ಓಕೆ, ಡನ್





ಡನ್‌ಲಪ್ ಟಯರ್ ಹೆಸರು ಕೇಳದವರು ಕಡಿಮೆ. ಎಂಆರ್‌ಎಫ್, ಬ್ರಿಡ್ಜ್‌ಸ್ಟೋನ್ ಮುಂತಾದ ಕಂಪನಿಗಳ ಟಯರ್‌ಗಳು ಹುಟ್ಟುವ ಮೊದಲೇ ಡನ್‌ಲಪ್ ಟಯರ್ ಪ್ರಸಿದ್ಧವಾಗಿತ್ತು. ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರಾಗಿತ್ತು.

ಇನ್ನೊಂದು ಸಂಗತಿ ಗೊತ್ತೇ?

ವಿಶ್ವದಲ್ಲೇ ಮೊದಲ ಬಾರಿಗೆ ಟಯರ್ ಒಳಗೊಂದು ಟ್ಯೂಬ್ ಇಟ್ಟು, ಅದರೊಳಗೆ ಗಾಳಿ ತುಂಬಿ, ಅದನ್ನು ವಾಹನಕ್ಕೆ ಅಳವಡಿಸಿ ಓಡಿಸಬಹುದು ಎಂದು ತೋರಿಸಿಕೊಟ್ಟಿದ್ದೇ ಡನ್‌ಲಪ್ ಕಂಪನಿ! ಅದಕ್ಕೂ ಮೊದಲು ಸಂಪೂರ್ಣ ರಬ್ಬರ್‌ನಿಂದ ಕೂಡಿದ ಟಯರ್‌ಗಳನ್ನು ಬಳಸಲಾಗುತ್ತಿತ್ತು. ಇಷ್ಟಕ್ಕೂ ಡನ್‌ಲಪ್ ಎಂಬುದು ಕಂಪನಿ ಸ್ಥಾಪಿಸಿದ ವ್ಯಕ್ತಿಯ ಹೆಸರು! ಪೂರ್ಣ ಹೆಸರು ಜಾನ್ ಡನ್‌ಲಪ್. ಇವರೇನೂ ವಾಹನ ಉದ್ಯಮದಲ್ಲಿರಲಿಲ್ಲ. ದೊಡ್ಡ ಸಾಧನೆ ಮಾಡಬೇಕು ಎಂದು ಸಂಶೋಧನೆ ಮಾಡಿ ಕಂಡುಹಿಡಿದಿದ್ದೂ ಅಲ್ಲ. ಕೊನೇಪಕ್ಷ ಮೆಕ್ಯಾನಿಕ್ ಕೂಡ ಅಲ್ಲ. ಆತ ಒಬ್ಬ ಪ್ರಾಣಿಗಳ ವೈದ್ಯನಾಗಿದ್ದ.

ಜಾನ್ ಡನ್‌ಲಪ್ ಅವರ ಮಗ ಶೀತ ಪರಿಹಾರಕ್ಕಾಗಿ ಸೈಕಲ್ ಓಡಿಸುತ್ತಿದ್ದ. ಆದರೆ ಕೆಟ್ಟ ರಸ್ತೆಯಲ್ಲಿ ರಬ್ಬರ್ ಟಯರ್ ಅಳವಡಿಸಿದ ಟಯರ್‌ನ ಸೈಕಲ್ ಓಡಿಸಲು ಕಷ್ಟವಾಗುತ್ತಿತ್ತು. ಹೇಗಾದರೂ ಮಾಡಿ ಸೈಕಲ್ ಪ್ರಯಾಣವನ್ನು ಸುಲಭಗೊಳಿಸಬೇಕು ಎಂದು ಜಾನ್ ಡನ್‌ಲಪ್ ಚಿಂತಿಸತೊಡಗಿದ. ಆಗ ಗಾರ್ಡನ್‌ಗೆ ಬಳಸುತ್ತಿದ್ದ ಹಳೆಯ ರಬ್ಬರ್ ಪೈಪನ್ನೇ ಟ್ಯೂಬ್ ರೀತಿಯಲ್ಲಿ ಪರಿವರ್ತಿಸಿ, ಗಾಳಿ ತುಂಬಿ ಪ್ರಯೋಗ ಮಾಡಿದ. ಇದೇ ಜಗತ್ತಿನ ಮೊದಲ ಟ್ಯೂಬ್!

ಇದು ನಡೆದಿದ್ದು 1887ರಲ್ಲಿ. 1888ರಲ್ಲಿ ಇದಕ್ಕೆ ಪೇಟೆಂಟ್ ಕೂಡ ಪಡೆದರು. ಆ ವರ್ಷದಿಂದಲೇ ಬಹುತೇಕ ಸೈಕಲ್‌ಗಳು ಇದೇ ಟಯರ್ ಬಳಸತೊಡಗಿದವು. ಆದರೆ 1890ರಲ್ಲಿ ರಾಬರ್ಟ್ ವಿಲಿಯಂ ಥಾಮ್ಸನ್ ಎಂಬ ವ್ಯಕ್ತಿ ಜಾನ್ ಡನ್‌ಲಪ್ ಅವರ ಪೇಟೆಂಟ್ ಪ್ರಶ್ನಿಸಿ ದಾವೆ ಹೂಡುತ್ತಾರೆ. ಇದಕ್ಕೆ ಕಾರಣ ಇದೇ ಮಾದರಿಯ ಟಯರ್ ಬಗ್ಗೆ ರಾಬರ್ಟ್ 1846ರಲ್ಲೇ ಫ್ರಾನ್ಸ್‌ನಲ್ಲಿ, 1847ರಲ್ಲಿ ಯುಎಸ್‌ಎನಲ್ಲಿ ಪೇಟೆಂಟ್ ಪಡೆದಿದ್ದರು. ಆದರೆ ಜಾನ್ ಡನ್‌ಲಪ್ ಅವರ ಮಾದರಿಗಿಂತ ರಾಬರ್ಟ್ ಅವರು ಟಯರ್ ತಯಾರಿಸುವ ಮಾದರಿ ಬೇರೆ ಮತ್ತು ಅತ್ಯಂತ ದುಬಾರಿಯಾದದ್ದೂ ಆಗಿತ್ತು. ಆದ್ದರಿಂದ ಜಾನ್ ಡನ್‌ಲಪ್‌ಗೆ ತನ್ನದೇ ಮಾದರಿಯಲ್ಲಿ ಟಯರ್ ಉತ್ಪಾದನೆ ಮುಂದುವರಿಸುವ ಅವಕಾಶ ದೊರೆಯಿತು. 1891ರಲ್ಲಿ ಬರ್ಮಿಂಗ್‌ಹ್ಯಾಂ ಬಳಿ ಇರುವ ಎಡಿನ್‌ಬರ್ಗ್ ಫೋರ್ಟ್ ಡನ್‌ಲಪ್ ಹೆಸರಿನಲ್ಲಿ ಟಯರ್ ಉತ್ಪಾದನಾ ಫ್ಯಾಕ್ಟರಿ ಆರಂಭವಾಯಿತು. ಆದರೆ 1896ರಲ್ಲಿ ವಿಲಿಯಂ ಹಾರ್ವೆ ಎಂಬವರಿಗೆ ಕಂಪನಿ ಹಾಗೂ ಪೇಟೆಂಟ್ ನಿಯಂತ್ರಣವನ್ನು ಮಾರಾಟ ಮಾಡಿದ ಜಾನ್ ಡನ್‌ಲಪ್ ಈ ಉದ್ಯಮದಿಂದಲೇ ನಿವೃತ್ತರಾದರು. ಹೊಸ ಕಂಪನಿ ಡನ್‌ಲಪ್ ಹೆಸರನ್ನು ಮಾತ್ರ ಹಾಗೇ ಉಳಿಸಿಕೊಂಡಿತ್ತು.

1921ರ ಅಕ್ಟೋಬರ್ 23ರಂದು ಜಾನ್ ಡನ್‌ಲಪ್ ನಿಧನರಾದರು. 1999ರಿಂದ ಡನ್‌ಲಪ್ ಕಂಪನಿ ಗುಡ್ ಇಯರ್ ಟಯರ್ ಕಂಪನಿಯ ಸಹ ಸಂಸ್ಥೆಯಾಗಿ ಸೇರ್ಪಡೆಗೊಂಡಿತು

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

ಗುಬ್ಬಿ ತೋಟದಪ್ಪರವರು ಯಾರು? ಅವರ ಸಾಧನೆಗಳೇನು?