ಕಲ್ಯಾಣಮಸ್ತ್, ಸವದತ್ತಿ ಯಲ್ಲಮ್ಮ, ಉಂಚಳ್ಳಿ ಜಲಪಾತ,ಇಟಗಿಯ ಮಹಾದೇವ ದೇವಾಲಯ



ಜಲಪಾತಗಳ ತವರು ಎಂದೇ ಖ್ಯಾತಿಯನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಹತ್ತು ಹಲವು ಜಲಪಾತಗಳು ವಿಶ್ವವಿಖ್ಯಾತ. ಆದರೆ ನೂರಕ್ಕೂ ಹೆಚ್ಚಿನ ಜಲಪಾತಗಳು ಇನ್ನೂ ತೆರೆಯ ಮರೆಯಲ್ಲೇ ಉಳಿದಿವೆ. ಅವುಗಳಲ್ಲಿ ಕಲ್ಯಾಣೇಶ್ವರ ಜಲಪಾತ ಕೂಡ ಒಂದು.

ಸಿದ್ದಾಪುರ ತಾಲೂಕಿನ ಹಸರಗೋಡ ಗ್ರಾ.ಪಂ. ವ್ಯಾಪ್ತಿಯ ಕುಚಗುಂಡಿ ಊರಿನಲ್ಲಿರುವ ಕಲ್ಯಾಣೇಶ್ವರ ಜಲಪಾತ 15-20 ಅಡಿಗಳ ಎತ್ತರದಿಂದ ಜಿಗಿಯುತ್ತದೆ. ಈ ಜಲಪಾತದ ಮೂಲ ಯಾವುದೋ ದೊಡ್ಡ ನದಿಯಲ್ಲ. ಚಿಕ್ಕದೊಂದು ಹಳ್ಳ. ಜೂನ್‌ನಿಂದ ಡಿಸೆಂಬರ್ ವರೆಗೂ ಇದು ವೈಭವದಿಂದ ಧುಮುಕುತ್ತದೆ. ಆ ನಂತರ ಹಳ್ಳದ ನೀರು ಬತ್ತಿ ಹೋಗುವ ಕಾರಣ ಮತ್ತೆ ಜಲಪಾತಕ್ಕೆ ಜೀವಕಳೆ ಬರುವುದು ಮುಂದಿನ ಮಳೆಗಾಲದಲ್ಲಿಯೇ.

ಹಸಿರು ವೃಕ್ಷ ಸಮೂಹ, ಅಡಿಕೆ ತೋಟಗಳ ನಡುವೆ ಜುಳು ಜುಳು ಸದ್ದು ಮಾಡುತ್ತ ಇಳಿದುಬರುವ ಕಲ್ಯಾಣೇಶ್ವರ ಜಲಪಾತದ ದೃಶ್ಯ ಮನಮೋಹಕ. ಜಲಪಾತದ ಬುಡದಲ್ಲಿರುವ 5-10 ಅಡಿ ಆಳದ ಗುಂಡಿಯಲ್ಲಿ ಪ್ರವಾಸಿಗರು ಖುಷಿಯಿಂದ ಈಜಬಹುದು. ಈ ಜಲಪಾತದ ಬುಡದಲ್ಲಿ ಕಲ್ಲಿನ ಸಾಲುಗಳಿಲ್ಲ. ಮಣ್ಣಿನ ಹಂದರ ಇರುವ ಕಾರಣ ಪ್ರವಾಸಿಗರಿಗೆ ಯಾವುದೇ ಅಪಾಯವೂ ಇಲ್ಲ.

ಅಡ್ಕಳ್ಳಿ- ಕೋಡ್ಸರ ಸಂಪರ್ಕ ರಸ್ತೆಯ ಪಕ್ಕದಲ್ಲೇ ಸದ್ದು ಮಾಡುತ್ತಿದ್ದರೂ ಈ ಜಲಪಾತ ಹೆಚ್ಚಿನ ಜನರ ಗಮನಕ್ಕೆ ಬಾರದೇ ಇರುವುದು ವಿಶೇಷವೇ ಹೌದು. ರಸ್ತೆಯ ಪಕ್ಕವೇ ಇರುವುದರಿಂದ ಚಾರಣ ಮಾಡಬೇಕಿಲ್ಲ. ಸಾಹಸಿಗರಾಗಬೇಕಿಲ್ಲ. ಜಲಪಾತದ ಒಡಲಿನವರೆಗೂ ವಾಹನ ಒಯ್ಯಬಹುದು. ಕುಚಗುಂಡಿ ಊರಿನ ಆರಾಧ್ಯ ದೈವ ಕಲ್ಯಾಣೇಶ್ವರನಿಂದ ಜಲಪಾತಕ್ಕೆ ಈ ಹೆಸರು ಬಂದಿದೆ. ಒಳ್ಳೆಯ ಪಿಕ್ನಿಕ್ ತಾಣವಾಗಿರುವ ಈ ಜಲಪಾತದ ಆಜುಬಾಜಿನಲ್ಲಿ ಪರಿಸರ ಮಾಲಿನ್ಯಕ್ಕೆ ಅವಕಾಶವಿಲ್ಲ. ಜಲಪಾತದ ಎದುರಿನಲ್ಲೇ ಮಹಾಬಲಗೌಡ ಎನ್ನುವವರ ಮನೆಯಿದ್ದು, ಪ್ರವಾಸಿಗರಿಗೆ ಅಗತ್ಯವಾದ ಸಹಾಯ ಅವರಿಂದ ಸದಾ ಲಭ್ಯ.

ಈ ಜಲಪಾತಕ್ಕೆ ಬಂದವರು ಸನಿಹದಲ್ಲಿನ ಕಲ್ಯಾಣೇಶ್ವರ ದೇಗುಲ, ಗುಡ್ಡೇತೋಟದ ಕೋಟೆ ವಿನಾಯಕ ದೇವಾಲಯ, ಯಲೂಗಾರಿನ ಸಳ್ಳೆ ವಿನಾಯಕ ಎಂಬ ಉದ್ಭವ ಗಣಪತಿಯನ್ನು ವೀಕ್ಷಣೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಅಘನಾಶಿನಿ ನದಿ ತೀರದಲ್ಲಿಯೂ ವಿಹಾರ ಮಾಡಬಹುದಾಗಿದೆ. ಬಿಡುವಿಲ್ಲದ ಸಮಯದಲ್ಲಿ ತುರ್ತಾಗಿ ಪ್ರಕೃತಿ ವೀಕ್ಷಣೆ ಮಾಡುವವರಿಗೆ ಹೇಳಿಮಾಡಿಸಿದ ತಾಣ ಇದಾಗಿದೆ. ಕಷ್ಟಪಡಬೇಕಿಲ್ಲ. ಗುಡ್ಡ ಹತ್ತಿಳಿಯಬೇಕಿಲ್ಲ. ಸುಮ್ಮನೆ ಗಾಡಿ ಹತ್ತಿ ಬಂದರಾಯಿತು. ಒಂದು ದಿನ ಅರಾಮವಾಗಿ ಕಳೆಯಲು ಈ ತಾಣ ಹೇಳಿಮಾಡಿಸಿದಂತದ್ದಾಗಿದೆ.

ಹೋಗೋದು ಹೇಗೆ?

ಈ ಜಲಪಾತಕ್ಕೆ ಬರುವ ಬಗೆ ಬಹಳ ಸುಲಭ. ಶಿರಸಿಯಿಂದ ಸಿದ್ದಾಪುರಕ್ಕೆ ಬರುವ ಮಾರ್ಗದಲ್ಲಿ ಕಾನಸೂರಿನಿಂದ ಬಾಳೆಸರದ ಕಡೆ ಹೋಗು ಮಾರ್ಗದಲ್ಲಿ 2 ಕಿ.ಮೀ. ಚಲಿಸಿದರೆ ಕೋಡ್ಸರ ಎಂಬ ಊರು ಸಿಗುತ್ತದೆ. ಈ ಊರಿನ ಬಳಿಯಲ್ಲಿ ಕುಚಗುಂಡಿಗೆ ಹೋಗುವ ಕಚ್ಚಾ ದಾರಿ ಕಾಣಬಹುದು. ಈ ದಾರಿಯಲ್ಲಿ 2 ಕಿ.ಮೀ. ಸಾಗಿದರೆ ಮರಲಮನೆ ಹಾಗೂ ಕುಚಗುಂಡಿ ಊರುಗಳ ನಡುವೆ ಹಳ್ಳದ ಸೇತುವೆ ಎದುರಾಗುತ್ತದೆ. ಈ ಸೇತುವೆಯ ಬಳಿ ಜಲಪಾತ ಕಾಣಬಹುದು. ಇದು ಒಂದು ಮಾರ್ಗವಾದರೆ ಶಿರಸಿಯಿಂದ ಅಡಕಳ್ಳಿ, ದಂಟಕಲ್ ಮೂಲಕ 22 ಕಿ.ಮೀ. ಹಾದು ಬಂದರೆ ಕುಚಗುಂಡಿ ಸಿಗುತ್ತದೆ. ಆ ಊರಿನ ಸರಹದ್ದಿನಲ್ಲಿಯೇ ಇದೆ ಜಲಪಾತ.

-  ವಿನಯ ದಂಟಕಲ್

ಭಾರತ ಹುಣ್ಣಿಮೆ

ಬೆಳಗಾವಿಯಿಂದ 70 ಕಿ.ಮೀ. ದೂರದಲ್ಲಿರುವ ಸವದತ್ತಿ ಯಲ್ಲಮ್ಮ ಅಥವಾ ರೇಣುಕಾ ಯಲ್ಲಮ್ಮ ದೇಗುಲ ಪುರಾತನವಾದ ಶಕ್ತಿಕೇಂದ್ರಗಳಲ್ಲೊಂದು. ಚಾಲುಕ್ಯ ಮತ್ತು ರಾಷ್ಟ್ರಕೂಟ ಶೈಲಿಯಲ್ಲಿದ್ದು, ಸುಂದರ ಕೆತ್ತನೆಗಳಿಂದ ಕೂಡಿದೆ. ಜೈನ ವಾಸ್ತುಶಿಲ್ಪಸಮ್ಮಿಳತ ಇದರ ಇನ್ನೊಂದು ವಿಶೇಷ. ಈ ದೇವಸ್ಥಾನವನ್ನು ರಾಯಭಾಗದ ಬೊಮಪ್ಪ ನಾಯಕ್ 1514ರಲ್ಲಿ ನಿರ್ಮಿಸಿದರಂತೆ.
ಮಹಾದ್ವಾರದ ಒಳಗೆ ಗಣೇಶ, ಮಲ್ಲಿಕಾರ್ಜುನ, ಏಕನಾಥ, ಪರಶುರಾಮ, ಸಿದ್ದೇಶ್ವರ... ಹೀಗೆ ಹಲವು ದೇಗುಲಗಳಿವೆ. ಇಲ್ಲಿ ನಡೆಯುವ ಜಾತ್ರೆಗೆ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಹಾಗೂ ರಾಜ್ಯದ ಸಹಸ್ರಾರು ಭಕ್ತರು ಆಗಮಿಸುತ್ತಾರೆ.
ಎಲ್ಲಮ್ಮನ ಗುಡ್ಡದಲ್ಲಿ ಸಿದ್ದರಕೊಳ್ಳ, ಪರಸಗಡಕೊಳ್ಳ, ಗೋರವನಕೊಳ್ಳ, ತಮ್ಮಣ್ಣನಕೊಳ್ಳ, ಮಾವಿನಕೊಳ್ಳ, ಸಂಗಪ್ಪನಕೊಳ್ಳ, ಬೋರೇಸಾಬನ ಕೊಳ್ಳ... ಒಟ್ಟು ಏಳು ಕೊಳ್ಳಗಳಿವೆ. ಹಾಗೆಯೇ ಮುರಗೋಡ, ಸೊಗಲ, ನವಿಲುತೀರ್ಥ, ಪರಸಗಡ, ಸವದತ್ತಿ, ಮುನವಳ್ಳಿ, ಎಲ್ಲಮ್ಮನಗುಡ್ಡ ಹೀಗೆ ಏಳು (ಬೆಟ್ಟ) ಪರ್ವತಗಳೂ ಇಲ್ಲಿವೆ. ಸವದತ್ತಿ ಊರಿನಿಂದ 5 ಕಿ.ಮೀ. ದೂರದಲ್ಲಿ ಸಿದ್ದಾಂಚಲ ಪರ್ವತದ ಮೇಲೆ ಸ್ಥಾಪಿತಗೊಂಡಿದೆ ಯಲ್ಲಮ್ಮನಗುಡ್ಡ. ಭಕ್ತರಿಗೆ ವಸತಿ ಸೌಕರ್ಯವೂ ಉಂಟು.
ದೇಗುಲದ ಮುಂದೆ ದೊಡ್ಡ ದೀಪ ಸ್ತಂಭ ಆಕರ್ಷಕ. ಬಲಭಾಗಕ್ಕೆ ಚಿಕ್ಕ ದ್ವಾರ. ಅಲ್ಲಿಂದ 5 ನಿಮಿಷ ನಡೆದರೆ  ವಿಶಾಲ ನೀರಿನ ಹೊಂಡಗಳ ದರ್ಶನ. ಇಲ್ಲೊಂದು ಪುಟ್ಟ ಹೊಂಡವಿದ್ದು, ಇಲ್ಲಿ ಮಲಪ್ರಭಾ ನದಿಯ ನೀರು ಉದ್ಭವವಾಗುತ್ತದೆ. ಇದು 'ಎಣ್ಣೆಹೊಂಡ' ಅಂತಲೇ ಪ್ರಸಿದ್ಧಿ.
ಇಲ್ಲಿ ನಡೆಯುವ 'ಭಾರತ ಹುಣ್ಣಿಮೆ' ತುಂಬಾ ಹೆಸರುವಾಸಿ. ಪ್ರತಿವರ್ಷ ಫೆಬ್ರವರಿಯಲ್ಲಿ ನಡೆಯುವ ಈ ಭಾರತ ಹುಣ್ಣಿಮೆಗೆ ಲಕ್ಷಾಂತರ ಭಕ್ತರು ಸೇರುತ್ತಾರೆ. ಹಳದಿ ಭಂಡಾರ ತೂರಿ ಉಧೋ ಉಧೋ ಎನ್ನುತ್ತಾ ಜೋಗಮ್ಮ, ಜೋಗಪ್ಪರು ಚೌಡಕಿ ಬಾರಿಸುತ್ತಾ, ಹಾಡುತ್ತಾ, ಕುಣಿಯುತ್ತಾ ತೆರಳುವುದು ಕಣ್ಣಿಗೆ ಆಕರ್ಷಕ. 'ಭಂಡಾರ ಹಾಕುವುದು' ಈ ಹುಣ್ಣಿಮೆಯ ವಿಶೇಷತೆ. ವರ್ಷದಲ್ಲಿ 2 ಬಾರಿ ನಡೆಯುವ ಜಾತ್ರೆಯಲ್ಲಿ ಹರಕೆ ಹೊತ್ತವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಚಿಕ್ಕಚಿಕ್ಕ ಮಕ್ಕಳನ್ನು ಜೋಗತಿಯಾಗಿಸಲಾಗುತ್ತದೆ. ಹುಡುಗಿಯರು ಯಲ್ಲಮ್ಮ ದೇವಿಯ ಸೇವೆ ಮಾಡುತ್ತಾ ದಿನ ದೂಡಬೇಕು. ಇವರಿಗೆ ಜೋಗವ್ವ ಎಂತಲೂ ಕರೆಯಲಾಗುತ್ತದೆ. ಇದೇ ರೀತಿ ಹುಡುಗರನ್ನು ದೇವಿಯ ಸೇವೆಗೆ ಅರ್ಪಿಸಿದರೆ ಅವರಿಗೆ ಜೋಗಪ್ಪ ಎಂತಲೂ ಕರೆಯಲಾಗುತ್ತದೆ.
ಈ ಎಲ್ಲ ಜೋಗಪ್ಪ, ಜೋಗವ್ವರು ಬುಟ್ಟಿಯಲ್ಲಿ ಯಲ್ಲಮ್ಮನ ಬೆಳ್ಳಿ ಮುಖವಾಡ, ಚಿಕ್ಕದಾದ ಚೀಲದಲ್ಲಿ ಭಂಡಾರವಿಟ್ಟುಕೊಂಡು, ಕೈಯಲ್ಲಿ ಚೌಡಕಿ ಬಾರಿಸುತ್ತಾ ಯಾವಾಗಲೂ ಹಾಡು, ಭಜನೆಯಲ್ಲಿಯೇ ನಿರತರಾಗಿರುತ್ತಾರೆ. ಗುಡ್ಡದಲ್ಲಿ ಎಲ್ಲಿ ನೋಡಿದರೂ ಎತ್ತಿನ ಬಂಡಿಗಳದ್ದೇ ಸಾಮ್ರಾಜ್ಯ. ಈ ಜಾತ್ರೆಯ ವೈಭವ ನೋಡಲು ವಿದೇಶಿಯರೂ ಆಗಮಿಸುವುದು ವಿಶೇಷ.
- ಚಿತ್ರ-ಲೇಖನ: ಆಶಾ ಎಸ್.ಕೆ
ಉಂಚಳ್ಳಿ ಮಿಂಚುಳ್ಳಿ



ಹೇಳಿಕೇಳಿ ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರೂರು. ಜೋಗ ಜಲಪಾತದಷ್ಟೇ ಅತ್ಯದ್ಭುತ, ಅತ್ಯಾಕರ್ಷಕ ಸೊಬಗಿನಿಂದ ಕೂಡಿರುವ ಜಲಪಾತವೊಂದು ಸಿದ್ದಾಪುರ ತಾಲೂಕಿನ ಹೆಗ್ಗರಣಿ ಬಳಿ ಇದೆ. ಸಹ್ಯಾದ್ರಿ ಬೆಟ್ಟದಲ್ಲಿರುವ ಈ ಫಾಲ್ ಮಳೆಗಾಲ, ಚಳಿಗಾಲದಲ್ಲಿ ಕಾಮನಬಿಲ್ಲಿನ ಅಪರೂಪದ ಕ್ಷಣಗಳನ್ನು ಆಗಾಗ ಸೃಷ್ಟಿಸುತ್ತದೆ.
ದಟ್ಟಾರಣ್ಯದ ಹಸಿರು ಸೊಬಗು, ಹಕ್ಕಿಗಳ ಚಿಲಿಪಿಲಿ ನಿನಾದದ ಮಧ್ಯೆ ತಂಗಾಳಿ ಸೀಳಿ ಚಾರಣ ನಡೆಸಲೆಂದೇ ಚಾರಣಿಗರು ಈ ಫಾಲ್‌ನತ್ತ ಧಾವಿಸುವುದು ವಿಶೇಷ. ಹೆಗ್ಗರಣಿಯಿಂದ ಐದು ಕಿ.ಮೀ ಚಾರಣ ನಡಿಗೆ ಅತ್ಯದ್ಭುತಅನುಭವ ನೀಡುವಂಥದು. ಮಳೆಗಾಲ, ಚಳಿಗಾಲದಲ್ಲಂತೂ ಇಲ್ಲಿನ ಪಯಣ ಅತ್ಯಂತ ಮೋದ ತರುವುದು.
ಬೆಳ್ಳಿ ಮೋಡದ ಮರೆಯಲ್ಲಿ ಸುಕನಸುಗಳಲ್ಲಿ ಮೈಮರೆತ ಗಂಧರ್ವ ಕನ್ಯೆಯ ಸೀರೆ ಸೆರಗು ಜಾರಿ ಬಿದ್ದಿದೆಯೇನೋ ಎಂಬಂತೆ ಬೆಳ್ಳಿಧಾರೆಗಳಿಂದ ಬಳುಕುವ ಜಲಧಾರೆ ಅಲ್ಲೇ ವಾಸ್ತವ್ಯ ಹೂಡಿಬಿಡಬೇಕೆಂಬ ಭಾವ ಸೃಷ್ಟಿಸುವಂಥ ಚೆಲುವಿನಂಥದು. ಧುಮ್ಮಿಕ್ಕುವ ಎಲ್ಲ ಜಲಪಾತಗಳೂ ಭೋರ್ಗರೆದು ಶಬ್ದ ಸೃಷ್ಟಿಸುತ್ತವೆ ನಿಜ. ಆದರೆ, ಉಂಚಳ್ಳಿಯದು ಅದಕ್ಕಿಂತ ಹೆಚ್ಚು. ಕಣಿವೆಗಳಲ್ಲಿ ಹಾದು ನೂರಾರು ಅಡಿಗಳಿಂತ ಪುನಃ ಪ್ರಪಾತಕ್ಕೆ ಬೀಳುವಾಗ ಏಳಿಸುವ ಶಬ್ಧ ಕಿವಿಗಡಚಿಕ್ಕುತ್ತದೆ, ಕಿವಿಗಳನ್ನು ಮುಚ್ಚಿಕೊಳ್ಳುವಷ್ಟು. ಇದರ ಪರಿಣಾಮವೇ ಈ ಫಾಲ್‌ಗೆ ಹೀಗೂ ಕರೆಯಲಾಗುತ್ತದೆ 'ಕೆಪ್ಪ ಜೋಗ'.
ಲಷಿಂಗ್ಟನ್ ಎಂದೂ ಕರೆಯಲಾಗುವ ಜಲಧಾರೆ ಸುಮಾರು 116 ಮೀಟರ್ (381 ಅಡಿ) ಎತ್ತರದಿಂದ ಧುಮ್ಮಿಕ್ಕುವ ಅಘನಾಶಿನಿ ನದಿಯ ಬಳುವಳಿ. ಬ್ರಿಟಿಷ್ ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿದ್ದ ಜೆ.ಡಿ. ಲಷಿಂಗ್ಟನ್ 1845ರಲ್ಲಿ ಪತ್ತೆಹಚ್ಚಿದ ಇತಿಹಾಸ ಈ ಫಾಲ್‌ನದ್ದು.
ಅಕ್ಟೋಬರ್‌ನಿಂದ ಫೆಬ್ರವರಿ ಅವಧಿ ಭೇಟಿಗೆ ಸೂಕ್ತ ಸಮಯ. ಏಕೆಂದರೆ, ಮಳೆಗಾಲದಲ್ಲಿ ಈ ಫಾಲ್ ಹೆಚ್ಚು ಭೋರ್ಗರೆಯುತ್ತದೆ. ಚಾರಣ ವೇಳೆ ಕೆಲ ದುರ್ಗಮ ಹಾದಿಗಳಲ್ಲಿ ಕ್ರಮಿಸುವುದು ಕಷ್ಟವಾಗಬಹುದು.  ದಾರಿಯುದ್ದಕ್ಕೂ ಸ್ಥಳೀಯರು ಸಿಗುವುದರಿಂದ ಮಾಹಿತಿ ಪಡೆದು ಅಬ್ಬಿ ಸಮೀಪಿಸಬಹುದು. ಬೇಸಿಗೆ ಕಾಲದಲ್ಲಿ ಫಾಲ್ಸ್ ಧುಮ್ಮಿಕ್ಕುವ ಬಂಡೆಗಳ ರಾಶಿಯನ್ನು ಏರುವ ಸಾಹಸ ಕೆಲವರು ಮಾಡುತ್ತಾರೆ. ಕಾಲು ಜಾರಿದರೆ ಸೀದಾ ಫಾಲ್ ಬುಡಕ್ಕೆ.  ಆದ್ದರಿಂದ ಇಂಥ ಸಾಹಸ ಮಾಡದಿರುವುದು ಒಳ್ಳೆಯದು. ಜಲಪಾತನ್ನು ನೋಡಲು ಸೂಕ್ತ ಮೆಟ್ಟಿಲುಗಳು ಹಾಗೂ ವೀಕ್ಷಣಾ ಗೋಪುರದ ವ್ಯವಸ್ಥೆ ಇದೆ. ಫಾಲ್ಸ್‌ಗೆ ತೆರಳುವ ಮಾರ್ಗ ಮಧ್ಯೆ ಅಣಬೆ ಆಕಾರದಲ್ಲಿ ನಿರ್ಮಿಸಿರುವ ಗೋಪುರಗಳಲ್ಲಿ ನಿಂತು ಅಬ್ಬಿ ವೀಕ್ಷಿಸುವುದು ಮಜವೋ ಮಜಾ.
ಈ ಫಾಲ್‌ಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಪ್ರವಾಸಿ ಇಲಾಖೆಯ ಗೇಟ್‌ನಿಂದ 500 ಮೀಟರ್ ಕಾಡು ಮಧ್ಯೆಯ ಕಚ್ಚಾ ರಸ್ತೆಯಲ್ಲಿ ಸಾಗಿದರೆ ಉಂಚಳ್ಳಿ ಫಾಲ್‌ನ ಆರ್ಭಟದ ನೈಜದರ್ಶನವಾಗಬಲ್ಲದು.
ಹೀಗೆ ಬನ್ನಿ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಿಂದ 35 ಕಿ.ಮೀ., ಕುಮಟಾದಿಂದ 70 ಕಿ.ಮೀ., ಶಿರಸಿಯಿಂದ 25 ಕಿ.ಮೀ., ಬೆಂಗಳೂರಿನಿಂದ 425 ಕಿ.ಮೀ. ದೂರದಲ್ಲಿ ಈ ಫಾಲ್ ಇದೆ. ಹತ್ತಿರದ ವಿಮಾನ ನಿಲ್ದಾಣ ಹುಬ್ಬಳ್ಳಿ. ರೇಲ್ವೆ ಯಾನವಾದರೆ ತಾಳಗುಪ್ಪ, ಕುಮಟಾ, ಹುಬ್ಬಳ್ಳಿ ಸಮೀಪದ ನಿಲ್ದಾಣಗಳು. ರಸ್ತೆ ಮಾರ್ಗದಲ್ಲಿ ಬರುವವರು ಕುಮಟಾ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಸಾಗಿ ಅಮ್ಮಿನಳ್ಳಿ ಬಳಿ ಹೆಗ್ಗರಣಿಗೆ ಹೋಗುವ ಮಾರ್ಗದಲ್ಲಿ ತಿರುವು ಪಡೆಯಬಹುದು. ಅಥವಾ ಹೆಗ್ಗರಣಿಗೆ ನೇರವಾಗಿ ತೆರಳಲು ಬಸ್ ವ್ಯವಸ್ಥೆಯೂ ಇರುವುದರಿಂದ ಪ್ರವಾಸಿಗರು ಹೆಚ್ಚು ಆಯಾಸ ಪಡುವ ಅಗತ್ಯವಿಲ್ಲ. ಹೆಗ್ಗರಣಿಯಿಂದ ಐದಾರು ಕಿ.ಮೀ. ದೂರವಿರುವ ಫಾಲ್ಸಿಗೆ ತೆರಳಲು ಖಾಸಗಿ ಜೀಪು, ಬೈಕ್ ಮತ್ತಿತರ ವಾಹನಗಳ ಸೌಲಭ್ಯ ಇದೆ. ಹಸಿವು ನೀಗಿಸಿಕೊಳ್ಳಲು ಬೇಕಾದ ತಿಂಡಿ, ತಿನಿಸು, ಊಟದ ವ್ಯವಸ್ಥೆಯನ್ನು ಹೆಗ್ಗರಣಿಯಲ್ಲೇ ಮಾಡಿಕೊಳ್ಳಬೇಕು. ಫಾಲ್ಸ್ ಸಮೀಪ ಸಣ್ಣಪುಟ್ಟ ಗೂಡಂಗಡಿ ಬಿಟ್ಟರೆ ಕ್ಯಾಂಟೀನ್, ಹೋಟೆಲ್‌ಗಳಿಲ್ಲ. ಅಂದಹಾಗೆ, ಇಲ್ಲಿನ ಸಂಚಾರಕ್ಕೆ ಜೀಪ್ ಹೆಚ್ಚು ಸೂಕ್ತವಾಗಬಹುದು. ಪ್ರವಾಸಿಗರು ಶಿರಸಿಯಲ್ಲಿ ಉಳಿಯಲು ವ್ಯವಸ್ಥೆ ಇದೆ.
ಚಿತ್ರ-ಲೇಖನ: ಚಂದ್ರಹಾಸ ಚಾರ್ಮಾಡಿ
ಇಟಗಿ ಚಕ್ರವರ್ತಿಯ ಹೊಸತನ
ರಾಜ್ಯ ಸರ್ಕಾರ 'ಇಟಗಿ ಉತ್ಸವ'ವನ್ನೇನೊ ಆಚರಿಸುತ್ತಿತ್ತು. ಆದರೆ ಒಂಬತ್ತು ಶತಮಾನ ಪುರಾತನವಾದ ಇಲ್ಲಿನ ಮಹಾದೇವ ದೇವಾಲಯದ ದುರಸ್ಥಿ ಗಗನ ಕುಸುಮವೇ ಆಗಿತ್ತು. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಇಟಗಿಯಲ್ಲಿರುವ ಈ ದೇವಸ್ಥಾನ ಈಗ ಜೀಣೋದ್ಧಾರದಿಂದ ಮತ್ತೆ ನಯನ ಮನೋಹರವಾಗಿದೆ.

ಪ್ರಾಚ್ಯವಸ್ತು ಇಲಾಖೆಯ ಕಾಳಜಿಯಿಂದ ಸುಮಾರು 3 ಕೋಟಿ ರುಪಾಯಿ ವೆಚ್ಚದಲ್ಲಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ. ದೇವಾಲಯದ ಸುತ್ತಲೂ ಹಾಸು ಹುಲ್ಲು ಪ್ರವಾಸಿಗರಿಗೆ ಮುದ ನೀಡಿದರೆ, ದೇವಳದ ಸುತ್ತಮುತ್ತ ಮಾಡಿರುವ ಅಭಿವೃದ್ಧಿ ಕಾರ್ಯ ದೇವಾಲಯದ ಮೆರಗನ್ನು ಹೆಚ್ಚಿಸಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಇನ್ನೇನು ಬಿದ್ದು ಹೋಗುತ್ತಿದ್ದ ಸುತ್ತಲಿನ ಮಂಟಪಗಳು ಸೇರಿದಂತೆ ದೇವಸ್ಥಾನದ ಆಸುಪಾಸಿನ ಕಟ್ಟಡಗಳನ್ನು ಅದೇ ಮಾದರಿಯಲ್ಲಿ ಸಂರಕ್ಷಣೆ ಮಾಡಲಾಗಿದೆ.

ಇತಿಹಾಸ

ಇಟಗಿಯ ಮಹಾದೇವ ದೇವಾಲಯವನ್ನು ಕ್ರಿ.ಶ. 1112 ರಲ್ಲಿ ಕಲ್ಯಾಣ ಚಾಲುಕ್ಯರ ದೊರೆ 6ನೇ ವಿಕ್ರಮಾದಿತ್ಯನ ಮಹಾಮಂತ್ರಿಯಾಗಿದ್ದ ಇಟಗಿಯ ಮಹಾದೇವ ದಂಡನಾಯಕ ಮಹತ್ತರ ಯುದ್ಧ ಜಯಿಸಿದ ಪ್ರತೀಕವಾಗಿ ನಿರ್ಮಿಸಿದ್ದಾನೆ.

ದೇಶದಲ್ಲೇ ಅತ್ಯದ್ಭುತ ಎನ್ನಲಾಗುವ ವಾಸ್ತುಶಿಲ್ಪ ಹೊಂದಿರುವುದರಿಂದ 'ದೇವಾಲಯಗಳ ಚಕ್ರವರ್ತಿ' ಎಂದೂ ಈ ದೇವಸ್ಥಾನವನ್ನು ಕರೆಯುವುದುಂಟು. 900 ವರ್ಷದ ಇತಿಹಾಸವಿರುವ ಈ ದೇವಾಲಯದಲ್ಲಿ ಬಾದಾಮಿ ಚಾಲುಕ್ಯರ ಒರಟು ಮತ್ತು ಹೊಯ್ಸಳರ ಸೂಕ್ಷ್ಮ ಕೆತ್ತನೆಗಳು ಮೇಳೈಸಿವೆ ಎಂದೇ ಹೇಳಲಾಗುತ್ತದೆ. ಗರ್ಭಗುಡಿ, ಸುಕನಾಸಿ,  ನವರಂಗ ಮಂಟಪಗಳನ್ನು ಒಳಗೊಂಡಿರುವ ಈ ದೇವಾಲಯ ಪರಿಪೂರ್ಣ ದೇವಾಲಯ ಎಂದೇ ಬಿಂಬಿತವಾಗಿದೆ. ಈ ದೇವಾಲಯದ ಕುರಿತು ಗುಣಗಾನ ಮಾಡಿರುವ ಕಸೀನ್ಸ್ ಅವರು 'ಕರ್ನಾಟದಲ್ಲಿಯೇ ಇದೊಂದು ವಿಶಿಷ್ಟ ದೇವಾಲಯ' ಎಂದಿದ್ದಾರೆ.

ಪ್ರಮುಖವಾಗಿರುವುದೇನು?

ನಕ್ಷತ್ರಾಕಾರದ ಜಗುಲಿ, ವಿಭಿನ್ನವಾದ ಕೆತ್ತನೆಯನ್ನು ಒಳಗೊಂಡಿರುವ ಕಂಬಗಳು ಮುಖಮಂಟಪ ಹೊತ್ತುನಿಂತಿವೆ. ರಂಗಮಂಟಪದಲ್ಲಿನ ಕಂಬಗಳು ಬೇಲೂರಿನ ಚನ್ನಕೇಶವ ಗುಡಿಯ ಮಾದರಿಯಲ್ಲಿವೆ. ಗೋಲಾಕಾರವಾಗಿ ತಗ್ಗಾಗಿರುವ ಈ ಭುವನೇಶ್ವರಿಯಲ್ಲಿ ಭೈರವ ಇದ್ದಾನೆ. ಇಡೀ ದೇವಾಲಯದಲ್ಲಿ ಕುಸುರಿ ಕೆಲಸವೇ ತುಂಬಿಕೊಂಡಿದೆ. ಮಂಟಪದ ನಂತರವೇ ಸುಕನಾಸಿ. ಇಲ್ಲಿ ಶಿವನ ನಾಟ್ಯ ಭಂಗಿ ಇದೆ. ಕೀರ್ತಿ ಶಿಖರವಾಗಿದ್ದು, ಬಳ್ಳಿ ಹಬ್ಬಿಕೊಂಡಿದೆ.

ಹಂಪಿಗೆ ಬಹಳ ಸಮೀಪದಲ್ಲೇ ಇದ್ದರೂ ಇಟಗಿಯಲ್ಲಿ ಪ್ರವಾಸೋದ್ಯಮ ಅಷ್ಟಾಗಿ ಬೆಳೆದಿಲ್ಲ. ಪ್ರವಾಸೋದ್ಯಮ ಇಲಾಖೆಯೂ ಈ ಕುರಿತು ಗಮನ ಹರಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ.


ಪೂರ್ಣಗೊಳಿಸಿದವರಿಗೆ ಮರಣ?

ಇಂಥ ಮಹಾನ್ ದೇವಾಲಯವನ್ನು ಪೂರ್ಣಗೊಳಿಸಿದವನಿಗೆ ಮರಣ ಎಂದು ಜ್ಯೋತಿಷಿಗಳು ಹೇಳಿದ್ದರಂತೆ. ಅದಕ್ಕಾಗಿಯೇ ಇದನ್ನು ಬಹಳಷ್ಟು ವರ್ಷ ಕಾಲ ಯಾರು ಪೂರ್ಣಗೊಳಿಸಿರಿಲಿಲ್ಲವಂತೆ. ತೀರಾ ಇತ್ತೀಚಿಗೆ ನಿಜಾಮರ ಆಡಳಿತದಲ್ಲಿ ಗೋಪುರವನ್ನು ಪೂರ್ಣಗೊಳಿಸಲಾಗಿದೆ ಎನ್ನುವುದು ಇತಿಹಾಸ. ಭವಿಷ್ಯ ನಿಜವಾದ ಬಗ್ಗೆ ದಾಖಲೆ ಇಲ್ಲ.

ಇನ್ನು ದೇವಸ್ಥಾನದ ಹಿಂದಿನ ಭಾಗದಲ್ಲಿ ಪುಷ್ಕರಣಿ ಇದೆ. ಇದು ಕೂಡಾ ವಿಭಿನ್ನ ಹಾಗೂ ಅಚ್ಚುಕಟ್ಟಾಗಿದೆ. ಪುಷ್ಕರಿಣಿ ಬಹಳ ಆಳವಾಗಿದೆ. ಕೆಳ ಹಂತದವರೆಗೂ ಮೆಟ್ಟಿಲುಗಳಿವೆ. ಈಗಲೂ ಇದರಲ್ಲಿ ನೀರು ಇರುತ್ತದೆ. ಅದೇ ನೀರನ್ನು ದೇವಸ್ಥಾನದ ಸುತ್ತಲು ಇರುವ ಉದ್ಯಾನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ.


ಹೀಗೆ ಬನ್ನಿ

ಹಂಪಿಯಿಂದ 65 ಕಿ.ಮೀ, ಗದಗದಿಂದ 35 ಕಿ.ಮೀ, ಕೊಪ್ಪಳದಿಂದ 15 ಕಿ.ಮೀ, ಯಲಬುರ್ಗಾದಿಂದ 22 ಕಿ.ಮೀ ದೂರದಲ್ಲಿದೆ ಇಟಗಿ. ಗದಗ, ಹಂಪಿ, ಕೊಪ್ಪಳ, ಯಲಬುರ್ಗಾಗಳಿಂದ ಬಸ್‌ಗಳಿವೆ. ಜುಲೈನಿಂದ ಮಾರ್ಚ್‌ವರೆಗಿನ ಅವಧಿ ಇಲ್ಲಿಗೆ ಭೇಟಿ ಕೊಡಲು ಸೂಕ್ತ. ಗದಗ, ಕೊಪ್ಪಳ, ಹೊಸಪೇಟೆಗಳಿಗೆ ರೈಲು ಸಂಪರ್ಕವಿದೆ. ಹೊಸಪೇಟೆ, ಕೊಪ್ಪಳ, ಗದಗಗಳಲ್ಲಿ ವಾಸ್ತವ್ಯ ಮಾಡಬಹುದು.


ಚಿತ್ರ-ಲೇಖನ: ಸೋಮರಡ್ಡಿ ಅಳವಂಡಿ

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

Contribution of Shahu Chhatrapati Maharaj