರು 2 ಕಿ.ಮೀ. ದೂರವಿರುವಾಗಲೇ ವಾಹನಗಳನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ತೆರಳಬೇಕು. ಏಕೆಂದರೆ, ಕೊಂಚ ದೂರದವರೆಗೆ ಮಾತ್ರವೇ ಮಣ್ಣಿನ ರಸ್ತೆ ಉತ್ತಮವಾಗಿದ್ದು, ಮಳೆಗಾಲದಲ್ಲಿ ಅಲ್ಲಲ್ಲಿ ನೀರು ಹರಿದು ಕೊರಕಲು ಸೃಷ್ಟಿಯಾಗಿರುತ್ತದೆ.  ಕೊಡಗಿನ ಇನ್ನಿತರೆ ಫಾಲ್ಸ್

ಅಂದ ಹಾಗೆ, ಚಾರಣಕ್ಕೆ ತೆರಳುವಾಗ ಸ್ಥಳೀಯ ಗ್ರಾಪಂಗೆ ಪ್ರವೇಶ ಶುಲ್ಕ ಪಾವತಿಸಬೇಕು. ಇಲ್ಲಿಯೇ ಕೊಡಗು ಸ್ಪೆಷಲ್ ಜೇನುತುಪ್ಪ, ವೀಳ್ಯದೆಲೆ, ದ್ರಾಕ್ಷಿರಸ ಮತ್ತಿತರ ತಿನಿಸುಗಳು ಲಭ್ಯ. ಮಡಿಕೇರಿಯಿಂದ 7 ಕಿ.ಮೀ. ದೂರದ ಅಬ್ಬಿಫಾಲ್ಸ್, ವಿರಾಜಪೇಟೆ ತಾಲೂಕಿನ ಬ್ರಹ್ಮಗಿರಿ ರಕ್ಷಿತಾರಣ್ಯ ವ್ಯಾಪ್ತಿಯ ಇರುಪ್ಪು ಫಾಲ್ಸ್ ಅಥವಾ ಲಕ್ಷ್ಮಣತೀರ್ಥ ಫಾಲ್ಸ್ (ಶ್ರೀಮಂಗಳ ಬಳಿ ಲಕ್ಷ್ಮಣತೀರ್ಥ ನದಿ ಕೊಡುಗೆ), 16 ಕಿ.ಮೀ. ದೂರದಲ್ಲಿರುವ ಚೇಲಾವರ ಫಾಲ್ಸ್ (2 ಕಿ.ಮೀ. ಅಂತರದಲ್ಲಿರುವ ಚೋಮಕುಂಡ್ ಬೆಟ್ಟದಿಂದ ಉತ್ತಮ ದೃಶ್ಯ ಕಾಣಬಹುದು. ಯಾವಾಗಲೂ ಫಾಗ್‌ನಿಂದ ಕೂಡಿರುವ ಪ್ರದೇಶವಿದು.)

-ಶಿವಮೊಗ್ಗ ಗಿರಿಧ
ರ್

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

ಗುಬ್ಬಿ ತೋಟದಪ್ಪರವರು ಯಾರು? ಅವರ ಸಾಧನೆಗಳೇನು?